ರಾಷ್ಟ್ರೀಯ

ರಘುರಾಮ್ ರಾಜನ್ ಮಾನಸಿಕವಾಗಿ ಭಾರತೀಯರಲ್ಲ, ಅವರನ್ನು ವಜಾಗೊಳಿಸಿ: ಪ್ರಧಾನಿಗೆ ಸ್ವಾಮಿ ಪತ್ರ

Pinterest LinkedIn Tumblr

Subramanian Swamy -raghuram1

ನವದೆಹಲಿ: ಆರ್ ಬಿಐ ಗೌರ್ನರ್ ರಘುರಾಮ್ ರಾಜನ್ ಅವರನ್ನು ಶಿಕಾಗೋಗೆ ಕಳಿಸಬೇಕೆಂಬ ಅಭಿಪ್ರಾಯ ವ್ಯಕ್ತಪಡಿಸಿದ್ದ ಬಿಜೆಪಿ ಸಂಸದ ಸುಬ್ರಹ್ಮಣಿಯನ್ ಸ್ವಾಮಿ, ಈಗ ಅವರನ್ನು ತಕ್ಷಣವೇ ಆರ್ ಬಿಐ ನ ಉನ್ನತ ಹುದ್ದೆಯಿಂದ ವಜಾಗೊಳಿಸಬೇಕೆಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಮಾಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿರುವ ಸುಬ್ರಹ್ಮಣಿಯನ್ ಸ್ವಾಮಿ, ರಘುರಾಮ್ ರಾಜನ್ ಅವರ ಬಗ್ಗೆ ಆರೋಪಗಳ ಸುರಿಮಳೆಗೈದಿದ್ದು, ರಾಜನ್ ಮಾನಸಿಕವಾಗಿ ಸಂಪೂರ್ಣವಾಗಿ ಭಾರತೀಯರಾಗಿ ಉಳಿದಿಲ್ಲ. ಆದ್ದರಿಂದ ಅವರನ್ನು ಆರ್ ಬಿಐ ನ ಉನ್ನತ ಹುದ್ದೆಗೆ ಎರಡನೇ ಅವಧಿಗೆ ಆಯ್ಕೆ ಮಾಡಬಾರದು, ತಕ್ಷಣವೇ ಗೌರ್ನರ್ ಹುದ್ದೆಯಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ.

ರಘುರಾಮ್ ರಾಜನ್ ಆರ್ ಬಿಐ ಗೌರ್ನರ್ ಆದ ನಂತರವೂ ಸಹ ಅಮೆರಿಕ ನೀಡಿರುವ ಗ್ರೀನ್ ಕಾರ್ಡ್( ಅಮೆರಿಕ ಪೌರತ್ವ) ವನ್ನು ಇನ್ನೂ ಹೊಂದಿದ್ದಾರೆ. ಅಷ್ಟೇ ಅಲ್ಲದೇ ಗ್ರೀನ್ ಕಾರ್ಡ್ ನ್ನು ಕಾಪಾಡಿಕೊಳ್ಳುವ ಸಲುವಾಗಿ ವರ್ಷಕ್ಕೆ ಒಮ್ಮೆಯಾದರು ಅಲ್ಲಿಗೆ ಭೇಟಿ ನೀಡಬೇಕೆಂಬ ನಿಯಮವನ್ನು ಪಾಲಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜನ್ ಮಾನಸಿಕವಾಗಿ ಭಾರತೀಯರಾಗಿ ಉಳಿದಿಲ್ಲ. ಆದ್ದರಿಂದ ಅವರನ್ನು ಹುದ್ದೆಯಿಂದ ವಜಾಗೊಳಿಸುವುದೇ ಸೂಕ್ತ ಎಂದು ಸ್ವಾಮಿ ಅಭಿಪ್ರಾಯಪಟ್ಟಿದ್ದಾರೆ.

ಕಳೆದ ಎರಡು ವರ್ಷಗಳಲ್ಲಿ ಬ್ಯಾಡ್ ಲೋನ್ ಪ್ರಮಾಣ 3 .5 ಲಕ್ಷ ಕೋಟಿಗೆ ಏರಿಕೆಯಾಗಿದೆ. ಆರ್ ಬಿಐ ಗೌರ್ನರ್ ಆಗಿ ದೇಶದ ಅರ್ಥ ವ್ಯವಸ್ಥೆಯನ್ನು ಉತ್ತಮಗೊಳಿಸುವ ಬದಲು ರಘುರಾಮ್ ರಾಜನ್, ಉದ್ದೇಶಪೂರ್ವಕವಾಗಿ ಅರ್ಥವ್ಯವಸ್ಥೆ ಕುಗ್ಗುವಂತೆ ಮಾಡಿದ್ದಾರೆ ಎಂದು ಸುಬ್ರಹ್ಮಣಿಯನ್ ಸ್ವಾಮಿ ಆರೋಪಿಸಿದ್ದಾರೆ.

” ನಿಮ್ಮ ಸ್ಪೂರ್ತಿದಾಯಕ ನಾಯಕತ್ವದ ನಾಯಕತ್ವದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಹಾಗಾಗಿ ಯುಪಿಎ ಸರ್ಕಾರದ ಅವಧಿಯಲ್ಲಿ ನೇಮಕಗೊಂಡ ಆರ್ಥಿಕ ತಜ್ಞರನ್ನು ಆರ್ ಬಿಐ ಗೌರ್ನರ್ ಸ್ಥಾನದಲ್ಲಿ ಮುಂದುವರೆಸುವುದು ಸೂಕ್ತವಲ್ಲ. ಅದೇ ಸ್ಥಾನಕ್ಕೆ ರಾಷ್ಟ್ರೀಯವಾದಿ ಅರ್ಥಶಾಸ್ತ್ರಜ್ಞರನ್ನು ನೇಮಕ ಮಾಡುವುದು ಸೂಕ್ತ ಎಂದು ಸುಬ್ರಹ್ಮಣಿಯನ್ ಸ್ವಾಮಿ ಮೋದಿಗೆ ಬರೆದಿರುವ ಪತ್ರದಲ್ಲಿ ಅಭಿಪ್ರಾಯ ತಿಳಿಸಿದ್ದಾರೆ.

ಈ ಎಲ್ಲಾ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹಿತಾಸಕ್ತಿಯನ್ನು ಪರಿಗಣಿಸಿ ರಘುರಾಮ್ ರಾಜನ್ ಅವರನ್ನು ಎರಡನೇ ಬಾರಿಗೆ ನೇಮಕ ಮಾಡಬಾರದು ಹಾಗೂ ತಕ್ಷಣ ಅವರನ್ನು ವಜಾಗೊಳಿಸಬೇಕು ಎಂದು ಸ್ವಾಮಿ ಆಗ್ರಹಿಸಿದ್ದಾರೆ. 2013 ರಲ್ಲಿ ಯುಪಿಎ ಸರ್ಕಾರ ರಘುರಾಮ್ ರಾಜನ್ ಅವರನ್ನು ಆರ್ ಬಿಐ ನ ಗೌರ್ನರ್ ಹುದ್ದೆಗೆ ಮೂರು ವರ್ಷಗಳ ಅವಧಿಗೆ ನೇಮಕ ಮಾಡಿತ್ತು. ಈಗ ರಘುರಾಮ್ ರಾಜನ್ ಅವರ ಅವಧಿ ಮುಕ್ತಾಯಗೊಳ್ಳುತ್ತಿದ್ದು, ಹಾಲಿ ಗೌರ್ನರ್ ಎರಡನೇ ಇನ್ನಿಂಗ್ಸ್ ಗೆ ಆಸಕ್ತಿ ತೋರಿದ್ದರು. ಆದರೆ ರಘುರಾಮ್ ರಾಜನ್ ಅವರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದ ಸುಬ್ರಹ್ಮಣಿಯನ್ ಸ್ವಾಮಿ, ಹಣದುಬ್ಬರವನ್ನು ನಿಯಂತ್ರಿಸುವ ಸಲುವಾಗಿ ಬಡ್ಡಿದರವನ್ನು ಏರಿಕೆ ಮಾಡಿ ದೇಶ ಸಂಕಷ್ಟಕ್ಕೀಡಾಗುವಂತೆ ಮಾಡಿದ್ದ ರಘುರಾಮ್ ರಾಜನ್ ದೇಶಕ್ಕೆ ಉಪಯೋಗವಾಗುಂತಹ ನಿರ್ಧಾರಗಳನ್ನು ತೆಗೆದುಕೊಂಡಿಲ್ಲ. ಅವರನ್ನು ಶಿಕಾಗೋಗೆ ಕಳಿಸಬೇಕೆಂದು ಹೇಳಿದ್ದರು.

Write A Comment