ಮನೋರಂಜನೆ

ಇಥಿಯೋಪಿಯಾ ಅಥ್ಲೀಟ್‌ಗೆ ನಾಯಿ ಕಾಟ: ತಪ್ಪಿದ ಪ್ರಶಸ್ತಿ!

Pinterest LinkedIn Tumblr

32

ಬೆಂಗಳೂರು: ಉದ್ಯಾನನಗರಿಯಲ್ಲಿ ಭಾನುವಾರ ನಡೆದ ವಿಶ್ವ 10ಕೆ ಓಟದಲ್ಲಿ ಪ್ರಶಸ್ತಿ ಗೆಲ್ಲುವ ಆಸೆ ಹೊಂದಿದ್ದ ಇಥಿಯೋಪಿಯಾದ ಅಥ್ಲೀಟ್‌ ಮುಲೆ ವಸಿಹುನ್‌ ಅವರ ಕನಸು ನುಚ್ಚುನೂರಾಯಿತು. ಇದಕ್ಕೆ ಕಾರಣ ಒಂದು ನಾಯಿ!

‍ಪುರುಷರ ಎಲೈಟ್‌ ವಿಭಾಗದಲ್ಲಿ ಸ್ಪರ್ಧಿಸಿದ್ದ ವಸಿಹುನ್‌ ಆರಂಭದಿಂದಲೇ ಪ್ರತಿಸ್ಪರ್ಧಿಗಳಿಗಿಂತ ಸುಮಾರು 50 ಮೀಟರ್ಸ್‌ ಅಂತರ ಕಾಯ್ದುಕೊಂಡು ಗುರಿಯೆಡೆಗೆ ಓಡುತ್ತಿದ್ದರು.

ಚಿನ್ನಸ್ವಾಮಿ ಕ್ರೀಡಾಂಗಣದ ತಿರುವಿನಲ್ಲಿ ಮಾರ್ಗ ತಪ್ಪಿ ಕಬ್ಬನ್‌ ಪಾರ್ಕ್‌ ನೊಳಗೆ ಓಡಿ ಕಂಗಾಲಾಗಿದ್ದ ಅವರು ಮತ್ತೆ ಛಲದಿಂದ ಓಡಿ ಮುನ್ನಡೆ ಪಡೆದು ಕೊಂಡಿದ್ದರು. ಆದರೆ ಕಬ್ಬನ್‌ ಪಾರ್ಕ್‌ನ ಮೆಟ್ರೊ ನಿಲ್ದಾಣದ ಹತ್ತಿರ ಬಂದಾಗ ಅವರಿಗೆ ನಾಯಿಕಾಟ ಶುರುವಾಯಿತು.

ವಸಿಹುನ್‌ ಓಡುತ್ತಿರುವುದನ್ನು ಕಂಡ ನಾಯಿಯೊಂದು ಅವರನ್ನು ಹಿಂಬಾಲಿಸಲು ಆರಂಭಿಸಿತು. ಇದರಿಂದ ಅವರು ಕಕ್ಕಾಬಿಕ್ಕಿಯಾದರು.

ತಮ್ಮ ಜತೆಯಲ್ಲಿಯೇ ನಾಯಿ ಕೂಡ ಓಡುತ್ತಿದ್ದರಿಂದ ಗಾಬರಿಗೊಂಡ ವಸಿಹುನ್‌ ಮತ್ತಷ್ಟು ಜೋರಾಗಿ ಓಡಲು ಶುರು ಮಾಡಿದರು. ನಾಯಿ ಕೂಡ ಸ್ಪರ್ಧೆ ಒಡ್ಡಿತು. ಸುಮಾರು 3 ಕಿ.ಮೀ. ವಸಿಹುನ್‌ ಮತ್ತು ನಾಯಿಯ ಜುಗಲ್‌ಬಂದಿ ಸಾಗಿತ್ತು. ಅಂಬೇಡ್ಕರ್‌ ವೀದಿಯಿಂದ ಕಬ್ಬನ್‌ ಪಾರ್ಕ್‌ ಪ್ರವೇಶಿಸುವ ತಿರುವಿನಲ್ಲಿ ವಸಿಹುನ್‌ ಶರವೇಗದಲ್ಲಿ ಸಾಗುತ್ತಿದ್ದರು. ಆಗ ನಾಯಿ ಅವರ ಎರಡೂ ಕಾಲುಗಳ ಮಧ್ಯದಿಂದ ನುಸುಳಲು ಪ್ರಯತ್ನಿಸಿತು. ಅದರಿಂದ ತಪ್ಪಿಸಿಕೊಳ್ಳಲು ನಾಯಿ ಮೇಲಿನಿಂದ ಜಿಗಿದು ಮುಂದಕ್ಕೆ ಸಾಗಿದರು.

ಒಟ್ಟು ಹತ್ತು ಕಿ.ಮೀ. ಗುರಿ ಮುಟ್ಟುವ ಹಾದಿಯಲ್ಲಿ ಅವರು ಒಂಬತ್ತು ಕಿ.ಮೀ. ಮುಟ್ಟುವ ತನಕವೂ ಮುಂಚೂ ಣಿಯಲ್ಲಿದ್ದರು. ಆದರೆ ನಾಯಿಕಾಟ ದಿಂದಾಗಿ ಕೊನೆಯಲ್ಲಿ ಒಂಬತ್ತನೇ ಸ್ಥಾನಕ್ಕೆ ತೃಪ್ತಿಪಡಬೇಕಾಯಿತು.

Write A Comment