ರಾಷ್ಟ್ರೀಯ

ಯುಪಿಎ ಅವಧಿಯ “ಅಗಸ್ಟಾ”ಗಿಂತ ದೊಡ್ಡ ಪ್ರಮಾಣದ ನೌಕಾ ಹಗರಣ ಬೆಳಕಿಗೆ ! ತನಿಖೆಗೆ ಆದೇಶಿಸಿದ ಪರಿಕ್ಕರ್

Pinterest LinkedIn Tumblr

Naval scam

ನವದೆಹಲಿ: ಬಹುಕೋಟಿ ವಿವಿಐಪಿ ಚಾಪರ್ ಹಗರಣದಲ್ಲಿ ಕಾಂಗ್ರೆಸ್ ಮುಂಖಡರ ಹೆಸರು ಬಹಿರಂಗವಾಗಿ ಉಭಯ ಸದನಗಳ ಕಲಾಪಗಳಲ್ಲಿ ಕೋಲಾಹಲಕ್ಕೆ ಕಾರಣವಾಗಿರುವಂತೆಯೇ ಯುಪಿಎ ಸರ್ಕಾರದ ಅವಧಿಯ ಮತ್ತೊಂದು ದೊಡ್ಡ ಹಗರಣ ಬೆಳಕಿಗೆ ಬಂದಿದೆ ಎಂದು ಹೇಳಲಾಗುತ್ತಿದೆ.

ಸುಮಾರು 3600 ಕೋಟಿ ಮೌಲ್ಯ ಅಗಸ್ಟಾ ವೆಸ್ಟ್ ಲ್ಯಾಂಡ್ ಹಗರಣಕ್ಕಿಂತಲೂ ದೊಡ್ಡ ಮಟ್ಟದಲ್ಲಿ ನಡೆದಿದೆ ಎನ್ನಲಾಗುತ್ತಿರುವ ಹಗರಣ ನೌಕಾ ಪಡೆಯಲ್ಲಿ ಕೇಳಿಬಂದಿದೆ. ಖಾಸಗಿ ಸುದ್ದಿವಾಹಿನಿ ವರದಿ ಮಾಡಿರುವಂತೆ ಯುಪಿಎ ಅವಧಿಯಲ್ಲಿ ಕಳಪೆ ಗುಣಮಟ್ಟದ ಉಕ್ಕಿನಿಂದ ನೌಕಾಪಡೆ ಹಡಗುಗಳ ನಿರ್ಮಾಣಕ್ಕೆ ಸರ್ಕಾರ ಅವಕಾಶ ನೀಡಿರುವುದು ಇದೀಗ ಬಹಿರಂಗವಾಗಿದೆ. ಯುಪಿಎ ಸರ್ಕಾರ 2009ರಲ್ಲಿ ಇಟಲಿಯ ಕಂಪನಿ ಫಿನ್‌ಕ್ಯಾಂಟರಿ ಜತೆಗೆ ಎರಡು ನೌಕಾ ಟ್ಯಾಂಕರ್ ಗಳ ನಿರ್ಮಾಣಕ್ಕೆ ಒಪ್ಪಂದ ಮಾಡಿಕೊಂಡಿತ್ತು.

ಆದರೆ ಈ ವೇಳೆ ಕಳಪೆ ಗುಣಮಟ್ಟದ ಸ್ಟೀಲ್‌ನಲ್ಲಿ ನೌಕಾ ಟ್ಯಾಂಕರ್ ತಯಾರಿಗೆ ಸರ್ಕಾರ ಅವಕಾಶ ಮಾಡಿಕೊಟ್ಟಿತ್ತು. ವಾಣಿಜ್ಯ ಬಳಕೆಗೆ ಉಪಯೋಗ ಮಾಡುವ ಕಳಪೆ ಗುಣಮಟ್ಟದ ಸ್ಟೀಲ್ ನಿಂದ ನೌಕೆ ತಯಾರಿಸಲಾಗಿತ್ತು ಎಂದು ಆರೋಪಿಸಲಾಗಿದೆ. ಈ ಪೈಕಿ ಒಂದು ಟ್ಯಾಂಕರ್ ಕಾರವಾರ ನೌಕಾನೆಲೆಯಲ್ಲಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಐಎನ್ ಎಸ್ ವಿಕ್ರಮಾಧಿತ್ಯ ಯುದ್ಧನೌಕೆ ಮೂಲಕ ಈ ನೌಕೆಗಳನ್ನು ಭಾರತಕ್ಕೆ ರವಾನಿಸಲಾಗಿತ್ತು ಎಂದು ಹೇಳಲಾಗಿದೆ. ಪ್ರಕರಣದ ಹಿನ್ನೆಲೆಯಲ್ಲಿ ಕೇಂದ್ರ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ತನಿಖೆಗೆ ಆದೇಶಿಸಿದ್ದಾರೆ.

ಅಗಸ್ಟಾ ವೆಸ್ಟ್ ಲ್ಯಾಂಡ್ ಹಗರಣದಿಂದಾಗಿ ತೀವ್ರ ಮುಜುಗರಕ್ಕೊಳಗಾಗಿರುವ ಕಾಂಗ್ರೆಸ್ ಪಕ್ಷಕ್ಕೆ ಇದೀಗ ನೌಕಾ ಹಗರಣ ಕೂಡ ಬೆಳಕಿಗೆ ಬಂದಿರುವುದು ನುಂಗಲಾರದ ತುತ್ತಾಗಿ ಪರಿಣಮಿಸಿದೆ.

Write A Comment