ರಾಷ್ಟ್ರೀಯ

ಸಂಪುಟ ಪುನಾರಚನೆ ನೆನೆಗುದಿಗೆ

Pinterest LinkedIn Tumblr

Vidhanasoudha (1)ನವದೆಹಲಿ, ಮೇ ೧೨- ರಾಜ್ಯ ಸಚಿವ ಸಂಪುಟ ಪುನರ್‌ರಚನೆಗೆ ಪಕ್ಷದ ಹೈಕಮಾಂಡ್‌ನ ಒಪ್ಪಿಗೆ ಪಡೆದು ತಮ್ಮ ಕುರ್ಚಿ ಭದ್ರಪಡಿಸಿಕೊಳ್ಳುವ ಮುಂದಾಗಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಪಕ್ಷದ ವರಿಷ್ಠರ ಭೇಟಿ ಸಾಧ್ಯವಾಗಿಲ್ಲ. ಮುಖ್ಯಮಂತ್ರಿಗಳ ಭೇಟಿಗೆ ವರಿಷ್ಠರು ಸಮಯ ನೀ‌ಡದ ಕಾರಣ ಸಂಪುಟ ಪುನರ್‌ರಚನೆ ಮತ್ತೆ ನೆನೆಗುದಿಗೆ ಬಿದ್ದಿದೆ.
ಸಂಸದರ ಸಭೆ ನೆಪದಲ್ಲಿ ನೆನ್ನೆ ದೆಹಲಿಗೆ ಬಂದಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ, ವರಿಷ್ಠರನ್ನು ಭೇಟಿ ಮಾಡಿ, ಸಂಪುಟ ಪುನರ್‌ರಚನೆಯ ಬೇಡಿಕೆ ಇಟ್ಟು ಅದಕ್ಕೆ ಒಪ್ಪಿಗೆ ಪಡೆಯಲು ಮುಂದಾಗಿದ್ದರು. ಆದರೆ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ಉಪಾಧ್ಯಕ್ಷ ರಾಹುಲ್ ಗಾಂಧಿಯವರ ಭೇಟಿ ಸಾಧ್ಯವಾಗದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳ ಸಚಿವ ಸಂಪುಟ ಪುನರ್‌ರಚನೆ ಆಸೆಗೆ ತಣ್ಣೀರು ಬಿದ್ದಿದೆ.
ಸಂಪುಟ ಪುನರ್‌ರಚನೆ ಬಗ್ಗೆ ಈಗ ಮಾತನಾಡಲು ಪಕ್ಷದ ಹೈಕಮಾಂಡ್‌ಗೆ ಪುರುಸೊತ್ತು ಇಲ್ಲ. ಮುಂದೆ ಈ ಬಗ್ಗೆ ಚರ್ಚಿಸೋಣ. ಈಗ ಬೇಡ ಎಂಬ ವರಿಷ್ಠರ ಸಂದೇಶದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಂದ ದಾರಿಗೆ ಸುಂಕ ಇಲ್ಲ ಎಂಬಂತೆ ಇಂದು ರಾತ್ರಿ ಬೆಂಗಳೂರಿಗೆ ವಾಪಾಸ್ ಆಗಲಿದ್ದಾರೆ.
ಮುಂದಿನ ವಾರ ಮತ್ತೆ ದೆಹಲಿಗೆ
ಪಕ್ಷದ ವರಿಷ್ಟರು 5 ರಾಜ್ಯಗಳ ಚುನಾವಣೆಯಲ್ಲಿ ಈಗ ಬ್ಯುಸಿ ಇರುವುದರಿಂದ ಸಂಪುಟ ಪುನರ್ ರಚನೆ ಬಗ್ಗೆ ಚರ್ಚಿಸಲು ಮುಖ್ಯಮಂತ್ರಿಗಳು ಮುಂದಿನ ವಾರ ಮತ್ತೆ ದೆಹಲಿಗೆ ಬರಲಿದ್ದಾರೆ ಎಂದು ಅವರ ಆಪ್ತ ಮೂಲಗಳು ಹೇಳಿವೆ.
ದಿಗ್ವಿಜಯ ಸಿಂಗ್ ಭೇಟಿ
ಪಕ್ಷದ ವರಿಷ್ಠರ ಭೇಟಿ ಸಾಧ್ಯವಾಗದ ಹಿನ್ನೆಲೆಯಲ್ಲಿ ಇಂದು ಸಂಜೆ ರಾಜ್ಯ ಕಾಂಗ್ರೆಸ್‌ನ ಉಸ್ತುವಾರಿ ನೋಡಿಕೊಳ್ಳುವ ಎಐಸಿಸಿ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್ ಸಿಂಗ್‌ರವರನ್ನು ಭೇಟಿ ಮಾಡ‌ಲಿರುವ ಸಿದ್ದರಾಮಯ್ಯ ನಿಗಮ- ಮಂಡಳಿ ಅಧ್ಯಕ್ಷರ ಅವಧಿಯನ್ನು ಮೂರು ತಿಂಗಳು ವಿಸ್ತರಿಸುವ ಬಗ್ಗೆ ಚರ್ಚೆ ನಡೆಸಲಿದ್ದಾರೆ.

Write A Comment