ರಾಷ್ಟ್ರೀಯ

ಮೋದಿಯ ಮತ್ತೊಂದು ಜನಪರ ಯೋಜನೆ : ಅತೀ ಬಡವರಿಗೆ ಉಚಿತ ದವಸಧಾನ್ಯ

Pinterest LinkedIn Tumblr

modhiನವದೆಹಲಿ, ಮೇ 11-ಯಶಸ್ವಿ 2 ವರ್ಷ ಆಡಳಿತ ಪೂರ್ಣಗೊಳಿಸಿ 3ನೆ ವರ್ಷಕ್ಕೆ ಅಡಿಯಿಡುತ್ತಿರುವ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಬಡವರಲ್ಲೇ ಅತೀ ಬಡವರಿಗೆ ಉಚಿತವಾಗಿ ದವಸ ಧಾನ್ಯಗಳನ್ನು ನೀಡಲು ಮುಂದೆ ಬಂದಿದೆ. ಈ ಸಂಬಂಧ ಹಾಲಿ ಇರುವ ಕಾಯ್ದೆಗೆ ತಿದ್ದುಪಡಿ ಮಾಡಿ ಬಡತನ ರೇಖೆಗಿಂತ ಕೆಳಗಿರುವ (ಬಿಪಿಎಲ್)ಕುಟುಂಬಗಳಿಗೆ ವಾರ್ಷಿಕ ಒಂದು ಲಕ್ಷ ಆದಾಯ ಕಡಿಮೆ ಹೊಂದಿರುವ ಫಲಾನುಭವಿಗಳಿಗೆ ಈ ಯೋಜನೆ ಸಿಗಲಿದೆ.

ಅಂತ್ಯೋದಯ ಅನ್ನ ಯೋಜನೆಯಡಿ ಈಗಾಗಲೇ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಹಭಾಗಿತ್ವದಲ್ಲಿ ಕೆಲವು ಕಡೆ ಒಂದು ರೂ. ದರದಲ್ಲೇ ಒಂದು ಕೆಜಿ ಅಕ್ಕಿ ನೀಡಿದರೆ, ಕರ್ನಾಟಕ, ಛತ್ತೀಸ್‌ಗಡ ಮತ್ತಿತರ ರಾಜ್ಯಗಳು ಉಚಿತವಾಗಿ ಅಕ್ಕಿ ನೀಡುತ್ತಿವೆ. ಇದೀಗ ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಸರ್ಕಾರ 2 ವರ್ಷ ಪೂರ್ಣಗೊಳಿಸುತ್ತಿರುವ ಸುಸಂದರ್ಭದಲ್ಲಿ ಬಡವರಿಗಾಗಿ ವಿಶೇಷ ಕಲ್ಯಾಣ ಕಾರ್ಯಕ್ರಮಗಳನ್ನು ನೀಡಲು ತೀರ್ಮಾನಿಸಿದ್ದಾರೆಂದು ಮೂಲಗಳು ತಿಳಿಸಿವೆ.

ಕೆಲ ದಿನಗಳ ಹಿಂದೆಯಷ್ಟೆ ಬಿಪಿಎಲ್ ಕುಟುಂಬಗಳಿಗೆ ಉಚಿತವಾಗಿ ಗ್ಯಾಸ್ ವಿತರಣೆ ಮಾಡುವ ಉಜ್ವಲ ಭವಿಷ್ಯ ಯೋಜನೆಯನ್ನು ಉದ್ಘಾಟಿಸಿದ್ದರು. ಈಗ ಬಡ ಕುಟುಂಬಗಳಿಗೆ ಉಚಿತವಾಗಿ ದವಸ ಧಾನ್ಯಗಳನ್ನು ನೀಡುವ ಯೋಜನೆಯೊಂದನ್ನು ಸದ್ಯದಲ್ಲೇ ಘೋಷಣೆ ಮಾಡಲಿದ್ದಾರೆಂದು ತಿಳಿದುಬಂದಿದೆ. ಸಚಿವ ಸಂಪುಟ ಸಭೆಯಲ್ಲಿ ಈ ಕಾಯ್ದೆಗೆ ತಿದ್ದುಪಡಿ ತಂದು ಅಕ್ಕಿ, ಗೋಧಿ, ರಾಗಿ, ಸಕ್ಕರೆ, ಅಡುಗೆ ಎಣ್ಣೆ, ಸೀಮೆಎಣ್ಣೆ ಸೇರಿದಂತೆ ಅಗತ್ಯ ವಸ್ತುಗಳನ್ನು ವಿತರಣೆ ಮಾಡಲು ತೀರ್ಮಾನಿಸಿದ್ದಾರೆ.

ಈಗಾಗಲೇ ಕೇಂದ್ರ ನಾಗರಿಕ ಆಹಾರ ಪೂರೈಕೆ ಸಚಿವ ರಾಮ್‌ವಿಲಾಸ್ ಪಾಸ್ವಾನ್ ಅವರ ಜೊತೆ ಮಾತುಕತೆ ನಡೆಸಿರುವ ಮೋದಿ ದೇಶದಲ್ಲಿ ಆಹಾರ ಗೋದಾಮುಗಳಲ್ಲಿ ಸಂಗ್ರಹವಾಗಿರುವ ದವಸ ಧಾನ್ಯಗಳ ಬಗ್ಗೆ ಮಾಹಿತಿ ಪಡೆದಿದ್ದಾರೆ. ದೇಶದ ಗೋದಾಮುಗಳಲ್ಲಿ ಬಡವರಿಗೆ ಉಚಿತವಾಗಿ ಮೂರು ವರ್ಷ ಆಹಾರ ಧಾನ್ಯಗಳನ್ನು ವಿತರಣೆ ಮಾಡಬಹುದು. ಕೆಲವು ಗೋದಾಮುಗಳಲ್ಲಿ ಅಗತ್ಯ ವಸ್ತುಗಳು ಬಳಕೆಯಾಗದೆ ಕೊಳೆಯುತ್ತಿವೆ ಎಂದು ಇಲಾಖೆ ಅಧಿಕಾರಿಗಳು ಪ್ರಧಾನಿಗೆ ಮಾಹಿತಿ ನೀಡಿದ್ದರು.

ಉಪಯೋಗಿಸದೆ ಅನಗತ್ಯವಾಗಿ ಕಳ್ಳಕಾರರ ಕೈಗೆ ಸೇರುತ್ತಿರುವ ಅಗತ್ಯ ವಸ್ತುಗಳನ್ನು ತಪ್ಪಿಸಲು ಬಡವರಿಗೆ ಉಚಿತವಾಗಿ ಆಹಾರ ಧಾನ್ಯಗಳನ್ನು ವಿತರಣೆ ಮಾಡಲು ಮುಂದಾಗಿದ್ದಾರೆ. ಒಂದು ವೇಳೆ ಕೇಂದ್ರ ಸರ್ಕಾರ ಉಚಿತವಾಗಿ ದವಸಧಾನ್ಯಗಳನ್ನು ಬಡವರಿಗೆ ವಿತರಣೆ ಮಾಡಿದರೆ ವಾರ್ಷಿಕವಾಗಿ ಕೇಂದ್ರ ಸರ್ಕಾರಕ್ಕೆ 10 ಸಾವಿರ ಕೋಟಿಗೂ ಅಧಿಕ ಹೊರೆಯಾಗಲಿದೆ. ಈಗಾಗಲೇ ರಾಜ್ಯ ಸರ್ಕಾರಗಳಿಗೆ ಕೇಂದ್ರ ಸರ್ಕಾರ ಪಡಿತರ ಆಹಾರ ಧಾನ್ಯಗಳನ್ನು ನೀಡಲು ಸಬ್ಸಿಡಿ ನೀಡುತ್ತಿದೆ. ಇದೀಗ ಸಬ್ಸಿಡಿ ದರವನ್ನು ಹೆಚ್ಚಳ ಮಾಡಲೂ ಸಹ ಸಮ್ಮತಿಸಿದ್ದು, ಜೂನ್ ತಿಂಗಳಿನಿಂದ ಈ ಯೋಜನೆ ಅಧಿಕೃತವಾಗಿ ಜಾರಿಗೆ ಬರಲಿದೆ ಎಂದು ತಿಳಿದುಬಂದಿದೆ. ಪ್ರತಿ ಕುಟುಂಬದ ಸದಸ್ಯರಿಗೆ 5 ಕೆಜಿ ಅಕ್ಕಿ, ಗೋಧಿ, ಬೇಳೆಕಾಳು, ಸಕ್ಕರೆ ಸೇರಿದಂತೆ ಮತ್ತಿತರರ ಅಗತ್ಯವಸ್ತುಗಳು ಫಲಾನುಭವಿಗಳಿಗೆ ಸಿಗಲಿವೆ.

Write A Comment