ರಾಷ್ಟ್ರೀಯ

ಸುಪ್ರೀಂ ಕೋರ್ಟ್ ಅಭಿಮತ: ಕರೆ ಕಡಿತ ಸಂಬಂಧಿತ ಟ್ರಾಯ್ ಆದೇಶ ಸ್ವೇಚ್ಛಾನುಸಾರ

Pinterest LinkedIn Tumblr

Supreme-ONEನವದೆಹಲಿ (ಪಿಟಿಐ): ಮೊಬೈಲ್‌ ಕರೆಗಳ ಕಡಿತಕ್ಕೆ ಸಂಬಂಧಿಸಿದಂತೆ ಗ್ರಾಹಕರಿಗೆ ಕಡ್ಡಾಯ ಪರಿಹಾರ ನೀಡುವಂತೆ ಸೇವಾ ಸಂಸ್ಥೆಗಳಿಗೆ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ(ಟ್ರಾಯ್‌) ನೀಡಿದ್ದ ಆದೇಶಕ್ಕೆ ಸುಪ್ರೀಂಕೋರ್ಟ್‌ ಬುಧವಾರ ಆಕ್ಷೇಪ ವ್ಯಕ್ತಪಡಿಸಿದೆ.

‘ಟ್ರಾಯ್‌ನ ಆಕ್ಷೇಪಾರ್ಹ ಆದೇಶವನ್ನು ಅಧಿಕಾರಾತೀತ, ಸ್ವೇಚ್ಛಾನುಸಾರ, ಅಸಮಂಜಸ ಹಾಗೂ ಪಾರದರ್ಶಕವಲ್ಲದ್ದು ಎಂದು ನಾವು ಪರಿಗಣಿಸುತ್ತೇವೆ’ ಎಂದು ನ್ಯಾಯಮೂರ್ತಿಗಳಾದ ಕುರಿಯನ್ ಜೋಸೆಫ್‌ ಹಾಗೂ ಆರ್‌.ಎಫ್‌.ನಾರಿಮನ್‌ ಅವರಿದ್ದ ಪೀಠ ಅಭಿಪ್ರಾಯ ಪಟ್ಟಿತು.

ಟ್ರಾಯ್‌ ಆದೇಶವನ್ನು ಎತ್ತಿಹಿಡಿದ ದೆಹಲಿ ಹೈಕೋರ್ಟ್‌ ನೀಡಿದ್ದ ತೀರ್ಪಿನ ವಿರುದ್ಧ ವೋಡಾಫೋನ್‌, ಭಾರ್ತಿ ಏರ್‌ಟೆಲ್ ಹಾಗೂ ರಿಲಯನ್ಸ್‌ ಸೇರಿದಂತೆ 21 ಟೆಲಿಕಾಂ ಸಂಸ್ಥೆಗಳು ಹಾಗೂ ಭಾರತ ಟೆಲಿಕಾಂ ಸೇವಾ ಸಂಸ್ಥೆಗಳ ಒಕ್ಕೂಟ ಸಲ್ಲಿಸಿದ್ದ ಅರ್ಜಿ ವಿಚಾರಣೆಯ ವೇಳೆ ನ್ಯಾಯಾಲಯ ಹೀಗೆ ಹೇಳಿದೆ.

ಟ್ರಾಯ್ ಆದೇಶದಲ್ಲಿ ಏನಿತ್ತು?: ತಾಂತ್ರಿಕ ತೊಂದರೆಯಿಂದ ಮಾತಿನ ಮಧ್ಯೆ ದೂರವಾಣಿ ಕರೆ(ಕಾಲ್‌ ಡ್ರಾಪ್‌) ತುಂಡರಿಸುವ ಸಮಸ್ಯೆಯು ಗ್ರಾಹಕರನ್ನು ಕಾಡುತ್ತಿತ್ತು.

ಇದನ್ನು ಪರಿಹರಿಸುವ ನಿಟ್ಟಿನಲ್ಲಿ ಟ್ರಾಯ್, ಮೊಬೈಲ್‌ ಕರೆಗಳ ಕಡಿತಕ್ಕೆ ಸಂಬಂಧಿಸಿದಂತೆ ಪ್ರತಿ ದಿನ ಗ್ರಾಹಕರಿಗೆ ಇಂತಹ ಮೂರು ಕರೆಗಳಿಗೆ ಪರಿಹಾರ ನೀಡುವ ಆದೇಶ ನೀಡಿತ್ತು.

ದಿನಕ್ಕೆ ಮೂರು ಕರೆ ಕಡಿತಗಳಿಗೆ ತಲಾ ₹ 1 ರಂತೆ ಗ್ರಾಹಕರಿಗೆ ಪರಿಹಾರ ನೀಡಬೇಕು. ಇದು ಜನವರಿ 1 ರಿಂದ ಜಾರಿಗೆ ತರಬೇಕು ಎಂದೂ ‘ಟ್ರಾಯ್‌’ ಸೂಚಿಸಿತ್ತು.

ಟ್ರಾಯ್ ನಿರ್ಧಾರರಿಂದ ಮೊಬೈಲ್‌ ಸಂಸ್ಥೆಗಳಿಗೆ ಪ್ರತಿ ದಿನ ಅಂದಾಜು ₹ 150 ಕೋಟಿಗಳಷ್ಟು ಹೊರೆ ಬೀಳಲಿದೆ ಎಂದು ಅಂದಾಜಿಸಲಾಗಿತ್ತು.

ಇದನ್ನು ಆರಂಭದಿಂದಲೂ ವಿರೋಧಿಸುತ್ತಿದ್ದ ಟೆಲಿಕಾಂ ಕಂಪೆನಿಗಳು, ಕೋರ್ಟ್ ಮೆಟ್ಟಿಲೇರಿದ್ದವು.

Write A Comment