ಕರ್ನಾಟಕ

ಹಾನಗಲ್ ಟ್ರೆಜರಿಯಲ್ಲಿ ಕಳವು: ಪಿಯು ಪ್ರಶ್ನೆಪತ್ರಿಕೆ ಸೋರಿಕೆ-ಮತ್ತೊಬ್ಬನಿಗೆ ಸಿಐಡಿ ಗಾಳ

Pinterest LinkedIn Tumblr

PU-Questionಬೆಂಗಳೂರು, ಮೇ ೧೧ – ದ್ವಿತೀಯ ಪಿಯುಸಿ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದ ಸಂಬಂಧ ತುಮಕೂರಿನಲ್ಲಿ ಬಂಧಿಸಿರುವ ಕಿರಣ್ ಆಲಿಯಾಸ್, ಕುಮಾರಸ್ವಾಮಿಯಿಂದ ಪ್ರಶ್ನೆ ಪತ್ರಿಕೆ ಸೋರಿಕೆಯ ಮೂಲವನ್ನು ಪತ್ತೆಹಚ್ಚುವಲ್ಲಿ ಸಿಐಡಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಪಿಯು ಪ್ರಶ್ನೆ ಪತ್ರಿಕೆಗಳನ್ನು ಹಾವೇರಿ ಜಿಲ್ಲೆಯ ಹಾನಗಲ್ ಉಪಖಜಾನೆಯ ದ್ವಿತೀಯ ದರ್ಜೆ ಸಹಾಯಕ ಸಂತೋಷ್ ಕುಮಾರ್ ಅಗಸಿ ಮಣಿಯ ನೆರವಿನೊಂದಿಗೆ ಸೋರಿಕೆ ಮಾಡಿರುವ ಮೂಲವನ್ನು ಪತ್ತೆಹಚ್ಚಲಾಗಿದೆ ಎಂದು ಸಿಐಡಿಯ ಪೊಲೀಸ್ ಮಹಾನಿರ್ದೇಶಕ ಕಿಶೋರ್ ಚಂದ್ರ ಅವರು ತಿಳಿಸಿದರು.
ಅಗಸಿ ಮಣಿಯ ಸಹಾಯದಿಂದ ಆನಗಲ್ ಖಜಾನೆಯಲ್ಲಿ ಇಟ್ಟಿದ್ದ ಪ್ರಶ್ನೆಪತ್ರಿಕೆಗಳ ಪೆಟ್ಟಿಗೆಗಳನ್ನು ತೆರೆದು ಅವುಗಳಲ್ಲಿದ್ದ ಪ್ರಶ್ನೆಪತ್ರಿಕೆಯ ಛಾಯಾಚಿತ್ರವನ್ನು ತೆಗೆದ ನಂತರ ವಾಪಸ್ ಪ್ರಶ್ನೆ ಪತ್ರಿಕೆಯನ್ನು ಅದೇ ಪೆಟ್ಟಿಗೆಯಲ್ಲಿ ಇಟ್ಟಿರುವುದಾಗಿ ಆರೋಪಿ ಕಿರಣ್ ವಿಚಾರಣೆಯಲ್ಲಿ ಬಾಯ್ಬಿಟ್ಟಿದ್ದಾನೆ ಎಂದರು.
ದ್ವಿತೀಯ ಪಿಯುಸಿ ರಸಾಯನಶಾಸ್ತ್ರದ ಮರು ಪರೀಕ್ಷೆ ಪ್ರಶ್ನೆಪತ್ರಿಕೆಗಳ ಪೆಟ್ಟಿಗೆಗಳನ್ನು ಪರೀಕ್ಷೆ ರದ್ದಾದ ನಂತರ ಖಜಾನೆಯಲ್ಲಿ ಲಭ್ಯವಿದ್ದುದ್ದರಿಂದ ಅವುಗಳನ್ನು ತನಿಖಾಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ಪ್ರಶ್ನೆಪತ್ರಿಕೆ ಸೋರಿಕೆ ಮಾಡುವಲ್ಲಿ ನೆರವಾಗಿದ್ದ ಸಂತೋಷ್ ಪರಶುರಾಮ್ ಅಗಸಿ ಮಣಿ ಉತ್ತರ ಕನ್ನಡ ಜಿಲ್ಲೆಯ ತೇರಗಾಂವ್ ಗ್ರಾಮದವನಾಗಿದ್ದು, ಸಂಬಂಧಿಕರ ನಡುವಿನ ಜಗಳದಲ್ಲಿ ಗಾಯಗೊಂಡು ಆಸ್ಪತ್ರೆಗೆ ದಾಖಲಿಸಲಾಗಿದೆ. ಅಲ್ಲಿ ಪೊಲೀಸ್ ಭದ್ರತೆಯನ್ನು ಒದಗಿಸಲಾಗಿದೆ. ವೈದ್ಯಾಧಿಕಾರಿಗಳ ನಿರ್ಧಾರದ ಮೇಲೆ ಅಗಸಿ ಮಣಿ ಗುಣಮುಖನಾದ ನಂತರ ಬಂಧಿಸಿ ವಿಚಾರಣೆಗೊಳಪಡಿಸಲಾಗುವುದು ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಬಂಧಿತ ಕಿರಣ್‌ನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಮತ್ತೆ ವಶಕ್ಕೆ ತೆಗೆದುಕೊಂಡು ವಿಚಾರಣೆ ಕೈಗೊಳ್ಳಲಾಗಿದೆ. ಕಳೆದ 1 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಕಿರಣ್, ಕೂದಲು, ಮೀಸೆಯನ್ನು ತೆಗೆದು ಬಂಧಿಸಲು ಬಂದ ಅಧಿಕಾರಿಗಳಿಗೆ ನಾನು ಕುಮಾರಸ್ವಾಮಿ ಅಲ್ಲ ಎಂದು ವಾದಕ್ಕಿಳಿದಿದ್ದ. ಆದರೆ, ಆತನ ಬಗ್ಗೆ ಮಾಹಿತಿ ನೀಡಿದ್ದ ಬಾತ್ಮೀದಾರರ ನೆರವಿನಿಂದ ಕಿರಣ್ ಆತನೇ ಎಂಬುದನ್ನು ಖಚಿತಪಡಿಸಿಕೊಂಡು ಬಂಧಿಸಲಾಗಿದೆ.
ಆರೋಪಿ ಕಿರಣ್ ಸೋರಿಕೆ ಪ್ರಕರಣದ ಕಿಂಗ್‌ಪಿನ್, ಶಿವಕುಮಾರಯ್ಯ ಅಲಿಯಾಸ್ ಗುರೂಜಿಯ ತಮ್ಮನ ಮಗನಾಗಿದ್ದು, ಆತನಿಗೆ ಬಲಗೈ ಬಂಟನಾಗಿ ಕೆಲಸ ಮಾಡುತ್ತಿದ್ದ ಕಿರಣ್ 2011 ರಲ್ಲಿ ಗುಬ್ಬಿ ಮತ್ತು 2013 ರಲ್ಲಿ ತುಮಕೂರಿನ ಉಪ ನಗರ ಪೊಲೀಸ್ ಠಾಣೆಗಳಲ್ಲಿ ಪ್ರಶ್ನೆಪತ್ರಿಕೆ ಸೋರಿಕೆ ಸಂಬಂಧದಲ್ಲಿ ಆರೋಪಿಯಾಗಿದ್ದಾನೆ.
ಕಳೆದ 2013ರಿಂದ ಸ್ವತಂತ್ರವಾಗಿ ಪ್ರಶ್ನೆಪತ್ರಿಕೆ ಸೋರಿಕೆ ಜಾಲವನ್ನು ಹರಡಿ, ಅದನ್ನೇ ವೃತ್ತಿಯಾಗಿಸಿಕೊಂಡು ಬಂದಿದ್ದಾನೆ. ಈತನನ್ನು ಸಿಐಡಿಯ ಎಸ್‌ಪಿಗಳಾದ ಯದಾ ಮಾರ್ಟಿನ್ ಮಾರ್ಬಂನ್ಯಾಂಗ್, ಸಿರಿಗೌರಿ ಸೇರಿದಂತೆ 40 ಮಂದಿ ಅಧಿಕಾರಿಗಳ ತಂಡ ಬಂಧಿಸುವಲ್ಲಿ ಯಶಸ್ವಿಯಾಗಿದೆ ಎಂದು ಕಿಶೋರ್ ಚಂದ್ರ ತಿಳಿಸಿದರು.
ಕಿಂಗ್‌‌ಪಿನ್ ಗುರೂಜಿಯನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಲಾಗಿದ್ದು, ಮಹತ್ವದ ಮಾಹಿತಿಗಳನ್ನು ಸಂಗ್ರಹಿಸಲಾಗಿದೆ. ಆತನಿಗೆ ಪ್ರತಿ ದಿನ ವೈದ್ಯಕೀಯ ತಪಾಸಣೆಗೊಳಪಡಿಸಲಾಗುತ್ತಿದ್ದು, ಆತನ ಆರೋಗ್ಯದಲ್ಲಿ ಯಾವುದೇ ಸಮಸ್ಯೆ ಉಂಟಾಗಿಲ್ಲ ಎಂದು ಸ್ಪಷ್ಟಪಡಿಸಿದರು. ಇಲ್ಲಿಯವರೆಗೆ ಪ್ರಶ್ನೆಪತ್ರಿಕೆ ಸೋರಿಕೆ ಸಂಬಂಧ 14 ಮಂದಿ ಆರೋಪಿಗಳನ್ನು ಸಿಐಡಿ ಅಧಿಕಾರಿಗಳು ಬಂಧಿಸಿದ್ದಾರೆ.
ಬಂಧನವಿಲ್ಲ
ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಯಾವೊಬ್ಬ ವಿದ್ಯಾರ್ಥಿಯನ್ನು ಇಲ್ಲಿಯವರೆಗೆ ಬಂಧಿಸಿಲ್ಲ. ಬಂಧಿಸುವ ಉದ್ದೇಶವೂ ನಮಗಿಲ್ಲ, ಆದರೆ ಸೋರಿಕೆಯ ಸಂಬಂಧ ಮಾಹಿತಿಯನ್ನು ಸಂಗ್ರಹಿಸಲು ಕೆಲವು ವಿದ್ಯಾರ್ಥಿಗಳನ್ನು ವಿಚಾರಣೆಗೊಳಪಡಿಸಲಾಗಿದೆ ಎಂದರು.
ಸೋರಿಕೆಯಾದ ಪ್ರಶ್ನೆಪತ್ರಿಕೆಗಳನ್ನು ಕೊಡುತ್ತೇವೆ ಎಂದರೆ ಅದನ್ನು ಪಡೆಯಲು ಯತ್ನಿಸುವುದು ಸಾಮಾನ್ಯ. ಹಾಗಾಗಿ ಯಾವ ವಿದ್ಯಾರ್ಥಿಯನ್ನು ಬಂಧಿಸಲು ಹೋಗುವುದಿಲ್ಲ. ಆದರೆ, ಸೋರಿಕೆಯಾದ ಎಲ್ಲ ಪ್ರಶ್ನೆಪತ್ರಿಕೆಗಳನ್ನು ಪಡೆದು ಪರೀಕ್ಷೆಯಲ್ಲಿ ಅತಿ ಹೆಚ್ಚಿನ ಅಂಕ ಪಡೆದು ಉತ್ತೀರ್ಣರಾಗಿರುವ ವಿದ್ಯಾರ್ಥಿಯ ಖಚಿತ ಮಾಹಿತಿ ದೊರೆತರೆ ಅಂತಹವರನ್ನು ವಶಕ್ಕೆ ತೆಗೆದುಕೊಳ್ಳುವ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು ಎಂದು ಹೇಳಿದರು.
ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಪ್ರತಾಪ್ ರೆಡ್ಡಿ, ಪೊಲೀಸ್ ಮಹಾನಿರೀಕ್ಷಕ (ಐಜಿ) ಹೇಮಂತ್ ನಿಂಬಾಳ್ಕರ್ ಅವರಿದ್ದರು.

Write A Comment