ಮನೋರಂಜನೆ

ಅಮಿತಾಬ್ ಬಚ್ಚನ್ ತೆರಿಗೆ ವಂಚನೆ ಪ್ರಕರಣದ ಮರು ತನಿಖೆ

Pinterest LinkedIn Tumblr

amiನವದೆಹಲಿ, ಮೇ 11- ಬಾಲಿವುಡ್ ಬಾದ್‌ಷಾ ಅಮಿತಾಬ್ ಬಚ್ಚನ್ ಅವರ 2001-02ರ ಅವಧಿಯಲ್ಲಿ ನಡೆದ 1.66 ಕೋಟಿ ರೂ. ತೆರಿಗೆ ವಂಚನೆ ಪ್ರಕರಣದ ಮರು ತನಿಖೆ ನಡೆಸುವಂತೆ ಸರ್ವೋಚ್ಚ ನ್ಯಾಯಾಲಯ ಆದಾಯ ತೆರಿಗೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದೆ. ಸ್ಟಾರ್ ಪ್ಲಸ್‌ನಲ್ಲಿ ಬಿತ್ತರವಾದ ಕೌನ್ ಬನೇಗಾ ಕರೋಡ್‌ಪತಿ ಕಾರ್ಯಕ್ರಮದ ನಿರ್ವಹಣೆ ಮಾಡಿದ್ದ ಅಮಿತಾಬ್ ಬಚ್ಚನ್ ಪಡೆದಿದ್ದ ಸಂಭಾವನೆಯಲ್ಲಿ 1.66 ಕೋಟಿ ರೂ. ವಂಚಿಸಿದ್ದಾರೆ ಎಂದು ಐಟಿ ಇಲಾಖೆ ಪ್ರಕರಣ ದಾಖಲಿಸಿತ್ತು.

ಈ ನಡುವೆ ಸುದೀರ್ಘ ತನಿಖೆ ನಂತರ 2012ರಲ್ಲಿ ಮುಂಬೈ ಹೈಕೋರ್ಟ್ ಐಟಿ ಆರೋಪವನ್ನು ತಳ್ಳಿ ಹಾಕಿ ಅಮಿತಾಬ್ ಬಚ್ಚನ್‌ಗೆ ದೊಡ್ಡ ರಿಲೀಫ್ ನೀಡಿತ್ತು. ಈ ಸಂಬಂಧ ಐಟಿ ಇಲಾಖೆ ಸುಪ್ರೀಂಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿತ್ತು. ಮಾಹಿತಿ ಪ್ರಕಾರ, 2001-02ರ ಮಾರ್ಚ್ 31ಕ್ಕೆ ಅಂತ್ಯವಾದಂತೆ ಸಲ್ಲಿಸಿರುವ ಒಟ್ಟು ಆದಾಯ 14.99 ಕೋಟಿ ಎಂದು ತಿಳಿಸಲಾಗಿತ್ತು. ಆದರೆ, ಅವರು ಕೇವಲ 8.11 ಕೋಟಿ ಎಂದು ತಿಳಿಸಿದ್ದರು. ನಂತರ ಕೆಲವೊಂದು ಬದಲಾವಣೆ ಮಾಡಿ ರಿಟರ್ನ್ಸ್ ಫೈಲ್ ಮಾಡಿದ್ದರು.

ಇದನ್ನು 2005ರಲ್ಲಿ ಐಟಿ ಅಧಿಕಾರಿಯೊಬ್ಬರು ಪತ್ತೆಹಚ್ಚಿ 2006 ಏಪ್ರಿಲ್ 5ರಂದು ಅಮಿತಾಬ್ ಬಚ್ಚನ್‌ಗೆ ನೋಟಿಸ್ ನೀಡಲಾಗಿತ್ತು. ಇದರಲ್ಲಿ 2002-03ರಲ್ಲಿ ಅವರ ಆದಾಯದ ಮಾಹಿತಿ ನೀಡುವಂತೆ ತಿಳಿಸಲಾಗಿತ್ತು. ಇದಲ್ಲದೆ, ಬಚ್ಚನ್ ಅವರ ಖಾತೆಗಳಿದ್ದ ಏಳು ಬ್ಯಾಂಕ್‌ಗಳಲ್ಲಿರಿಸಿದ್ದ ಮೊತ್ತವನ್ನು ಕೂಡ ಪರಿಶೀಲಿಸಲಾಗಿತ್ತು. ಆದಾಯ ಗಳಿಕೆಯಲ್ಲಿ ತಪ್ಪು ಮಾಹಿತಿ ನೀಡಲಾಗಿದೆ ಎಂದು ಪ್ರಕರಣ ದಾಖಲಿಸಲಾಗಿತ್ತು. ನಂತರ ನ್ಯಾಯಾಲಯಕ್ಕೂ ದೋಷಾರೋಪಣ ಪಟ್ಟಿ ಸಲ್ಲಿಸಲಾಗಿತ್ತು.

ಮುಂಬೈ ಹೈಕೋರ್ಟ್‌ನಲ್ಲಿ ಕೇಸ್ ಬಿದ್ದುಹೋದ ಕಾರಣ ಸುಪ್ರೀಂಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲಾಗಿತ್ತು. ಇಂದು ಸುಪ್ರೀಂಕೋರ್ಟ್‌ನಲ್ಲಿ ಇದರ ವಿಚಾರಣೆಗೆ ಬಂದು ಈಗಾಗಲೇ ಬಚ್ಚನ್ ಕುಟುಂಬ ಹೊರದೇಶದಲ್ಲೂ ಹೂಡಿಕೆ ಮಾಡಿರುವ ಬಗ್ಗೆ ಮಾಹಿತಿಗಳು ಸಿಕ್ಕಿವೆ. ಇದರ ಹಿನ್ನೆಲೆಯಲ್ಲಿ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕಾದ ಅವಶ್ಯಕತೆ ಇದೆ ಎಂದು ಐಟಿ ಪರ ವಕೀಲರು ವಾದ ಮಂಡಿಸಿದರು. ಇದನ್ನು ಪುರಸ್ಕರಿಸಿದ ನ್ಯಾಯಾಲಯ ಪ್ರಕರಣದ ಮರು ತನಿಖೆ ನಡೆಸುವಂತೆ ಆದೇಶಿಸಿದ್ದು, ಮತ್ತೆ ಬಿಗ್‌ಬಿ ತೆರಿಗೆ ವಂಚನೆ ಸುಳಿಗೆ ಸಿಲುಕಿದ್ದಾರೆ.

Write A Comment