
ವಿಶಾಖಪಟ್ಟಣ : ಆಶಿಶ್ ನೆಹ್ರಾ ಅಮೋಘ ಬೌಲಿಂಗ್‌ನಿಂದಾಗಿ ಸನ್ ರೈಸರ್ಸ್ ಹೈದರಾಬಾದ್ ತಂಡವು ವೈ.ಎಸ್. ರಾಜಶೇಖರ ರೆಡ್ಡಿ ಕ್ರೀಡಾಂಗಣ ದಲ್ಲಿ ಮಂಗಳವಾರ ರೈಸಿಂಗ್ ಪುಣೆ ಸೂಪರ್ ಜೈಂಟ್ಸ್ ತಂಡದ ಎದುರು 4 ರನ್‌ಗಳಿಂದ ಗೆದ್ದಿತು.
ಪುಣೆ ತಂಡದ ಬೌಲರ್ ಆ್ಯಡಮ್ ಜಂಪಾ (19ಕ್ಕೆ6) ಶ್ರಮ ವ್ಯರ್ಥ ವಾಯಿತು. ಜಂಪಾ ದಾಳಿಗೆ ಕುಸಿದ ಸನ್ ರೈಸರ್ಸ್ ತಂಡವು 20 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 137 ರನ್‌ಗಳನ್ನು ಗಳಿ ಸಿತ್ತು. ನಂತರ ಸಾಧಾರಣ ಮೊತ್ತದ ಬೆನ್ನತ್ತಿದ ದೋನಿ ಬಳಗಕ್ಕೆ ನೆಹ್ರಾ (29ಕ್ಕೆ3) ತಡೆಯೊಡ್ಡಿದರು.
ಇದ ರಿಂದಾಗಿ 20 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 133 ರನ್ ಮಾತ್ರ ಗಳಿಸಿತು. ಆರಂಭಿಕ ಆಟಗಾರ ಅಜಿಂಕ್ ರಹಾನೆ ಮತ್ತು ಉಸ್ಮಾನ್ ಖ್ವಾಜಾ ವಿಫಲರಾಗಿದ್ದು ಪುಣೆ ತಂಡಕ್ಕೆ ಮುಳುವಾಯಿತು. ಜಾರ್ಜ್ ಬೇಲಿ (34), ಆರ್ ಅಶ್ವಿನ್ (29) ಮತ್ತ ದೋನಿ (30) ಅವರ ಆಟವು ತಂಡವನ್ನು ಗೆಲುವಿನ ದಡ ಮುಟ್ಟಿಸಲು ಸಾಕಾಗಲಿಲ್ಲ. ನೆಹ್ರಾ, ಭುವನೇಶ್ವರ ಕುಮಾರ್, ಮುಸ್ತಫಿಜರ್ ರೆಹಮಾನ್, ಬರೀಂದರ್ ಉತ್ತಮ ಬೌಲಿಂಗ್ ಮಾಡಿದರು.
ಕುಸಿದ ಸನ್‌ರೈಸರ್ಸ್: ಬ್ಯಾಟಿಂಗ್ ಆರಂಭಿಸಿದ ಡೇವಿಡ್ ವಾರ್ನರ್ ಬಳಗಕ್ಕೆ ನಾಲ್ಕನೇ ಓವರ್‌ನಲ್ಲಿ ಆರ್.ಪಿ. ಸಿಂಗ್‌್ ಮೊದಲ ಆಘಾತ ನೀಡಿದರು. ವಾರ್ನರ್ (11) ವಿಕೆಟ್ ಉರುಳಿಸಿದ ಅವರು ಪುಣೆ ತಂಡಕ್ಕೆ ಮೇಲುಗೈ ತಂದಿತ್ತರು.
ಆ ಬಳಿಕ ಶಿಖರ್ ಧವನ್ (33; 27ಎ, 2ಬೌಂ, 2ಸಿ.) ಮತ್ತು ಕೇನ್ ವಿಲಿಯಮ್ಸನ್ (32; 37ಎ, 3ಬೌಂ) ಎದುರಾಳಿ ಬೌಲರ್‌ಗಳನ್ನು ಕಾಡಿದರು.
ಈ ಜೋಡಿ ಎರಡನೇ ವಿಕೆಟ್ ಪಾಲುದಾರಿಕೆಯಲ್ಲಿ 46 ರನ್ ಗಳಿಸಿ ತಂಡಕ್ಕೆ ಆಸರೆಯಾಯಿತು.
ಧವನ್ ಔಟಾದ ಬಳಿಕ ಬಂದ ಯುವರಾಜ್ ಸಿಂಗ್ (23; 21ಎ, 1ಬೌಂ, 2ಸಿ) ಅಬ್ಬರಿಸುವ ಸೂಚನೆ ನೀಡಿದ್ದರು. ಆದರೆ ಜಂಪಾ, ಯುವಿಗೆ ಕಾಲೂರಲು ಬಿಡಲಿಲ್ಲ.
ಆ ಬಳಿಕ ಬ್ಯಾಟ್ಸ್‌ಮನ್‌ಗಳು ಪೆವಿಲಿ ಯನ್ ಪೆರೇಡ್ ನಡೆಸಿದರು. ಇದಕ್ಕೆ ಕಾರಣವಾಗಿದ್ದು ಜಂಪಾ ಬೌಲಿಂಗ್. ಅಮೋಘ ದಾಳಿಯ ಮೂಲಕ ಸನ್‌ರೈಸರ್ಸ್ ಬ್ಯಾಟಿಂಗ್ ಶಕ್ತಿಗೆ ಪೆಟ್ಟು ನೀಡಿದರು.
ಸಂಕ್ಷಿಪ್ತ ಸ್ಕೋರು: ಸನ್‌ರೈಸರ್ಸ್ ಹೈದರಾಬಾದ್: 20 ಓವರ್‌ಗಳಲ್ಲಿ 8ಕ್ಕೆ137 (ಡೇವಿಡ್ ವಾರ್ನರ್ 11, ಶಿಖರ್ ಧವನ್ 33, ಕೇನ್ ವಿಲಿಯಮ್ಸನ್ 32, ಯುವರಾಜ್ ಸಿಂಗ್ 23, ದೀಪಕ್ ಹೂಡಾ 14, ಆರ್.ಪಿ. ಸಿಂಗ್ 23ಕ್ಕೆ1, ಆರ್. ಅಶ್ವಿನ್ 16ಕ್ಕೆ1, ಆ್ಯಡಮ್ ಜಂಪಾ 19ಕ್ಕೆ6);
ರೈಸಿಂಗ್ ಪುಣೆ ಸೂಪರ್‌ಜೈಂಟ್ಸ್: 20 ಓವರ್‌ಗಳಲ್ಲಿ 8ಕ್ಕೆ133 (ಉಸ್ಮಾನ್ ಖ್ವಾಜಾ 11, ಜಾರ್ಜ್ ಬೇಲಿ 34, ಆರ್. ಅಶ್ವಿನ್ 29, ಮಹೇಂದ್ರಸಿಂಗ್ ದೋನಿ 30, ತಿಸಾರ ಪೆರೆರಾ 17, ಆಶಿಶ್ ನೆಹ್ರಾ 29ಕ್ಕೆ3, ಬರೀಂದರ್ ಸರನ್ 26ಕ್ಕೆ1, ಮೊಯಿಸೆಸ್ ಹೆನ್ರಿಕ್ಸ್ 20ಕ್ಕೆ1)
ಫಲಿತಾಂಶ: ಸನ್‌ರೈಸರ್ಸ್ ತಂಡಕ್ಕೆ 4 ರನ್ ಜಯ. ಪಂದ್ಯ ಶ್ರೇಷ್ಠ: ಆ್ಯಡಮ್ ಜಂಪಾ (ಪುಣೆ)