ಮನೋರಂಜನೆ

ಮಿಂಚಿದ ನೆಹ್ರಾ; ಮುಂಬೈ ವಿರುದ್ಧ ಸನ್‌ರೈಸರ್ಸ್‌ ಹೈದರಾಬಾದ್ ಗೆ ಗೆಲುವು

Pinterest LinkedIn Tumblr

nehra

ವಿಶಾಖಪಟ್ಟಣ: ಸನ್‌ರೈಸರ್ಸ್ ಹೈದರಾಬಾದ್ ತಂಡಕ್ಕೆ ಬೌಲರ್‌ಗಳು ಮತ್ತೊಂದು ಜಯದ ಕಾಣಿಕೆ ನೀಡಿದರು. ಅನುಭವಿ ಎಡಗೈ ವೇಗಿ ಆಶಿಶ್ ನೆಹ್ರಾ (15ಕ್ಕೆ3) ಅವರ ಅಮೋಘ ಬೌಲಿಂಗ್‌ ನೆರವಿನಿಂದ ಸನ್‌ರೈಸರ್ಸ್‌ ಹೈದರಾಬಾದ್ ತಂಡವು ಭಾನುವಾರ ಭರ್ಜರಿ ಜಯ ಗಳಿಸಿತು.

ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಎದುರು 85 ರನ್‌ಗಳಿಂದ ಗೆದ್ದ ಸನ್‌ರೈಸರ್ಸ್ ತಂಡವು ಪಾಯಿಂಟ್‌ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿತು.
ರಾಜಶೇಖರ ರೆಡ್ಡಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಮುಂಬೈ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಬ್ಯಾಟಿಂಗ್ ಮಾಡಿದ ಸನ್‌ರೈಸರ್ಸ್ ತಂಡವು ಶಿಖರ್ ಧವನ್ (ಔಟಾಗದೆ 82) ಅವರ ಬಿರುಸಿನ ಬ್ಯಾಟಿಂಗ್ ನೆರವಿನಿಂದ 20 ಓವರ್‌ಗಳಲ್ಲಿ 3 ವಿಕೆಟ್‌ಗಳಿಗೆ 177 ರನ್‌ ಗಳಿಸಿತು.

ನಂತರ ಗುರಿ ಬೆನ್ನತ್ತಿದ ರೋಹಿ ತ್ ಶರ್ಮಾ ನಾಯಕತ್ವದ ಮುಂಬೈ ಇಂಡಿಯನ್ಸ್ 16.3 ಓವರ್‌ಗಳಲ್ಲಿ ಕೇವಲ 82 ರನ್ ಗಳಿಸಿ ಸರ್ವಪತನ ಕಂಡಿತು. ನೆಹ್ರಾ ಅವರಿಗೆ ಉತ್ತಮ ಜೊತೆ ನೀಡಿದ ಇನ್ನೊಬ್ಬ ಎಡಗೈ ವೇಗಿ ಮುಸ್ತಫಿಜರ್ ರೆಹಮಾನ್ ಕೂಡ ಮೂರು ವಿಕೆಟ್ ಕಬಳಿಸಿದರು.
ಒಟ್ಟು ಒಂಬತ್ತು ಪಂದ್ಯಗಳನ್ನು ಆಡಿರುವ ಸನ್‌ರೈಸರ್ಸ್ ತಂಡವು ಆರರಲ್ಲಿ ಗೆದ್ದಿದೆ. ಮೂರರಲ್ಲಿ ಸೋತಿತ್ತು. ಒಟ್ಟು 12 ಅಂಕಗಳೊಂದಿಗೆ ಅಗ್ರಸ್ಥಾನಕ್ಕೇರಿತು. ಮುಂಬೈ ಹತ್ತು ಪಂದ್ಯಗಳಲ್ಲಿ ಐದರಲ್ಲಿ ಮಾತ್ರ ಜಯಿಸಿದೆ. ಇದು ಆ ತಂಡದ ಐದನೇ ಸೋಲು. ಹತ್ತು ಅಂಕಗಳೊಂದಿಗೆ ಐದನೇ ಸ್ಥಾನದಲ್ಲಿದೆ.

ನೆಹ್ರಾ ಮೊನಚಾದ ದಾಳಿ: ಆಶಿಶ್ ನೆಹ್ರಾ ಅವರ ಸ್ವಿಂಗ್‌ ಎಸೆತಗಳಿಗೆ ಮುಂಬೈ ತಂಡವು ಆರಂಭದಲ್ಲಿಯೇ ನಲುಗಿತು. ಮೂವತ್ತು ರನ್‌ಗಳನ್ನು ಗಳಿಸುವಷ್ಟರಲ್ಲಿ ಐದು ವಿಕೆಟ್‌ಗಳು ಪತನಗೊಂಡವು. ಟೂರ್ನಿಯಲ್ಲಿ ಉತ್ತಮ ಫಾರ್ಮ್‌ನಲ್ಲಿದ್ದ ರೋಹಿತ್ ಶರ್ಮಾ, ಅಂಬಟಿ ರಾಯುಡು ಮತ್ತು ಜೋಸ್ ಬಟ್ಲರ್ ಅವರ ವಿಕೆಟ್‌ಗಳನ್ನು ನೆಹ್ರಾ ಕಬಳಿಸಿದರು.

ಕೇವಲ ಐದೇ ಓವರ್‌ಗಳಲ್ಲಿ ಸನ್‌ರೈಸರ್ಸ್ ತಂಡವು ಪಂದ್ಯದ ಮೇಲೆ ಹಿಡಿತ ಸಾಧಿಸಿತು. ನಂತರದ ಯಾವ ಹಂತದಲ್ಲಿಯೂ ತನ್ನ ಬಿಗಿ ಹಿಡಿತವನ್ನು ಸಡಿಲಗೊಳಿಸಲಿಲ್ಲ. ಚಾಂಪಿಯನ್ ತಂಡದ ವಿಕೆಟ್‌ಗಳು ತರಗೆಲೆಯಂತೆ ಉರುಳಿದವು. ಕೃಣಾಲ್ ಪಾಂಡ್ಯ (17), ಕೀರನ್ ಪೊಲಾರ್ಡ್ (11) ಮತ್ತು ಹರಭಜನ್ ಸಿಂಗ್ (ಔಟಾಗದೆ 21) ಅವರನ್ನು ಹೊರತುಪಡಿಸಿದರೆ ಉಳಿದವರು ಎರಡಂಕಿ ಮೊತ್ತ ಗಳಿಸಲಿಲ್ಲ. ಹಾರ್ದಿಕ್, ಸೌಥಿ, ಮೆಕ್‌ಲೆಂಗಾನ್ ವಿಕೆಟ್‌ಗಳನ್ನು ಮುಸ್ತಫಿಜರ್ ಕಬಳಿಸಿದರೆ, ಬರೀಂದರ್ ಸರಾನ್ ಕೃಣಾಲ್, ಬೂಮ್ರಾ ವಿಕೆಟ್‌ಗಳನ್ನು ತಮ್ಮ ಬುಟ್ಟಿಗೆ ಹಾಕಿಕೊಂಡರು.

ಧವನ್ ಮಿಂಚು: ಯುವಿ ಹಿಟ್‌ವಿಕೆಟ್: ಸನ್‌ರೈಸರ್ಸ್ ತಂಡಕ್ಕೆ ನಾಯಕ ಡೇವಿಡ್ ವಾರ್ನರ್ (48; 33ಎ, 7ಬೌಂ, 1ಸಿ) ಮತ್ತು ಶಿಖರ್ ಧವನ್
( ಔಟಾಗದೆ 82; 57ಎ, 10ಬೌಂ, 1ಸಿ) ಉತ್ತಮ ಆರಂಭ ನೀಡಿದರು.

ಮೊದಲ ವಿಕೆಟ್ ಜೊತೆಯಾಟದಲ್ಲಿ 85 ರನ್ ಸೇರಿಸಿದರು. ಆಫ್‌ಸ್ಪಿನ್ನರ್ ಹರಭಜನ್ ಸಿಂಗ್ ಅವರ ಬೌಲಿಂಗ್‌ನಲ್ಲಿ ಪೊಲಾರ್ಡ್‌ಗೆ ಕ್ಯಾಚಿತ್ತ ವಾರ್ನರ್ ನಿರ್ಗಮಿಸಿದರು. ನಂತರ ಬಂದ ಕೇನ್ ವಿಲಿಯಮ್ಸನ್ ಕೂಡ ಹರಭಜನ್‌ಗೆ ವಿಕೆಟ್ ಒಪ್ಪಿಸಿದರು. ನಂತರ ಧವನ್ ಜೊತೆಗೂಡಿದ ಯುವರಾಜ್ ಸಿಂಗ್ (39; 23ಎ, 3ಬೌಂ, 2ಸಿ) ಮೂರನೇ ವಿಕೆಟ್‌ ಜೊತೆಯಾಟದಲ್ಲಿ 84 ರನ್‌ ಸೇರಿಸಿದರು.

ಈ ಐಪಿಎಲ್‌ ಟೂರ್ನಿಯಲ್ಲಿ ಯುವಿಗೆ ಇದು ಎರಡನೇ ಪಂದ್ಯ. ತಮ್ಮ ನೈಜ ಆಟವಾಡಿದ ಯುವಿ ಗಮನ ಸೆಳೆದರು. ಆದರೆ, ಅರ್ಧಶತಕ ಗಳಿಸುವ ಅವರ ಆಸೆ ಈಡೇರಲಿಲ್ಲ. ಕೊನೆಯ ಓವರ್‌ನಲ್ಲಿ ಮೆಕ್‌ಲೆಂಗಾನ್ ಎಸೆತವನ್ನು ಆಡುವ ಸಂದರ್ಭದಲ್ಲಿ ಹೆಜ್ಜೆ ಹಿಂದೆ ಇಟ್ಟ ಅವರ ಪಾದವು ಆಫ್‌ಸ್ಟಂಪ್‌ಗೆ ತಗುಲಿತು. ಹಿಟ್‌ವಿಕೆಟ್ ಆದ ಅವರು ಬೇಸರದಿಂದ ಹೊರನಡೆದರು.

ಸ್ಕೋರ್‌ಕಾರ್ಡ್‌
ಸನ್‌ರೈಸರ್ಸ್ ಹೈದರಾಬಾದ್ 3 ಕ್ಕೆ 177 (20 ಓವರ್‌ಗಳಲ್ಲಿ)

ಡೇವಿಡ್ ವಾರ್ನರ್ ಸಿ ಕೀರನ್ ಪೊಲಾರ್ಡ್ 48
ಶಿಖರ್ ಧವನ್ ಔಟಾಗದೆ 82
ಕೇನ್ ವಿಲಿಯಮ್ಸನ್ ಸಿ ರೋಹಿತ್ ಶರ್ಮಾ ಬಿ ಹರಭಜನ್ ಸಿಂಗ್ 02
ಯುವರಾಜ್ ಸಿಂಗ್ ಹಿಟ್‌ವಿಕೆಟ್ ಬಿ ಮೆಕ್‌ಲೆಂಗಾನ್ 39
ಮೊಯಿಸೆಸ್ ಹೆನ್ರಿಕ್ಸ್ ಔಟಾಗದೆ 01
ಇತರೆ: (ಲೆಗ್‌ಬೈ2, ವೈಡ್ 3) 05
ವಿಕೆಟ್‌ ಪತನ: 1–85 (ವಾರ್ನರ್; 9.5), 2–91 (ವಿಲಿಯಮ್ಸನ್; 11.3), 3–176 (ಯುವರಾಜ್ ಸಿಂಗ್; 19.4)
ಬೌಲಿಂಗ್‌: ಟಿಮ್ ಸೌಥಿ 4–0–35–0, ಮಿಷೆಲ್ ಮೆಕ್‌ಲೆಂಗಾನ್ 4–0–38–1 (ವೈಡ್ 1), ಹರಭಜನ್ ಸಿಂಗ್ 4–0–29–2 (ವೈಡ್ 1), ಜಸ್‌ಪ್ರೀತ್ ಬೂಮ್ರಾ 4–0–35–0, ಹಾರ್ದಿಕ್ ಪಾಂಡ್ಯ 1–0–10–0, ಕೀರನ್ ಪೊಲಾರ್ಡ್ 2–0–23–0 (ವೈಡ್ 1), ಕೃಣಾಲ್ ಪಾಂಡ್ಯ 1–0–5–0

ಮುಂಬೈ ಇಂಡಿಯನ್ಸ್ 92 (16.3 ಓವರ್‌ಗಳಲ್ಲಿ)

ರೋಹಿತ್ ಶರ್ಮಾ ಬಿ ಆಶಿಶ್ ನೆಹ್ರಾ 05
ಪಾರ್ಥಿವ್ ಪಟೇಲ್ ಎಲ್‌ಬಿಡಬ್ಲ್ಯು ಬಿ ಭುವನೇಶ್ವರ್ ಕುಮಾರ್ 00
ಅಂಬಟಿ ರಾಯುಡು ಸಿ ಕೇನ್ ವಿಲಿಯಮ್ಸನ್ ಬಿ ಆಶಿಶ್ ನೆಹ್ರಾ 06
ಕೃಣಾಲ್ ಪಾಂಡ್ಯ ಸಿ ಶಿಖರ್ ಧವನ್ ಬಿ ಬರೀಂದರ್ ಸರಾನ್ 17
ಜೋಸ್ ಬಟ್ಲರ್ ಸಿ ನಮನ್ ಓಜಾ ಬಿ ಆಶಿಶ್ ನೆಹ್ರಾ 02
ಕೀರನ್ ಪೊಲಾರ್ಡ್ ಸಿ ಬರೀಂದರ್ ಸರಾನ್ ಬಿ ಮೊಯಿಸೆಸ್ ಹೆನ್ರಿಕ್ಸ್ 11
ಹಾರ್ದಿಕ್ ಪಾಂಡ್ಯ ಸಿ ನಮನ್ ಓಜಾ ಬಿ ಮುಸ್ತಫಿಜರ್ ರೆಹಮಾನ್ 07
ಹರಭಜನ್ ಸಿಂಗ್ ಔಟಾಗದೆ 21
ಟಿಮ್ ಸೌಥಿ ಸಿ ನಮನ್ ಓಜಾ ಬಿ ಮುಸ್ತಿಫಿಜರ್ ರೆಹಮಾನ್ 03
ಮಿಷೆಲ್ ಮೆಕ್‌ಲೆಂಗಾನ್ ಸಿ ಮೊಯಿಸೆಸ್ ಹೆನ್ರಿಕ್ಸ್ ಬಿ ಮುಸ್ತಫಿಜರ್ 08
ಜಸ್‌ಪ್ರೀತ್ ಬೂಮ್ರಾ ಸಿ ನಮನ್ ಓಜಾ ಬಿ ಬರೀಂದರ್ ಸರಾನ್ 06
ಇತರೆ:( ಲೆಗ್‌ಬೈ 2, ವೈಡ್ 4 ) 06
ವಿಕೆಟ್‌ ಪತನ: 1–5 (ಪಟೇಲ್; 0.6), 2–5 (ಶರ್ಮಾ; 1.1), 3–28 (ರಾಯುಡು; 3.4), 4–30 (ಬಟ್ಲರ್; 3.6), 5–30 (ಕೃಣಾಲ್; 4.2),6–49 (ಪೊಲಾರ್ಡ್; 8.4), 7–50 (ಹಾರ್ದಿಕ್; 9.1), 8–58 (ಸೌಥಿ; 11.1), 9–78 (ಮೆಕ್‌ಲೆಂಗಾನ್; 13.6), 10–92 (ಬೂಮ್ರಾ; 16.3)

ಬೌಲಿಂಗ್‌: ಭುವನೇಶ್ವರ್ ಕುಮಾರ್ 3–0–23–1 (ವೈಡ್ 1), ಆಶಿಶ್ ನೆಹ್ರಾ 3–0–15–3, ಬರೀಂದರ್ ಸರಾನ್ 3.3–0–18–2 (ವೈಡ್ 1), ಮೊಯಿಸೆಸ್ ಹೆನ್ರಿಕ್ಸ್ 4–0–18–1, ಮುಸ್ತಫಿಜರ್ ರೆಹಮಾನ್ 3–0–16–3 (ವೈಡ್ 2)
ಫಲಿತಾಂಶ: ಸನ್‌ರೈಸರ್ಸ್ ತಂಡಕ್ಕೆ 85 ರನ್‌ಗಳ ಜಯ

ಪಂದ್ಯಶ್ರೇಷ್ಠ: ಆಶಿಶ್ ನೆಹ್ರಾ

Write A Comment