ಮನೋರಂಜನೆ

ವಿರಾಟ್ ಸಿಡಿಲಬ್ಬರದ ಶತಕದ ಸಾಹಸದಿಂದ 7ವಿಕೆಟ್​ಗಳ ಭರ್ಜರಿ ಗೆಲುವು ದಾಖಲಿಸಿದ ಆರ್‌ಸಿಬಿ; ದೋನಿ ಬಳಗದ ರೈಸಿಂಗ್ ಪುಣೆ ಸೂಪರ್ ಜೈಂಟ್ಸ್ ಗೆ ನಿರಾಸೆ

Pinterest LinkedIn Tumblr

virat-kohli-ms-dhoni

ಬೆಂಗಳೂರು: ವಿರಾಟ್ ಕೊಹ್ಲಿ (108*ರನ್, 58 ಎಸೆತ, 8 ಬೌಂಡರಿ, 7 ಸಿಕ್ಸರ್), ಅಮೋಘ ಶತಕ ಸಿಡಿಸುವ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಗೆಲುವಿನ ಹಾದಿಗೆ ಮರಳಿಸಿದ್ದಾರೆ. ರೈಸಿಂಗ್ ಪುಣೆ ಸೂಪರ್ ಜೈಂಟ್ಸ್ ವಿರುದ್ಧ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಐಪಿಎಲ್-9ರ ತನ್ನ 8ನೇ ಪಂದ್ಯದಲ್ಲಿ ಆರ್ಸಿಬಿ ತಂಡ ಫೀಲ್ಡಿಂಗ್-ಬೌಲಿಂಗ್ ವಿಭಾಗದಲ್ಲಿ ಮತ್ತೆ ಮುಗ್ಗರಿಸಿದರೂ, ಕೊಹ್ಲಿ ಸಾಹಸದಿಂದ 7ವಿಕೆಟ್ಗಳ ಭರ್ಜರಿ ಗೆಲುವು ದಾಖಲಿಸಿತು.

ಪ್ರಸಕ್ತ ಟೂರ್ನಿಯಲ್ಲಿ ಎರಡು ಶತಕ ಗಳಿಸಿದ ಏಕೈಕ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾದ ವಿರಾಟ್ ಆಟಕ್ಕೆ ಕ್ರಿಕೆಟ್‌ ಅಭಿಮಾನಿಗಳಷ್ಟೇ ಅಲ್ಲ. ಎದುರಾಳಿ ತಂಡ ರೈಸಿಂಗ್ ಪುಣೆ ಸೂಪರ್ ಜೈಂಟ್ಸ್ ತಂಡದ ನಾಯಕ ಮಹೇಂದ್ರಸಿಂಗ್ ದೋನಿ ಕೂಡ ತಲೆದೂಗಿದರು. ಆರ್‌ಸಿಬಿ ತಂಡ 7 ವಿಕೆಟ್‌ಗಳಿಂದ ಜಯಿಸಿ ಪ್ಲೇ ಆಫ್‌ ಪ್ರವೇಶಿಸುವ ಕನಸನ್ನು ಜೀವಂತ ಉಳಿಸಿಕೊಂಡಿತು.

ಆರ್‌ಸಿಬಿ ಇನ್ನೂ ಏಳು ಪಂದ್ಯಗಳನ್ನು ಆಡಬೇಕಿದೆ. ಇದೀಗ ಒಟ್ಟು ಮೂರರಲ್ಲಿ ಗೆದ್ದಿರುವ ತಂಡವು ಇನ್ನೂ ಐದರಲ್ಲಿ ಜಯಿಸಿದರೆ, ಪ್ಲೇ ಆಫ್‌ ಹಂತಕ್ಕೆ ಸಾಗುವ ಅವಕಾಶ ಇದೆ.

ಹದಿನೈದು ದಿನಗಳ ಹಿಂದೆ ಗುಜರಾತ್ ಲಯನ್ಸ್ ವಿರುದ್ಧ ರಾಜ್‌ಕೋಟ್‌ನಲ್ಲಿ ಶತಕ ದಾಖಲಿಸಿದ್ದ ವಿರಾಟ್, ತವರಿನ ಅಂಗಳದಲ್ಲಿ ಅಜೇಯ 108 ರನ್‌ ಗಳಿಸಿದರು. 58 ಎಸೆತಗಳಲ್ಲಿ 8 ಬೌಂಡರಿ 7 ಸಿಕ್ಸರ್‌ಗಳಿದ್ದ ಅಬ್ಬರದ ಶತಕಕ್ಕೆ ಕ್ರೀಡಾಂಗಣದಲ್ಲಿ ಸೇರಿದ್ದ ಮೂವತ್ತು ಸಾವಿರಕ್ಕೂ ಹೆಚ್ಚು ಅಭಿಮಾನಿಗಳು ಮನಸೋತರು. ಕ್ರಿಕೆಟ್ ಪುಸ್ತಕದಲ್ಲಿರುವ ಕಲಾತ್ಮಕ ಹೊಡೆತಗಳ ಮೂಲಕವೂ ಚುಟುಕು ಕ್ರಿಕೆಟ್‌ನಲ್ಲಿ ರನ್‌ಗಳ ಮಳೆ ಹರಿಸಬಹುದು ಎಂಬ ಕಲೆಯನ್ನು ಕೊಹ್ಲಿ ತೋರಿಸಿಕೊಟ್ಟರು. ಆಕರ್ಷಕ ಡ್ರೈವ್, ಫ್ರಂಟ್‌ಫುಟ್ ಪಂಚ್, ಸ್ವೀಪ್‌ಗಳ ಮೂಲಕ ರನ್‌ಗಳ ಹೊಳೆ ಹರಿಸಿದರು.

ಎಲ್ಲಕ್ಕಿಂತ ಮುಖ್ಯವಾಗಿ ಪ್ರತಿಯೊಂದು ಅವರ ಆಳವಾದ ಏಕಾಗ್ರತೆ, ಹೊಡೆತಗಳ ಆಯ್ಕೆ, ಚುರುಕಾದ ಓಟಗಳು ಎದುರಾಳಿ ಬೌಲರ್‌ಗಳನ್ನು ಒತ್ತಡಕ್ಕೆ ತಳ್ಳಿದವು. 31 ಎಸೆತಗಳಲ್ಲಿ ಅವರು ಅರ್ಧಶತಕದ ಗಡಿ ಮುಟ್ಟಿದರು. ಅದರಲ್ಲಿ 4 ಬೌಂಡರಿ, 3 ಅಮೋಘ ಸಿಕ್ಸರ್‌ಗಳಿದ್ದವು. ನಂತರದ 50 ರನ್ ಹೊಡೆಯಲು ಅವರು ತೆಗೆದುಕೊಂಡಿದ್ದು ಕೇವಲ 25 ಎಸೆತಗಳನ್ನು ಮಾತ್ರ.

ಕಿರಿಯ ಆಟಗಾರ ಕೆ.ಎಲ್. ರಾಹುಲ್ ಜೊತೆಗೆ ಇನಿಂಗ್ಸ್ ಆರಂಭಿಸಿದ ಅವರು ಮೊದಲ ವಿಕೆಟ್‌ಗೆ 94 ರನ್ ಸೇರಿಸಿದರು. ನಂತರ ಮೂರನೇ ವಿಕೆಟ್ ಜೊತೆಯಾಟದಲ್ಲಿ ಅನುಭವಿ ಶೇನ್‌ ವ್ಯಾಟ್ಸನ್ ಜೊತೆಗೆ 46 ರನ್ ಸೇರಿಸಿದರು. ಆದರೆ, ಅದರಲ್ಲಿ ವ್ಯಾಟ್ಸನ್‌ (36; 13ಎ, 5ಬೌಂ, 2ಸಿ) ಪಾಲು ಹೆಚ್ಚಿತ್ತು.

ಆಸ್ಟ್ರೇಲಿಯಾದ ಆಲ್‌ರೌಂಡರ್ ಅಬ್ಬರಿಸುವಾಗ ತಾಳ್ಮೆಯಿಂದ ಆಡಿದ್ದ ಕೋಹ್ಲಿ ನಂತರ ಬೌಲರ್‌ಗಳನ್ನು ಹಿಗ್ಗಾಮುಗ್ಗ ದಂಡಿಸಿದರು. ಅದರ ಫಲವಾಗಿ ಇನಿಂಗ್ಸ್‌ನ ಮೂರು ಎಸೆತಗಳು ಬಾಕಿಯಿದ್ದಾಗಲೇ ಆರ್‌ಸಿಬಿ ಜಯಭೇರಿ ಬಾರಿಸಿತು. ಪ್ರೇಕ್ಷಕರ ಮೊಬೈಲ್‌ ಫೋನ್‌ಗಳ ದೀಪಗಳು ಮಿನುಗಿ ಹಬ್ಬದ ವಾತಾವರಣ ಸಋಷ್ಟಿಸಿದವು.

ಕೊಹ್ಲಿ ಮೂರು ಐಪಿಎಲ್‌ ಟೂರ್ನಿಗಳಲ್ಲಿ 500 ರನ್‌ ಗಡಿ ದಾಟಿದ ಸಾಧನೆಯನ್ನೂ ಮಾಡಿದರು. 2011, 2015ರಲ್ಲಿ ಅವರು ಈ ಸಾಧನೆ ಮಾಡಿದ್ದರು. ಈ ಟೂರ್ನಿಯಲ್ಲಿ ಎಂಟು ಪಂದ್ಯಗಳನ್ನು ಆಡಿರುವ ಕೊಹ್ಲಿ 541 ರನ್‌ ಗಳಿಸಿದ್ದಾರೆ.

ಕಮರಿದ ಕನಸು?: ಭಾರತ ಟೆಸ್ಟ್ ತಂಡದ ನಾಯಕ ಕೊಹ್ಲಿ ಮತ್ತು ಏಕದಿನ ತಂಡದ ನಾಯಕ ಮಹೇಂದ್ರಸಿಂಗ್ ದೋನಿ ನಡುವಣ ಹಣಾಹಣಿಯೆಂದೇ ಈ ಪಂದ್ಯ ಬಿಂಬಿತವಾಗಿತ್ತು. ಎರಡೂ ತಂಡಗಳಿಗೂ ಈ ಪಂದ್ಯ ಗೆಲ್ಲುವುದು ಮುಖ್ಯವಾಗಿತ್ತು. ಹೋದ ತಿಂಗಳು ಪುಣೆಯಲ್ಲಿ ಕೊಹ್ಲಿ ಬಳಗದ ಎದುರು ಸೋತಿದ್ದ ದೋನಿ ಬಳಗ ಬೆಂಗಳೂರಿನಲ್ಲಿಯೂ ನಿರಾಸೆ ಅನುಭವಿಸಿತು. ಒಟ್ಟು ಹತ್ತು ಪಂದ್ಯಗಳನ್ನು ಆಡಿರುವ ಪುಣೆ ತಂಡವು ಕೇವಲ ಮೂರರಲ್ಲಿ ಗೆದ್ದಿದೆ. ಇನ್ನೂ ಐದು ಪಂದ್ಯಗಳು ಬಾಕಿಯಿವೆ. ಆದರೂ ಪ್ಲೇ ಆಫ್ ಹಂತ ತಲುಪುವ ಆ ತಂಡದ ಕನಸು ಬಹುತೇಕ ಕಮರಿದಂತಾಗಿದೆ.

ಟಾಸ್ ಸೋತು ಬ್ಯಾಟಿಂಗ್‌ಗೆ ಬಂದ ದೋನಿ ಬಳಗದ ಆರಂಭ ಚೆನ್ನಾಗಿರಲಿಲ್ಲ. ಸತತ ಎರಡನೇ ಪಂದ್ಯದಲ್ಲಿಯೂ ಅರ್ಧಶತಕ ಗಳಿಸಿದ ಅಜಿಂಕ್ಯ ರಹಾನೆ ಮತ್ತು ಎರಡು ಜೀವದಾನಗಳ ನೆರವಿನಿಂದ ಅರ್ಧಶತಕ ಬಾರಿಸಿದ ಸೌರಭ್ ತಿವಾರಿ ಬ್ಯಾಟಿಂಗ್‌ನಿಂದ 20 ಓವರ್‌ಗಳಲ್ಲಿ 191 ರನ್‌ಗಳನ್ನು ತಂಡವು ಗಳಿಸಿತ್ತು. ಆದರೆ, ಕೊಹ್ಲಿಯನ್ನು ಕಟ್ಟಿಹಾಕಲು ಸಾಧ್ಯವಾಗದೇ ಸೋಲನುಭವಿಸಿತು.

ವ್ಯಾಟ್ಸನ್‌ ಮಿಂಚು
ಮೂರು ವಿಕೆಟ್ ಪಡೆದು ಮಿಂಚಿದ ಶೇನ್ ವ್ಯಾಟ್ಸನ್‌ ದೋನಿ ಪಡೆಯು 200 ರನ್‌ಗಳ ಮೊತ್ತದ ಗಡಿಯನ್ನು ದಾಟದಂತೆ ತಡೆಯೊಡ್ಡಿದರು.
ಕಳೆದ ಪಂದ್ಯಗಳಲ್ಲಿ ಆದಂತೆಯೇ ಈ ಪಂದ್ಯದಲ್ಲಿಯೂ ಆರ್‌ಸಿಬಿ ಬೌಲಿಂಗ್‌ನಲ್ಲಿ ಸಮಸ್ಯೆ ಎದುರಿಸಿತು. ಸೌರಭ್ ತಿವಾರಿ ಔಟಾದ ನಂತರ ವ್ಯಾಟ್ಸನ್ ಅವರ ಅಮೋಘ ಬೌಲಿಂಗ್ ಕಳೆಗಟ್ಟಿತು. ಒಂದೇ ಓವರ್‌ನಲ್ಲಿ ಎರಡು ವಿಕೆಟ್ ಗಳಿಸಿದ ಅವರು ಕೊನೆಯ ಹಂತದ ಓವರ್‌ಗಳಲ್ಲಿ ಎದುರಾಳಿಗಳು ಅಬ್ಬರಿಸದಂತೆ ನೋಡಿಕೊಂಡರು.

ಮೂರನೇ ಬಾರಿ 500 ರನ್ ಸಾಧನೆ ಮಾಡಿದ ಕೊಹ್ಲಿ
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ ಅವರು ಐಪಿಎಲ್ ಟೂರ್ನಿಯ ಮೂರು ಆವೃತ್ತಿಗಳಲ್ಲಿ 500ಕ್ಕೂ ಹೆಚ್ಚು ರನ್‌ಗಳಿಸಿದ ಏಕೈಕ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

ಕೊಹ್ಲಿ 2013 ಮತ್ತು 2015ರಲ್ಲಿ 500ಕ್ಕೂ ಹೆಚ್ಚು ರನ್‌ಗಳನ್ನು ಗಳಿಸಿದ್ದರು. ಈಗ ನಡೆಯುತ್ತಿರುವ ಒಂಬತ್ತನೇ ಆವೃತ್ತಿಯಲ್ಲೆ ಕೇವಲ ಎಂಟು ಪಂದ್ಯಗಳಿಂದ ಅವರು 541 ರನ್ ಗಳಸಿದ್ದಾರೆ. ಅದರಲ್ಲಿ ಎರಡು ಶತಕಗಳು ಮತ್ತು ನಾಲ್ಕು ಅರ್ಧಶತಕಗಳು ಇವೆ.

44.65ರ ಸ್ಟ್ರೈಕ್‌ರೇಟ್‌ನಲ್ಲಿ ಅವರು ಈ ರನ್‌ಗಳನ್ನು ಗಳಿಸಿದ್ದಾರೆ. ಅದರಲ್ಲಿ ಒಟ್ಟು 48 ಬೌಂಡರಿಗಳು, ಆರು ಸಿಕ್ಸರ್‌ಗಳು ಸೇರಿವೆ. ಮುಂಬೈ ಇಂಡಿಯನ್ಸ್‌ ತಂಡದ ಮಾಜಿ ಆಟಗಾರ ಸಚಿನ್‌ ತೆಂಡೂಲ್ಕರ್ ಎರಡು ಬಾರಿ (2010, 2011) ಈ ಸಾಧನೆ ಮಾಡಿದ್ದರು. ಪ್ರಸಕ್ತ ಟೂರ್ನಿಯ ಲೀಗ್‌ ಹಂತದಲ್ಲಿ ಆರ್‌ಸಿಬಿ ಇನ್ನೂ ಏಳು ಪಂದ್ಯಗಳನ್ನು ಆಡಬೇಕಿದೆ.

ಕೊಹ್ಲಿ ಅಮಾನತು: ಶನಿವಾರ ತಂಡವನ್ನು ಗೆಲುವಿನ ದಡ ಸೇರಿಸಿದ ಆರ್‌ಸಿಬಿ ತಂಡದ ನಾಯಕ ವಿರಾಟ್ ಕೊಹ್ಲಿ ಮುಂದಿನ ಪಂದ್ಯದಿಂದ ಅಮಾನತುಗೊಂಡಿದ್ದಾರೆ.

ಆರ್‌ಸಿಬಿ ಬೌಲರ್‌ಗಳು ನಿಧಾನಗ ತಿಯ ಬೌಲಿಂಗ್ ಮಾಡಿದ ಕಾರಣ ಅವರು ಈ ಶಿಕ್ಷೆ ಅನುಭವಿಸಬೇಕಾಗಿದೆ. ಹಿಂದಿನ ಎರಡೂ ಪಂದ್ಯಗಳಲ್ಲಿಯೂ ನಿಧಾನಗತಿಯ ಬೌಲಿಂಗ್‌ನಿಂದಾಗಿ ಕೊಹ್ಲಿ ₹ 36 ಲಕ್ಷ ದಂಡ ಕಟ್ಟಿದ್ದರು. ಶನಿ ವಾರ ರೈಸಿಂಗ್ ಪುಣೆ ಎದುರಿನ ಪಂದ್ಯ ದಲ್ಲಿ ಮೊದಲು ಫೀಲ್ಡಿಂಗ್ ಮಾಡಿದ ಆರ್‌ಸಿಬಿ 105 ನಿಮಿಷಗಳಲ್ಲಿ 20 ಓವರ್‌ ಬೌಲಿಂಗ್ ಮಾಡಿತು. ಆದರೆ, ನಿಯಮದ ಪ್ರಕಾರ 90 ನಿಮಿ ಷಗಳಲ್ಲಿ ಇನಿಂಗ್ಸ್‌ ಮುಕ್ತಾಯ ವಾಗಬೇಕಿತ್ತು.
ಆರ್‌ಸಿಬಿ ತಂಡವು ಮೇ 9ರಂದು ಮೊಹಾಲಿಯಲ್ಲಿ ಕಿಂಗ್ಸ್‌ ಇಲೆವನ್ ಪಂಜಾಬ್ ಎದುರು ಆಡಲಿದೆ.

ತೃಪ್ತಿ ನೀಡಿದ ಶತಕ: ಇಂದು ಆಡಿದ ರೀತಿಯಲ್ಲಿಯೇ ಕಳೆದ ಪಂದ್ಯದಲ್ಲಿ (ಸನ್‌ ರೈಸರ್ಸ್ ಹೈದರಾಬಾದ್ ಎದುರು) ಆಡ ಬೇಕಿತ್ತು. ಅಲ್ಲಿಯೂ ಗೆಲ್ಲುವ ಅವಕಾಶ ಇತ್ತು. ಆಗ ನಾನು ಬಹಳ ಬೇಸರ ಗೊಂಡಿದ್ದೆ. ಆದರೆ ಇವತ್ತಿನ ಶತಕ ನನಗೆ ತೃಪ್ತಿ ತಂದಿದೆ ಎಂದು ಆರ್‌ಸಿಬಿ ನಾಯಕ ವಿರಾಟ್ ಕೊಹ್ಲಿ ಹೇಳಿದರು.

ಪಂದ್ಯದ ನಂತರ ಸುದ್ದಿಗಾರರೊಂ ದಿಗೆ ಮಾತನಾಡಿದ ಅವರು, ‘ಲಯನ್ಸ್‌ ವಿರುದ್ಧ ಗಳಿಸಿದ್ದ ಶತಕಕ್ಕಿಂತಲೂ ಇವತ್ತಿನದ್ದು ವಿಶೇಷ’ ಎಂದರು.

ಸ್ಕೋರ್‌ಕಾರ್ಡ್‌
ರೈಸಿಂಗ್ ಪುಣೆ ಸೂಪರ್‌ಜೈಂಟ್ಸ್ 6 ಕ್ಕೆ 191 (20 ಓವರ್‌ಗಳಲ್ಲಿ)

ಅಜಿಂಕ್ಯ ರಹಾನೆ ಬಿ ಶೇನ್ ವ್ಯಾಟ್ಸನ್ 74
ಉಸ್ಮಾನ್ ಖ್ವಾಜಾ ರನ್‌ಔಟ್ (ವ್ಯಾಟ್ಸನ್‌/ಬಿನ್ನಿ) 16
ಸೌರಭ್ ತಿವಾರಿ ಸ್ಟಂಪ್ಡ್ ಕೆ.ಎಲ್. ರಾಹುಲ್ ಬಿ ಚಹಾಲ್ 52
ಮಹೇಂದ್ರಸಿಂಗ್ ದೋನಿ ಸಿ ಪರ್ವೇಜ್ ರಸೂಲ್ ಬಿ ಶೇನ್ ವ್ಯಾಟ್ಸನ್ 09
ತಿಸಾರ ಪೆರೆರಾ ಸಿ ಶೇನ್ ವ್ಯಾಟ್ಸನ್ ಬಿ ಕ್ರಿಸ್ ಜೋರ್ಡಾನ್ 14
ಜಾರ್ಜ್ ಬೇಲಿ ಸಿ ಕೆ.ಎಲ್. ರಾಹುಲ್ ಬಿ ಶೇನ್ ವ್ಯಾಟ್ಸನ್ 00
ರಜತ್ ಭಾಟಿಯಾ ಔಟಾಗದೆ 09
ಆರ್. ಅಶ್ವಿನ್ ಔಟಾಗದೆ 10
ಇತರೆ: (ಲೆಗ್‌ಬೈ 1, ವೈಡ್ 6) 07
ವಿಕೆಟ್‌ ಪತನ: 1–26 (ಖ್ವಾಜಾ; 2.2), 2–132 (ತಿವಾರಿ; 14.0), 3–144 (ದೋನಿ; 15.4), 4–171 (ಪೆರೆರಾ; 17,6), 5–171 (ರಹಾನೆ; 18.1), 6–174 (ಬೇಲಿ; 18.5)
ಬೌಲಿಂಗ್‌: ಸ್ಟುವರ್ಟ್ ಬಿನ್ನಿ 2–0–17–0, ಪರ್ವೇಜ್ ರಸೂಲ್ 3–0–37–0, ಕ್ರಿಸ್ ಜೋರ್ಡನ್ 4–0–43–1 (ವೈಡ್ 1), ಶೇನ್ ವ್ಯಾಟ್ಸನ್ 4–0–24–3 (ವೈಡ್ 2), ವರುಣ್ ಆ್ಯರನ್ 3–0–31–0, ಯಜುವೇಂದ್ರ ಚಹಾಲ್ 4–0–38–1 (ವೈಡ್ 3)

ಆರ್‌ಸಿಬಿ 3 ಕ್ಕೆ 195 (19.3 ಓವರ್‌ಗಳಲ್ಲಿ)
ವಿರಾಟ್ ಕೊಹ್ಲಿ ಔಟಾಗದೆ 108
ಕೆ.ಎಲ್. ರಾಹುಲ್ ಸಿ ಜಾರ್ಜ್ ಬೇಲಿ ಬಿ ಆ್ಯಡಂ ಜಂಪಾ 38
ಎ.ಬಿ. ಡಿವಿಲಿಯರ್ಸ್ ಸಿ ತಿಸಾರ ಪೆರೆರಾ ಬಿ ಆ್ಯಡಂ ಜಂಪಾ 01
ಶೇನ್ ವ್ಯಾಟ್ಸನ್ ಎಲ್‌ಬಿಡಬ್ಲ್ಯು ಬಿ ಆರ್‌.ಪಿ. ಸಿಂಗ್ 36
ಟ್ರಾವಿಸ್ ಹೆಡ್ ಔಟಾಗದೆ 06
ಇತರೆ:( ಲೆಗ್‌ಬೈ 5, ನೋಬಾಲ್ 1 ) 06
ವಿಕೆಟ್‌ ಪತನ: 1–94 (ರಾಹುಲ್; 11.1), 2–97 (ಡಿವಿಲಿಯರ್ಸ್; 11.6), 3–143 (ವ್ಯಾಟ್ಸನ್; 15.3)
ಬೌಲಿಂಗ್‌: ಅಶೋಕ್ ದಿಂಡಾ 3.3–0–26–0, ಆರ್‌.ಪಿ. ಸಿಂಗ್ 4–0–37–1 (ನೋಬಾಲ್1), ತಿಸಾರ ಪೆರೆರಾ 3–0–40–0, ಆ್ಯಡಂ ಜಂಪಾ 4–0–35–2, ರಜತ್ ಭಾಟಿಯಾ 4–0–45–0, ಆರ್. ಅಶ್ವಿನ್ 1–0–7–0

ಫಲಿತಾಂಶ: ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡಕ್ಕೆ 7 ವಿಕೆಟ್‌ಗಳ ಜಯ

ಪಂದ್ಯಶ್ರೇಷ್ಠ: ವಿರಾಟ್ ಕೊಹ್ಲಿ (ಆರ್‌ಸಿಬಿ)

Write A Comment