ರಾಷ್ಟ್ರೀಯ

ಗೋವಾ ರೇಪ್ ಕೇಸ್: ಬಾಲಕಿಯನ್ನು ಶಾಸಕನಿಗೆ 50 ಲಕ್ಷಕ್ಕೆ ಮಾರಿದ್ದ ಆರೋಪಿ ಪೊಲೀಸರಿಗೆ ಶರಣು

Pinterest LinkedIn Tumblr

dd1

ಪಣಜಿ: 16 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಆರೋಪ ಎದುರಿಸುತ್ತಿರುವ ಗೋವಾ ಉಚ್ಚಾಟಿತ ಕಾಂಗ್ರೆಸ್ ಶಾಸಕ ಅಟಾನ್ಸಿಯೋ ಮಾನ್ಸೆರಾಟ್ ಅಲಿಯಾಸ್ ಬಾಬುಷ್ ಮಾನ್ಸೆರಾಟ್ ಈಗ ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿದ್ದು, ಶನಿವಾರ ಪ್ರಕರಣದ ಮೂರನೇ ಆರೋಪಿ ಪೊಲೀಸರಿಗೆ ಶರಣಾಗಿದ್ದಾರೆ.

ಪ್ರಕರಣ ಬೆಳಕಿಗೆ ಬಂದ ನಂತರ ತಲೆಮರೆಸಿಕೊಂಡಿದ್ದ ಮೂರನೇ ಆರೋಪಿ ರೋಸಿ ಫೆರೋಸ್ ಅವರು ಇಂದು ಗೋವಾ ಅಪರಾಧ ವಿಭಾಗದ ಪೊಲೀಸರಿಗೆ ಶರಣಾಗಿದ್ದಾರೆ.

ಪೊಲೀಸ್ ಮೂಲಗಳ ಪ್ರಕಾರ, ಇಂದು ಶರಣಾಗಿರುವ ಆರೋಪಿ ಬಳಿ ಅಪ್ರಾಪ್ತ ಬಾಲಕಿಯ ಅತ್ಯಾಚಾರಕ್ಕೆ ಸಂಬಂಧಿಸಿದ ಮಹತ್ವದ ಸಾಕ್ಷ್ಯಗಳು ಲಭ್ಯವಾಗಿದ್ದು, ಆರೋಪಿಯಿಂದ ಬಾಲಕಿಯ ಮೊಬೈಲ್ ಫೋನ್ ಅನ್ನು ವಶಪಡಿಸಿಕೊಳ್ಳಲಾಗಿದೆ.

ಫೆರೋಸ್ ಅತ್ಯಾಚಾರಕ್ಕೆ ಒಳಗಾದ ಬಾಲಕಿಯ ಮಲತಾಯಿಯನ್ನು ಶಾಸಕ ಮಾನ್ಸೆರಾಟ್ ಗೆ ಪರಿಚಯಿಸಿದ್ದು, ನಂತರ ಬಾಲಕಿಯನ್ನು 50 ಲಕ್ಷ ರುಪಾಯಿಗೆ ಮಾರಾಟ ಮಾಡಿದ್ದಾರೆ ಎನ್ನಲಾಗಿದೆ. ಇದಕ್ಕೂ ಪೊಲೀಸರು ಮಾನವ ಕಳ್ಳಸಾಗಣೆ ಆರೋಪದ ಮೇಲೆ ಬಾಲಕಿಯ ಮಲತಾಯಿಯನ್ನು ಸಹ ಬಂಧಿಸಿದ್ದಾರೆ.

ಮಾಜಿ ಶಿಕ್ಷಣ ಸಚಿವ ಬಾಬುಷ್ ವಿರುದ್ಧ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಹಾಗೂ ಮಾನವ ಕಳ್ಳ ಸಾಗಣೆಯ ಆರೋಪದ ಮೇಲೆ ಕಳೆದ ಬುಧವಾರ ಗೋವಾ ಪೊಲೀಸರು ಎಫ್ ಐಆರ್ ದಾಖಲಿಸಿದ್ದು, ಆರೋಪಿಯವನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

‘ತನ್ನನ್ನು ತನ್ನ ಮಲತಾಯಿ ಮತ್ತು ಇನ್ನೋರ್ವ ಮಹಿಳೆ ಮಾನ್ಸೆರಾಟ್‌ಗೆ 50 ಲಕ್ಷ ರುಪಾಯಿಗೆ ಮಾರಿದ್ದಾರೆ ಎಂದು 16 ವರ್ಷದ ಸಂತ್ರಸ್ತ ಬಾಲಕಿ ಪೊಲೀಸರಿಗೆ ನೀಡಿದ ದೂರಿನಲ್ಲಿ ಆರೋಪಿಸಿದ್ದಳು. ಅಲ್ಲದೆ ಮಾನ್ಸೆರಾಟ್‌ ತನ್ನ ಬಂಗ್ಲೆಯಲ್ಲಿ ನನಗೆ ಪಾನೀಯಕ್ಕೆ ಅಮಲು ಬೆರೆಸಿ ಕುಡಿಯಲು ಕೊಟ್ಟು ಬಳಿಕ ನನ್ನ ಮೇಲೆ ಅತ್ಯಾಚಾರ ಎಸಗಿದ್ದಾರೆ. ಮರುದಿನ ಬೆಳಗ್ಗೆ ನಾನು ಕಣ್ತೆರೆದಾಗ ನನ್ನ ಮೈಮೇಲೆ ಬಟ್ಟೆಗಳಿರಲಿಲ್ಲ; ರಕ್ತ ತಗುಲಿಕೊಂಡಿತ್ತು. ಆತ ಬಟ್ಟೆ ಧರಿಸಿಕೊಳ್ಳದೆ ನನ್ನ ಬಳಿ ಕುಳಿತಿದ್ದ ಎಂದು ದೂರಿದ್ದಾಳೆ.

Write A Comment