ರಾಷ್ಟ್ರೀಯ

ಹಿಂಡನ್ ವಾಯುನೆಲೆಗೆ ನುಗ್ಗಿದ ಶಂಕಿತ ಉಗ್ರರು; ಹೈ ಅಲರ್ಟ್ ಘೊಷಣೆ

Pinterest LinkedIn Tumblr

high alert

ಘಾಜಿಯಾಬಾದ್: ಉತ್ತರ ಪ್ರದೇಶದ ಘಾಜಿಯಾಬಾದ್ ನಲ್ಲಿರುವ ಹಿಂಡನ್ ವಾಯುನೆಲೆಗೆ ಮೂವರು ಶಂಕಿತ ಉಗ್ರರು ನುಸುಳಿರುವ ಕುರಿತು ಆತಂಕ ವ್ಯಕ್ತವಾಗುತ್ತಿದ್ದು, ವಾಯುನೆಲೆಯಲ್ಲಿ ಹೈಅಲರ್ಟ್ ಘೋಷಣೆ ಮಾಡಲಾಗಿದೆ ಎಂದು ತಿಳಿದುಬಂದಿದೆ.

ನಿನ್ನೆಯಷ್ಟೇ ದೆಹಸಿ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಿ ಪಠಾಣ್ ಕೋಟ್ ವಾಯುನೆಲೆ ಮೇಲೆ ದಾಳಿ ನಡೆಸಿದ್ದ ಜೈಷ್ ಇ ಮೊಹಮದ್ ಉಗ್ರ ಸಂಘಟನೆಗೆ ಸೇರಿದೆ 12 ಮಂದಿ ಉಗ್ರರನ್ನು ಬಂಧಿಸಿದ್ದರು. ಇದರ ಬೆನ್ನಲ್ಲೇ ಇಂದು ಮೂವರು ಆಗಂತುಕರು ಉತ್ತರ ಪ್ರದೇಶದ ಘಾಜಿಯಾಬಾದ್ ನಲ್ಲಿರುವ ಹಿಂಡನ್ ವಾಯುನೆಲೆಗೆ ನುಸುಳಿರುವ ಶಂಕೆ ವ್ಯಕ್ತವಾಗಿದೆ. ಹೀಗಾಗಿ ಹಿಂಡನ್ ವಾಯುನೆಲೆಯಲ್ಲಿ ಹೈ ಅಲರ್ಟ್ ಘೊಷಣೆ ಮಾಡಲಾಗಿದ್ದು, ಭಾರತೀಯ ಸೇನೆಯ ಸೈನಿಕರು ವಾಯು ನೆಲೆಯಲ್ಲಿ ತೀವ್ರ ಶೋಧ ನಡೆಸುತ್ತಿದ್ದಾರೆ.

ದೆಹಲಿಯಿಂದ ಕೇವಲ 30 ಕಿ.ಮೀ. ದೂರದಲ್ಲಿರುವ ಹಿಂಡನ್ ವಾಯುನೆಲೆಗೆ ಶಂಕಿತ ಉಗ್ರರು ಪ್ರವೇಶಿಸಿರುವ ಕುರಿತು ಸ್ಥಳೀಯ ನಿವಾಸಿಗಳು ಮಾಹಿತಿ ನೀಡಿದ್ದಾರೆ. ಉತ್ತರ ಪ್ರದೇಶ ಪೊಲೀಸರು ನೀಡಿರುವ ಮಾಹಿತಿಯಂತೆ ಒಬ್ಬನನ್ನು ವಾಯುಪಡೆ ಪೊಲೀಸರು ಬಂಧಿಸಿದ್ದು, ವಿಚಾರಣೆ ನಡೆಸಿದ್ದಾರೆ. ಆದರೆ ಮತ್ತಿಬ್ಬರು ಶಂಕಿತರ ಸುಳಿವು ಇದುವರೆಗೂ ಪತ್ತೆಯಾಗಿಲ್ಲ. ಮುನ್ನೆಚ್ಚರಿಕಾ ಕ್ರಮವಾಗಿ ವಾಯುನೆಲೆಯ ಅವರಣದಲ್ಲಿರುವ 2 ಕೇಂದ್ರೀಯ ವಿದ್ಯಾಲಯಗಳನ್ನು ಮುಚ್ಚಲಾಗಿದ್ದು, ಶೋಧ ಕಾರ್ಯ ನಡೆಸಲಾಗುತ್ತಿದೆ. ಅಲ್ಲದೇ ವಾಯುನೆಲೆಯ ಎಲ್ಲಾ ಗೇಟ್ ಗಳಲ್ಲೂ ಭದ್ರತೆ ಹೆಚ್ಚಿಸಲಾಗಿದೆ ಎಂದು ವಾಯು ಪಡೆ ಅಧಿಕಾರಿ ಆಶಿಶ್ ಶ್ರೀವಾಸ್ತವ ತಿಳಿಸಿದ್ದಾರೆ.

ದೆಹಲಿ ಪೊಲೀಸರು ದೆಹಲಿಯ ವಿವಿಧೆಡೆ ದಾಳಿ ನಡೆಸಿ ಜೈಷ್ ಎ ಮೊಹಮ್ಮದ್ ಉಗ್ರ ಸಂಘಟನೆಗೆ ಸೇರಿದ 12 ಜನರನ್ನು ಬಂಧಿಸಿದ್ದರು. ಈ 12 ಮಂದಿಯ ಪೈಕಿ ಬಂಧಿತ ಸಾಜಿದ್ ಅಹಮದ್, ಸಮೀರ್ ಅಹಮದ್ ಮತ್ತು ಶಕೀರ್ ಅನ್ಸಾರಿ ಎಂಬುವವರು ದೆಹಲಿ ಮತ್ತು ಹಿಂಡನ್ ವಾಯು ನೆಲೆಯ ಮೇಲೆ ಪಠಾಣ್ಕೋಟ್ ಮಾದರಿ ದಾಳಿ ನಡೆಸಲು ಸಂಚು ರೂಪಿಸಿರುವುದಾಗಿ ತಿಳಿದು ಬಂದಿದೆ. ಇನ್ನು ಶಂಕಿತ ಉಗ್ರರ ನುಸುಳುವಿಕೆ ಬಹಿರಂಗವಾಗುತ್ತಿದ್ದಂತೆಯೇ ಉತ್ತರ ಪ್ರದೇಶದ ಎಲ್ಲ ಸರ್ಕಾರಿ ಕಚೇರಿಗಳ ಭದ್ರತೆ ಹೆಚ್ಚಿಸಲಾಗಿದ್ದು. ದೆಹಲಿಯಲ್ಲಿಯೂ ಹೈಅಲರ್ಟ್ ಘೋಷಣೆ ಮಾಡಲಾಗಿದೆ.

Write A Comment