ರಾಷ್ಟ್ರೀಯ

ರಾಜ್ಯಸಭೆಯಲ್ಲಿ ಸುಬ್ರಮಣಿಯನ್ ಸ್ವಾಮಿಗೆ ಕಾಂಗ್ರೆಸ್ ತರಾಟೆ

Pinterest LinkedIn Tumblr

subraನವದೆಹಲಿ: ಸಿಬಿಐ ಮತ್ತು ಜಾರಿ ನಿರ್ದೇಶನಾಲಯದ ಸೂಕ್ಷ್ಮ ಮತ್ತು ರಹಸ್ಯ ಕಡತಗಳು ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಅವರಿಗೆ ಲಭಿಸಿದ್ದು ಹೇಗೆ? ಸ್ವಾಮಿಯವರು ಉಲ್ಲೇಖಿಸಿದ ಈ ದಾಖಲೆಗಳನ್ನು ಪ್ರಮಾಣೀಕರಿಸಲಾಗಿದೆಯೇ ಎಂದು ಪ್ರಶ್ನಿಸುವ ಮೂಲಕ ಕಾಂಗ್ರೆಸ್ ಸದಸ್ಯರು ಗುರುವಾರ ರಾಜ್ಯಸಭೆಯಲ್ಲಿ ಸುಬ್ರಮಣಿಯನ್ ಸ್ವಾಮಿ ಅವರನ್ನು ತರಾಟೆಗೆ ತೆಗೆದುಕೊಂಡರು.

ಸದನದಲ್ಲಿ ಕ್ರಿಯಾಲೋಪವನ್ನು ಎತ್ತಿದ ಕಾಂಗ್ರೆಸ್ ಉಪನಾಯಕ ಆನಂದ ಶರ್ಮಾ ಅವರು ‘ಸಿಬಿಐ ಮತ್ತು ಜಾರಿ ನಿರ್ದೇಶನಾಲಯದ ಸೂಕ್ಷ್ಮ ದಾಖಲೆಗಳನ್ನು ಸ್ವಾಮಿಯವರು ಬುಧವಾರ ಸದನದಲ್ಲಿ ಮಾತನಾಡುವಾಗ ಉಲ್ಲೇಖಿಸಿದ್ದಾರೆ. ಸದನದ ಗೌರವಾರ್ಹ ಅಥವಾ ಕಡಿಮೆ ಗೌರವಾರ್ಹನಾದ ಸದಸ್ಯರಿಗೆ ರಹಸ್ಯ ದಾಖಲೆಗಳು ಪ್ರಾಪ್ತವಾದದ್ದು ಹೇಗೆ? ಅದನ್ನು ಪ್ರಮಾಣೀಕರಿಸಲಾಗಿದೆಯೇ? ಸದನದಲ್ಲಿ ಮಂಡಿಸಲಾಗಿದೆಯೇ ಎಂದು ಪ್ರಶ್ನಿಸಿದರು.

ಸ್ವಾಮಿಯವರು ತಮ್ಮ ಆದೇಶವನ್ನು ಪಾಲಿಸದೇ ಇದ್ದಲ್ಲಿ ನಿಯಮವು ತನ್ನ ದಾರಿಯನ್ನು ಹಿಡಿಯುತ್ತದೆ ಎಂದು ಉಪಸಭಾಪತಿ ಕಕುರಿಯನ್ ಹೇಳಿದರು. ಆದೇಶವನ್ನು ಪಾಲಿಸಿಲ್ಲವಾದರೆ ಅದನ್ನು ಪಾಲಿಸಬೇಕು ಎಂದು ಕುರಿಯನ್ ಹೇಳಿದರು. ಕಾಂಗ್ರೆಸ್ ಸದಸ್ಯರು ತೀವ್ರವಾಗಿ ಪ್ರತಿಭಟಿಸಿದಾಗ ಸಂಸದೀಯ ವ್ಯವಹಾರಗಳ ರಾಜ್ಯ ಸಚಿವ ಮುಖ್ತಾರ್ ಅಬ್ಬಾಸ್ ನಕ್ವಿ ಅವರು ‘ಸ್ವಾಮಿಯವರು ಉಲ್ಲೇಖಿಸಿದ ದಾಖಲೆಗಳನ್ನು ಪ್ರಮಾಣೀಕರಿಸಲಾಗಿದೆ ಮತ್ತು ಸದನದಲ್ಲಿ ಮಂಡಿಸಲಾಗಿದೆ ಎಂದು ಪ್ರತಿಕ್ರಿಯಿಸಿದ್ದರು.

ಬುಧವಾರ ಸ್ವಾಮಿಯವರು ಮಾತನಾಡುವಾಗ ಕಾಂಗೆಸ್ ಸದಸ್ಯರು ದಾಖಲೆಗಳ ಮೂಲ ಬಗ್ಗೆ ಕೇಳಿದ್ದರು. ಆಗ ಸ್ವಾಮಿಯವರು ಕಾಂಗ್ರೆಸ್ ನಾಯಕ ಅಭಿಷೇಕ್ ಸಿಂಗ್ವಿ ಅವರು ಯಾವ ದಾಖಲೆಯಿಂದ ಉಲ್ಲೇಖಿಸುತ್ತಿದ್ದಾರೋ ಅದೇ ದಾಖಲೆಯಿಂದ ತಾವೂ ಉಲ್ಲೇಖಿಸುತ್ತಿರುವುದಾಗಿ ಹೇಳಿದ್ದರು. ಉಭಯ ದಾಖಲೆಗಳನ್ನೂ ಪರಿಶೀಲಿಸಲಾಗುವುದು ಎಂದು ಉಪಸಭಾಪತಿ ಕುರಿಯನ್ ಹೇಳಿದ್ದರು.

Write A Comment