ಕರ್ನಾಟಕ

ಜೋಡಿಕೊಲೆ ಪ್ರಕರಣದ ಪ್ರಮುಖ ಸಾಕ್ಷಿಯಾಗಿದ್ದ ವ್ಯಕ್ತಿಯನ್ನು ಕೊಚ್ಚಿ ಕೊಂದರು

Pinterest LinkedIn Tumblr

muಮೈಸೂರು, ಮೇ 5- ಜೋಡಿಕೊಲೆ ಪ್ರಕರಣದ ಪ್ರಮುಖ ಸಾಕ್ಷಿಯಾಗಿದ್ದ ವ್ಯಕ್ತಿಯನ್ನು ಇಂದು ಮುಂಜಾನೆ ಹತ್ತು-ಹನ್ನೆರಡು ಮಂದಿಯ ತಂಡ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ನಡುರಸ್ತೆಯಲ್ಲೇ ಭೀಕರವಾಗಿ ಕೊಲೆ ಮಾಡಿರುವ ಘಟನೆ ವಿವಿ ಪುರಂ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಪಡುವಾರಹಳ್ಳಿ ನಿವಾಸಿ ದೇವೇಂದ್ರ (33) ಕೊಲೆಯಾದ ದುರ್ದೈವಿ. ದೇವೇಂದ್ರ ರಿಯಲ್ ಎಸ್ಟೇಟ್ ನಡೆಸುತ್ತಿದ್ದು, ಪಡುವಾರಹಳ್ಳಿಯಲ್ಲಿ ಕುಟುಂಬದವರೊಂದಿಗೆ ವಾಸವಾಗಿದ್ದನು.

ಇತ್ತೀಚೆಗೆ ಹುಣಸೂರಿನಲ್ಲಿ ನಡೆದಿದ್ದ ಜೋಡಿಕೊಲೆ ಪ್ರಕರಣದಲ್ಲಿ ಮೈಸೂರು ಮಹಾನಗರ ಪಾಲಿಕೆ ಸದಸ್ಯ ಮಹದೇಶ್, ಸಹೋದರ ಮಂಜು ಹಾಗೂ ಸಹಚರರ ಪರ ದೇವೇಂದ್ರ ಸಾಕ್ಷಿ ನುಡಿದಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ. ಈ ಪ್ರಕರಣದಲ್ಲಿ ಇವರೆಲ್ಲರಿಗೂ ಶಿಕ್ಷೆಯಾಗಿ ಬಳ್ಳಾರಿ ಜೈಲಿನಲ್ಲಿದ್ದಾರೆ. ಮಹದೇಶ್ ವಿರೋಧಿ ಬಣದಲ್ಲಿ ಇತ್ತೀಚೆಗೆ ದೇವೇಂದ್ರಗುರುತಿಸಿಕೊಂಡಿದ್ದನು ಎನ್ನಲಾಗಿದೆ. ಇಂದು ಮುಂಜಾನೆ ಎಂದಿನಂತೆ ದೇವೇಂದ್ರ ವಿವಿ ಪುರಂ ವ್ಯಾಪ್ತಿಯ ಪಡುವಾರಹಳ್ಳಿಯ ಮಾರಿಗುಡಿ ಬಳಿ ವಾಯುವಿಹಾರ ಮಾಡುತ್ತಿದ್ದಾಗ ಬೊಲೆರೊ ಮತ್ತು ಬೈಕ್‌ಗಳಲ್ಲಿ ಬಂದ 10-12 ಮಂದಿಯ ತಂಡ ಏಕಾಏಕಿ ಮಚ್ಚು-ಲಾಂಗುಗಳಿಂದ ದಾಳಿ ಮಾಡಿ ನಡುರಸ್ತೆಯಲ್ಲೇ ಭೀಕರವಾಗಿ ಕೊಲೆ ಮಾಡಿ ವಾಹನಗಳಲ್ಲಿ ಪರಾರಿಯಾಗಿದೆ.

ಪಡುವಾರಹಳ್ಳಿ ಪ್ರದೇಶದಲ್ಲಿ ಬಿಗುವಿನ ವಾತಾವರಣ ಉಂಟಾಗಿದ್ದು, ವಿವಿ ಪುರಂ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಶವವನ್ನು ಸಾರ್ವಜನಿಕ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗೆ ಒಳಪಡಿಸಿದ್ದಾರೆ. ಮಹದೇಶ್ ಕಡೆಯವರೇ ಈ ಕೊಲೆ ಮಾಡಿರಬಹುದೆ ಅಥವಾ ರಿಯಲ್ ಎಸ್ಟೇಟ್ ವ್ಯವಹಾರದಿಂದ ಈ ಕೊಲೆ ನಡೆದಿರಬಹುದೆ ಎಂಬ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ. ಸ್ಥಳದಲ್ಲಿ ಪೊಲೀಸರು ಮೊಕ್ಕಾಂ ಹೂಡಿದ್ದು, ದುಷ್ಕರ್ಮಿಗಳ ಪತ್ತೆಗಾಗಿ ತನಿಖೆ ಮುಂದುವರೆದಿದೆ.

Write A Comment