ರಾಷ್ಟ್ರೀಯ

ಜಗತ್ತಿನ ಅತಿ ಭೀಕರ ಕಾಡ್ಗಿಚ್ಚು ದುರಂತಗಳು

Pinterest LinkedIn Tumblr

Fire-newಉತ್ತರಾಖಂಡದ ಭೀಕರ ಕಾಡ್ಗಿಚ್ಚು 13 ಜಿಲ್ಲೆಗಳನ್ನು ವ್ಯಾಪಿಸಿದ್ದು, ಜೀವ ಸಂಕುಲ ತತ್ತರಿಸಿ ಹೋಗಿದೆ. ಈ
ಪರಿಸರ ನಾಶ ಆತಂಕದ ವಾತಾವರಣ ಸೃಷ್ಟಿಸಿದ್ದು, ಬೆಂಕಿ ನಂದಿಸಲು ಸಮರೋಪಾದಿಯ ಕೆಲಸಗಳು ಸಾಗಿವೆ.
ಭಾರತದಲ್ಲಿ ಸಂಭವಿಸಿದ ಅತಿ ದೊಡ್ಡ ಕಾಡ್ಗಿಚ್ಚಿನ ಪ್ರಕರಣ ಇದಾಗಿದೆ. ಈ ಹಿನ್ನೆಲೆಯಲ್ಲಿ ವಿಶ್ವಮಟ್ಟದಲ್ಲಿ ಸಂಭವಿಸಿದ
ಅತಿ ದೊಡ್ಡ, ಹೆಚ್ಚು ಪ್ರಾಣಹಾನಿ ಸಂಭವಿಸಿದ ಕಾಡ್ಗಿಚ್ಚಿನ ಪ್ರಕರಣಗಳ ಕುರಿತ ವಿವರಗಳು ಇಲ್ಲಿವೆ.

„ಇಂಡೋನೇಷ್ಯಾ: 1997ರಲ್ಲಿ 20 ಲಕ್ಷ ಎಕರೆ ವ್ಯಾಪ್ತಿ ಭಸ್ಮ
ಇಂಡೋನೇಷ್ಯಾದಲ್ಲಿ ಸಂಭವಿಸಿದ ಅತಿ ದೊಡ್ಡ ಕಾಡ್ಗಿಚ್ಚು ಪ್ರಕರಣ. ಸುಮಾರು ಒಂದು ವರ್ಷಗಳ ಕಾಲ ಇಂಡೋನೇಷ್ಯಾದ ಅರಣ್ಯಗಳು ಬೆಂಕಿಯಲ್ಲಿ ಧಗಧಗಿಸಿದ್ದವು. ಇದರ ಪರಿಣಾಮ ದಟ್ಟ ಹೊಗೆ ಸಿಂಗಾಪುರ,
ಬ್ರೂನಿ, ಥೈಲೆಂಡ್‌, ವಿಯೆಟ್ನಾಂ, ಫಿಲಿಪ್ಪೀನ್ಸ್‌ನಾದ್ಯಂತ ವ್ಯಾಪಿಸಿಕೊಂಡಿತ್ತು. ಸುಮಾರು 20 ಲಕ್ಷ ಎಕರೆ ವ್ಯಾಪ್ತಿಯಲ್ಲಿ ಅರಣ್ಯ ನಾಶವಾಗಿತ್ತು. ತೀವ್ರ ವಾಯುಮಾಲಿನ್ಯದಿಂದಾಗಿ ಜನ ಜೀವನ ದುಸ್ತರವಾಗಿತ್ತು.

„ಡ್ಯಾಕ್ಸಿಂಗಾಲಿಂಗ್‌: 1987ರಲ್ಲಿ 24 ಲಕ್ಷ ಎಕರೆ ವ್ಯಾಪ್ತಿಗೆ ಬೆಂಕಿ
ಚೀನಾದ ಈಶಾನ ಹೆಲಿಂಗಾಜಿಯಾಂಗ್‌ ಪ್ರಾಂತ್ಯದ ಡ್ಯಾಕ್ಸಿಂಗಾಲಿಂಗ್‌ ಅರಣ್ಯ ಪ್ರದೇಶದಲ್ಲಿ ಸಂಭವಿಸಿದ ಕಾಡ್ಗಿಚ್ಚು ಅತಿ ಭೀಕರವಾಗಿತ್ತು. 24 ಲಕ್ಷ ಎಕರೆಯಲ್ಲಿ ಬೆಂಕಿ ಧಗಧಗ ಉರಿದಿದ್ದು, 200ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದರು. ಸುಮಾರು ಒಂದು ತಿಂಗಳ ಕಾಲ ಉರಿದಿದ್ದ ಬೆಂಕಿಯ ಕೆನ್ನಾಲಗೆ 50 ಸಾವಿರಕ್ಕೂ ಹೆಚ್ಚು ಮನೆಗಳನ್ನು ದಹಿಸಿತ್ತು.

„ಕ್ಯಾಲಿಫೋರ್ನಿಯಾ: 2003ರಲ್ಲಿ 2.80 ಲಕ್ಷ ಎಕರೆ ಭಸ್ಮ
ಅಮೆರಿಕದ ಕ್ಯಾಲಿಫೋರ್ನಿಯಾದ ಇತಿಹಾಸದಲ್ಲೇ ಅತಿ ತೀವ್ರ ಕಾಡ್ಗಿಚ್ಚು. ದ.ಕ್ಯಾಲಿಫೋರ್ನಿಯಾದ 14 ಪ್ರತ್ಯೇಕ ಕಡೆ ತಗುಲಿದ ಈ ಬೆಂಕಿಯನ್ನು ಕೇಡರ್‌ ಫೈರ್‌ ಎಂದು ಕರೆಯಲಾಗಿದ್ದು, 2.80 ಎಕರೆಯಷ್ಟು ಅರಣ್ಯವನ್ನು
ಆಪೋಷನ ತೆಗೆದುಕೊಂಡಿತ್ತು. ಇದರೊಂದಿಗೆ 3 ಸಾವಿರ ಮನೆಗಳೂ ಸುಟ್ಟು ಭಸ್ಮವಾಗಿದ್ದವು. ಘಟನೆಯಲ್ಲಿ 15 ಮಂದಿ ಮೃತಪಟ್ಟಿದ್ದರು. ಸುಮಾರು ಮೂರು ತಿಂಗಳ ಕಾಲ ಈ ಬೆಂಕಿ ಉರಿದಿದ್ದು, ಬೆಂಕಿ ನಂದಿಸಲು ಹರಸಾಹಸಪಡಲಾಗಿತ್ತು.

ಗ್ರೀಸ್‌: 2007ರಲ್ಲಿ 6.70 ಲಕ್ಷ ಎಕರೆ ವ್ಯಾಪ್ತಿಗೆ ಬೆಂಕಿ
ಗ್ರೀಸ್‌ನ ಬೇಸಿಗೆ ಭಾರೀ ಅನಾಹುತವನ್ನೇ ಸೃಷ್ಟಿಸಿತ್ತು. ಇಲ್ಲಿನ ಫೆಲೊಪ್ಪೊನ್ನೆಸ್‌ ದ್ವೀಪದ ಬಹುತೇಕ ಭಾಗವನ್ನು ಬೆಂಕಿ ಆಹುತಿ ತೆಗೆದುಕೊಂಡಿತ್ತು. ಇಲ್ಲಿನ ಕಾಡ್ಗಿಚ್ಚಿನಿಂದಾಗಿ 6.70 ಲಕ್ಷ ಎಕರೆ ನಾಶವಾಗಿದ್ದು 84 ಮಂದಿ ಮೃತಪಟ್ಟಿದ್ದರು. ಸುಮಾರು ನಾಲ್ಕು ತಿಂಗಳ ಕಾಲ ಬೆಂಕಿ ಉರಿದಿದ್ದು, ಅಥೆನ್ಸ್‌ನ ಹೊರಭಾಗದವರೆಗೆ ಬೆಂಕಿ ಹರಡಿತ್ತು. ರೈತನೊಬ್ಬ
ಕಾಡಿನ ಬದಿ ಬೆಂಕಿ ಹಾಕಿದ್ದು ಇದಕ್ಕೆ ಕಾರಣ ಎಂದು ತನಿಖೆಯಲ್ಲಿ ಗೊತ್ತಾಗಿತ್ತು. ಈ ಬಗ್ಗೆ ಸ್ವತಃ ಆತನೇ
ತಪ್ಪೊಪ್ಪಿಕೊಂಡಿದ್ದ.

ವಿಕ್ಟೋರಿಯಾ (ಆಸ್ಟ್ರೇಲಿಯಾ): 2009 ರಲ್ಲಿ11 ಲಕ್ಷ ಎಕರೆ ವ್ಯಾಪ್ತಿಗೆ ಹಬ್ಬಿದ ಕಾಡ್ಗಿಚ್ಚು
ಆಸ್ಟೇಲಿಯಾದ ವಿಕ್ಟೋರಿಯಾ ಪ್ರದೇಶದಲ್ಲಿ 2009 ಫೆ.7 ರಂದು ಹತ್ತಿಕೊಂಡಿದ್ದ ಅಲ್ಪ ಸ್ವಲ್ಪ ಬೆಂಕಿ ಕೊನೆಗೆ ಭೀಕರ ರೂಪ ತಾಳಿದ್ದು 173 ಮಂದಿಯ ಜೀವವನ್ನು ಸುಟ್ಟಿತ್ತು. ಅಪಾರ ಜೀವ ಸಂಕುಲದೊಂದಿಗೆ 11 ಲಕ್ಷ ಎಕರೆ ಪ್ರದೇಶ ಬೆಂಕಿಗೆ ಆಹುತಿಯಾಗಿತ್ತು. ಸುಮಾರು ಒಂದು ತಿಂಗಳ ಕಾಲ ಈ ಕಾಡ್ಗಿಚ್ಚು ನಿರಂತರವಾಗಿ ಉರಿದಿತ್ತು. ಬೆಂಕಿಯ ಪರಿಣಾಮ ಎರಡೇ ದಿನಗಳಲ್ಲಿ ಉಷ್ಣತೆ 38 ಡಿಗ್ರಿ ಸೆಲ್ಸಿಯಸ್‌ಗೆ ಏರಿತ್ತು. ಆಸ್ಟ್ರೇಲಿಯಾ ಸರ್ಕಾರ ಬೆಂಕಿ ಬಗ್ಗೆ ತನಿಖೆ ನಡೆಸಿದ್ದು, ಸಿಗರೆಟ್‌ ಬಡ್‌ನಿಂದಾಗಿ ಬೆಂಕಿ ಹರಡಿರಬಹುದು ಎಂಬ ತೀರ್ಮಾನಕ್ಕೆ ಬಂದಿತ್ತು.

ಪಶ್ಚಿಮ ರಷ್ಯಾ: 2010 ರಲ್ಲಿ 4.80 ಲಕ್ಷ ಎಕರೆ ಪ್ರದೇಶ ನಾಶ
ರಷ್ಯಾದ ಪಶ್ಚಿಮ ಭಾಗದಲ್ಲಿ 2010ರ ಬೇಸಿಗೆಯಲ್ಲಿ ಬಿದ್ದ ಬೆಂಕಿ ವ್ಯಾಪಕ ಹಾನಿ ಸೃಷ್ಟಿಸಿತ್ತು. ಸುಮಾರು 4.80 ಲಕ್ಷ ಎಕರೆ ಪ್ರದೇಶಕ್ಕೆ ಈ ಬೆಂಕಿ ವ್ಯಾಪಿಸಿಕೊಂಡಿದ್ದು, ಇದರ ಪರೋಕ್ಷ ಪರಿಣಾಮ ಸುಮಾರು 50 ಸಾವಿರ ಮಂದಿ ಮೃತಪಟ್ಟಿದ್ದಾಗಿ ಹೇಳಲಾಗಿದೆ. ರಷ್ಯಾ ರಾಜಧಾನಿ ಮಾಸ್ಕೋ ಸಂಪೂರ್ಣ ಹೊಗೆಯಿಂದ ಮುಚ್ಚಿ ಹೋಗಿತ್ತು. ನಾಲ್ಕು ತಿಂಗಳ ಕಾಲ ಸತತವಾಗಿ ಬೆಂಕಿ ಉರಿದಿದ್ದು, ರಷ್ಯಾದ ಇತಿಹಾಸದಲ್ಲೇ ತೀವ್ರವಾದದ್ದು ಎಂದು ಹೇಳಲಾಗಿದೆ.
-ಉದಯವಾಣಿ

Write A Comment