ರಾಷ್ಟ್ರೀಯ

ಇದು ಬಡವರಿಗಾಗಿ ಇರುವ ಸರ್ಕಾರ: ಪ್ರಧಾನ ಮಂತ್ರಿ ಉಜ್ವಲ ಯೋಜನೆ’ಗೆ ಮೋದಿ ಚಾಲನೆ

Pinterest LinkedIn Tumblr

pvec02may16swapmಬಲಿಯಾ, ಉತ್ತರ ಪ್ರದೇಶ (ಪಿಟಿಐ):  ‘ಬಡತನ ನಿರ್ಮೂಲನೆಯೇ ಎನ್‌ಡಿಎ ಸರ್ಕಾರದ ಧ್ಯೇಯ’ ಎಂದಿರುವ ಪ್ರಧಾನಿ ನರೇಂದ್ರ ಮೋದಿ, ‘ನಮ್ಮ ಆಡಳಿತದಲ್ಲಿ ಬಡವರು ಭರವಸೆ ಕೈಬಿಡಬೇಕಿಲ್ಲ’ ಎಂಬ ಆಶ್ವಾಸನೆ ಕೊಟ್ಟಿದ್ದಾರೆ.

ಬಡತನ ರೇಖೆಗಿಂತ ಕೆಳಗಿನ (ಬಿಪಿಎಲ್‌) 5 ಕೋಟಿ ಕುಟುಂಬಗಳಿಗೆ ಎಲ್‌ಪಿಜಿ ಸಂಪರ್ಕಗಳನ್ನು ಉಚಿತವಾಗಿ ಕಲ್ಪಿಸಿಕೊಡುವ  ‘ಪ್ರಧಾನ ಮಂತ್ರಿ ಉಜ್ವಲ ಯೋಜನೆ’ಗೆ ಭಾನುವಾರ ಚಾಲನೆ ನೀಡಿ  ಮಾತನಾಡಿದ ಅವರು, ‘ಬಡವರಿಗೆ ಶಿಕ್ಷಣ, ಉದ್ಯೋಗ, ವಸತಿ, ಕುಡಿಯುವ ನೀರು ಮತ್ತು ವಿದ್ಯುತ್‌  ಸೌಲಭ್ಯಗಳನ್ನು ಕಲ್ಪಿಸಿಕೊಡಲು ಸರ್ಕಾರ ಬದ್ಧವಾಗಿದೆ’ ಎಂದರು.

ಬಡತನ ನಿರ್ಮೂಲನೆಗಾಗಿ ಹಿಂದಿನ ಸರ್ಕಾರಗಳು ಜಾರಿಗೊಳಿಸಿದ್ದ ಯೋಜನೆಗಳನ್ನು ಮೋದಿ ಪ್ರಶ್ನಿಸಿದರು. ತಮ್ಮನ್ನು ತಾವು ‘ಕಾರ್ಮಿಕ ನಂ.1’ ಎಂದು ಕರೆದರಲ್ಲದೆ, ಎನ್‌ಡಿಎ ಸರ್ಕಾರ ಬಡವರ ಕಲ್ಯಾಣಕ್ಕಾಗಿ ಕೈಗೊಂಡಿರುವ ಯೋಜನೆಗಳ ಪಟ್ಟಿಯನ್ನು ಸಾರ್ವಜನಿಕರ ಮುಂದಿಟ್ಟರು.

‘ಸ್ವಯಂ ಪ್ರೇರಿತರಾಗಿ ಎಲ್‌ಪಿಜಿ ಸಬ್ಸಿಡಿ ಕೈಬಿಡುವ ಯೋಜನೆಯನ್ನು ನಾವು ಹೋದ ವರ್ಷ ಆರಂಭಿಸಿದ್ದೆವು.  ಸುಮಾರು 1.10 ಕೋಟಿ ಮಂದಿ ಸಬ್ಸಿಡಿ ಕೈಬಿಟ್ಟಿದ್ದರು. ಇದರಿಂದ ಅಂದಾಜು ₹ 5000 ಕೋಟಿ ಉಳಿತಾಯವಾಗಿದೆ. ಬಡವರಿಗೆ ಉಚಿತ ಎಲ್‌ಪಿಜಿ ಸಂಪರ್ಕ ಕಲ್ಪಿಸಿಕೊಡಲು ಈ ಹಣ ಬಳಸುತ್ತಿದ್ದೇವೆ’ ಎಂದು ಹೇಳಿದರು.

ಚುನಾವಣಾ ಅಭಿಯಾನ ಅಲ್ಲ: ಮುಂದಿನ ವರ್ಷ ನಡೆಯಲಿರುವ ವಿಧಾನಸಭಾ ಚುನಾವಣೆ ಮೇಲೆ ಕಣ್ಣಿಟ್ಟು ಈ ಯೋಜನೆಯ ಜಾರಿಗೆ ಉತ್ತರ ಪ್ರದೇಶವನ್ನು ಆಯ್ಕೆ ಮಾಡಲಾಗಿದೆ ಎಂಬ ಮಾತುಗಳು ಕೇಳಿಬಂದಿದ್ದವು. ಆದರೆ ಅದನ್ನು  ಮೋದಿ ಅಲ್ಲಗಳೆದರು.

‘ಚುನಾವಣೆ ಮೇಲೆ ಕಣ್ಣಿಟ್ಟು ಮೋದಿ ಇಲ್ಲಿಗೆ ಬಂದಿದ್ದಾರೆ ಎಂದು ಕೆಲವು ರಾಜಕೀಯ ಪಂಡಿತರು ಹೇಳುತ್ತಿದ್ದಾರೆ.  ಚುನಾವಣಾ ಪ್ರಚಾರ ಅಭಿಯಾನ ಆರಂಭಿಸಲು ನಾನು ಇಲ್ಲಿಗೆ ಬಂದಿಲ್ಲ. ಬಲಿಯಾ ಜಿಲ್ಲೆಯಲ್ಲಿ ಎಲ್‌ಜಿಪಿ ಬಳಸುವವರ ಪ್ರಮಾಣ ತೀರಾ ಕಡಿಮೆ ಇದೆ. 100 ಕುಟುಂಬಗಳಲ್ಲಿ ಕೇವಲ 8 ಕುಟುಂಬಗಳು ಮಾತ್ರ ಎಲ್‌ಪಿಜಿ ಬಳಸುತ್ತಿವೆ. ಆದ್ದರಿಂದ ಇದೇ ಜಿಲ್ಲೆಯನ್ನು ಆಯ್ಕೆ ಮಾಡಲಾಯಿತು’ ಎಂದು ಪ್ರತ್ಯುತ್ತರ ನೀಡಿದರು.

‘ಉತ್ತರ ಪ್ರದೇಶವು ಈ ದೇಶಕ್ಕೆ ಹಲವು ಪ್ರಧಾನ ಮಂತ್ರಿಗಳನ್ನು ನೀಡಿದೆ. ಆದರೂ ಅಭಿವೃದ್ಧಿಯ ವಿಚಾರದಲ್ಲಿ ರಾಜ್ಯ ಇನ್ನೂ ತೀರಾ ಹಿಂದೆ ಬಿದ್ದಿದೆ’ ಎಂದರು.

ಏನಿದು ಯೋಜನೆ: ಪ್ರಧಾನ ಮಂತ್ರಿ ಉಜ್ವಲ ಯೋಜನೆ ಅಡಿಯಲ್ಲಿ ಅರ್ಹ ಕುಟುಂಬಗಳಿಗೆ ಎಲ್‌ಪಿಜಿ ಸಂಪರ್ಕಕ್ಕೆ ₹1,600 ಸಹಾಯಧನ ನೀಡಲಾಗುತ್ತದೆ. ಆದ್ದರಿಂದ ಎಲ್‌ಪಿಜಿ ಸಂಪರ್ಕ ಪಡೆಯಲು ಹಣ ನೀಡುವ ಅಗತ್ಯವಿಲ್ಲ. ಆದರೆ ಬಳಿಕ ಬಳಸುವ ಸಿಲಿಂಡರ್‌ಗಳಿಗೆ ಹಣ ನೀಡಬೇಕಾಗುತ್ತದೆ.

ಇ– ರಿಕ್ಷಾ ವಿತರಣೆ: ಮೋದಿ ಅವರು ಸಂಜೆ ತಮ್ಮ ಲೋಕಸಭಾ ಕ್ಷೇತ್ರ ವಾರಾಣಸಿಗೆ ತೆರಳಿ, ಅಲ್ಲಿ ನಡೆದ ಕಾರ್ಯಕ್ರಮದಲ್ಲಿ 1000 ಫಲಾನುಭವಿಗಳಿಗೆ
ಇ–ರಿಕ್ಷಾ ವಿತರಿಸಿದರು.

ನಮ್ಮದು ಬಡ ಕುಟುಂಬ: ‘ನಾನು ಅತೀ ಬಡ ಕುಟುಂಬದಿಂದ ಬಂದವ. ನಮ್ಮ ಮನೆ ಸಣ್ಣದಾಗಿತ್ತು ಮತ್ತು ಕಿಟಕಿಗಳೇ ಇರಲಿಲ್ಲ. ನನ್ನ ತಾಯಿ ಸೌದೆ ಬಳಸಿ ಅಡುಗೆ ಮಾಡುತ್ತಿದ್ದರು. ಕೆಲವೊಮ್ಮೆ ಮನೆಯಿಡೀ ಹೊಗೆ ತುಂಬಿರುತ್ತಿತ್ತು. ಆ ಹೊಗೆಯಲ್ಲಿ ನಮಗೆ ತಾಯಿ ಕಾಣಿಸುತ್ತಿರಲಿಲ್ಲ’ ಎಂದು ಮೋದಿ ಹೇಳಿದರು.

ಮತಪೆಟ್ಟಿಗೆಯೇ ಮುಖ್ಯವಾಗಿತ್ತು: ಕಾಂಗ್ರೆಸ್‌ ನೇತೃತ್ವದ ಯುಪಿಎ ಆಡಳಿತವನ್ನು ಟೀಕಿಸಿದ ಮೋದಿ, ‘ಹಿಂದಿನ ಸರ್ಕಾರ ತನ್ನ ಹೆಚ್ಚಿನ ಯೋಜನೆಗಳನ್ನು ಮತ ಗಳಿಸುವ ಏಕೈಕ ಉದ್ದೇಶದಿಂದ ಜಾರಿಗೊಳಿಸುತ್ತಿತ್ತು’ ಎಂದು ಆರೋಪಿಸಿದರು.

‘ಯುಪಿಎ ಸರ್ಕಾರದ ಯೋಜನೆಗಳಿಗೆ ಬಡವರ ಹಿತಾಸಕ್ತಿ ಕಾಪಾಡುವ ಉದ್ದೇಶ ಇರಲಿಲ್ಲ. ಮತದಾರರನ್ನು ಸೆಳೆಯುವ ಒಂದೇ ಉದ್ದೇಶವಿತ್ತು’ ಎಂದರು.

Write A Comment