ರಾಷ್ಟ್ರೀಯ

ಕಾಂಗ್ರೆಸ್‌ ಬೆಂಬತ್ತಿದ ಹೆಲಿಕಾಪ್ಟರ್‌ ಭೂತ!

Pinterest LinkedIn Tumblr

Sonia-Gandhiವಿವಿಐಪಿಗಳ ಪ್ರವಾಸಕ್ಕಾಗಿ ಇಟಲಿಯ ಫಿನ್‌ಮೆಕ್ಕಾನಿಕಾದ ಸಹಸಂಸ್ಥೆ ಬ್ರಿಟನ್‌ನ ಪ್ರಖ್ಯಾತ ಹೆಲಿಕಾಪ್ಟರ್‌ ತಯಾರಿಕಾ ಕಂಪನಿ ಅಗಸ್ಟಾ ವೆಸ್ಟ್‌ಲ್ಯಾಂಡ್‌ ನಿಂದ ಭಾರತ ಈ ಹಿಂದೆ ಹೆಲಿಕಾಪ್ಟರ್‌ ಖರೀದಿಸಲು ಉದ್ದೇಶಿಸಿದ್ದು, ಅದರಲ್ಲಿ ಭ್ರಷ್ಟಾಚಾರದ ಆರೋಪ ಕೇಳಿ ಬಂದಿತ್ತು. 3600 ಕೋಟಿ ರೂ. ಮೌಲ್ಯದ ವ್ಯವಹಾರ ಕುದುರಿಸಲು 362 ಕೋಟಿ ರೂ. ಲಂಚ ನೀಡಲಾಗಿತ್ತು ಎಂಬುದು ಇಟಲಿ ಕೋರ್ಟ್‌ನಲ್ಲಿ ಸಾಬೀತಾಗಿದೆ. ಇದರಲ್ಲಿ 120 ಕೋಟಿ ರೂ.ಗಳನ್ನು ಭಾರತದ ರಾಜಕೀಯ ಪಕ್ಷವೊಂದಕ್ಕೆ ನೀಡಲಾಗಿತ್ತು ಎಂಬುದನ್ನು ಕೋರ್ಟ್‌ ತನ್ನ ತೀರ್ಪಿನಲ್ಲಿ ಹೇಳಿದೆ. ಅಲ್ಲದೇ ವಾಯುಪಡೆ ಮಾಜಿ ಮುಖ್ಯಸ್ಥ ಎಸ್‌.ಪಿ.ತ್ಯಾಗಿ ಭ್ರಷ್ಟಾಚಾರ ಎಸಗಿದ್ದಾರೆ ಎಂದು ಹೇಳಿದೆ. ತೀರ್ಪಿನಲ್ಲಿ ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ, ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌, ಅಹ್ಮದ್‌ ಪಟೇಲ್‌ ಅವರ ಹೆಸರನ್ನೂ ಉಲ್ಲೇಖೀಸಲಾಗಿದೆ. ಈ ಹಿನ್ನೆಲೆಯಲ್ಲಿ ಭಾರೀ ಸದ್ದು ಮಾಡುತ್ತಿರುವ ಅಗಸ್ಟಾ ವೆಸ್ಟ್‌ಲ್ಯಾಂಡ್‌ ಕುರಿತ ಪ್ರಕರಣವೇನು? ಎಂಬ ಕುರಿತ ಮಾಹಿತಿಗಳು ಇಲ್ಲಿವೆ.

ಹೆಲಿಕಾಪ್ಟರ್‌ ಒಪ್ಪಂದವೇನು?
2010 ಫೆ.8ರಂದು ಅಂದಿನ ಯುಪಿಎ ಸರ್ಕಾರ ಮತ್ತು ಅಗಸ್ಟಾ ವೆಸ್ಟ್‌ಲ್ಯಾಂಡ್‌ ಹೆಲಿಕಾಪ್ಟರ್‌ ಪೂರೈಕೆ ಒಪ್ಪಂದಕ್ಕೆ ಬಂದಿತ್ತು. ಅತಿ ಗಣ್ಯರ (ರಾಷ್ಟ್ರಪತಿ, ಉಪರಾಷ್ಟ್ರಪತಿ, ಪ್ರಧಾನಿ ಇತ್ಯಾದಿ) ಪ್ರವಾಸಕ್ಕಾಗಿ 12 ಎಡಬ್ಲೂé 101 ಹೆಲಿಕಾಪ್ಟರ್‌ಗಳನ್ನು ಭಾರತೀಯ ವಾಯುಪಡೆಗೆ 3600 ಕೋಟಿ ರೂ. ಮೊತ್ತಕ್ಕೆ ಖರೀದಿಸುವುದಾಗಿ ತೀರ್ಮಾನಿಸಲಾಗಿತ್ತು. ಒಪ್ಪಂದದಂತೆ ಮಾ. 2014ರೊಳಗೆ ಅಗಸ್ಟಾ ವೆಸ್ಟ್‌ಲ್ಯಾಂಡ್‌ ಎಲ್ಲಾ 12 ಹೆಲಿಕಾಪ್ಟರ್‌ಗಳನ್ನು ಪೂರೈಸಬೇಕಿತ್ತು. ಆದರೆ 3 ಹೆಲಿಕಾಪ್ಟರ್‌ಗಳನ್ನು ಅಗಸ್ಟಾ ಪೂರೈಸುತ್ತಿದ್ದಂತೆಯೇ, 2013ರಲ್ಲಿ ಹೆಲಿಕಾಪ್ಟರ್‌ ಖರೀದಿಗೆ ಬ್ರೇಕ್‌ ಬಿದ್ದಿತ್ತು. ಇದಕ್ಕೆ ಕಾರಣ ಅಗಸ್ಟಾ ಮುಖ್ಯಕಾರ್ಯನಿರ್ವಹಣಾಧಿಕಾರಿ ಬರ್ನೋ ಸ್ಪಾಂಗ್ನೊಲಿನ್‌ ಬಂಧನವಾದದ್ದು! ಬರ್ನೋ ಅವರು ಭಾರತೀಯ ವಾಯುಪಡೆಯೊಂದಿಗೆ ಒಪ್ಪಂದ ಕುದುರಿಸಲು ಲಂಚ ಕೊಟ್ಟಿದ್ದಾಗಿ ಹೇಳಲಾಗಿತ್ತು.

ಖರೀದಿಯಲ್ಲಿ ಗೋಲ್‌ ಮಾಲ್‌!
ಹೆಲಿಕಾಪ್ಟರ್‌ ಖರೀದಿ ಒಪ್ಪಂದ ಕುದುರಿಸಲು ಭಾರತದ ಕೆಲ ರಾಜಕಾರಣಿಗಳಿಗೆ ಮತ್ತು ಇತರರಿಗೆ ಶೇ.10ರಷ್ಟು ಅಂದರೆ 360 ಕೋಟಿ ರೂ. ಕಿಕ್‌ ಬ್ಯಾಕ್‌ ನೀಡಲಾಗಿದೆ ಎಂಬ ಆರೋಪಿಸಲಾಗಿತ್ತು. ಖರೀದಿ ವೇಳೆ 18 ಸಾವಿರ ಅಡಿ ಎತ್ತರ ಹಾರಾಟ ನಡೆಸುವ ಸಾಮರ್ಥ್ಯವುಳ್ಳ ಹೆಲಿಕಾಪ್ಟರ್‌ ಗೆ ಹೇಳಿದ್ದರೂ, 15 ಸಾವಿರ ಅಡಿ ಎತ್ತರಕ್ಕೇ ಮಿತಗೊಳಿಸಲಾಯಿತು ಎಂದು ಹೇಳಲಾಗುತ್ತಿದೆ. ಹೆಲಿಕಾಪ್ಟರ್‌ ಡೀಲ್‌ ಕುದುರಿಸಲು ಇಂಗ್ಲೆಂಡ್‌ ಮೂಲದ ಕ್ರಿಸ್ಟಿಯನ್‌ ಮೈಕೇಲ್‌ ಗೈಡೋ ಹಶೆR ಮತ್ತು ಕಾರ್ಲೋ ಗೆರೋಸಾ ಎಂಬುವವರನ್ನು ಬಳಸಿಕೊಳ್ಳಲಾಗಿತ್ತು.

ಪ್ರಕರಣ ಸಿಬಿಐಗೆ
ಭ್ರಷ್ಟಾಚಾರ ಪ್ರಕರಣದ ವಾಸನೆ ಹೆಲಿಕಾಪ್ಟರ್‌ ಒಪ್ಪಂದದಲ್ಲಿ ಹೊರಬರುತ್ತಿದ್ದಂತೆಯೇ, ಭಾರತದ ಅಂದಿನ ರಕ್ಷಣಾ ಸಚಿವ ಎ.ಕೆ.ಆ್ಯಂಟನಿ ಅವರು ಪ್ರಕರಣವನ್ನು ಸಿಬಿಐಗೆ ಹಸ್ತಾಂತರಿಸಿದ್ದರು. ಇದರೊಂದಿಗೆ 2014ರ ಆರಂಭದಲ್ಲಿ ಇಟಲಿ ಕೋರ್ಟ್‌ ಕೂಡ ಪ್ರಕರಣ ದಾಖಲಿಸಲಾಗಿತ್ತು. ಆ ಸಂದರ್ಭ μನ್‌ಮೆಕ್ಕಾನಿಕಾದಿಂದ ವಾಯುಪಡೆ ಮಾಜಿ ಮುಖ್ಯಸ್ಥ ಎಸ್‌.ಪಿ.ತ್ಯಾಗಿ ಅವರಿಗೆ ಲಂಚ ನೀಡಿದ್ದಾಗಿ ಹೇಳಲಾಗಿತ್ತು. 2013 ಫೆ.25ರಂದು ಸಿಬಿಐ 11 ಮಂದಿ ವಿರುದ್ಧ ಪ್ರಕರಣ ದಾಖಲಿಸಿತು. ಬಳಿಕ ಜಾರಿ ನಿರ್ದೇಶನಾಲಯವೂ ಅಕ್ರಮ ಹಣದ ವಹಿವಾಟಿನ ಕುರಿತಾಗಿ ಕೇಸು ದಾಖಲಿಸಿತ್ತು. ವಿಪಕ್ಷಗಳ ಒತ್ತಡ ಹಿನ್ನೆಲೆಯಲ್ಲಿ ಜಂಟಿ ಸಂಸದೀಯ ತನಿಖಾ ಸಮಿತಿಯನ್ನೂ ರಚಿಸಲಾಗಿತ್ತು.

ಸೋನಿಯಾ ಗಾಂಧಿ ವಿರುದ್ಧ ಆರೋಪವೇಕೆ?
ಹೆಲಿಕಾಪ್ಟರ್‌ ಹಗರಣದ ಬಗ್ಗೆ ಇತ್ತೀಚೆಗೆ ಇಟಲಿ ಕೋರ್ಟ್‌ ನೀಡಿದ 225 ಪುಟಗಳ ತೀರ್ಪಿನಲ್ಲಿ ತ್ಯಾಗಿ ಹಗರಣದಲ್ಲಿ ಭಾಗಿಯಾದ್ದನ್ನು ಹೇಳಿದೆ. ಜೊತೆಗೆ ಭಾರತದ ರಾಜಕೀಯ ಪಕ್ಷವೊಂದಕ್ಕೆ 120 ಕೋಟಿ ರೂ. ಲಂಚ ನೀಡಲಾಗಿತ್ತು ಎಂದು ಹೇಳಿದೆ. ತೀರ್ಪಿನಲ್ಲಿ ಸೋನಿಯಾ ಗಾಂಧಿ ಮನಮೋಹನ್‌ ಸಿಂಗ್‌ ಅವರ ಹೆಸರೂ ಪ್ರಸ್ತಾಪವಾಗಿದೆ. ಆದರೆ ಅವರು ಹಗರಣದಲ್ಲಿ ಭಾಗಿಯಾದ ವಿಚಾರದಲ್ಲಿ ಅಲ್ಲ. ಬದಲಿಗೆ ಮಧ್ಯವರ್ತಿಗಳು ಅಗಸ್ಟಾದ ಭಾರತೀಯ ಮಾರಾಟ ಅಧಿಕಾರಿ ಪೀಟರ್‌ ಹುಲೆಟ್‌ ಎಂಬುವರಿಗೆ 2008 ಮಾ.15ರಂದು ಬರೆದ ಪತ್ರದಲ್ಲಿ ಅಗಸ್ಟಾ ಖರೀದಿ ಒಪ್ಪಂದ ಕುದುರಲು ಸೋನಿಯಾ ಅವರು ಪ್ರೇರಕ ಶಕ್ತಿ. ಈ ವಿಚಾರದಲ್ಲಿ ಹೈಕಮಿಷನರ್‌, ಪ್ರಧಾನಿ ಅವರ ಮುಖ್ಯ ಸಲಹೆಗಾರರು, ಸೋನಿಯಾ ಅವರ ರಾಜಕೀಯ ಕಾರ್ಯದರ್ಶಿ ಪ್ರಮುಖರು ಎಂದು ಬರೆದಿದ್ದರು ಎನ್ನಲಾಗಿದೆ.

ಎಸ್‌.ಪಿ.ತ್ಯಾಗಿಯ ಮೇಲೆ ಆರೋಪದ ಉರುಳು
ವಾಯುಪಡೆ ಮಾಜಿ ಮುಖ್ಯಸ್ಥ ತ್ಯಾಗಿಯವರ ಮೇಲೆ ಆರೋಪ ಬರಲು ಕಾರಣ ಒಂದನೆಯದು ಅವರ ಕುಟುಂಬ ಇದರಲ್ಲಿ ಲಂಚ ಸ್ವೀಕರಿಸಿದೆ ಎಂಬುದು ಮತ್ತು ಹೆಲಿಕಾಪ್ಟರ್‌ ಹಾರಾಟ ಸಾಮರ್ಥ್ಯದ ಎತ್ತರ ತಗ್ಗಿಸಿದ್ದು ಎನ್ನಲಾಗುತ್ತಿದೆ. ಹೆಲಿಕಾಪ್ಟರ್‌ ಸಿಯಾಚಿನ್‌ ಪ್ರದೇಶದಲ್ಲೂ ಹಾರಾಟ ನಡೆಸುವಷ್ಟು ಸಾಮರ್ಥ್ಯ ಹೊಂದಿರಬೇಕು ಎಂಬುದು ವಾಯುಪಡೆ ಬಯಕೆಯಾಗಿತ್ತು. ಈ ಬಗ್ಗೆ ಅದು ಸ್ಪಷ್ಟವಾಗಿ ಹೇಳಿತ್ತು. ಆದರೆ ತ್ಯಾಗಿ ವಾಯುಪಡೆ ಮುಖ್ಯಸ್ಥರಾದ ಬಳಿಕ ಈ ವಿಚಾರದಲ್ಲಿ ಹಿಂದೆ ಸರಿದಿತ್ತು. ಅಲ್ಲದೇ ಇಟಲಿ ತನಿಖಾ ಮಾಹಿತಿಗಳ ಪ್ರಕಾರ, ತ್ಯಾಗಿ ಅವರು ಮಧ್ಯವರ್ತಿಗಳನ್ನು ಇಟಲಿಯಲ್ಲಿ ಭೇಟಿಯಾಗಿದ್ದಾಗಿ ಹೇಳಲಾಗಿತ್ತು. ಲಂಚವನ್ನು ಸಂಬಂಧಿಕರಿಗೆ ನೀಡಿದ್ದಾಗಿ ಹೇಳಲಾಗಿತ್ತು.

ಲಂಚ ನೀಡಿದವರಿಗೆ ಜೈಲು
ಹೆಲಿಕಾಪ್ಟರ್‌ ಡೀಲ್‌ ಕುದುರಿಸಲು ಲಂಚ ನೀಡಿದ್ದಕ್ಕಾಗಿ ಇಟಲಿ ಕೋರ್ಟ್‌ ಫಿನ್‌ಮೆಕ್ಕಾನಿಕಾದ ಸಿಇಒ ಗುಸ್ಸಿಪ್ಪೆ ಓರ್ಸಿ ಮತ್ತು ಅಗಸ್ಟಾದ ಮಾಜಿ ಮುಖ್ಯಸ್ಥ ಬರ್ನೋ ಅವರಿಗೆ ತಲಾ ನಾಲ್ಕು ವರ್ಷದ ಜೈಲು ಶಿಕ್ಷೆ ವಿಧಿಸಿದೆ ಜೊತೆಗೆ ಇಬ್ಬರಿಗೂ 56.46 ಕೋಟಿ ರೂ. ದಂಡ ವಿಧಿಸಿದೆ.
-ಉದಯವಾಣಿ

Write A Comment