ರಾಷ್ಟ್ರೀಯ

ಆಗಸ್ಟಾ ವೆಸ್ಟ್‌ಲ್ಯಾಂಡ್‌: ‘ಸುಪ್ರೀಂ’ನಲ್ಲಿ ಮುಂದಿನ ವಾರ ವಿಚಾರಣೆ

Pinterest LinkedIn Tumblr

courtನವದೆಹಲಿ (ಪಿಟಿಐ): ಆಗಸ್ಟಾ ವೆಸ್ಟ್‌ಲ್ಯಾಂಡ್‌ ಹಗರಣಕ್ಕೆ ಸಂಬಂಧಿಸಿ ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ ಮತ್ತು ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಸೇರಿ ರಾಜಕೀಯ ಮುಖಂಡರ ವಿರುದ್ಧದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ಮುಂದಿನ ವಾರ ನಡೆಸುವುದಾಗಿ ಸುಪ್ರೀಂ ಕೋರ್ಟ್‌ ಹೇಳಿದೆ.

ಮುಖ್ಯ ನ್ಯಾಯಮೂರ್ತಿ ಟಿ.ಎಸ್‌. ಠಾಕೂರ್‌ ಮತ್ತು ನ್ಯಾಯಮೂರ್ತಿಗಳಾದ ಆರ್‌. ಭಾನುಮತಿ ಮತ್ತು ಯು. ಯು. ಲಲಿತ್‌ ಅವರನ್ನೊಳಗೊಂಡ ಪೀಠವು ಅರ್ಜಿಯನ್ನು ವಿಚಾರಣೆಗೆ ಪರಿಗಣಿಸುವುದಾಗಿ ಹೇಳಿದೆ. ಇದೊಂದು ತುರ್ತು ವಿಚಾರವಾಗಿರುವುದರಿಂದ ತ್ವರಿತ ವಿಚಾರಣೆ ನಡೆಸಬೇಕು ಎಂದು ವಕೀಲ ಎಂ.ಎಲ್‌. ಶರ್ಮಾ ವಿನಂತಿಸಿದರು.

ಹೆಲಿಕಾಪ್ಟರ್‌ ತಯಾರಿಸುವ ಆಗಸ್ಟಾ ವೆಸ್ಟ್‌ಲ್ಯಾಂಡ್‌ ಕಂಪೆನಿಯು ವ್ಯಾಪಾರ ಕುದುರಿಸುವುದಕ್ಕಾಗಿ ಭಾರತದ ಅಧಿಕಾರಿಗಳಿಗೆ ಲಂಚ ನೀಡಿರುವ ಪ್ರಕರಣಕ್ಕೆ ಸಂಬಂಧಿಸಿ 2013ರಲ್ಲಿಯೇ ಸಿಬಿಐ ದೂರು ದಾಖಲಿಸಿಕೊಂಡಿದೆ.

‘ಮಾಧ್ಯಮ ನಿಭಾಯಿಸಲು ₹45 ಕೋಟಿ’: ಹಿಂದಿನ ಸರ್ಕಾರದ ಅವಧಿಯಲ್ಲಿ, ಆಗಸ್ಟಾ ವೆಸ್ಟ್‌ಲ್ಯಾಂಡ್‌ ಪ್ರಕರಣಕ್ಕೆ ಸಂಬಂಧಿಸಿ ಮಾಧ್ಯಮವನ್ನು ‘ನಿಭಾಯಿಸುವುದಕ್ಕಾಗಿ’ 60 ಲಕ್ಷ ಯೂರೊವನ್ನು (ಸುಮಾರು ₹45 ಕೋಟಿ) ಆ ಕಂಪೆನಿಯು ತೆಗೆದಿರಿಸಿತ್ತು ಎಂದು ಬಿಜೆಪಿ ಸಂಸದೆ ಮೀನಾಕ್ಷಿ ಲೇಖಿ ಲೋಕಸಭೆಯಲ್ಲಿ ಆರೋಪಿಸಿದ್ದಾರೆ.

ಇದಕ್ಕೆ ಸಂಬಂಧಿಸಿದ ಕೆಲವು ದಾಖಲೆಗಳು ಈಗ ಬಹಿರಂಗವಾಗಿವೆ. ಈ ಬಗ್ಗೆ ಚರ್ಚೆ ನಡೆಯಬೇಕು. ದೇಶದ ಪ್ರಜಾಸತ್ತಾತ್ಮಕ ವ್ಯವಸ್ಥೆಯನ್ನು ದುರ್ಬಲಗೊಳಿಸಲು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ದುರುಪಯೋಗ ಮಾಡಲಾಗಿದೆ. ಈ ಬಗ್ಗೆ ತನಿಖೆಯಾಗಬೇಕು ಎಂದು ಲೇಖಿ ಆಗ್ರಹಿಸಿದ್ದಾರೆ.

ಈ ಸಂದರ್ಭದಲ್ಲಿ ಕಾಂಗ್ರೆಸ್‌ ಮುಖಂಡ ಮಲ್ಲಿಕಾರ್ಜುನ ಖರ್ಗೆ ಸೇರಿ ಹಲವರು ಆಕ್ಷೇಪ ವ್ಯಕ್ತಪಡಿಸಿದರು. ಲೇಖಿ ಅವರೊಬ್ಬರಿಗೆ ಮಾತ್ರ ಯಾಕೆ ಮಾತನಾಡಲು ಅವಕಾಶ ನೀಡಲಾಗುತ್ತಿದೆ ಎಂದು ಸ್ಪೀಕರ್‌ ಅವರನ್ನು ವಿರೋಧ ಪಕ್ಷದ ಮುಖಂಡರು ಪ್ರಶ್ನಿಸಿದರು.

ಮಧ್ಯವರ್ತಿ ಗಡೀಪಾರಿಗೆ ಮನವಿ: ಆಗಸ್ಟಾ ವೆಸ್ಟ್‌ಲ್ಯಾಂಡ್ ಹೆಲಿಕಾಪ್ಟರ್ ಖರೀದಿ ವ್ಯವಹಾರದಲ್ಲಿ ಮಧ್ಯವರ್ತಿಯಾಗಿ ಕೆಲಸ ಮಾಡಿದ್ದ ಕ್ರಿಶ್ಚಿಯನ್‌ ಮೈಖೆಲ್‌ ಎಂಬಾತ ನನ್ನು ಗಡೀಪಾರು ಮಾಡಬೇಕು ಎಂದು ಬ್ರಿಟನ್ ಸರ್ಕಾರವನ್ನು ಭಾರತ ಸರ್ಕಾರ ಕೋರಿದೆ.

ಮೈಖೆಲ್‌ನನ್ನು ಭಾರತಕ್ಕೆ ಗಡೀಪಾರು ಮಾಡಬೇಕು ಎಂಬ ಕೋರಿಕೆಯನ್ನು ಬ್ರಿಟನ್ ಸರ್ಕಾರ ಪರಿಶೀಲಿಸುತ್ತಿದೆ ಎಂದು ವಿದೇಶಾಂಗ ಖಾತೆಯ ರಾಜ್ಯ ಸಚಿವ ವಿ. ಕೆ. ಸಿಂಗ್ ಅವರು ರಾಜ್ಯಸಭೆಗೆ ತಿಳಿಸಿದರು.

ಇಟಲಿಯ ಫಿನ್‌ಮೆಕಾನಿಕಾ ಕಂಪೆನಿಯ ಅಧೀನದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಆಗಸ್ಟಾ ವೆಸ್ಟ್‌ಲ್ಯಾಂಡ್ ಕಂಪೆನಿಯಿಂದ ಹೆಲಿಕಾಪ್ಟರ್ ಖರೀದಿ ಒಪ್ಪಂದ ಏರ್ಪಡಲು ಲಂಚ ನೀಡಲಾಗಿತ್ತು ಎಂಬ ವಿವಾದ ಕಾಂಗ್ರೆಸ್ ಮತ್ತು ಬಿಜೆಪಿ ಮಧ್ಯೆ ರಾಜಕೀಯ ಕೆಸರೆರಚಾಟಕ್ಕೆ ಕಾರಣವಾಗಿದೆ.

ಲಂಚ ಪಡೆದವರಾರು ತಿಳಿಸಿ ಸೋನಿಯಾಗೆ ಷಾ ಸವಾಲು
ಆಗಸ್ಟಾ ವೆಸ್ಟ್‌ಲ್ಯಾಂಡ್‌ ಹಗರಣದಲ್ಲಿ ಲಂಚ ಪಡೆದಿರುವ ಆರೋಪಕ್ಕೆ ತುತ್ತಾಗಿರುವ ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಸವಾಲು ಹಾಕಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಷಾ, ‘ಸೋನಿಯಾ ಅವರು ಯಾರಿಗೂ ಹೆದರದಿದ್ದರೆ, ಹಗರಣದಲ್ಲಿ ಲಂಚ ಪಡೆದವರು ಯಾರು ಎಂಬುದನ್ನು ಸ್ಪಷ್ಟಪಡಿಸಲಿ’ ಎಂದು ಹೇಳಿದ್ದಾರೆ.

ಆದರೆ ಸೋನಿಯಾ ಮೇಲಿನ ಆರೋಪವನ್ನು ತಳ್ಳಿಹಾಕಿರುವ ಕಾಂಗ್ರೆಸ್‌, ಭಾರತದಲ್ಲಿ ಯಾರು ಲಂಚ ಪಡೆದಿದ್ದಾರೆ ಎಂಬುದನ್ನು ಸರ್ಕಾರ ಹೇಳಬೇಕು ಎಂದು ಹೇಳಿದೆ.

‘ವಾಣಿಜ್ಯ ಸಂಬಂಧ ಇಲ್ಲ’
ನವದೆಹಲಿ: ವಿವಾದಾತ್ಮಕ ಕಂಪೆನಿ ಆಗಸ್ಟಾ ವೆಸ್ಟ್‌ಲ್ಯಾಂಡ್‌ ಜೊತೆಗೆ ಭಾರತವು ಯಾವುದೇ ವಾಣಿಜ್ಯ ಸಂಬಂಧ ಹೊಂದಿಲ್ಲ ಎಂದು ರಕ್ಷಣಾ ಸಚಿವಾಲಯ ಗುರುವಾರ ಸ್ಪಷ್ಟಪಡಿಸಿದೆ.

ಕಂಪೆನಿಯೊಂದಿಗೆ ರಕ್ಷಣಾ ಸಚಿವಾಲಯ ಮಾಡಿಕೊಂಡಿದ್ದ ಒಪ್ಪಂದಗಳನ್ನು ಅಮಾನತಿನಲ್ಲಿರಿಸಲಾಗಿದೆ. ಹೆಲಿಕಾಪ್ಟರ್‌ಗಳನ್ನು ತಯಾರಿಸುವುದಕ್ಕಾಗಿ ಟಾಟಾ ಸನ್ಸ್‌ ಜತೆ ಜಂಟಿ ಕಂಪೆನಿ ಸ್ಥಾಪಿಸಲು ಆಗಸ್ಟಾಗೆ ನೀಡಲಾಗಿದ್ದ ಕೈಗಾರಿಕಾ ಪರವಾನಗಿಯ ಅವಧಿ ಮುಗಿದಿದೆ ಎಂದು ಸಚಿವಾಲಯ ಹೇಳಿದೆ.

ಆಗಸ್ಟಾ ವೆಸ್ಟ್‌ಲ್ಯಾಂಡ್‌ ಮತ್ತು ಟಾಟಾ ಸನ್ಸ್‌ ಜಂಟಿಯಾಗಿ ಇಂಡಿಯನ್‌ ರೋಟರ್‌ಕ್ರಾಫ್ಟ್‌ ಲಿಮಿಟೆಡ್‌ ಎಂಬ ಹೆಸರಿನ ಕಂಪೆನಿ ಸ್ಥಾಪಿಸುವ ಪ್ರಸ್ತಾವನೆಗೆ ವಿದೇಶಿ ಬಂಡವಾಳ ಹೂಡಿಕೆ ಉತ್ತೇಜನ ಮಂಡಳಿಯು 2011ರ ಸೆಪ್ಟೆಂಬರ್‌ನಲ್ಲಿ ಅನುಮತಿ ನೀಡಿತ್ತು.

ಹೆಲಿಕಾಪ್ಟರ್‌ಗಳನ್ನು ತಯಾರಿಸುವುದಕ್ಕಾಗಿ ಕೈಗಾರಿಕಾ ಇಲಾಖೆಯು 2012ರ ಫೆಬ್ರುವರಿ 7ರಂದು ಇಂಡಿಯನ್‌ ರೋಟರ್‌ಕ್ರಾಫ್ಟ್‌ ಲಿಮಿಟೆಡ್‌ಗೆ ಕೈಗಾರಿಕಾ ಪರವಾನಗಿ ನೀಡಿತ್ತು. ಆದರೆ, ಈ ಪರವಾನಗಿ ಅವಧಿ ಮುಕ್ತಾಯಗೊಂಡಿದೆ ಎಂದು ರಕ್ಷಣಾ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.

Write A Comment