ರಾಷ್ಟ್ರೀಯ

ವಿಶಾಖ ಪಟ್ಟಣಂನ ಇಂಧನ ಘಟಕದಲ್ಲಿ ಭೀಕರ ಅಗ್ನಿ ಅವಘಡ; 6 ಆಯಿಲ್ ಟ್ಯಾಂಕ್ ಗಳು ಸ್ಫೋಟ

Pinterest LinkedIn Tumblr

fire

ವಿಶಾಖಪಟ್ಟಣ: ಆಂಧ್ರ ಪ್ರದೇಶದ ವಿಶಾಖಪಟ್ಟಣದಲ್ಲಿ ಭೀಕರ ಅಗ್ನಿ ದುರಂತ ಸಂಭವಿಸಿದ್ದು, ನಗರದ ಹೊರವಲಯದಲ್ಲಿರುವ ಜೈವಿಕ ಡೀಸೆಲ್ ತಯಾರಿಕಾ ಘಟಕ ಬೆಂಕಿ ಹೊತ್ತಿಕೊಂಡು 6 ತೈಲ ಟ್ಯಾಂಕ್ ಗಳು ಸ್ಫೋಟಗೊಂಡಿವೆ.

ವಿಶಾಖಪಟ್ಟಣಂನ ಹೊರವಲಯದ ದುವ್ವಡ ಪ್ರದೇಶದ ವಿಶೇಷ ಆರ್ಥಿಕ ವಲಯದಲ್ಲಿರುವ ಬಯೋಮ್ಯಾಕ್ಸ್ ಎಂಬ ಜೈವಿಕ ಡೀಸೆಲ್ ತಯಾರಿಕಾ ಘಟಕದಲ್ಲಿ ಬೆಂಕಿ ಅವಘಡ ಸಂಭವಿಸಿದ್ದು, ಘಟಕದ ಆವರಣದಲ್ಲಿದ್ದ 6 ಇಂಧನ ಟ್ಯಾಂಕ್ ಗಳು ಬೆಂಕಿಯ ಕೆನ್ನಾಲಿಗೆಗೆ ಸ್ಫೋಟವಾಗಿ ಛಿದ್ರಗೊಂಡಿದೆ. ಈ ಭೀಕರ ಘಟನೆ ಮಂಗಳವಾರ ರಾತ್ರಿ 10 ಗಂಟೆ ಸುಮಾರಿನಲ್ಲಿ ಸಂಭವಿಸಿದ್ದು, ಘಟಕದಲ್ಲಿ 15 ಸಂಗ್ರಹಣಾ ಟ್ಯಾಂಕ್​ಗಳಿದ್ದವು ಎಂದು ತಿಳಿದುಬಂದಿದೆ. ಈ ಪೈಕಿ 11 ಟ್ಯಾಂಕ್​ಗಳಿಗೆ ಬೆಂಕಿ ವ್ಯಾಪಿಸಿದ್ದು, ಬೆಂಕಿಯಿಂದಾಗಿ 6 ಟ್ಯಾಂಕ್​ಗಳು ಈಗಾಗಲೇ ಸ್ಪೋಟಗೊಂಡಿವೆ.

ಇಂಧನ ಘಟಕದಲ್ಲಿ ಸಾಕಷ್ಟು ಇಂಧನ ದಾಸ್ತಾನು ಇದ್ದುದರಿಂದ ಬೆಂಕಿ ಇತರ ಟ್ಯಾಂಕ್​ಗಳಿಗೂ ವ್ಯಾಪಿಸುತ್ತಿದೆ. ವಿಚಾರ ತಿಳಿಯುತ್ತಿದ್ದಂತೆಯೇ ನೌಕಾಪಡೆಯ 12 ಅಗ್ನಿಶಾಮಕ ವಾಹನಗಳು ಸೇರಿದಂತೆ ಒಟ್ಟು 40 ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ದೌಡಾಯಿಸಿದ್ದು ಬೆಂಕಿ ನಂದಿಸುತ್ತಿವೆ. ಅಲ್ಲದೆ ಈ ಕಾರ್ಯಾಚರಣೆಗೆ ನೌಕಾಪಡೆಯ ವಿಶೇಷ ಹೆಲಿಕಾಪ್ಟರ್ ಅನ್ನು ಕೂಡ ಬಳಸಿಕೊಳ್ಳಲಾಗುತ್ತಿದೆ.

ಪೊಲೀಸ್ ಮೂಲಗಳ ಪ್ರಕಾರ ಬೆಂಕಿ ಆಕಸ್ಮಿಕ ಘಟನೆ ನಡೆದಾಗ ಘಟಕದಲ್ಲಿ 10-15 ನೌಕರರು ಕಾರ್ಯ ನಿರ್ವಹಿಸುತ್ತಿದ್ದರು ಮತ್ತು ಪ್ರಸ್ತುತ ಎಲ್ಲರನ್ನೂ ಸುರಕ್ಷಿತವಾಗಿ ರಕ್ಷಿಸಲಾಗಿದೆ ಎಂದ ಅಧಿಕಾರಿಗಳು ತಿಳಿಸಿದ್ದಾರೆ. ಮೇಲ್ನೋಟಕ್ಕೆ ಅಗ್ನಿ ದುರಂತಕ್ಕೆ ಶಾರ್ಟ್ ಸರ್ಕ್ಯೂಟ್ ಕಾರಣ ಎಂದು ಹೇಳಲಾಗುತ್ತಿದ್ದು, ಅಪಾರ ಪ್ರಮಾಣದ ನಷ್ಟ ಉಂಟಾಗಿದೆ ಸಂಸ್ಥೆಯ ಆಡಳಿತ ಮಂಡಳಿ ತಿಳಿಸಿದೆ.

ಬಯೋಮ್ಯಾಕ್ಸ್ ಜೈವಿಕ ಡೀಸೆಲ್ ತಯಾರಿಕಾ ಘಟಕ, ಭಾರತದಲ್ಲೇ ಅತಿ ದೊಡ್ಡ ಘಟಕವಾಗಿದ್ದು, ವಾರ್ಷಿಕ 5 ಲಕ್ಷ ಟನ್ ಡೀಸೆಲ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ.

Write A Comment