ರಾಷ್ಟ್ರೀಯ

‘ಸಹಪ್ರಯಾಣಿಕನಿಂದ ಕತ್ತು ಹಿಸುಕುವ ಯತ್ನ’

Pinterest LinkedIn Tumblr

kanhaiya-kumar

ಮುಂಬೈ (ಪಿಟಿಐ): ವಿಮಾನದ ಸಹ ಪ್ರಯಾಣಿಕನೊಬ್ಬ ತಮ್ಮ ಕತ್ತು ಹಿಸುಕಲು ಯತ್ನಿಸಿದ್ದಾನೆ ಎಂದು ಜವಾಹರಲಾಲ್‌ ನೆಹರೂ ವಿ.ವಿ ವಿದ್ಯಾರ್ಥಿ ಸಂಘದ ಅಧ್ಯಕ್ಷ ಕನ್ಹಯ್ಯಾ ಕುಮಾರ್‌ ಭಾನುವಾರ ಆರೋಪಿಸಿದ್ದಾರೆ.

ಈ ಘಟನೆ ಸಂಬಂಧ ಪೊಲೀಸರ ವಶದಲ್ಲಿರುವ ವ್ಯಕ್ತಿಯು ಆರೋಪವನ್ನು ನಿರಾಕರಿಸಿದ್ದು, ಬಿಟ್ಟಿ ಪ್ರಚಾರಕ್ಕಾಗಿ ಕನ್ಹಯ್ಯಾ ಈ ರೀತಿ ಹೇಳುತ್ತಿದ್ದಾರೆ ಎಂದು ದೂರಿದ್ದಾರೆ.

‘ಮತ್ತೊಮ್ಮೆ ನನ್ನ ಕತ್ತು ಹಿಸುಕುವ ಯತ್ನ ನಡೆದಿದೆ. ಈ ಬಾರಿ ವಿಮಾನದ ಒಳಗಡೆ’ ಎಂದು ಕನ್ಹಯ್ಯಾ ಟ್ವೀಟ್‌ ಮಾಡಿದ್ದಾರೆ. ಜೆಟ್‌ ಏರ್‌ವೇಸ್‌ ವಿಮಾನದಲ್ಲಿ ಘಟನೆ ನಡೆದಿದೆ. ಪುಣೆಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಭಾಗವಹಿಸುವುದಕ್ಕಾಗಿ ಮುಂಬೈನ ವಿಮಾನ ನಿಲ್ದಾಣದಲ್ಲಿ ಕನ್ಹಯ್ಯಾ ವಿಮಾನ ಏರಿದ್ದರು.

ಭದ್ರತೆ ಕಾರಣಕ್ಕಾಗಿ ಘಟನೆ ನಂತರ ಕನ್ಹಯ್ಯಾರನ್ನು ವಿಮಾನದಿಂದ ಇಳಿಸಲಾಯಿತು. ಬಳಿಕ ಅವರು ರಸ್ತೆ ಮೂಲಕ ಪುಣೆಗೆ ತೆರಳಿದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರ ಸರ್ಕಾರ ತನಿಖೆಗೆ ಆದೇಶಿಸಿದೆ.

‘ಕನ್ಹಯ್ಯಾ ಅವರ ಕತ್ತು ಹಿಸುಕಿರುವ ಆರೋಪದಲ್ಲಿ ಟಿಸಿಎಸ್ ಕಂಪೆನಿಯ ಉದ್ಯೋಗಿ ಮಾನಸ್‌ ಜ್ಯೋತಿ ಡೇಕಾ (33) ಎಂಬವರನ್ನು ವಶಕ್ಕೆ ಪಡೆಯಲಾಗಿದೆ. ಅವರ ವಿರುದ್ಧ ಮುಂಬೈ ವಿಮಾನ ನಿಲ್ದಾಣದಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ವಿಮಾನದಲ್ಲಿ ಆಸನದ ವಿಚಾರಕ್ಕೆ ಎರಡು ಗುಂಪುಗಳ ನಡುವೆ ಜಗಳ ನಡೆದಿರುವುದು ಮೇಲ್ನೋಟಕ್ಕೆ ತಿಳಿದುಬಂದಿದೆ. ಕನ್ಹಯ್ಯಾ ಒಂದು ತಂಡದ ಭಾಗವಾಗಿದ್ದರು ಎಂದು ಪೊಲೀಸ್‌ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಕನ್ಹಯ್ಯಾ ಮಾಡಿರುವ ಆರೋಪವನ್ನು ನಿರಾಕರಿಸಿರುವ ಮಾನಸ್‌, ‘ನೋಯುತ್ತಿದ್ದ ಕಾಲನ್ನು ಸಮತೋಲನ ಮಾಡಲು ಯತ್ನಿಸಿದಾಗ ನನ್ನ ಕೈ ಅವರ ಕುತ್ತಿಗೆಗೆ ತಾಗಿತು. ಅವರು ವೈಯಕ್ತಿಕವಾಗಿ ನನಗೆ ಗೊತ್ತಿಲ್ಲ. ಆದರೆ, ಚಿತ್ರಗಳನ್ನು ನೋಡಿದ್ದೇನೆ. ಪ್ರಚಾರ ಪಡೆಯುವುದಕ್ಕಾಗಿ ಈ ರೀತಿ ಆರೋಪ ಮಾಡುತ್ತಿದ್ದಾರೆ’ ಎಂದು ತಿಳಿಸಿದ್ದಾರೆ.

Write A Comment