ಮನೋರಂಜನೆ

ಮುಸ್ತಫಿಜರ್ ದಾಳಿಗೆ ತತ್ತರಿಸಿದ ಪಂಜಾಬ್ ಕಿಂಗ್ಸ್ ಇಲೆವನ್; ಸನ್‌ರೈಸರ್ಸ್‌ಗೆ 5 ವಿಕೆಟ್‌ಗಳ ಜಯ

Pinterest LinkedIn Tumblr

mustafizur

ಹೈದರಾಬಾದ್ : ಸನ್‌ರೈಸರ್ಸ್‌ ಹೈದರಾಬಾದ್ ತಂಡವು ಶನಿವಾರ ರಾತ್ರಿ ಮತ್ತೊಂದು ಜಯ ಸಾಧಿಸಿತು. ಶನಿವಾರ ರಾತ್ರಿ ಉಪ್ಪಳದ ರಾಜೀವ ಗಾಂಧಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಸನ್‌ರೈಸರ್ಸ್ 5 ವಿಕೆಟ್‌ ಗಳಿಂದ ಪಂಜಾಬ್ ಕಿಂಗ್ಸ್ ಇಲೆವನ್ ವಿರುದ್ಧ ಗೆದ್ದಿತು.

ಮೊದಲು ಬ್ಯಾಟಿಂಗ್ ಮಾಡಿದ ಕಿಂಗ್ಸ್ 20 ಓವರ್‌ಗಳಲ್ಲಿ 6 ವಿಕೆಟ್‌ ಗಳಿಗೆ 143 ರನ್‌ಗಳನ್ನು ಪೇರಿಸಿತು. ಹೈದರಾಬಾದ್ ತಂಡದ ಮುಸ್ತಫಿಜರ್ (4–1–9–2) ಮತ್ತು ಮೊಯಿಸೆಸ್ ಹೆನ್ರಿಕ್ಸ್ (4–0–33–2) ಅವರ ಬಿಗಿ ದಾಳಿಯಿಂದಾಗಿ ಕಿಂಗ್ಸ್‌ ದೊಡ್ಡ ಮೊತ್ತ ಪೇರಿಸಲು ವಿಫಲವಾಯಿತು.

ನಂತರ ಬ್ಯಾಟಿಂಗ್ ಆರಂಭಿಸಿದ ಸನ್‌ರೈಸರ್ಸ್ ತಂಡವು 17.5 ಓವರ್‌ಗಳಲ್ಲಿ 5 ವಿಕೆಟ್‌ ನಷ್ಟಕ್ಕೆ 146 ರನ್ ಗಳಿಸಿ ಜಯಿಸಿತು.
ಟೂರ್ನಿಯಲ್ಲಿ ಸತತ ಮೂರನೇ ಅರ್ಧಶತಕ ದಾಖಲಿಸಿದ ನಾಯಕ ಡೇವಿಡ್ ವಾರ್ನರ್ (59; 31ಎ,7ಬೌಂ, 3ಸಿ) ಮತ್ತು ಶಿಖರ್ ಧವನ್ (45, 44ಎ, 4ಬೌಂ) ಅವರ ಅಮೋಘ ಬ್ಯಾಟಿಂಗ್‌ನಿಂದಾಗಿ ಮತ್ತೊಂದು ಗೆಲುವು ಒಲಿಯಿತು.

ಟಾಸ್ ಗೆದ್ದು ಫೀಲ್ಡಿಂಗ್ ಮಾಡಿದ ಸನ್‌ರೈಸರ್ಸ್ ತಂಡಕ್ಕೆ ಆರಂಭದಲ್ಲಿಯೇ ಯಶಸ್ಸು ಸಿಕ್ಕಿತು. ಗುಜರಾತ್ ಲಯನ್ಸ್ ಎದುರಿನ ಪಂದ್ಯದಲ್ಲಿ ಮಿಂಚಿದ್ದ ಭುವನೇಶ್ವರ್ ಕುಮಾರ್ ಮತ್ತೊಮ್ಮೆ ತಮ್ಮ ಕೈಚಳಕ ತೋರಿಸಿದರು. ಮೂರನೇ ಓವರ್‌ನಲ್ಲಿ ಕಿಂಗ್ಸ್ ತಂಡದ ಆರಂಭಿಕ ಬ್ಯಾಟ್ಸ್‌ಮನ್ ಅವರ ವಿಕೆಟ್ ಗಳಿಸಿದರು. ಮನನ್ ವೊಹ್ರಾ (25 ರನ್) ಸ್ವಲ್ಪ ಹೋರಾಟ ಮಾಡಿದರು. ಆದರೆ, ಆರನೇ ಓವರ್‌ನಲ್ಲಿ ಅವರು ರನ್‌ಔಟ್ ಆದರು.

ನಂತರ ಶಾನ್ ಮಾರ್ಷ್ (40; 34ಎ, 3ಬೌಂ, 1ಸಿ) ತಂಡದ ಸ್ಕೋರ್ ಹೆಚ್ಚಿಸುವ ಪ್ರಯತ್ನ ಮಾಡಿದರು. ಅವರು ನಾಯಕ ಡೇವಿಡ್ ಮಿಲ್ಲರ್ (9 ರನ್) ಅವರೊಂದಿಗೆ ಮೂರನೇ ವಿಕೆಟ್‌ಗೆ 28 ರನ್ ಸೇರಿಸಿದರು. ಆದರೆ, ಮೊಯಿಸೆಸ್ ಹೆನ್ರಿಕ್ಸ್‌ ಬೌಲಿಂಗ್‌ನಲ್ಲಿ ಮಿಲ್ಲರ್ ವಿಕೆಟ್‌ಕೀಪರ್ ಓಜಾಗೆ ಕ್ಯಾಚಿತ್ತರು. ಅದೇ ಓವರ್‌ನಲ್ಲಿ ಗ್ಲೆನ್ ಮ್ಯಾಕ್ಸ್‌ವೆಲ್ ಅವರು ಮುಸ್ತಫಿಜರ್‌ಗೆ ಕ್ಯಾಚಿತ್ತು ನಿರ್ಗಮಿಸಿದರು.

14ನೇ ಓವರ್‌ನಲ್ಲಿ ಬೌಲಿಂಗ್‌ಗೆ ಇಳಿದ ಮುಸ್ತಫಿಜರ್ ಮಾರ್ಷ್ ಅವರನ್ನು ಎಲ್‌ಬಿಡಬ್ಲ್ಯು ಬಲೆಗೆ ಕೆಡವಿದರು. ನಂತರ ಕ್ರೀಸ್‌ಗೆ ಬಂದ ನಿಖಿಲ್ ನಾಯಕ (22 ರನ್) ಮತ್ತು ಅಕ್ಷರ್ ಪಟೇಲ್ (36 ರನ್) ತಂಡಕ್ಕೆ ಚೇತರಿಕೆ ನೀಡಿದರು. ಆರನೇ ವಿಕೆಟ್ ಜೊತೆಯಾಟದಲ್ಲಿ 50 ರನ್‌ ಸೇರಿಸಿದರು. ಪಟೇಲ್ ಮೂರು ಆಕರ್ಷಕ ಸಿಕ್ಸರ್‌ಗಳನ್ನು ಎತ್ತಿದರು. ಕೊನೆಯ ಓವರ್‌ನಲ್ಲಿ ನಿಖಿಲ್ ನಾಯಕ ವಿಕೆಟ್ ಪಡೆದ ಮುಸ್ತಫಿಜರ್ ಜೊತೆಯಾಟವನ್ನು ಮುರಿದರು.

ಸಂಕ್ಷಿಪ್ತ ಸ್ಕೋರು: ಕಿಂಗ್ಸ್ ಇಲೆವನ್ ಪಂಜಾಬ್: 20 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 143 (ಮನನ್ ವೊಹ್ರಾ 25, ಶಾನ್ ಮಾರ್ಷ್ 40, ನಿಖಿಲ್ ನಾಯಕ 22, ಅಕ್ಷರ್ ಪಟೇಲ್ 36, ಭುವನೇಶ್ವರ್ ಕುಮಾರ್ 37ಕ್ಕೆ1, ಮುಸ್ತಫಿಜರ್ ರೆಹಮಾನ್ 9ಕ್ಕೆ2, ಮೊಯಿಸೆಸ್ ಹೆನ್ರಿಕ್ಸ್ 33ಕ್ಕೆ2) ,

ಸನ್‌ರೈಸರ್ಸ್ ಹೈದರಾಬಾದ್: 17.5 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 146 (ಡೇವಡ್ ವಾರ್ನರ್ 59, ಶಿಖರ್ ಧವನ್ 45, ಎಯಾನ್ ಮಾರ್ಗನ್ 25, ಸಂದೀಪ್ ಶರ್ಮಾ 30ಕ್ಕೆ1, ಮೋಹಿತ್ ಶರ್ಮಾ 20ಕ್ಕೆ1, ರಿಶಿ ಧವನ್ 35ಕ್ಕೆ1) ಫಲಿತಾಂಶ: ಸನ್‌ರೈಸರ್ಸ್ ತಂಡಕ್ಕೆ 5 ವಿಕೆಟ್‌ಗಳ ಜಯ.

ಪಂದ್ಯಶ್ರೇಷ್ಠ: ಮುಸ್ತಫಿಜರ್ ರೆಹಮಾನ್

Write A Comment