ಮನೋರಂಜನೆ

ಮುಂಬೈ ಇಂಡಿಯನ್ಸ್‌ ತಂಡವನ್ನು 10 ರನ್‌ಗಳಿಂದ ಸೋಲಿಸಿದ ಡೆಲ್ಲಿ ಡೇರ್‌ಡೆವಿಲ್ಸ್

Pinterest LinkedIn Tumblr

sanju-samson

ನವದೆಹಲಿ: ಸಂಜು ಸ್ಯಾಮ್ಸನ್ ಗಳಿಸಿದ ಅರ್ಧಶತಕದಿಂದಾಗಿ ಶನಿವಾರ ಸಂಜೆ ಡೆಲ್ಲಿ ಡೇರ್‌ಡೆವಿಲ್ಸ್‌ ತಂಡವು ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್‌ ತಂಡವನ್ನು 10 ರನ್‌ಗಳಿಂದ ಸೋಲಿಸಿತು.

ಮುಂಬೈ ತಂಡವು ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಸಂಜು ಸ್ಯಾಮ್ಸನ್ (60; 48ಎ, 4ಬೌಂ, 2ಸಿ) ಮತ್ತು ಜೆ.ಪಿ. ಡುಮಿನಿ (49; 31ಎ, 3ಬೌಂ, 2ಸಿ) ಅವರ ನೆರವಿನಿಂದ 20 ಓವರ್‌ಗಳಲ್ಲಿ 4 ವಿಕೆಟ್‌ಗಳಿಗೆ 164 ರನ್ ಗಳಿಸಿತು. ಗುರಿ ಬೆನ್ನತ್ತಿದ ಮುಂಬೈ ಇಂಡಿಯನ್ಸ್ ತಂಡವು 20 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 154 ರನ್ ಗಳಿಸಿತು.

ಕಳೆದ ಪಂದ್ಯದಲ್ಲಿ ಅಬ್ಬರಿಸಿದ್ದ ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾ (65; 48ಎ, 7ಬೌಂ, 1ಸಿ) ಮತ್ತೊಮ್ಮೆ ತಮ್ಮ ತಂಡವನ್ನು ಗೆಲುವಿನ ಸನಿಹಕ್ಕೆ ತಂದಿದ್ದರು. ಆದರೆ, ಗೆಲುವಿನ ದಡ ಮುಟ್ಟಲು ಸಾಧ್ಯವಾಗಲಿಲ್ಲ.

ಸಂಜು ಕಟ್ಟಿದ ಸುಂದರ ಇನಿಂಗ್ಸ್
ಕಳೆದ ಪಂದ್ಯಗಳಲ್ಲಿ ಹೆಚ್ಚು ರನ್‌ ಗಳಿಸದ ಸಂಜು ಸ್ಯಾಮ್ಸನ್‌ ಇವತ್ತು ಡೆಲ್ಲಿ ಡೇರ್‌ಡೆವಿಲ್ಸ್‌ ತಂಡವನ್ನು ಸಂಕಷ್ಟದಿಂದ ಪಾರು ಮಾಡಿದರು.
ಆರಂಭದಲ್ಲಿಯೇ ಆತಂಕ ಎದುರಿಸಿದ್ದ ತಂಡಕ್ಕೆ ತಮ್ಮ ಅರ್ಧಶತಕದ ಮೂಲಕ ಗೌರವಾರ್ಹ ಮೊತ್ತ ಗಳಿಸಲು ನೆರವಾದರು. ಅವರೊಂದಿಗೆ 4ನೇ ವಿಕೆಟ್‌ ಜೊತೆಯಾಟದಲ್ಲಿ 71 ರನ್‌ ಸೇರಿಸಿದ ಡುಮಿನಿ ಕೂಡ ಅಮೋಘ ಬ್ಯಾಟಿಂಗ್ ಮಾಡಿದರು.

ಆರ್‌ಸಿಬಿ ಎದುರಿನ ಪಂದ್ಯದಲ್ಲಿ ಶತಕ ಬಾರಿ ಮಿಂಚಿದ್ದ ಕ್ವಿಂಟನ್ ಡಿ ಕಾಕ್‌ ಅವರನ್ನು ಎರಡನೇ ಓವರ್‌ನಲ್ಲಿಯೇ ಮೆಕ್‌ಲೆಂಗಾನ್ ಪೆವಿಲಿಯನ್‌ಗೆ ಕಳಿಸಿದರು. 9 ರನ್ ಗಳಿಸಿದ್ದ ಕ್ವಿಂಟನ್ ಹಾರ್ದಿಕ್ ಪಾಂಡ್ಯಗೆ ಕ್ಯಾಚಿತ್ತರು. ಒಂದು ಸಿಕ್ಸರ್ ಮತ್ತು ಒಂದು ಬೌಂಡರಿ ಇದ್ದ 19 ರನ್‌ಗಳನ್ನು ಗಳಿಸಿ ಆಡುತ್ತಿದ್ದ ಶ್ರೆಯಸ್ ಅಯ್ಯರ್ ಏಳನೇ ಓವರ್‌ನಲ್ಲಿ ಹಾರ್ದಿಕ್ ಪಾಂಡ್ಯ ಎಸೆತದಲ್ಲಿ ಔಟಾದರು.

ಅವರು ಸ್ಯಾಮ್ಸನ್‌ ಅವರೊಂದಿಗೆ ಎರಡನೇ ವಿಕೆಟ್‌ ಜೊತೆಯಾಟದಲ್ಲಿ 37 ರನ್‌ಗಳನ್ನು ಸೇರಿಸಿದರು. ಕಳೆದ ಪಂದ್ಯದಲ್ಲಿ ಭರ್ಜರಿ ಅರ್ಧಶತಕ ಹೊಡೆದಿದ್ದ ಬೆಂಗಳೂರು ಹುಡುಗ ಕರುಣ್ ನಾಯರ್ ಕೇವಲ 5 ರನ್‌ ಗಳಿಸಿ ಹರಭಜನ್‌ಸಿಂಗ್‌ಗೆ ವಿಕೆಟ್‌ ಒಪ್ಪಿಸಿದರು. ಇದರಿಂದಾಗಿ ತಂಡವು ಕೇವಲ 54 ರನ್‌ಗಳಿಗೆ 3 ವಿಕೆಟ್ ಕಳೆದುಕೊಂಡಿತು.

ನಂತರ ಸ್ಯಾಮ್ಸನ್ ಜೊತೆಗೂಡಿದ ಡುಮಿನಿ ಆತಂಕ ನಿವಾರಿಸಿದರು. 158.06 ಸ್ಟ್ರೈಕ್‌ರೇಟ್‌ನಲ್ಲಿ ಅವರು ರನ್‌ ಗಳಿಸಿದರು. 17ನೇ ಓವರ್‌ನಲ್ಲಿ ಮೆಕ್‌ಲೆಂಗಾನ್ ಎಸೆತದಲ್ಲಿ ಸಂಜು ಸ್ಯಾಮ್ಸನ್ ಟಿಮ್ ಸೌಥಿಗೆ ಕ್ಯಾಚಿತ್ತರು. ಆಲ್‌ರೌಂಡರ್ ಪವನ್ ನೇಗಿ ಹತ್ತು ಎಸೆತಗಳಲ್ಲಿ 10 ರನ್ ಹೊಡೆದರು.

ರೋಹಿತ್ ಹೋರಾಟಕ್ಕೆ ಸಿಗದ ಜಯ
ಆರ್‌ಸಿಬಿ ಎದುರಿನ ಪಂದ್ಯದಲ್ಲಿ ಅರ್ಧಶತಕ ಗಳಿಸಿದ್ದ ರೋಹಿತ್ ಗೆಲುವಿಗೆ ಕಾರಣರಾಗಿದ್ದರು. ಈ ಪಂದ್ಯದಲ್ಲಿ ಅರ್ಧಶತಕ ಗಳಿಸಿದ ಅವರು ಮ್ಮ ತಂಡವನ್ನು ಗೆಲುವಿನ ಹೊಸ್ತಿಲಿಗೆ ತಂದಿದ್ದರು.

ಕೊನೆಯ ಓವರ್‌ನಲ್ಲಿ ತಂಡದ ಗೆಲುವಿಗೆ 20 ರನ್‌ಗಳ ಅವಶ್ಯಕತೆ ಇತ್ತು. ರೋಹಿತ್ ಮತ್ತು ಹಾರ್ದಿಕ್ ಪಾಂಡ್ಯ ಕ್ರೀಸ್‌ನಲ್ಲಿದ್ದರು. ವೇಗಿ ಕ್ರಿಸ್ ಮೊರಿಸ್ ಹಾಕಿದ ಮೊದಲ ಎಸೆತ ಎದುರಿಸಿದ ಪಾಂಡ್ಯ 1 ರನ್ ಹೊಡೆದರು. ನಂತರದ ಎಸೆತವನ್ನು ರೋಹಿತ್ ಸಿಕ್ಸರ್‌ಗೆ ಎತ್ತಿದರು. ಇದರಿಂದ ಪಂದ್ಯವು ರೋಚಕ ಘಟ್ಟ ತಲುಪಿತು.

ಆದರೆ, ಮೂರನೇ ಎಸೆತದಲ್ಲಿ ಎಡವಟ್ಟಾಯಿತು ಚೆಂಡನ್ನು ಡೀಪ್‌ ಕವರ್‌ಗೆ ಹೊಡೆದ ರೋಹಿತ್ ಒಂದು ರನ್‌ಗಾಗಿ ಓಡಿದರು. ಇನ್ನೊಂದೆಡೆಯಿಂದ ಓಡಿದ ಪಾಂಡ್ಯ ಅವರು ಪಿಚ್‌ ಮಧ್ಯದಲ್ಲಿ ರೋಹಿತ್‌ಗೆ ಆಕಸ್ಮಿಕವಾಗಿ ಡಿಕ್ಕಿ ಹೊಡೆದರು. ರೋಹಿತ್ ಬಿದ್ದರು. ಅಷ್ಟೊತ್ತಿಗೆ ಫೀಲ್ಡರ್ ನೇಗಿಯಿಂದ ಥ್ರೋ ಪಡೆದ ಮೊರಿಸ್ ತಮ್ಮ ಬದಿಯ ಸ್ಟಂಪ್‌ ಎಗರಿಸಿದರು. ಆದರೆ, ಚೆಂಡು ಸ್ಪಂಪ್‌ಗೆ ಅವರ ಕೈ ಮಾತ್ರ ಬಡಿದಿತ್ತು. ಕೂಡಲೇ ಚೆಂಡನ್ನು ಎತ್ತಿಕೊಂಡ ಅವರು ವಿಕೆಟ್‌ಕೀಪರ್‌ಗೆ ನೀಡಿದರು. ರೋಹಿತ್ ಶರ್ಮಾರನ್‌ಔಟ್ ಆದರು. ನಂತರದ ಎಸೆತದಲ್ಲಿ ಹರಭಜನ್ ಸಿಂಗ್ ಔಟಾದರು. ಅಲ್ಲಿಗೆ ಮುಂಬೈ ಗೆಲುವಿನ ಬಾಗಿಲು ಮುಚ್ಚಿತು.

ಸ್ಕೋರ್‌ಕಾರ್ಡ್‌
ಡೆಲ್ಲಿ ಡೇರ್‌ಡೆವಿಲ್ಸ್‌ 4 ಕ್ಕೆ 164 (20 ಓವರ್‌ಗಳಲ್ಲಿ)

ಕ್ವಿಂಟನ್‌ ಡಿ ಕಾಕ್‌ ಸಿ. ಹಾರ್ದಿಕ್‌ ಪಾಂಡ್ಯ ಬಿ. ಮಿಷೆಲ್‌ ಮೆಕ್‌ಲಾಗನ್ 09
ಶ್ರೇಯಸ್‌ ಅಯ್ಯರ್‌ ಸಿ. ಅಂಬಟಿ ರಾಯುಡು ಬಿ. ಹಾರ್ದಿಕ್‌ ಪಾಂಡ 19
ಸಂಜು ಸ್ಯಾಮ್ಸನ್‌ ಸಿ. ಟಿಮ್ ಸೌಥಿ ಬಿ. ಮಿಷೆಲ್‌ ಮೆಕ್‌ಲಾಗನ್‌ 60
ಕರುಣ್ ನಾಯರ್‌ ಸಿ. ಟಿಮ್‌ ಸೌಥಿ ಬಿ. ಹರಭಜನ್ ಸಿಂಗ್‌ 05
ಜೆ.ಪಿ ಡುಮಿನಿ ಔಟಾಗದೆ 49
ಪವನ್‌ ನೇಗಿ ಔಟಾಗದೆ 10
ಇತರೆ: (ಲೆಗ್ ಬೈ–3, ವೈಡ್‌–8, ನೋ ಬಾಲ್‌–1) 12
ವಿಕೆಟ್‌ ಪತನ: 1–11 (ಕ್ವಿಂಟನ್‌; 1.6), 2–48 (ಶ್ರೇಯಸ್‌; 6.6), 3–54 (ಕರುಣ್‌; 7.6), 4–125 (ಸಂಜು; 16.3).
ಬೌಲಿಂಗ್‌: ಟಿಮ್‌ ಸೌಥಿ 3–0–21–0, ಮಿಷೆಲ್‌ ಮೆಕ್‌ಲಾಗನ್ 4–0–31–2, ಜಸ್‌ಪ್ರೀತ್ ಬೂಮ್ರಾ 4–0–42–0, ಕೃಣಾಲ್ ಪಾಂಡ್ಯ 4–0–25–0, ಹಾರ್ದಿಕ್‌ ಪಾಂಡ್ಯ 1–0–7–1, ಹರಭಜನ್ ಸಿಂಗ್ 3–0–24–1, ಕೀರನ್‌ ಪೊಲಾರ್ಡ್‌ 1–0–11–0.

ಮುಂಬೈ ಇಂಡಿಯನ್ಸ್‌ 7 ಕ್ಕೆ 154 (20 ಓವರ್‌ಗಳಲ್ಲಿ)

ರೋಹಿತ್ ಶರ್ಮಾ ರನ್ ಔಟ್‌ (ನೇಗಿ/ಮಾರಿಸ್‌/ಕಾಕ್‌) 65
ಪಾರ್ಥಿವ್‌ ಪಟೇಲ್‌ ರನ್ ಔಟ್‌ (ಅಯ್ಯರ್‌/ಕಾಕ್‌) 01
ಅಂಬಟಿ ರಾಯುಡು ಬಿ. ಅಮಿತ್‌ ಮಿಶ್ರಾ 25
ಕೃಣಾಲ್‌ ಪಾಂಡ್ಯ ರನ್ ಔಟ್‌ (ಜಹೀರ್ ಖಾನ್‌) 36
ಜಾಸ್‌ ಬಟ್ಲರ್‌ ಎಲ್‌ಬಿಡಬ್ಲ್ಯು ಬಿ. ಅಮಿತ್‌ ಮಿಶ್ರಾ 02
ಕೀರನ್‌ ಪೊಲಾರ್ಡ್‌ ಸಿ. ಕ್ರಿಸ್ ಮಾರಿಸ್ ಬಿ. ಜಹೀರ್ ಖಾನ್‌ 19
ಹಾರ್ದಿಕ್‌ ಪಾಂಡ್ಯ ಔಟಾಗದೆ 02
ಹರಭಜನ್ ಸಿಂಗ್ ಎಲ್‌ಬಿಡಬ್ಲ್ಯು ಬಿ. ಕ್ರಿಸ್‌ ಮಾರಿಸ್‌ 00
ಟಿಮ್‌ ಸೌಥಿ ಔಟಾಗದೆ 01
ಇತರೆ: (ಲೆಗ್‌ ಬೈ–1, ವೈಡ್‌–2) 03
ವಿಕೆಟ್‌ ಪತನ: 1–9 (ಪಟೇಲ್; 1.4), 2–62 (ರಾಯುಡು; 8.3), 3–103 (ಕೃಣಾಲ್‌; 12.4), 4–110 (ಬಟ್ಲರ್‌; 14.3), 5–144 (ಪೊಲಾರ್ಡ್‌; 18.6), 6–152 (ರೋಹಿತ್‌; 19.3), 7–152 (ಹರಭಜನ್‌; 19.4)
ಬೌಲಿಂಗ್‌: ಜಹೀರ್ ಖಾನ್‌ 4–0–30–1, ಮೊಹಮ್ಮದ್ ಶಮಿ 3–0–24–0, ಪವನ್ ನೇಗಿ 1–0–19–0, ಕ್ರಿಸ್‌ ಮಾರಿಸ್‌ 4–0–27–1, ಅಮಿತ್‌ ಮಿಶ್ರಾ 4–0–24–2, ಇಮ್ರಾನ್ ತಾಹಿರ್‌ 4–0–29–0.

ಫಲಿತಾಂಶ: ಡೇರ್‌ಡೆವಿಲ್ಸ್ ತಂಡಕ್ಕೆ 10 ರನ್ ಜಯ
ಪಂದ್ಯ ಶ್ರೇಷ್ಠ: ಸಂಜು

Write A Comment