ರಾಷ್ಟ್ರೀಯ

ರೈತ ಕಲ್ಯಾಣ ಮಸೂದೆ ಪರಿಗಣಿಸಲು ರಾಷ್ಟ್ರಪತಿ ಶಿಫಾರಸು

Pinterest LinkedIn Tumblr

Pranabನವದೆಹಲಿ(ಪಿಟಿಐ): ಅತಿವೃಷ್ಟಿ, ಅನಾವೃಷ್ಟಿ ಪರಿಸ್ಥಿತಿಗಳಲ್ಲಿ ಸಂಕಷ್ಟಕೀಡಾಗುವ ರೈತರ ಹಿತಕಾಯುವ ಹಾಗೂ ₹10 ಸಾವಿರ ಕೋಟಿ ಮೂಲಧನವಿರುವ ಕಲ್ಯಾಣ ನಿಧಿ ಸ್ಥಾಪನೆಯ ಖಾಸಗಿ ಮಸೂದೆಯನ್ನು ಪರಿಗಣಿಸುವಂತೆ ಸಂಸತ್ತಿಗೆ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರು ಶಿಫಾರಸು ಮಾಡಿದ್ದಾರೆ.

ಒಣಭೂಮಿ, ಬಂಜರು ಮತ್ತು ಬರ ಪೀಡಿತ ಪ್ರದೇಶಗಳ ರೈತರ ಕಲ್ಯಾಣ ಉದ್ದೇಶದ ಖಾಸಗಿ ಮಸೂದೆ ಇದಾಗಿದೆ. 2014ರ ಡಿಸೆಂಬರ್‌ನಲ್ಲಿ ರಾಜ್ಯಸಭೆಯಲ್ಲಿ ಕಾಂಗ್ರೆಸ್ ಮುಖಂಡ ಅಹಮದ್ ಪಟೇಲ್ ಅವರು ಈ ಮಸೂದೆ ಮಂಡಿಸಿದ್ದರು.

ಈ ಮಸೂದೆ ಕಾಯ್ದೆಯಾಗಿ ರೂಪುಗೊಂಡು ಜಾರಿಯಾದರೆ, ಇದಕ್ಕೆ ದೇಶದ ಸಂಚಿತ ನಿಧಿಯಿಂದ ಹಣವನ್ನು ವೆಚ್ಚ ಮಾಡಬೇಕಾಗುತ್ತದೆ.ನಿಯಮಗಳ ಪ್ರಕಾರ, ಸಂಚಿತ ನಿಧಿಯಿಂದ ವೆಚ್ಚ ಬೇಡುವ ಮಸೂದೆಗೆ ಸ್ವಯಂ ಅನುಮೋದನೆ ನೀಡುವ ಅಧಿಕಾರ ಸಂಸತ್ತಿಗಿಲ್ಲ. ಅದಕ್ಕೆ ರಾಷ್ಟ್ರಪತಿಗಳ ಶಿಫಾರಸು ಬೇಕಾಗುತ್ತದೆ.

‘ಆವರ್ತ ವೆಚ್ಚವಾಗಿ ವಾರ್ಷಿಕ ₹20 ಸಾವಿರ ಕೋಟಿ ಹಾಗೂ ಆಡಳಿತಾತ್ಮಕ ವೆಚ್ಚವಾಗಿ ₹5 ಸಾವಿರ ಕೋಟಿ ಬೇಕಾಗಬಹುದು ಎಂದು ಅಂದಾಜಿಸಲಾಗಿದೆ’ ಎಂದು ಮಸೂದೆಯ ಹಣಕಾಸು ನಿಯಮಾವಳಿಯಲ್ಲಿ ಹೇಳಲಾಗಿದೆ.

ಈ ಮಸೂದೆ ಜಾರಿಗೆ ರಾಷ್ಟ್ರಪತಿಗಳು ಸಂಸತ್ತಿಗೆ ಶಿಫಾರಸು ಮಾಡಿರುವ ಸಂಗತಿಯನ್ನು ಕೃಷಿ ಸಚಿವ ರಾಧಾಮೋಹನ್ ಸಿಂಗ್ ಅವರು ರಾಜ್ಯಸಭಾ ಪ್ರಧಾನ ಕಾರ್ಯದರ್ಶಿಗೆ ಪತ್ರದ ಮೂಲಕ ತಿಳಿಸಿದ್ದಾರೆ.

ಅತಿವೃಷ್ಟಿ ಹಾಗೂ ಅನಾವೃಷ್ಟಿಯ ಸನ್ನಿವೇಶಗಳ ನಿರ್ವಹಣೆಯಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಈ ಮಸೂದೆಯು ಜಂಟಿ ಹೊಣೆಗಾರಿಕೆ ಕಲ್ಪಿಸಲಿದೆ.

ಮಸೂದೆಯ 6ನೇ ಕಲಮು, ಸಂಬಂಧಿತ ರಾಜ್ಯಗಳಿಗೆ ಅಗತ್ಯ ನೆರವು ನಿಧಿ ನೀಡುವುದನ್ನು ಕೇಂದ್ರಕ್ಕೆ ಕಡ್ಡಾಯಗೊಳಿಸಿದರೆ, 5ನೇ ಕಲಮು ಕೆಲವು ನಿಗದಿತ ಕಲ್ಯಾಣ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು ರಾಜ್ಯಗಳಿಗೆ ಕಡ್ಡಾಯ ಮಾಡುತ್ತದೆ.

Write A Comment