ರಾಷ್ಟ್ರೀಯ

ನಾನು ತಪ್ಪು ಮಾಡಿದ್ದರೆ ನನ್ನ ಕಾಲು ಕಟ್ ಮಾಡಿ: ಶಕ್ತಿಮಾನ್ ಸಾವಿನ ಕುರಿತು ಪ್ರತಿಕ್ರಿಯಿಸಿದ ಬಿಜೆಪಿ ಶಾಸಕ ಗಣೇಶ್ ಜೋಶಿ

Pinterest LinkedIn Tumblr

shaktiman-horse-after

ಡೆಹ್ರಾಡೂನ್: ಬಿಜೆಪಿ ಪ್ರತಿಭಟನೆ ವೇಳೆ ತೀವ್ರವಾಗಿ ಗಾಯಗೊಂಡು ಕಾಲು ಮುರಿದುಕೊಂಡಿದ್ದ ಉತ್ತರಾಖಂಡ್ ಪೊಲೀಸ್ ಕುದುರೆ ಶಕ್ತಿಮಾನ್ ಬುಧವಾರ ಸಂಜೆ ಸಾವನ್ನಪ್ಪಿದ್ದು, ಸಾವಿಗೆ ಕಾರಣವಾದ ಬಿಜೆಪಿ ಶಾಸಕ ಗಣೇಶ್ ಜೋಶಿ ಅವರು, ನಾನು ತಪ್ಪು ಮಾಡಿದ್ದರೆ ನನ್ನ ಕಾಲು ಕತ್ತರಿಸಿ ಎಂದು ಗುರುವಾರ ಹೇಳಿದ್ದಾರೆ.

ಶಕ್ತಿಮಾನ್ ಸಾವನ್ನು ಪ್ರಾಣಿ ದಯಾ ಸಂಘದ ಕಾರ್ಯಕರ್ತರು ತೀವ್ರವಾಗಿ ಖಂಡಿಸಿದ್ದು, ಬಿಜೆಪಿ ನಾಯಕ ಗಣೇಶ್ ಜೋಶಿ ವಿರುದ್ಧ ಸರ್ಕಾರ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಆರೋಪಿ ಮುಸ್ಸೂರಿ ಬಿಜೆಪಿ ಶಾಸಕ ಗಣೇಶ್ ಜೋಷಿ, ಕುದುರೆ ಸಾವಿನ ಬಗ್ಗೆ ನನಗೂ ದುಃಖ ಇದೆ. ಆದರೆ ನಾನು ಯಾವುದೇ ತಪ್ಪು ಮಾಡಿಲ್ಲ. ಶೇ.0.1ರಷ್ಟು ನನ್ನ ತಪ್ಪಿಲ್ಲ. ಒಂದು ವೇಳೆ ನಾನು ತಪ್ಪಿತಸ್ಥ ಎಂದು ಸಾಬೀತಾದರೆ ನನ್ನ ಕಾಲು ಕತ್ತರಿಸಿ ಎಂದು ಹೇಳಿದ್ದಾರೆ.

ಕಳೆದ ಮಾರ್ಚ್ 14ರಂದು ಡೆಹ್ರಾಡೂನ್ ನಲ್ಲಿ ಅಂದಿನ ಕಾಂಗ್ರೆಸ್ ಮುಖ್ಯಮಂತ್ರಿ ಹರಿಶ್ ರಾವತ್ ವಿರುದ್ಧ ನಡೆದ ಬಿಜೆಪಿ ಪ್ರತಿಭಟನೆ ವೇಳೆ ಕಾಲು ಮುರಿದುಕೊಂಡಿದ್ದ ಶಕ್ತಿಮಾನ್‌ ಗೆ ಹತ್ತು ವೈದ್ಯರ ತಂಡ ನಿರಂತರ ಐದು ತಾಸುಗಳ ಶಸ್ತ್ರ ಚಿಕಿತ್ಸೆ ನಡೆಸಿ ಅದರ ಕಾಲು ಬಹುಮಟ್ಟಿಗೆ ಉಳಿಯುವಂತೆ ಮಾಡಲು ಯತ್ನಿಸಿ, ಅಂತಿಮವಾಗಿ ಕೃತಕ ಕಾಲು ಜೋಡಿಸಿದ್ದರು. ಆದರೂ ಸಂಪೂರ್ಣವಾಗಿ ಗುಣಮುಖವಾಗಲು ಅದಕ್ಕೆ ಸಾಧ್ಯವಾಗಿರಲಿಲ್ಲ,

ಪ್ರತಿಭಟನೆ ವೇಳೆ ಗಣೇಶ್ ಜೋಷಿ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ಶಕ್ತಿಮಾನ್ ಮೇಲೆ ತೀವ್ರವಾಗಿ ಹಲ್ಲೆ ನಡೆಸಿದ್ದರು. ಜೋಷಿಯವರ ಹೊಡೆತಕ್ಕೆ ಕುದುರೆಯ ಕಾಲು ಮುರಿದು ಹೋಗಿತ್ತು. ಈ ಸಂಬಂಧ ಅವರನ್ನು ಬಂಧಿಸಲಾಗಿತ್ತು. ಬಳಿಕ ಜಾಮೀನಿನ ಮೇಲೆ ಬಿಡುಗಡೆಯಾಗಿದ್ ಬಿಜೆಪಿ ಶಾಸಕನನ್ನು ಈಗ ಮತ್ತೆ ಬಂಧಿಸುವ ಸಾಧ್ಯತೆ ಇದೆ.

13 ವರ್ಷ ಪ್ರಾಯದ ಶಕ್ತಿಮಾನ್‌ ಕುದುರೆ ಕಳೆದ ಹತ್ತು ವರ್ಷಗಳಿಂದ ಸೇವೆಯಲ್ಲಿದ್ದು ಪೊಲೀಸರ ಹೆಮ್ಮೆ ಎನಿಸಿಕೊಂಡಿತ್ತು.

Write A Comment