ಮನೋರಂಜನೆ

ನಾವು ಮೋದಿಯನ್ನು ಬೆಂಬಲಿಸಬೇಕು: ಶಾರುಕ್ ಖಾನ್

Pinterest LinkedIn Tumblr

srk-modi

ನವದೆಹಲಿ: ಕಳೆದ ವರ್ಷದ ‘ಅಸಹಿಷ್ಣುತೆ’ ಹೇಳಿಕೆಯಿಂದಾಗಿ ಬಲಪಂಥೀಯ ನಾಯಕರಿಂದ ತೀವ್ರ ಟೀಕೆಗೆ ಒಳಗಾಗಿದ್ದ ಬಾಲಿವುಡ್ ನಟ ಶಾರುಕ್ ಖಾನ್, ಈಗ ತಮಗೆ ಯಾವುದೇ ರಾಜಕೀಯ ಪಕ್ಷದ ಜೊತೆಗೂ ತೊಂದರೆಯಿಲ್ಲ ಮತ್ತು ನರೇಂದ್ರ ಮೋದಿ ಅವರನ್ನು ದೇಶ ಬಹುಮತದಿಂದ ಪ್ರಧಾನಿಯಾಗಿ ಆಯ್ಕೆ ಮಾಡಿದೆ ನಾವು ಅವರನ್ನು ಬೆಂಬಲಿಸಬೇಕು ಎಂದಿದ್ದಾರೆ.

ಎರಡು ದಶಕಗಳಿಂದ ಬಾಲಿವುಡ್ ನಲ್ಲಿರುವ ಶಾರುಕ್ ಖಾನ್ ಕಳೆದ ನವೆಂಬರ್ ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ “ಧಾರ್ಮಿಕ ಅಸಹಿಷ್ಣುತೆಗೂ ಮತ್ತೊಂದು ಕೆಟ್ಟದಿಲ್ಲ ಮತ್ತು ಇದು ಭಾರತವನ್ನು ಕರಾಳ ದಿನಗಳತ್ತ ಕೊಂಡೊಯ್ಯುತ್ತಿದೆ” ಎಂದಿದ್ದರು.

ಈ ಹೇಳಿಕೆಯನ್ನು ವಿರೋಧಿಸಿದ್ದ ಬಿಜೆಪಿ ಪಕ್ಷದ ನಾಯಕರು ಇದು ಕಾಂಗ್ರೆಸ್ ಪಕ್ಷದ ಪರವಾಗಿ ನೀಡಿರುವ ಹೇಳಿಕೆ ಎಂದಿದ್ದರು.

ಎಲ್ಲ ರಾಜಕೀಯ ಪಕ್ಷಗಳು ತಮ್ಮ ಗೆಳೆಯರು ಎಂದು ಹೇಳಿಕೊಂಡಿರುವ ಶಾರುಕ್ “ನಾನು ಸ್ಪಷ್ಟವಾಗಿ ಹೇಳಬಯಸುವುದೇನೆಂದರೆ, ದೇಶ ಒಬ್ಬ ನಾಯಕನನ್ನು ಆಯ್ಕೆ ಮಾಡಿದ ಮೇಲೆ, ಅದು ಯಾರೇ ಆಗಿರಲಿ, ನರೇಂದ್ರ ಮೋದಿ ಅಂತಹ ದೊಡ್ಡ ವ್ಯಕ್ತಿಯೇ ಆಗಿರಲಿ ನಾವು ಮಾಡಬೇಕಿರುವುದು ಅವರಿಗೆ ಬೆಂಬಲ ನೀಡುವುದನ್ನು. ನಮ್ಮ ದೇಶ ಅವರನ್ನು ಬಹುಮತದಿಂದ ಆಯ್ಕೆ ಮಾಡಿದೆ, ಆದುದರಿಂದ ನಾವು ಅವರಿಗೆ ಬೆಂಬಲ ನೀಡಿ ದೇಶವನ್ನು ಮುಂದಕ್ಕೆ ತೆಗೆದುಕೊಂದು ಹೋಗಲು ಸಹಕರಿಸಬೇಕೆ ವಿನಾ ಋಣಾತ್ಮಕವಾಗಿರಬಾರದು” ಎಂದು ಇಂಡಿಯ ಟಿವಿಯ ‘ಆಪ್ ಕಿ ಅದಾಲತ್’ ಕಾರ್ಯಕ್ರಮದಲ್ಲಿ ತಿಳಿಸಿದ್ದಾರೆ.

“ಬಹುಶಃ ರಾಜಕೀಯದಲ್ಲಿ ಕೆಲವರು ಹೇಳಿಕೆಗಳನ್ನು(ಅಸಹಿಷ್ಣು) ನೀಡಿರಬಹುದು. ಆದರೆ ನಾವು ರಾಜಕಾರಣಿಗಳಲ್ಲ. ನಾವು ಮನರಂಜಿಸುವವರು. ಮಕ್ಕಳು ತಾವು ಯಶಸ್ವಿಯಾಗಲು ಎದುರು ನೋಡುವಂತಹವರು ನಾವು. ಆದುದರಿಂದ ದೇಶದ ಹಿತಾಸಕ್ತಿಗೆ ಧಕ್ಕೆ ಬರುವಂತಾದ್ದು ನಾವು ಏನೂ ಮಾತನಾಡಬಾರದು” ಎಂದು ‘ಚೆನ್ನೈ ಎಕ್ಸ್ಪ್ರೆಸ್’ ನಟ ಹೇಳಿದ್ದಾರೆ.

ತಾವು ನೀಡಿದ್ದ ‘ಅಸಹಿಷ್ಣುತೆ’ ಹೇಳಿಕೆಯನ್ನು ತಪ್ಪಾಗಿ ಗ್ರಹಿಸಲಾಗಿತ್ತು ಎಂದು ಕೂಡ ಶಾರುಕ್ ಖಾನ್ ಹೇಳಿದ್ದು “ಪ್ರಾದೇಶಿಕತೆ, ಧರ್ಮ, ಜಾತಿ, ಬಣ್ಣ, ಜನಾಂಗದ ಆಧಾರದ ಮೇಲೆ ಅಸಹಿಷ್ಣುಗಳಾಗಬೇಡಿ ಎಂದು ಯುವಕರಿಗೆ ಕರೆ ನೀಡಿದ್ದೆ. ನಮ್ಮ ತಂದೆ ಯುವ ಸ್ವಾತಂತ್ರ್ಯ ಹೋರಾಟಗಾರರಾಗಿದ್ದರು. ನಮ್ಮನ್ನು ದೇಶ ಚೆನ್ನಾಗಿ ನೋಡಿಕೊಂಡಿಲ್ಲ ಎಂದು ಚಿಂತಿಸಲು ಸಾಧ್ಯವೇ? ಈ ಶ್ರೇಷ್ಟ ದೇಶದಿಂದ ಎಲ್ಲವನ್ನು ಪಡೆದಿರುವ ನನ್ನಂತವರು ದೇಶದ ಬಗ್ಗೆ ದೂರುವವರಲ್ಲಿ ಕೊನೆಯವರು” ಎಂದಿದ್ದಾರೆ.

“ನನ್ನ ಕುಟುಂಬವೇ ಸಣ್ಣ ಭಾರತ. ನನ್ನ ಪತ್ನಿ ಹಿಂದು, ನಾನು ಹುಟ್ಟು ಮುಸ್ಲಿಂ. ಮತ್ತು ನನ್ನ ಮಕ್ಕಳು ಮೂರು ಧರ್ಮಗಳನ್ನು ಹಿಂಬಾಲಿಸುತ್ತಾರೆ” ಎಂದಿದ್ದಾರೆ.

Write A Comment