ಅಂತರಾಷ್ಟ್ರೀಯ

ಕೇರಳದ ವಿದ್ಯಾರ್ಥಿ ಈಗ ಪ್ರಪಂಚದಾದ್ಯಂತ ಸುದ್ದಿಯಲ್ಲಿದ್ದಾನೆ…! ವಿದ್ಯಾರ್ಥಿಯಿಂದ ಡೊಮೈನ್‌ನೇಮ್‌ ಖರೀದಿಸಿದ ಫೇಸ್‌ಬುಕ್‌

Pinterest LinkedIn Tumblr

AMALERN

ಕೊಚ್ಚಿ: ಕೇರಳದ ಎರ್ನಾಕುಳಂ ಜಿಲ್ಲೆಯ ಆಲುವಾ ಪಟ್ಟಣದ ಅಮಲ್‌ ಅಗಸ್ಟಿನ್‌ ಎಂಬ ಅಂತಿಮ ವರ್ಷದ ಎಲೆಕ್ಟ್ರಾನಿಕ್‌ ಎಂಜಿನಿಯರಿಂಗ್‌ ವಿದ್ಯಾರ್ಥಿ ಈಗ ಪ್ರಪಂಚದಾದ್ಯಂತ ಸುದ್ದಿಯಲ್ಲಿದ್ದಾನೆ. ಈತ ನೋಂದಣಿ ಮಾಡಿದ್ದ maxchanzuckerberg.org ಎಂಬ ಡೊಮೈನ್‌ ನೇಮ್‌ ಅನ್ನು ವಿಶ್ವಪ್ರಸಿದ್ಧ ಸಾಮಾಜಿಕ ಜಾಲ ತಾಣ ಫೇಸ್‌ಬುಕ್‌ ಖರೀದಿಸಿದೆ.

ವಿವಿಧ ಹೆಸರಿನಲ್ಲಿ ಡೊಮೈನ್‌ ನೇಮ್‌ ನೋಂದಣಿ ಮಾಡುವುದು ಅಮಲ್‌ ಹವ್ಯಾಸ. ಕಳೆದ ವರ್ಷ ಡಿಸೆಂಬರ್‌ನಲ್ಲಿ ಫೇಸ್‌ಬುಕ್‌ ಸ್ಥಾಪಕ ಮಾರ್ಕ್‌ ಜುಕರ್‌ಬರ್ಗ್‌ಗೆ ಮಗಳು ಹುಟ್ಟಿದ್ದಳು. ಮಗಳಿಗೆ ಮ್ಯಾಕ್ಸಿಂ ಚಾನ್‌ ಜುಕರ್‌ಬರ್ಗ್‌ ಎಂದು ಹೆಸರಿಡುವುದಾಗಿ ಪ್ರಕಟಿಸಿದ್ದೇ ತಡ, ಅಮಲ್‌ ಈ ಹೆಸರಿನಲ್ಲೊಂದು ಡೊಮೈನ್‌ ನೇಮ್ ನೋಂದಣಿ ಮಾಡಿದ್ದರು. ಆದರೆ, ತಾನು ಸೃಷ್ಟಿಸಿದ ಈ ಡೊಮೈನ್‌ ನೇಮ್‌ ಅನ್ನು ಮುಂದೊಂದು ದಿನ ಫೇಸ್‌ಬುಕ್‌ ಖರೀದಿಸಲಿದೆ ಎಂದು ಅಮಲ್‌ ಕನಸಿನಲ್ಲೂ ಊಹಿಸಿರಲಿಲ್ಲ. ಆದರೆ, ಅವರ ನಿರೀಕ್ಷೆ ಮೀರಿ, ಕಳೆದ ತಿಂಗಳು ಅವರಿಗೊಂದು ಇ–ಮೇಲ್‌ ಬಂತು.

ಇ–ಮೇಲ್‌ ಕಳುಹಿಸಿದ್ದು, ಡೊಮೈನ್‌ ನೇಮ್‌ಗಳನ್ನು ನೋಂದಣಿ ಮಾಡಿಕೊಳ್ಳುವ ಮತ್ತು ವೆಬ್‌ ಹೋಸ್ಟಿಂಗ್‌ ಕಂಪೆನಿ ಗೊ ಡ್ಯಾಡಿ ಡಾಟ್‌ ಕಾಂ. ನೀವು ನೋಂದಣಿ ಮಾಡಿರುವ maxchanzuckerberg.org ಡೊಮೈನ್‌ ನೇಮ್‌ ಮಾರಲು ಸಿದ್ಧರಿದ್ದೀರಾ? ಮಾರುವುದಾದರೆ ಎಷ್ಟು ಮೊತ್ತಕ್ಕೆ ಮಾರುವಿರಿ? ಇದನ್ನು ಖರೀದಿಸಲು ಐಕಾನಿಕ್‌ ಕ್ಯಾಪಿಟಲ್‌ ಎಂಬ ಸಂಸ್ಥೆ ಮುಂದೆ ಬಂದಿದೆ ಎಂದು ಕೇಳಲಾಗಿತ್ತು. ಅಮಲ್‌ ಹೆಚ್ಚೇನೂ ಯೋಚನೆ ಮಾಡದೆ, 700 ಡಾಲರ್‌ ಸಿಗುವುದಾದರೆ ಮಾರಲು ಸಿದ್ಧನಿದ್ದೇನೆ ಎಂದು ಉತ್ತರಿಸಿದ್ದರು.

ಅತ್ತ ಕಡೆಯಿಂದ ಇ–ಮೇಲ್‌ಗೆ ಪ್ರತ್ಯುತ್ತರ ಬಂದ ನಂತರವೇ, ಅಮಲ್‌ಗೆ ತಾನು ಡೊಮೈನ್‌ ನೇಮ್‌ ಮಾರಾಟ ಮಾಡುತ್ತಿರುವುದು ಫೇಸ್‌ಬುಕ್‌ ಎಂಬ ವಿಶ್ವಪ್ರಸಿದ್ಧ ಸಂಸ್ಥೆಗೆ ಎನ್ನುವ ಸತ್ಯ ಅರಿವಾಗಿದ್ದು. ಆದರೆ, ಅಷ್ಟರಲ್ಲಾಗಲೇ ಅವಕಾಶ ಕೈಮೀರಿ ಹೋಗಿತ್ತು. ಅವರು ಕೇವಲ 700 ಡಾಲರ್‌ಗಳಿಗೆ (ಅಂದಾಜು ₹46,655 ) ಮಾರಾಟ ಮಾಡಲು ಒಪ್ಪಿಕೊಂಡು ಬಿಟ್ಟಿದ್ದರು.

ಜುಕರ್‌ಬರ್ಗ್‌ ಅವರ ಹಣಕಾಸು ವ್ಯವಹಾರಗಳನ್ನು ಐಕಾನಿಕ್‌ ಕ್ಯಾಪಿಟಲ್‌ ನೋಡಿಕೊಳ್ಳುತ್ತದೆ. ಈ ಸಂಸ್ಥೆಯ ವ್ಯವಸ್ಥಾಪಕಿ ಸಾರಾ ಚಾಪೆಲ್‌ ಅವರು ಅಮಲ್‌ಗೆ ಇ–ಮೇಲ್‌ ಕಳುಹಿಸಿ ಈ ವ್ಯವಹಾರ ಅಂತಿಮಗೊಳಿಸಿದ್ದರು.

ಇನ್ನಷ್ಟು ಹೆಚ್ಚಿನ ಮೊತ್ತಕ್ಕೆ ಮಾರಬಹುದಿತ್ತು. ಆದರೆ, ಬೇಸರವೇನಿಲ್ಲ. ಫೇಸ್‌ಬುಕ್‌ನಂತಹ ದೈತ್ಯ ಕಂಪೆನಿ, ನಾನು ನೋಂದಣಿ ಮಾಡಿದ್ದ ಡೊಮೈನ್‌ ನೇಮ್‌ ಖರೀದಿಸಿದೆ ಎನ್ನುವುದೇ ಅತ್ಯಂತ ರೋಮಾಂಚನದ ಸಂಗತಿ ಎನ್ನುತ್ತಾನೆ ಅಮಲ್‌.

ಅಮಲ್‌ ಅವರು ಅಂಗಮಾಲಿ ನಿವಾಸಿ, ಚೆರಾಯಿ ಬೀಚ್‌ ರೆಸ್ಟೋರೆಂಟ್‌ನ ವ್ಯವಸ್ಥಾಪಕ ಅಗಸ್ಟಿನ್‌ ಮತ್ತು ಶಿಕ್ಷಕಿ ಟ್ರೀಸಾ ಅವರ ಮಗ.

Write A Comment