ರಾಷ್ಟ್ರೀಯ

ಏರುತ್ತಲೇ ಇದೆ ಬಿಸಿಲಿನ ತಾಪ

Pinterest LinkedIn Tumblr

12-BAN-10ದೇಶದೆಲ್ಲೆಡೆ ಬಿಸಿಲ ಝಳ ಜೋರಾಗಿದೆ. ಸೂರ್ಯ ನೆತ್ತಿ ಸುಡುತ್ತಿದ್ದಾನೆ. ದೇಶದ ಬಹುತೇಕ ಕಡೆಗಳಲ್ಲಿ ತಾಪಮಾನ ಸಾಮಾನ್ಯ ಮಟ್ಟಕ್ಕಿಂತ ಏರಿಕೆಯಾಗಿದೆ. 140 ವರ್ಷಗಳ ಇತಿಹಾಸದಲ್ಲಿಯೇ ಹವಾಮಾನ ಇಲಾಖೆ ಮೊದಲ ಬಾರಿಗೆ ಏಪ್ರಿಲ್‌ನಿಂದ ಮೇ ತಿಂಗಳವರೆಗೆ ಬಿಸಿಲ ಮಾರುತದಿಂದ ಎಚ್ಚರಿಕೆ ವಹಿಸುವಂತೆ ಸಲಹೆ ನೀಡಿದೆ. ಆಂಧ್ರ ಪ್ರದೇಶ ಮತ್ತು ತೆಲಂಗಾಣದಲ್ಲಿ ಬಿಸಿಲ ಮಾರುತ ಈಗಾಗಲೇ 100ಕ್ಕೂ ಹೆಚ್ಚು ಜನರನ್ನು ಬಲಿ ಪಡೆದಿದೆ. ಈ ಹಿನ್ನೆಲೆಯಲ್ಲಿ ದೇಶದಲ್ಲಿ ಬಿಸಿಲ ಮಾರುತ ಯಾವ ರೀತಿ ವ್ಯಾಪಿಸುತ್ತಿದೆ ಎಂಬ ಚಿತ್ರಣ ಇಲ್ಲಿದೆ.

ದೇಶದಲ್ಲಿ ಏರುತ್ತಲೇ ಇದೆ ತಾಪಮಾನ
ದಕ್ಷಿಣ ಭಾರತದ ರಾಜ್ಯಗಳಾದ ಆಂಧ್ರ ಪ್ರದೇಶ, ತೆಲಂಗಾಣ ಮತ್ತು ಕರ್ನಾಟಕದಲ್ಲಿ ಬಿಸಿಲಿನ ಕಾವು ಜೋರಾಗಿದೆ. ಏಪ್ರಿಲ್‌
ತಿಂಗಳ ಮಳೆ ವಿಳಂಬವಾಗಿದ್ದರಿಂದ ತಾಪಮಾನ ಗರಿಷ್ಠ 45 ಡಿಗ್ರಿ ಸೆಲ್ಸಿಯಸ್‌ ಮುಟ್ಟಿದೆ. ದೇಶದ ನಾನಾ ಭಾಗಗಳಲ್ಲಿ ತಾಪಮಾನ ಸಾಮಾನ್ಯಕ್ಕಿಂತಲೂ 1ರಿಂದ 5 ಡಿಗ್ರಿ ಸೆಲ್ಸಿಯಸ್‌ ನಷ್ಟು ಏರಿಕೆಯಾಗಿದೆ. ಕಳೆದ ವರ್ಷ ಅತಿ ಹೆಚ್ಚು ತಾಪಮಾನ ದಾಖಲಾದ ವರ್ಷ ಎನಿಸಿಕೊಂಡಿತ್ತು. ಆದರೆ, ಈ ವರ್ಷದ ಏಪ್ರಿಲ್‌ ನಲ್ಲಿಯೇ ಕಳೆದ ವರ್ಷಕ್ಕಿಂತ ಹೆಚ್ಚಿನ ಬಿಸಿಲು ದಾಖಲಾಗಿದೆ.

ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿಯೂ ತಾಪಮಾನ 42 ಡಿಗ್ರಿ ಸೆ. ಮುಟ್ಟಿದೆ. ಕಳೆದ ಎರಡು ವರ್ಷಗಳಿಂದ ಮಳೆ ಕೊರತೆ,
ಎಲ್‌ನಿ ನೋ ಪ್ರಭಾವ ಮತ್ತು ಜಾಗತಿಕ ತಾಪಮಾನ ಏರಿಕೆ ಉಷ್ಣತೆ ಏರಿಕೆಯಾಗಲು ಕಾರಣ ಎಂದು ಹವಾಮಾನ ತಜ್ಞರು
ಅಭಿಪ್ರಾಯಪಟ್ಟಿದ್ದಾರೆ. ದಕ್ಷಿಣ ಭಾರತ ಅಷ್ಟೇ ಅಲ್ಲ ಉತ್ತರ ಭಾರತದಲ್ಲಿಯೂ ಬಿಸಿಲ ತಾಪ ಹೆಚ್ಚಾಗ ತೊಡಗಿದೆ. ಉತ್ತರ
ಪ್ರದೇಶ, ಬಿಹಾರ, ಜಾರ್ಖಂಡ್‌ನ‌ ಕೆಲ ಭಾಗಗಳಲ್ಲಿ ತಾಪಮಾನ 43 ಡಿಗ್ರಿ ಸೆಲ್ಸಿಯಸ್‌ ದಾಖಲಾಗಿದೆ.

ಆಂಧ್ರ, ತೆಲಂಗಾಣದಲ್ಲಿ 100ಕ್ಕೂ ಸಾವು ತೆಲಂಗಾಣ ಮತ್ತು ಆಂಧ್ರ ಪ್ರದೇಶದ ರಾಯಲ ಸೀಮೆ ಪ್ರದೇಶ ವಿಪರೀತ ಬಿಸಿಲ ಮಾರುತಕ್ಕೆ ತುತ್ತಾಗಿದೆ. ಇದುವರೆಗೆ 111 ಮಂದಿ ಬಿಸಿಲಿಗೆ ಪ್ರಾಣ ಕಳೆದುಕೊಂಡಿದ್ದಾರೆ. ತೆಲಂಗಾಣದಲ್ಲಿ 66 ಮತ್ತು
ಆಂಧ್ರದಲ್ಲಿ 45 ಮಂದಿ ಸಾವನ್ನಪ್ಪಿದ್ದಾರೆ. ಕಳೆದ ಒಂದು ವಾರದ ಅವಧಿಯಲ್ಲಿ ಈ ಸಾವುಗಳು ಉಂಟಾಗಿವೆ. ಕಳೆದ ವರ್ಷವೂ ಈ ಎರಡು ರಾಜ್ಯಗಳು ವಿಪರೀತ ಬಿಸಿಲ ಮಾರುತಕ್ಕೆ ತುತ್ತಾಗಿದ್ದವು. ಕಳೆದ ವರ್ಷ ಆಂಧ್ರ ಮತ್ತು ತೆಲಂಗಾಣದಲ್ಲಿ ಬಿಸಿಲಿಗೆ 2000ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದರು.

ಇದೊಂದು ನೈಸರ್ಗಿಕ ವಿಕೋಪ ಅಲ್ಲ
ಬಿಸಿಲ ಮಾರುತಗಳು ದೇಶದಲ್ಲಿ ಜನರ ಸಾವಿಗೆ ಕಾರಣವಾಗುತ್ತಿರುವ ಮೂರನೇ ಅತಿದೊಡ್ಡ ಸಮಸ್ಯೆ ಎನಿಸಿಕೊಂಡಿವೆ. ಆದಾಗ್ಯೂ ಸರ್ಕಾರ ಅದನ್ನು ನೈಸರ್ಗಿಕ ವಿಕೋಪ ಎಂದು ಪರಿಗಣಿಸಿಲ್ಲ. ಬಿಸಿಲ ಮಾರುತವನ್ನು ರಾಷ್ಟ್ರೀಯ ದುರಂತಗಳ ಸಾಲಿಗೆ ಸೇರಿಸಿಲ್ಲ. ರಾಷ್ಟ್ರೀಯ ವಿಪತ್ತು ನಿರ್ವಹಣ ಕಾಯ್ದೆ- 2005 ಮತ್ತು ವಿಪತ್ತು ನಿರ್ವಹಣೆ ಕುರಿತ ರಾಷ್ಟ್ರೀಯ ಯೋಜನೆಯಲ್ಲಿ ಬಿಸಿಲ ಮಾರುತವನ್ನು ಸೇರಿಸಲಾಗಿಲ್ಲ. ಹೀಗಾಗಿ ಸರ್ಕಾರ ಹಣಕಾಸು ಮತ್ತು ಮೂಲ ಸೌಕರ್ಯ ನೆರವುಗಳನ್ನು ಒದಗಿಸುತ್ತಿಲ್ಲ. ರಾಷ್ಟ್ರೀಯ ಅಪರಾಧ ದಾಖಲೆ ವಿಭಾಗದ ಅಂಕಿ ಅಂಶಗಳ ಪ್ರಕಾರ, 2000 ದಿಂದ 2014ರ ಅವಧಿಯಲ್ಲಿ 16,000 ಜನರು ಬಿಸಿಲಿನಿಂದ ಸಾವನ್ನಪ್ಪಿದ್ದಾರೆ. 2015 ಒಂದಲ್ಲೇ ದೇಶದಲ್ಲಿ 2,241 ಮಂದಿ ಬಿಸಿಲಿಗೆ ಪ್ರಾಣ ತೆತ್ತಿದ್ದಾರೆ. ಆದರೆ, ಬಿಸಿಲ ಮಾರುತದಿಂದಲೇ ಜನರು ಸಾವನ್ನಪ್ಪಿದ್ದಾರೆ ಎಂದು ನಿಖರವಾಗಿ ಹೇಳುವುದು ಕಷ್ಟ. ಬಿಸಿಲಿನಿಂದ ಉಂಟಾಗುವ ರೋಗ ರುಜಿನಗಳು ಜನರ ಸಾವಿಗೆ ಪರೋಕ್ಷವಾಗಿ ಕಾರಣವಾಗುತ್ತಿವೆ. ಆದರೆ, ಹೀಟ್‌ ಸ್ಟ್ರೋಕ್‌ ಮತ್ತು ನಿರ್ಜಲೀಕರಣದಿಂದ ಸಾವನ್ನಪ್ಪಿದರೆ ಮಾತ್ರ ಬಿಸಿಲಿನಿಂದಾದ ಸಾವು ಎಂದು ಸರ್ಕಾರ ಪರಿಗಣಿಸುತ್ತದೆ.

2000ದಿಂದ 2014ರ ಅವಧಿಯಲ್ಲಿ ಜನರ ಸಾವಿಗೆ ಕಾರಣವಾದ ಸಂಗತಿಗಳು
ಕಾರಣ ಸಾವು
ಮಿಂಚು 32,743
ಭೂಕಂಪ 14,593
ಬಿಸಿಲ ಮಾರುತ 13,548
ಪ್ರವಾಹ 12, 258
ಶೀತ ಮಾರುತ 11,695
ಭೂ ಕುಸಿತ 5,056
ಚಂಡ ಮಾರುತ 4,207
ಹಿಮ ಕುಸಿತ 772

ಬಿಸಿಲಿನಿಂದ ತತ್ತರಿಸುತ್ತಿರುವ ನಗರಗಳು
ನಗರಗಳು ಸಾಮಾನ್ಯ ಈಗಿನ ಉಷ್ಣಾಂಶ
ಭೋಪಾಲ್‌ 36 ಡಿಗ್ರಿ ಸೆ. 38 ಡಿಗ್ರಿ ಸೆ.
ದೆಹಲಿ 36 ಡಿಗ್ರಿ ಸೆ. 38.3 ಡಿಗ್ರಿ ಸೆ.
ರಾಂಚಿ 35 ಡಿಗ್ರಿ ಸೆ. 41.5 ಡಿಗ್ರಿ ಸೆ.
ಹೈದಾರಾಬಾದ್‌ 38 ಡಿಗ್ರಿ ಸೆ. 40.3 ಡಿಗ್ರಿ ಸೆ.
ಭುವನೇಶ್ವರ್‌ 38 ಡಿಗ್ರಿ ಸೆ. 41 ಡಿಗ್ರಿ ಸೆ.
ಬೆಂಗಳೂರು 36 ಡಿಗ್ರಿ ಸೆ. 39 ಡಿಗ್ರಿ ಸೆ

ಬಿಸಿಲ ಮಾರುತದಿಂದ ಉಂಟಾದ ಸಾವು
122 ಈ ವರ್ಷ ಬಿಸಿಲಿನಿಂದ ಸಾವನ್ನಪ್ಪಿದವರ ಸಂಖ್ಯೆ
66 ತೆಲಂಗಾಣದಲ್ಲಿ ಸಾವನ್ನಪ್ಪಿದವರ ಸಂಖ್ಯೆ
45 ಆಂಧ್ರ ಪ್ರದೇಶದಲ್ಲಿ ಸಾವನ್ನಪ್ಪಿದವರ ಸಂಖ್ಯೆ
11 ಒಡಿಶಾದಲ್ಲಿ ಸಾವನ್ನಪ್ಪಿದವರ ಸಂಖೆ

2000-2014ರಲ್ಲಿ ಬಿಸಿಲಿಗೆ ಸಂಭವಿಸಿದ ಸಾವು
2277 ಆಂಧ್ರ ಪ್ರದೇಶ ತೆಲಂಗಾಣ
5607 ಪಂಜಾಬ್‌, ಹರ್ಯಾಣ, ಉತ್ತರ ಪ್ರದೇಶ, ರಾಜಸ್ಥಾನ, ಮಧ್ಯ ಪ್ರದೇಶ, ಗುಜರಾತ್‌ ಮತ್ತು ಮಹಾರಾಷ್ಟ್ರ
3931 ಬಿಹಾರ್‌, ಜಾರ್ಖಂಡ್‌, ಪಶ್ಚಿಮ ಬಂಗಾಳ ಮತ್ತು ಒಡಿಶಾ

ಮುಂದುವರಿಯಲಿದೆ ಉರಿ ಬಿಸಿಲು
ಬಿಸಿಲ ಮಾರುತ ಸದ್ಯಕ್ಕೆ ತಣ್ಣಗಾಗುವ ಯಾವುದೇ ಲಕ್ಷಣಗಳಿಲ್ಲ. ಬದಲಾಗಿ ಮುಂದಿನ ದಿನಗಳಲ್ಲಿ ಉಷ್ಣಾಂಶ ಇನ್ನಷ್ಟು ಜಾಸ್ತಿಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಬಿಸಿಲು ಹೀಗೆಯೇ ಮುಂದುವರಿದಿದ್ದೇ ಆದಲ್ಲಿ ಸಾವಿನ ಸಂಖ್ಯೆಯೂ ಇನ್ನಷ್ಟು ಹೆಚ್ಚುವ ಸಾಧ್ಯತೆ ಇದೆ.
-ಉದಯವಾಣಿ

Write A Comment