ರಾಷ್ಟ್ರೀಯ

‘ಭಾರಿ ಸುಸ್ತಿದಾರರ’ ಪಟ್ಟಿ ಬಹಿರಂಗಕ್ಕೆ ಸುಪ್ರೀಂ ಇಂಗಿತ

Pinterest LinkedIn Tumblr

SUPREME_COURTನವದೆಹಲಿ (ಪಿಟಿಐ): ₹500 ಕೋಟಿಗೂ ಹೆಚ್ಚಿನ ಮೊತ್ತದ ಸಾಲ ಮರು ಪಾವತಿ ಮಾಡದ ವ್ಯಕ್ತಿಗಳ, ಉದ್ದಿಮೆ ಸಂಸ್ಥೆಗಳ ಹೆಸರನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಲು ಸುಪ್ರೀಂಕೋರ್ಟ್‌ ಆಸಕ್ತಿ ತೋರಿದೆ. ಆದರೆ, ಈ ನಡೆಗೆ ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ವಿರೋಧ ವ್ಯಕ್ತಪಡಿಸಿದೆ.
ಸುಸ್ತಿದಾರರ ಪಟ್ಟಿ ಒಳಗೊಂಡ ಮುಚ್ಚಿದ ಲಕೋಟೆಯನ್ನು ‘ಆರ್‌ಬಿಐ’ ಈಗಾಗಲೇ ಸುಪ್ರೀಂಕೋರ್ಟ್‌ಗೆ ಸಲ್ಲಿಸಿದೆ. ಮುಖ್ಯ ನ್ಯಾಯಮೂರ್ತಿ ಟಿ.ಎಸ್‌ ಠಾಕೂರ್‌ ಮತ್ತು ನ್ಯಾಯಮೂರ್ತಿ ಆರ್‌. ಭಾನುಮತಿ ಅವರನ್ನೊಳಗೊಂಡ ಪೀಠ ಈ ಪಟ್ಟಿಯಲ್ಲಿರುವ ವಿವರವನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಲು ಆಸಕ್ತಿ ತೋರಿಸಿದೆ.
ಆದರೆ, ‘ಸುಪ್ರೀಂಕೋರ್ಟ್‌ಗೆ ಸಲ್ಲಿಸಿರುವ ಅಂಕಿ ಅಂಶಗಳು ಗೋಪ್ಯವಾಗಿವೆ. ಇದನ್ನು ಬಹಿರಂಗಪಡಿಸಿದರೆ, ಅದರದೇ ಪರಿಣಾಮ ಎದುರಿಸಬೇಕಾಗುತ್ತದೆ’ ಎಂದು ಆರ್‌ಬಿಐ ಹೇಳಿದೆ.
ಬ್ಯಾಂಕುಗಳ ವಸೂಲಾಗದ ಸಾಲದ ಪ್ರಮಾಣದ (ಎನ್‌ಪಿಎ) ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿರುವ ಪೀಠ, ‘ಆರ್‌ಬಿಐ’ ಸಲ್ಲಿಸಿರುವ ಪಟ್ಟಿ ಪರಿಶೀಲಿಸಿದ ನಂತರವೇ ಎಷ್ಟು ಬೃಹತ್‌ ಮೊತ್ತ ಸಾಲ ಬಾಕಿ ಇದೆ ಎನ್ನುವುದು ತಿಳಿಯಲಿದೆ ಎಂದು ಹೇಳಿದೆ.
ಕಾರ್ಪೊರೇಟ್‌ ಸಾಲ ಮರು ಹೊಂದಾಣಿಕೆ ಯೋಜನೆಯಡಿ, ಎಷ್ಟು ಕಂಪೆನಿಗಳ ಸಾಲ ಮರು ಹೊಂದಿಸಲಾಗಿದೆ ಎನ್ನುವುದರ ವಿವರವನ್ನು 6 ವಾರದೊಳಗೆ ಸಲ್ಲಿಸುವಂತೆ ಸುಪ್ರೀಂಕೋರ್ಟ್‌ ಆರ್‌ಬಿಐಗೆ ಸೂಚನೆ ನೀಡಿದೆ.
ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳು ಮಾರ್ಗದರ್ಶಿ ಸೂತ್ರಗಳನ್ನು ಸಮರ್ಪಕವಾಗಿ ಪಾಲಿಸದೆ ದೊಡ್ಡ ಮೊತ್ತದ ಸಾಲ ಮಂಜೂರು ಮಾಡಿರುವ ಬಗ್ಗೆ ಮತ್ತು ಸಾಲ ವಸೂಲಾತಿಗೆ ಇರುವ ವ್ಯವಸ್ಥೆ ಬಗ್ಗೆಯೂ ಪೀಠವು ಮಾಹಿತಿ ಕೇಳಿದೆ.

Write A Comment