ರಾಷ್ಟ್ರೀಯ

ಪಾಕ್ ಉಗ್ರರ ದಾಳಿ ತಡೆಗೆ ಗಡಿಯಲ್ಲಿ 2,900 ಕಿ.ಮೀ 5 ಪದರ ಯೋಜನೆ ಜಾರಿಗೆ ಕೇಂದ್ರ ಅಸ್ತು

Pinterest LinkedIn Tumblr

pakನವದೆಹಲಿ,ಏ.11- ಪಠಾಣ್‌ಕೋಟ್ ವಾಯುನೆಲೆ ಮೇಲಿನ ದಾಳಿಯಂತಹ ಘಟನೆಗಳ ಪುನಾವರ್ತನೆಯಾಗದಂತೆ ಮಾಡಲು ಪಣತೊಟ್ಟಿರುವ ಕೇಂದ್ರ ಸರ್ಕಾರ, ಒಳನುಸುಳುವಿಕೆಯನ್ನು ಪರಿಣಾಮಕಾರಿಯಾಗಿ ತಡೆಯುವ ನಿಟ್ಟಿನಲ್ಲಿ ಪಾಕಿಸ್ತಾನಕ್ಕೆ ಹೊಂದಿಕೊಂಡಿರುವ ಪಶ್ಚಿಮದ 2,900 ಕಿ.ಮೀ ಗಡಿಯಲ್ಲಿ ಐದು ಪದರದ ವಿಸ್ತೃತ ಯೋಜನೆ ಅನುಷ್ಠಾನಕ್ಕೆ ಅಸ್ತು ಎಂದಿದೆ. ಪಠಾಣ್‌ಕೋಟ್ ದಾಳಿ, ಮಾದಕ ವಸ್ತು, ಕರೆನ್ಸಿ , ಕಳ್ಳಸಾಗಣೆ ಸೇರಿದಂತೆ ಪಾಕ್ ಕಡೆಯಿಂದ ಆಗಬಹುದಾದ ಕಿರುಕುಳ ಮತ್ತು ಅಪಾಯಗಳನ್ನು ಸಂಪೂರ್ಣವಾಗಿ ತಡೆಗಟ್ಟವುದು ಈ ಯೋಜನೆಯ ಉದ್ದೇಶವಾಗಿದೆ.

ಈ ಯೋಜನೆಯ 2,900 ಕಿ.ಮೀ ಗಡಿಯಲ್ಲಿ ಸಿಸಿಟಿವಿ ಕ್ಯಾಮಾರಗಳ ಅಳವಡಿಕೆ, ಮೇಲಕ್ಕೆ ಬಿಸಿ ಗಾಳಿ ಚಿಮ್ಮುವ ಮತ್ತು ರಾತ್ರಿಯಲ್ಲೂ ದೂರಕ್ಕೆ ವೀಕ್ಷಿಸಬಹುದಾದ ಸಾಧನಗಳ ಅಳವಡಿಕೆ, ಯುದ್ದ ಭೂಮಿಯಂತೆ ತೀವ್ರ ನಿಗಾ ವಹಿಸಿ ಕಣ್ಗಾವಲು ಕಾಯುವ ಕಾಡಾರ್ ವ್ಯವಸ್ಥೆ , ಸುರಂಗದಲ್ಲಿ ನಿಯಂತ್ರಣಾ ವ್ಯವಸ್ಥೆ ಹಾಗೂ ಲೇಸರ್ ಪಹರೆಗಳನ್ನು 5 ಪದರಗಳಲ್ಲಿ ಅಳವಡಿಸಲಾಗುವುದು. ಈ ಎಲ್ಲಾ ಭದ್ರತೆಗಳನ್ನು ದಾಟಿಕೊಂಡು ಭಾರತದ ಗಡಿಯೊಳಕ್ಕೆ ನುಸುಳುವುದು ಉಗ್ರರಿಗೆ ಸಾಧ್ಯವಾಗುವುದಿಲ್ಲ. ಒಂದು ವೇಳೆ ಯಾರಾದರೂ ಒಳನುಸುಳಿದರೆ ಕೂಡಲೇ ಕಂಟ್ರೋಲ್ ರೂಮ್‌ಗೆ ಸಂದೇಶ ಬರುತ್ತದೆ.

ಈ ವ್ಯವಸ್ಥೆ ಜಮ್ಮು ಕಾಶ್ಮೀರದಿಂದ ಗುಜರಾತ್‌ವರೆಗಿನ ನದಿಪಾತ್ರ ಹಾಗೂ ಪರ್ವತ ಪ್ರಾಂತ್ಯಗಳನ್ನು ಒಳಗೊಂಡಿರುತ್ತದೆ. ಸಾಮಾನ್ಯವಾಗಿ ನುಸುಳುಕೋರರು ಈ ಭಾಗದಿಂದಲೇ ಭಾರತವನ್ನು ಪ್ರವೇಶಿಸುತ್ತಾರೆ. ನಿರಂತರ ಗಡಿ ಪಹರೆ ವ್ಯವಸ್ಥೆ ಅಂದರೆ 365 ದಿನಗಳೂ, ದಿನದ 24 ತಾಸು ಗಡಿಯಲ್ಲಿ ಕಾವಲು ಕಾಯುವ ಈ ವ್ಯವಸ್ಥೆಯನ್ನು ಅನುಷ್ಠಾನಗೊಳಿಸಲು ಕೇಂದ್ರ ಹಸಿರು ನಿಶಾನೆ ತೋರಿಸಿದ್ದು , ಇದಕ್ಕೆ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಬಳಸಿಕೊಳ್ಳಲಾಗುವುದು. ಈ ಯೋಜನೆ ಪ್ರಕಾರ ಗಡಿಕಾವಲು ಪಡೆ ಸೈನಿಕರ ಬಳಿ ಬಾಂಬ್‌ಗಳೂ ಇರುತ್ತವೆ.

ಸ್ವಾತಂತ್ರ್ಯ ನಂತರದಲ್ಲಿ ಭಾರತ ಇದೇ ಮೊದಲ ಬಾರಿಗೆ ಪಶ್ಚಿಮದ ಗಡಿಯನ್ನು ಸಂಪೂರ್ಣವಾಗಿ ಮುಚ್ಚಲಿವೆ. ಪಂಜಾಬ್ ಮತ್ತು ಜಮ್ಮುವಿನಲ್ಲಿ ಪ್ರಮುಖವಾಗಿ ಕೇಂದ್ರಗಳಿರುತ್ತವೆ. ಈ ಕೇಂದ್ರಗಳ ಮೂಲಕ ಗಡಿಭಾಗವನ್ನು ಸಂಪೂರ್ಣವಾಗಿ ನಿಯಂತ್ರಿಸಲಾಗುವುದು ಎಂದು ರಕ್ಷಣಾ ಸಚಿವಾಲಯದ ಮೂಲಗಳು ತಿಳಿಸಿವೆ.

Write A Comment