ಮನೋರಂಜನೆ

ಪಾಕ್ ಕ್ರಿಕೆಟ್ ತಂಡದ ಕೋಚ್ ಸ್ಥಾನಕ್ಕೆ ವಿನೋದ್ ಕಾಂಬ್ಲಿ ಒಲವು

Pinterest LinkedIn Tumblr

vinod

ನವದೆಹಲಿ: ಏಷ್ಯಾ ಕಪ್ ಮತ್ತು ವಿಶ್ವ ಟಿ20 ಪಂದ್ಯಗಳಲ್ಲಿ ನಿರಾಸೆ ಅನುಭವಿಸಿರುವ ಪಾಕಿಸ್ತಾನ ಕ್ರಿಕೆಟ್ ತಂಡವೀಗ ಹೊಸ ಕೋಚ್‌ಗಾಗಿ ಹುಡುಕಾಟ ನಡೆಸುತ್ತಿದೆ.

ಶಾಹಿದ್ ಅಫ್ರೀದಿ ನಾಯಕ ಪಟ್ಟದಿಂದ ಕೆಳಗಿಳಿದ ನಂತರ ಟಿ20 ಕ್ರಿಕೆಟ್ ತಂಡಕ್ಕೆ ಸರ್ಫರಾಜ್ ಅಹ್ಮದ್ ಅವರನ್ನು ನೇಮಕ ಮಾಡಲಾಗಿದೆ. ಅದೇ ವೇಳೆ ಪಾಕ್ ಕ್ರಿಕೆಟ್ ತಂಡದ ಕೋಚ್ ಸ್ಥಾನದಿಂದ ವಾಖರ್ ಯೂನಿಸ್ ಕೂಡಾ ಕೆಳಗಿಳಿದಿರುವುದರಿಂದ ಸದ್ಯ ಪಾಕ್ ಕ್ರಿಕೆಟ್ ತಂಡಕ್ಕೆ ಕೋಚ್ ಇಲ್ಲದಂತಾಗಿದೆ.

ಇದೀಗ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಹೊಸ ಕೋಚ್‌ಗಾಗಿ ಹುಡುಕಾಟ ನಡೆಸುತ್ತಿದ್ದು, ಈಬಗ್ಗೆ ತಮ್ಮ ವೆಬ್‌ಸೈಟ್‌ನಲ್ಲಿ ಜಾಹೀರಾತನ್ನೂ ಪ್ರಕಟಿಸಿದೆ. ಇತ್ತ ಪಾಕ್ ಕ್ರಿಕೆಟ್ ತಂಡದ ಕೋಚ್ ಸ್ಥಾನವನ್ನು ವಹಿಸಲು ಭಾರತದ ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಲಿ ಒಲವು ವ್ಯಕ್ತ ಪಡಿಸಿದ್ದಾರೆ.

ಪಾಕಿಸ್ತಾನಿ ಜರ್ನಲಿಸ್ಟ್ ಆಸ್ಮಾ ಶಿರಾಜಿ ಅವರಿಗೆ ಮಾಡಿದ ಟ್ವೀಟ್ ಒಂದರಲ್ಲಿ ವಿನೋದ್ ಕಾಂಬ್ಲಿ ಪಾಕ್ ಕೋಚ್ ಆಗಲು ಒಲವು ತೋರಿಸಿದ್ದಾರೆ. ಆಸ್ಮಾ ಅವರಿಗೆ ಟ್ವೀಟ್ ಮಾಡಿದ ಕಾಂಬ್ಲಿ, ವಾಖರ್ ಯೂನಿಸ್ ಕೋಚ್ ಸ್ಥಾನದಿಂದ ಕೆಳಗಿಳಿಯುತ್ತಿದ್ದಾರೆ. ಅವರೊಬ್ಬ ಉತ್ತಮ ಕ್ರಿಕೆಟಿಗ ಎಂದಿದ್ದಾರೆ.

ತದನಂತರದ ಟ್ವೀಟ್‌ವೊಂದರಲ್ಲಿ, ಆಸ್ಮಾ ಜೀ, ಪಿಸಿಬಿ ಕೋಚ್‌ನ ಹುಡುಕಾಟದಲ್ಲಿದೆ ಎಂದು ತಿಳಿಯಿತು. ನಾನು ಲಭ್ಯವಿದ್ದೇನೆ ಎಂದಿದ್ದಾರೆ. ಕಾಂಬ್ಲಿ ಟ್ವೀಟ್‌ಗೆ ಅಜೀಮ್ ಆಸಿಂ ಮುಗಲ್ ಎಂಬವರು ಹಾಗಾದರೆ ಪಾಕಿಸ್ತಾನದಲ್ಲಿನ ಸುರಕ್ಷಾ ಬೆದರಿಕೆಯ ಬಗ್ಗೆ ಚಿಂತಿಸುತ್ತಿಲ್ಲವೇ? ಎಂದು ಕೇಳಿದಾಗ ನಾನು ನಿರುದ್ಯೋಗಿಯಾಗಿಲ್ಲ, ವಸೀಂ ಅಕ್ರಂ ಐಪಿಎಲ್ ಕೋಚ್ ಆಗುವುದಾದರೆ ನಾನ್ಯಾಕೆ ಆಗಲ್ಲ? ಎಂದು ಉತ್ತರಿಸಿದ್ದಾರೆ.

ಮುಂಬೈ ಮೂಲದ ವಿನೋದ್ ಕಾಂಬ್ಲಿಗೆ ಕೋಚಿಂಗ್ ನಲ್ಲಿ ಅಷ್ಟೊಂದು ಅನುಭವವಿಲ್ಲ. ಆದರೆ ಕಾಂಬ್ಲಿಯವರ ಈ ಒಲವಿನ ಬಗ್ಗೆ ಪಿಸಿಬಿ ಯಾವ ರೀತಿಯ ಉತ್ತರ ನೀಡುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

Write A Comment