ರಾಷ್ಟ್ರೀಯ

ಜನರ ಕನಸುಗಳನ್ನು ಈಡೇರಿಸುವುದು ನಮ್ಮ ಗುರಿ: ಪ್ರಧಾನಿ ಮೋದಿ

Pinterest LinkedIn Tumblr

modi-assam

ನವದೆಹಲಿ: ಇಂದು ಇಡೀ ದೇಶದ ಜನರು ಭಾರತೀಯ ಜನತಾ ಪಕ್ಷದ ಮೇಲೆ ಭರವಸೆ, ನಂಬಿಕೆಯನ್ನಿಟ್ಟಿದ್ದಾರೆ. ದೇಶದ ಜನರ ಕನಸುಗಳನ್ನು ಮತ್ತು ಆಶೋತ್ತರಗಳನ್ನು ಈಡೇರಿಸುವುದು ನಮ್ಮ ಗುರಿಯಾಗಿದೆ. ನಮಗೆ ಜನರು ನೀಡಿದ ಅವಕಾಶವನ್ನು ಚೆನ್ನಾಗಿಯೇ ಬಳಸಿಕೊಳ್ಳಬೇಕಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.

ಬಿಜೆಪಿಯ ಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬಿಜೆಪಿ ಆಡಳಿತವಿರುವ ದೇಶದ ಹಲವು ರಾಜ್ಯಗಳಲ್ಲಿ ಅತ್ಯುತ್ಸಾಹ ಹಾಗೂ ಪರಿಶ್ರಮದಿಂದ ಕಾರ್ಯ ನಿರ್ವಹಿಸುತ್ತಿರುವ ಮುಖ್ಯಮಂತ್ರಿಗಳ ಬಗ್ಗೆ ನಮಗೆ ಹೆಮ್ಮೆ ಇದೆ. ಎಲ್ಲೆಲ್ಲ ಬಿಜೆಪಿ ಸರಕಾರ ರಚಿಸಿದೆಯೋ ಅಲ್ಲೆಲ್ಲ ಬಿಜೆಪಿ ಸರಕಾರ ಇತರರಿಗೆ ಮಾದರಿಯಾಗುವ ರೀತಿಯಲ್ಲಿ ಜನಸೇವೆ ನಡೆಸುತ್ತಿದೆ ಎಂದು ಮೋದಿ ಹೇಳಿದ್ದಾರೆ.

ಸ್ಥಾಪನಾ ದಿನಾಚರಣೆ ಪ್ರಯಕ್ತವಾಗಿ ಇಂದು ಬಿಜೆಪಿಯ ರಾಜ್ಯ ಘಟಕಗಳು ಸಭೆ ಸಮಾರಂಗಳನ್ನು ನಡೆಸಲಿವೆ. 1980ರಲ್ಲಿ ಈ ದಿನದಂದು ಬಿಜೆಪಿಯು ಪ್ರತ್ಯೇಕ ಪಕ್ಷವಾಗಿ ಅಸ್ತಿತ್ವಕ್ಕೆ ಬಂದು ಇಂದಿಗೆ 36 ವರ್ಷ ತುಂಬಿದೆ.

ಈ ಸಂದರ್ಭದಲ್ಲಿ ಮಾತನಾಡಿದ ಪಕ್ಷದ ಅಧ್ಯಕ್ಷ ಅಮಿತ್ ಶಾ, ರಾಷ್ಟ್ರೀಯತೆ ಪಕ್ಷದ ಅಸ್ಥಿತ್ವವಾಗಿದ್ದು, ನಮ್ಮ ಮೂರು ತಲೆಮಾರಿನ ನಾಯಕರು ಅದನ್ನು ಕಾಪಾಡಿಕೊಂಡು ಬಂದಿದ್ದಾರೆ. ಹೊಸ ತಲೆಮಾರಿನ ನಾಯಕರು ಇದನ್ನು ಕಾಪಾಡಿ ಮುಂದಿನ ತಲೆಮಾರಿಗೆ ಮುನ್ನಡೆಸುವುದು ಅಗತ್ಯವಾಗಿದೆ ಎಂದು ಹೇಳಿದ್ದಾರೆ.

11 ಜನರಿಂದ ಆರಂಭವಾದ ಪಕ್ಷ ಇಂದು 11 ಕೋಟಿ ಸದಸ್ಯರನ್ನು ಹೊಂದಿದೆ. ಪಕ್ಷದ ಸಾವಿರಾರು ಕಾರ್ಯಕರ್ತರ ತ್ಯಾಗದಿಂದ ಇದು ಸಾಧ್ಯವಾಯಿತು ಎಂದರು. ಭಾರತ್ ಮಾತಾ ಕಿ ಜೈ ಎಂದು ಘೋಷ ವಾಕ್ಯದೊಂದಿಗೆ ಭಾಷಣ ಆರಂಭಿಸಿದ ಶಾ ಆ ವಾಕ್ಯದೊಂದಿಗೆ ತಮ್ಮ ಭಾಷಣವನ್ನು ಮುಕ್ತಾಯಗೊಳಿಸಿದರು.

Write A Comment