ಅಂತರಾಷ್ಟ್ರೀಯ

ಪನಾಮಾ ದಾಖಲೆ ಸೋರಿಕೆಯಲ್ಲಿ ದಾವೂದ್ ನಂಟು ಬಹಿರಂಗ

Pinterest LinkedIn Tumblr

dawood

ನವದೆಹಲಿ; ವಿಶ್ವವನ್ನೇ ತಲ್ಲಣಗೊಳಿಸಿರುವ ಪಾನಾಮ ದಾಖಲೆ ಸೋರಿಕೆಯ ಸರಣಿ ಮಂಗಳವಾರ ಕೂಡ ಮುಂದುವರೆದಿದ್ದು, ರಾಜಕಾರಣಿಗಳು, ಉದ್ಯಮಿಗಳು ಹಾಗೂ ಸಿನಿಮಾ ನಟರಷ್ಟೇ ಅಲ್ಲದೆ, ಇದೀಗ ಭೂಗತ ಪಾತಕಿಗಳ ನಂಟು ಕೂಡ ಬಹಿರಂಗವಾಗತೊಡಗಿದೆ.

ಇದೀಗ ಈ ಅಕ್ರಮ ಕಂಪನಿಯಲ್ಲಿ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಹಾಗೂ ಆತನ ಹಣಕಾಸು ವ್ಯವಹಾರಗಳನ್ನು ನೋಡಿಕೊಳ್ಳುತ್ತಿದ್ದ ಇಕ್ಬಾಲ್ ಮಿರ್ಚಿ ಕೂಡ ಪನಾಮಾದಲ್ಲಿ ಹೂಡಿಕೆ ಮಾಡಿರುವುದರ ಬಗ್ಗೆ ಮಾಹಿತಿಗಳು ಬಹಿರಂಗಗೊಂಡಿದೆ.

ಇದೀಗ ಬಹಿರಂಗಗೊಂಡಿರುವ ಮಾಹಿತಿಯ ಪ್ರಕಾರ ದಾವೂದ್ ಇಬ್ರಾಹಿಂನ ಹಣಕಾಸು ವ್ಯವಹಾರಗಳನ್ನು ನೋಡಿಕೊಳ್ಳುತ್ತಿದ್ದ ಇಕ್ಬಾಲ್ ಮಿರ್ಚಿ ಕೂಡ ಪನಾಮಾ ಮೂಲದ ಕಾನೂನು ಸಲಹಾ ಸಂಸ್ಥೆ ಮೊಸ್ಸಾಕ್ ಫೊನ್ಸೆಕಾ ಜತೆ ಸಂಪರ್ಕ ಹೊಂದಿದ್ದ. ಈತ ಬ್ರಿಟಿಷ್ ವರ್ಜಿನ್ ಐಲ್ಯಾಂಡ್ಸ್​ನಲ್ಲಿ ಕಂಪನಿಯೊಂದನ್ನು ಸ್ಥಾಪಿಸಿದ್ದ. ಈ ಕಂಪನಿ ಮೂಲಕ ಹಲವು ಆಸ್ತಿಗಳನ್ನು ವಿದೇಶಗಳಲ್ಲಿ ಖರೀದಿ ಮತ್ತು ಮಾರಾಟ ಮಾಡಲಾಗಿದೆ ಎಂದು ತಿಳಿದುಬಂದಿದೆ.

ಈಗಾಗಲೇ ಇಕ್ಬಾಲ್ ಮಿರ್ಚಿ ಕುಟುಂಬ ಹೊಂದಿರುವ ಹಲವು ಆಸ್ತಿಗಳನ್ನು ಭಾರತ ಸರ್ಕಾರ ಪಟ್ಟಿ ಮಾಡಿದೆಯಾದರೂ ಸರ್ಕಾರಕ್ಕೇ ತಿಳಿದಿಲ್ಲದ ಮತ್ತಷ್ಟು ಸ್ವತ್ತುಗಳಿರುವುದು ಸೋರಿಕೆಯಾಗಿರುವ ಈ ದಾಖಲೆಗಳ ಮೂಲಕ ಬಹಿರಂಗಗೊಂಡಿದೆ.

ಈ ಮೊದಲು ಸೋರಿಕೆಗೊಂಡಿದ್ದ ದಾಖಲೆಗಳಲ್ಲಿ ಬಾಲಿವುಡ್ ನಟ ಅಮಿತಾಭ್ ಬಚ್ಚನ್, ಅವರ ಸೊಸೆ ಐಶ್ವರ್ಯಾ ರೈ ಬಚ್ಚನ್ ಸೇರಿದಂತೆ ವಿಶ್ವದ ಹಲವು ಪ್ರಮುಖ ಗಣ್ಯರು, ರಾಜಕಾರಿಗಳು ಹಾಗೂ ಉದ್ಯಮಿಗಳ ಹೆಸರು ಬಹಿರಂಗಗೊಂಡಿತ್ತು. ಇದೀಗ ಇದರ ಮುಂದುವರಿದ ಭಾಗದಲ್ಲಿ ಸಾಕಷ್ಟು ಮಂದಿಯ ಹೆಸರು ಬಹಿರಂಗಗೊಂಡಿದ್ದು, ಇದರಲ್ಲಿ ಆಭರಣ ವ್ಯಾಪಾರಿಗಳ ವಿವರಗಳು ಕೂಡ ಸೇರಿಕೊಂಡಿರುವುದಾಗಿ ತಿಳಿದುಬಂದಿದೆ.

ಸೋರಿಕೆಯಾಗಿರುವ ದಾಖಲೆಗಳು ಮುಂದುವರಿದ ಭಾಗದಲ್ಲಿ ಅಶ್ವಿನ್ ಕುಮಾರ್ ಮೆಹ್ರಾ, ಮೆಹ್ರಾ ಸನ್ಸ್ ಜ್ಯೂವೆಲರ್ಸ್ ಮಾಲೀಕ ಗೌತಮ್ ಸಿಂಘಲ್, ಹರಿಯಾಣದ ಹೂಡಿಕೆ ನಿರ್ವಹಣೆ ಸಲಹೆಗಾರ ಮತ್ತು ಐಟಿ ಸಲಹೆಗಾರ ಪ್ರಭಾಸ್ ಸಂಕ್ಲಾ, ಕ್ರಾಂಪ್ಟನ್ ಗ್ರೀವ್ಸ್ ಲಿಮಿಟೆಡ್ ಸಂಸ್ಥಾಪಕ ಬೃಜ್ ಮೋಹನ್ ಥಾಪರ್ ಪುತ್ರರಾದ ಗೌರಮ್ ಮತ್ತು ಕರಣ್ ಥಾಪರ್, ಮಧ್ಯಪ್ರದೇಶ ಸರ್ಕಾರದ ನಿವೃತ್ತ ಉದ್ಯೋಗಿ ವಿನೋದ್ ರಾಮಚಂದ್ರ ಜಾಧವ್, ಮೂಲತಃ ಲಖನೌದವರಾಗಿದ್ದು ಸದ್ಯ ಬೆಂಗಳೂರಿನ ನಿವಾಸಿಗಳಾಗಿರುವ ಸತೀಶ್ ಗೋವಿಂದ್ ಸಂತಾನಿ.

ಕ್ರಾಂಪ್ಟನ್ ಗ್ರೀವ್ಸ್ ಸಂಸ್ಥಾಪಕರು ಅಶೋಕ್ ಮಲ್ಹೋತ್ರಾ, ಭಾರತದ ಮಾಜಿ ಕ್ರಿಕೆಟಿಗ ರಂಜೀವ್ ದಹುಜಾ ಮತ್ತು ಕಪಿಲ್ ಸೇನ್ ಗೋಯೆಲ್, ಚಂಡೀಗಢದ ವಾಹನ ಉದ್ಯಮಿಗಳು ವಿವೇಕ್ ಜೈನ್ ವಿಶಾಲ್ವ್ ಬಹಾದುರ್ ಮತ್ತು ಹರೀಶಾ ಮೊಹ್ನಾನಿ, ಸೇರಿದಂತೆ ಪ್ರಮುಖ ಭಾರತೀಯ ರಾಜಕೀಯ, ಉದ್ದಿಮೆ ಮತ್ತು ಕೈಗಾರಿಕೋದ್ಯಮಿಗಳ ಹೆಸರುಗಳು ‘ದಿ ಇಂಡಿಯನ್ ಎಕ್ಸ್ ಪ್ರೆಸ್’ ಪತ್ರಿಕೆಯಲ್ಲಿ ಪ್ರಕಟವಾಗಿವೆ.

ಐರ್ಲೆಂಡ್ ಪ್ರಧಾನಿ ರಾಜಿನಾಮೆ
ಪನಾಮಾ ಹಗರಣದಲ್ಲಿ ತಮ್ಮ ಹೆಸರು ಬಯಲಾಗಿರುವುದರಿಂದ ಐರ್ಲೆಂಡ್ ಪ್ರಧಾನಿ ಸಿಗ್ಮುಂದರ್ ಡೇವಿಡ್ ಗುನ್ ಲಾಗ್ ಸನ್ ಅವರು ನಿನ್ನೆ ತಮ್ಮ ಪ್ರಧಾನಿ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದಾರೆ.

ತನಿಖಾ ಪತ್ರಕರ್ತರ ಅಂತರಾಷ್ಟ್ರೀಯ ಒಕ್ಕೂಟ ಈ ಪನಾಮಾ ರಹಸ್ಯವನ್ನು ಭೇದಿಸಿ ಬಯಲಿಗೆಳೆಯುತ್ತಿದ್ದು, ಪ್ರಧಾನಿ ಮತ್ತು ಅವರ ಪತ್ನಿ ಬೇನಾಮಿ ಕಂಪನಿ ನಿರ್ದೇಶಕರಾಗಿದ್ದರು ಎಂಬ ವಿಚಾರವನ್ನು ಹೊರ ಹಾಕಿದ್ದರು. ಹೀಗಾಗಿ ಪ್ರಕರಣ ಸಂಬಂಧ ಪ್ರಧಾನಿ ವಿರುದ್ಧ ಸಾಕಷ್ಟು ವಿರೋಧಗಳು ವ್ಯಕ್ತವಾಗಿದ್ದವು. ಅಲ್ಲದೆ, ಪ್ರತಿಭಟನೆಗಳು ನಡೆದಿದ್ದವು. ಹೀಗಾಗಿ ಸಿಗ್ಮುಂದರ್ ಡೇವಿಡ್ ಅವರು ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದಾರೆಂದು ತಿಳಿದುಬಂದಿದೆ.
(ಕನ್ನಡಪ್ರಭ)

Write A Comment