ಕನ್ನಡ ವಾರ್ತೆಗಳು

ಕೋರ್ಟ್ ಕಟಕಟೆಯಿಂದ ಹಾರಿ ಕೊಲೆ ಆರೋಪಿ ಪರಾರಿ – ಬಂಧನ

Pinterest LinkedIn Tumblr

puttur_acused_jayesh

ಪುತ್ತೂರು,ಎ.6: ಆರೋಪಿಯೊಬ್ಬ ವಿಚಾರಣೆ ವೇಳೆ ಕೋರ್ಟ್ ಕಟಕಟೆಯಿಂದ ಹಾರಿ ತಪ್ಪಿಸಿಕೊಂಡು ಪರಾರಿಯಾಗಲು ಯತ್ನಿಸಿದ ಘಟನೆ ಮಂಗಳವಾರ ಪುತ್ತೂರು ನ್ಯಾಯಾಲಯದಲ್ಲಿ ನಡೆದಿದೆ.

ಪರಾರಿಯಾಗಲು ಯತ್ನಿಸಿದ ವ್ಯಕ್ತಿಯನ್ನು ಕೊಲೆ ಪ್ರಕರಣವೊಂದರ ಆರೋಪಿ ಜಯೇಶ್ ಎನ್ನಲಾಗಿದ್ದು, ಈತ 2008ರಲ್ಲಿ ಶಿರಾಡಿ ಗ್ರಾಮದ ಅಡ್ಡಹೊಳೆಯಲ್ಲಿ ಗೃಹಿಣಿ ಸೌಮ್ಯಾ ಮತ್ತು ಆಕೆಯ ಗಂಡು ಮಗು ಜಿಷ್ಣುವನ್ನು ಕೊಲೆಗೈದ ಪ್ರಕರಣದ ಆರೋಪಿಯಾಗಿದ್ದಾನೆ. ನ್ಯಾಯಾಲಯದಲ್ಲಿ ಈತನ ವಿರುದ್ಧದ ಕೊಲೆ ಪ್ರಕರಣದ ಸಾಕ್ಷಿಯ ವಿಚಾರಣೆ ನಡೆಯುತ್ತಿದ್ದಾಗ ಸಂದರ್ಭವನ್ನು ಗಮನಿಸಿ ಪರಾರಿಯಾಗಲು ಯತ್ನಿಸಿದ್ದ.

ಆರೋಪಿ ಜಯೇಶ್‌ನನ್ನು ಮಂಗಳೂರು ಕಾರಾಗೃಹದಿಂದ ಪುತ್ತೂರು ಜಿಲ್ಲಾ ಐದನೆ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯಕ್ಕೆ ತನಿಖೆಗೆ ಕರೆ ತರಲಾಗಿತ್ತು. ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದ್ದಾಗ ಆರೋಪಿಗಳು ನಿಲ್ಲುವ ಕಟಕಟೆಯನ್ನು ಹಾರಿ ಓಡಿಹೋಗಿದ್ದ. ಆದರೆ ಆತನನ್ನು ಪುತ್ತೂರು ಮಿನಿ ವಿಧಾನ ಸೌಧದ ಬಳಿ ನ್ಯಾಯವಾದಿಯೊಬ್ಬರು ಹಿಡಿದು ಬಳಿಕ ಸಾರ್ವಜನಿಕರು ಸಹಕಾರದಿಂದ ನ್ಯಾಯಾಲಯಕ್ಕೆ ಮತ್ತೆ ಕರೆದು ತಂದರು.

ಈತ ತಾಯಿ ಮತ್ತು ಮಗುವಿನ ಕೊಲೆಗೈದು ಕೇರಳಕ್ಕೆ ಪರಾರಿಯಾಗಿದ್ದನು. 2014ರಲ್ಲಿ ಕೇರಳದ ಮೂವಾಟ್ಟುಪುರಂ ಸಮೀಪ ಈತ ಆಕಸ್ಮಿಕವಾಗಿ ಕೇರಳ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದನು. ಅಲ್ಲಿ ತರಕಾರಿ ವ್ಯಾಪಾರ ಮಾಡುತ್ತಿದ್ದ ಆರೋಪಿ ಜಯೇಶ್ ಪತ್ನಿಯೊಂದಿಗೆ ಜಗಳವಾಡಿ ತೆಂಗಿನ ಮರ ಹತ್ತಿ ಕುಳಿತಿದ್ದನು. ಸ್ಥಳೀಯ ಪೊಲೀಸರು ಈತನನ್ನು ಕೆಳಗಿಳಿಸಿ ಠಾಣೆಗೆ ಕರೆ ತಂದು ವಿಚಾರಣೆ ಮಾಡಿದಾಗ ಈತ ಕೊಲೆ ಪ್ರಕರಣದಲ್ಲಿ ತಲೆ ಮರೆಸಿಕೊಂಡಿರುವ ಆರೋಪಿ ಎಂದು ತಿಳಿದು ಬಂದಿತ್ತು.

ಉಪ್ಪಿನಂಗಡಿ ಪೊಲೀಸರು ಈತನನ್ನು ಅಲ್ಲಿಂದ ಬಂಧಿಸಿ ಕರೆ ತಂದಿದ್ದರು. ಎರಡು ವರ್ಷಗಳಿಂದ ಈತ ನ್ಯಾಯಾಂಗ ಬಂಧನ ದಲ್ಲಿದ್ದಾನೆ. ಈತನನ್ನು ಮಂಗಳವಾರ ತನಿಖೆಗೆ ಕರೆ ತಂದಾಗ ಕಟಕಟೆಯಿಂದ ಹಾರಿ ಓಡಿ ಪರಾರಿಯಾಗಲು ವಿಫಲ ಯತ್ನ ನಡೆಸಿದ್ದಾನೆ. ಈತ ತನ್ನನ್ನು ಹಿಡಿದ ಸಾರ್ವಜನಿಕರಿಗೆ ಧಮ್ಕಿ ಹಾಕಿದ್ದಾನೆ ಎನ್ನಲಾಗಿದೆ.

ಈತ ಮಂಗಳವಾರ ಬೆಳಗ್ಗೆ ಕಾರಾಗೃಹದಿಂದ ಪುತ್ತೂರಿಗೆ ಕರೆ ತರುವಾಗಲೇ ಓಡಿ ಪರಾರಿಯಾಗುವ ಸಿದ್ಧತೆಯನ್ನು ಮಾಡಿದ್ದನು ಎನ್ನಲಾಗಿದೆ.

ಪುತ್ತೂರು ನ್ಯಾಯಾಲಯದಿಂದ ಬಂದ ಮಾಹಿತಿ ಮತ್ತು ಈತನನ್ನು ಜಿಲ್ಲಾ ಕಾರಾಗೃಹದಿಂದ ಪುತ್ತೂರಿಗೆ ಕರೆ ತಂದ ಪೊಲೀಸರ ದೂರಿನಂತೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಆರೋಪಿ ವಿರುದ್ಧ ಪ್ರಕರಣ ದಾಖಲಾಗಿದೆ.

Write A Comment