ಗಲ್ಫ್

‘ಭಾರತ್ ಮಾತಾ ಕಿ ಜೈ’ ಎನ್ನದವರಿಗೆ ಭಾರತದಲ್ಲಿರುವ ಹಕ್ಕಿಲ್ಲ…ದೇಶದಲ್ಲಿರಬೇಕೆಂದರೆ ಘೋಷಣೆ ಕೂಗಲೇಬೇಕು: ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್

Pinterest LinkedIn Tumblr

Devendra_Fadnavis

ಮುಂಬೈ: ‘ಭಾರತ್ ಮಾತಾ ಕಿ ಜೈ’ ಎನ್ನದವರಿಗೆ ಭಾರತದಲ್ಲಿರುವ ಹಕ್ಕಿಲ್ಲ, ನಮ್ಮ ದೇಶದಲ್ಲಿರಬೇಕೆಂದರೆ ‘ಭಾರತ್ ಮಾತಾ ಕಿ ಜೈ’ ಘೋಷಣೆ ಕೂಗಲೇಬೇಕೆಂದು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಭಾನುವಾರ ಹೇಳಿದ್ದಾರೆ.

ಭಾರತ್ ಮಾತಾ ಕಿ ಜೈ ವಿವಾದ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಅವರು, ಕೆಲವು ಜನರು ಭಾರತದಲ್ಲಿದ್ದುಕೊಂಡು ಭಾರತ್ ಮಾತಾ ಕಿ ಜೈ ಘೋಷಣೆ ಕೂಗುವುದಿಲ್ಲ ಎಂದು ಹೇಳುತ್ತಿದ್ದಾರೆ. ಭಾರತದಲ್ಲಿದ್ದುಕೊಂಡು ಭಾರತದ ಪರ ಘೋಷಣೆ ಕೂಗದಿದ್ದರೆ, ಪಾಕಿಸ್ತಾನ ಕಿ ಜೈ ಅಥವಾ ಚೀನಾ ಕಿ ಜೈ ಎಂದು ಕೂಗುತ್ತಾರಾ?…

ಭಾರತದಲ್ಲಿರಬೇಕೆಂದರೆ ಭಾರತ್ ಮಾತಾ ಕಿ ಜೈ ಎಂದು ಕೂಗಬೇಕು. ಭಾರತದಲ್ಲಿದ್ದು ಇಲ್ಲಿನ ಮೀಸಲಾತಿಯನ್ನು ಪಡೆದುಕೊಳ್ಳುತ್ತಿರುವವರು ಭಾರತದ ಪರ ಘೋಷಣೆ ಕೂಗಬೇಕು. ಇಲ್ಲವಾದರಲ್ಲಿ ಅವರಿಗೆ ದೇಶದಲ್ಲಿರುವ ಹಕ್ಕಿಲ್ಲ. ದೇಶಬಿಟ್ಟು ಹೋಗಬಹುದು ಎಂದು ಹೇಳಿದ್ದಾರೆ.

ಫಡ್ನವೀಸ್ ಅವರ ಈ ಹೇಳಿಕೆಗೆ ವಿರೋಧ ವ್ಯಕ್ತಪಡಿಸಿರುವ ಅಖಿಲ ಭಾರತ ಇಮಾಮ್ ಸಂಸ್ಥೆಯ ಮುಖ್ಯಸ್ಥ ಉಮರ್ ಅಹ್ಮೆದ್ ಇಲ್ಯಾಸಿ ಅವರು, ದೇಶದಲ್ಲಿ ಯಾರಿರಬೇಕು, ಯಾರಿರಬಾರದು ಎಂಬುದನ್ನು ನಿರ್ಧಾರರ ಮಾಡುವ ಹಕ್ಕು ಯಾರಿಗೂ ಇಲ್ಲ. ಜನರ ಮೇಲೆ ಒತ್ತಡ ಹೇರಲು ಪ್ರಯತ್ನ ಪಟ್ಟರೆ ದ್ವೇಷ ಸಂಖ್ಯೆ ಹೆಚ್ಚಾಗುತ್ತದೆ. ಜವಾಬ್ದಾರಿಯುತ ಸ್ಥಾನದಲ್ಲಿರುವವರು ಈ ರೀತಿಯಾದ ಹೇಳಿಕೆಗಳನ್ನು ನೀಡಬಾರದು ಎಂದು ಹೇಳಿದ್ದಾರೆ.

ಭಾರತ್ ಮಾತಾ ಕಿ ಜೈ ಘೋಷಣೆ ವಿರೋಧಿಸಿ ಹೈದರಾಬಾದ್ ನ ಇಸ್ಲಾಮಿಕ್ ಸೆಮಿನರಿ ಜಾಮಿಯಾ ನಿಝಾಮಿಯಾ ಇಲಾಖೆಯೊಂದು ಫತ್ವಾವೊಂದನ್ನು ಹೊರಡಿಸಿತ್ತು. ಈ ಫತ್ವಾ ಸಾಕಷ್ಟು ವಿವಾದವನ್ನು ಸೃಷ್ಟಿಸಿದ್ದು, ಸಾಕಷ್ಟು ಮಂದಿ ಇದಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.

ಇಸ್ಲಾಮಿಕ್ ಸೆಮಿನರಿ ದಾರುಲ್ ಉಲೂಂನ ಫತ್ವಾ ಇಲಾಖೆ ಸೆಮಿನರಿ ಹೊರಡಿಸಿರುವ ಫತ್ವಾದಲ್ಲಿ, ಇಸ್ಲಾಂ ಧರ್ಮವು ಮೂರ್ತಿ ಪೂಜೆಯನ್ನು ಅನುಮತಿಸದಿರುವುದರಿಂದ ಈ ಧರ್ಮದ ಅನುಯಾಯಿಗಳು ಭಾರತ್ ಮಾತಾ ಕಿ ಜೈ ಘೋಷಣೆ ಕೂಗಬಾರದು.

ಮನುಷ್ಯರು ಮಾತ್ರ ಮನುಷ್ಯರಿಗೆ ಜನ್ಮ ನೀಡಲು ಸಾಧ್ಯ. ಭೂಮಿ ಜನ್ಮದಾತೆ ಆಗಲು ಸಾಧ್ಯವಿಲ್ಲ. ಭಾರತವು ಭೂಮಿಯನ್ನು ದೇವತೆ ಎಂದು ಪೂಜಿಸುತ್ತದೆ. ಅದು ಅವರ ವೈಯಕ್ತಿಕ ನಂಬಿಕೆ. ನಾವು ನಮ್ಮ ದೇಶವನ್ನು ಪ್ರೀತಿಸುತ್ತೇವೆ. ಆದರೆ, ಪೂಜಿಸುವುದಿಲ್ಲ. ಇಸ್ಲಾಂ ಧರ್ಮ ಕೇವಲ ಒಂದು ದೇವರನ್ನು ಮಾತ್ರ ಪೂಜಿಸುತ್ತದೆ ಎಂದು ಹೇಳಲಾಗಿದೆ.

ಈ ಹಿಂದೆ ಜೆಎನ್ ಯು ಪ್ರಕರಣಕ್ಕೆ ಸಂಬಂಧಿಸಿ ಆರ್ ಎಸ್ಎಸ್ ಸಭೆಯಲ್ಲಿ ಮಾತನಾಡಿದ್ದ ಮೋಹನ್ ಭಾಗವತ್ ಅವರು, ಜೆಎನ್ ಯು ಆವರಣದಲ್ಲಿ ದೇಶ ವಿರೋಧಿ ಘೋಷಣೆಗಳು ಕೇಳಿಬಂದಿವೆ. ಪ್ರತಿಯೊಬ್ಬರೂ ಭಾರತ್ ಮಾತಾ ಕಿ ಜೈ ಎಂದು ಘೋಷಣೆ ಕೂಗವಂತಾಗಬೇಕು. ಯುವಜನಾಂಗದ ಸರ್ವತೋಮುಖ ಅಭಿವೃದ್ಧಿಗೆ ಇದು ಪೂರಕವಾಗಬೇಕೆಂದು ಹೇಳಿದ್ದರು.

ಈ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ್ದ ಹೈದರಾಬಾದ್ ನ ಸಂಸದ ಓವೈಸಿ, ನನ್ನ ಕುತ್ತಿಗೆ ಮೇಲೆ ಚೂರಿ ಇಟ್ಟರೂ ನಾನು ಭಾರತ್ ಮಾತಾ ಕಿ ಜೈ ಎಂದು ಹೇಳುವುದಿಲ್ಲ. ಘೋಷಣೆಯನ್ನು ಕೂಗಿ, ದೇಶಭಕ್ತಿ ಸಾಬೀತುಪಡಿಸಬೇಕೆಂದು ಸಂವಿಧಾನದಲ್ಲಿ ಎಲ್ಲೂ ಹೇಳಿಲ್ಲ. ಹಾಗಾಗಿ ಕಾನೂನು ಉಲ್ಲಂಘನೆಯ ಪ್ರಶ್ನೆ ಇಲ್ಲಿ ಹುಟ್ಟುವುದಿಲ್ಲ. ಈ ನಿಲುವಿಗೆ ನಾನು ಬದ್ಧನಾಗಿದ್ದೇನೆ ಯಾವುದೇ ಕಾರಣಕ್ಕೂ ಘೋಷಣೆ ಕೂಗುವುದಿಲ್ಲ ಎಂದು ಹೇಳಿದ್ದರು.

Write A Comment