ಮನೋರಂಜನೆ

ರಾಹುಲ್ ದ್ರಾವಿಡ್ ಟೀಂ ಇಂಡಿಯಾ ಕೋಚ್ ! ಬಿಸಿಸಿಐ ಒಲವು

Pinterest LinkedIn Tumblr

rahul-dravid

ನವದೆಹಲಿ: ಭಾರತದ ಕ್ರಿಕೆಟ್ ತಂಡದ ಪ್ರಧಾನ ಕೋಚ್ ಸ್ಥಾನಕ್ಕೆ ರಾಹುಲ್ ದ್ರಾವಿಡ್ ಅವರನ್ನು ನೇಮಕ ಮಾಡಲು ಬಿಸಿಸಿಐ ಒಲವು ತೋರಿದೆ.

ಸುದ್ದಿ ಮಾಧ್ಯಮವೊಂದರ ವರದಿ ಪ್ರಕಾರ ಭಾರತೀಯ ಕ್ರಿಕೆಟ್ ತಂಡದ ಸಲಹಾ ಸಮಿತಿ ಕೂಡಾ ರಾಹುಲ್ ದ್ರಾವಿಡ್‌ರನ್ನು ಕೋಚ್ ಸ್ಥಾನಕ್ಕೆ ಶಿಫಾರಸು ಮಾಡಿದೆ. ಸಲಹಾ ಸಮಿತಿಯಲ್ಲಿರುವ ಸಚಿನ್ ತೆಂಡೂಲ್ಕರ್, ಸೌರವ್ ಗಂಗೂಲಿ ಮತ್ತು ವಿವಿಎಸ್ ಲಕ್ಷ್ಮಣ್ ತಮ್ಮ ಗೆಳೆಯನನ್ನು ಕೋಚ್ ಸ್ಥಾನದಲ್ಲಿ ಕೂರಿಸಲು ಕಾತುರರಾಗಿದ್ದಾರೆ.

ಈಗಾಗಲೇ ದ್ರಾವಿಡ್ ಇಂಡಿಯಾ ಎ ಮತ್ತು ಇಂಡಿಯಾ ಅಂಡರ್ 19 ತಂಡದ ಕೋಚ್ ಆಗಿ ಕಾರ್ಯ ನಿರ್ವಹಿಸಿದ್ದಾರೆ. ದ್ರಾವಿಡ್ ನೇತೃತ್ವದ ಅಂಡರ್ 19 ತಂಡ ಈ ಬಾರಿ ವಿಶ್ವಕಪ್ ಫೈನಲ್‌ಗೆ ತಲುಪಿದ್ದರೂ, ಫೈನಲ್ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ವುರುದ್ಧ ಪರಾಭವಗೊಂಡಿತ್ತು.

ವಿಶೇಷವಾಗಿ ಟೆಸ್ಟ್ ಕ್ರಿಕೆಟ್‌ಗೆ ಉತ್ತಮ ಮಾರ್ಗದರ್ಶನ ನೀಡುವ ಭಾರತೀಯನನ್ನೇ ನೇಮಕ ಮಾಡಬೇಕೆಂಬುದು ಬಿಸಿಸಿಐ ಆಗ್ರಹವಾಗಿದ್ದು, ರಾಹುಲ್ ಇದಕ್ಕೆ ಸಮರ್ಥರು ಎಂದು ಬಲ್ಲಮೂಲಗಳು ಹೇಳಿವೆ.

ಒಂದು ವೇಳೆ ರಾಹುಲ್‌ಗೆ ಈ ಸ್ಥಾನ ದೊರೆತರೆ, 2019ರಲ್ಲಿ ನಡೆಯಲಿರುವ ಐಸಿಸಿ ವಿಶ್ವಕಪ್‌ವರೆಗೆ ಅವರ ಸಾರಥ್ಯ ಟೀಂ ಇಂಡಿಯಾಗೆ ದಕ್ಕುವಂತೆ ಮಾಡಲಾಗುವುದು ಎಂಬ ಸುದ್ದಿಯೂ ಕೇಳಿಬರುತ್ತಿದೆ.

ಏಪ್ರಿಲ್ 5 ರಂದು ಸಲಹಾ ಸಮಿತಿ ಸಭೆ ಸೇರಲಿದ್ದು, ಮುಖ್ಯ ಕೋಚ್ ನೇಮಕದ ಬಗ್ಗೆ ಈ ಸಭೆಯಲ್ಲಿ ಚರ್ಚೆ ನಡೆಯಲಿದೆ. ಭಾರತದ ಕೋಚ್ ಆಗಿದ್ದ ಡಂಕನ್ ಫ್ಲೆಚರ್‌ನ ಜವಾಬ್ದಾರಿ 2015 ಐಸಿಸಿ ವಿಶ್ವಕಪ್ ಪಂದ್ಯ ಮುಕ್ತಾಯದ ಹೊತ್ತಿಗೆ ಮುಗಿದಿತ್ತು. ಸದ್ಯ ರಾಹುಲ್ ದ್ರಾವಿಡ್ ಐಪಿಎಲ್ ತಂಡ ಡೆಲ್ಲಿ ಡೇರ್‌ಡೆವಿಲ್ಸ್‌ನ ಸಲಹೆಗಾರರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

Write A Comment