ಮನೋರಂಜನೆ

ವಾಟ್ಸಪ್ ಸ್ಟೇಟಸ್ ನಲ್ಲಿ ನಟಿ ಪ್ರತ್ಯೂಷ ಸಾವಿನ ಹಿಂದಿನ ರಹಸ್ಯದ ಸುಳಿವು

Pinterest LinkedIn Tumblr

pratyusha

ನವದೆಹಲಿ: ಕಿರುತೆರೆಗೆ ಕಾಲಿಟ್ಟ ಕೇವಲ ಕೆಲವು ಸಮಯದಲ್ಲೇ ಸಾಕಷ್ಟು ಜನಪ್ರಿಯತೆಯನ್ನು ಗಳಿಸಿದ್ದ ‘ಬಾಲಿಕಾ ವಧು; ನಟಿ ಪ್ರತ್ಯೂಷಳ ಸಾವು ಇಡೀ ಬಾಲಿವುಡ್ ಕಲಾವಿದರಿಗೆ ಸಾಕಷ್ಟು ಆಶ್ಚರ್ಯವನ್ನುಂಟು ಮಾಡಿತ್ತು.

ನಿನ್ನೆಯಷ್ಟೇ ನಟಿ ಪ್ರತ್ಯೂಷ ಆತ್ಮಹತ್ಯೆಗೆ ಶರಣಾಗಿದ್ದರು. ನಂತರ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಅಷ್ಟರಲ್ಲಾಗಲೇ ಅವರು ಸಾವನ್ನಪ್ಪಿದ್ದರು ಎಂದು ತಿಳಿಸಿದ್ದರು.

ಮೊದಲಿಗೆ ನಟಿಯ ಸಾವು ಸುದ್ದಿ ಬಂದಾಗ, ಎಲ್ಲರೂ ಏಪ್ರಿಲ್ ತಿಂಗಳ ಮೊದಲನೇ ದಿನವಾದ್ದರಿಂದ ಫೂಲ್ ಮಾಡಲು ಯತ್ನಿಸುತ್ತಿದ್ದಾರೆಂದು ನಂಬಲಾಗಿತ್ತು. ನಂತರ ಈ ಸುದ್ದಿ ಬಹುತೇಕ ಖಚಿತವಾಗತೊಡಗಿತು. ಇದೀಗ ನಟಿಯ ಸಾವಿನ ಸುತ್ತ ಸಾಕಷ್ಟು ಅನುಮಾನಗಳು ವ್ಯಕ್ತವಾಗುತ್ತಿದ್ದು, ಇದು ಆತ್ಮಹತ್ಯೆಯಲ್ಲ, ಕೊಲೆಯೆಂದು ಪ್ರತ್ಯೂಷಳಿಗೆ ಹತ್ತಿರವಿರುವವರು ಅನುಮಾನಗಳನ್ನು ವ್ಯಕ್ತಪಡಿಸುತ್ತಿದ್ದಾರೆ.

ಇನ್ನು ಪ್ರತ್ಯೂಷ ಅವರ ವಾಟ್ಸ್ ಅಪ್ ಸ್ಟೇಟಸ್ ಸಾಯುವುದಕ್ಕೂ ಮುನ್ನ ಅಪ್ ಡೇಟ್ ಆಗಿದ್ದು, ಸತ್ತ ಮೇಲೂ ಕೂಡ ನನ್ನ ದೃಷ್ಟಿ ನಿನ್ನಿಂದ ದೂರ ಹೋಗುವುದಿಲ್ಲ ಎಂದು ಹೇಳಿಕೊಂಡಿದ್ದಾರೆ.

ಈ ಸ್ಟೇಟಸ್ ನಿಂದ ಪ್ರತ್ಯೂಷ ಆತ್ಮಹತ್ಯೆ ಶರಣಾಗಿರಬಹುದೆಂದು ಕೆಲವರು ಅಂದುಕೊಳ್ಳುತ್ತಿದ್ದರೆ, ಆಕೆಯನ್ನು ಹತ್ತಿರದಲ್ಲಿ ನೋಡಿದವರು ಇದು ಆತ್ಮಹತ್ಯೆಯಲ್ಲ ಕೊಲೆ ಎಂದು ಹೇಳತೊಡಗಿದ್ದಾರೆ.

ಇದರಂತೆ ಕೊಲೆಯಾಗಿರಬಹುದೆಂಬುದಕ್ಕೆ ಪುಷ್ಠಿ ನೀಡುವಂತೆ ರಾಹುಲ್ ವರ್ತನೆಯಲ್ಲಿ ಅನುಮಾನಗಳು ಕಾಣುತ್ತಿವೆ ಎಂದು ಹೇಳುತ್ತಿರುವ ಕೆಲವರು, ಪ್ರತ್ಯೂಷ ಸಾವಿನ ದುಃಖ ಆಕೆಯ ಬಾಯ್ ಫ್ರೆಂಡ್ ಆಗಿದ್ದ ರಾಹುಲ್ ಅವರ ಮುಖದಲ್ಲಿರಲಿಲ್ಲ. ಏನೂ ಆಗೇ ಇಲ್ಲ ಎಂಬಂತೆ ಆತ ಸಮಾಧಾನದಲ್ಲಿದ್ದ. ಆಸ್ಪತ್ರೆಗೆ ಬಂದ ಕೆಲವು ನಿಮಿಷಗಳಲ್ಲೇ ತರಾತುರಿಯಲ್ಲಿ ಹೊರಟುಹೋದ ಎಂದು ಶಂಕೆ ವ್ಯಕ್ತಪಡಿಸುತ್ತಿದ್ದಾರೆ.

ಪ್ರಕರಣ ಸಂಬಂಧ ತನಿಖೆ ನಡೆಸುತ್ತಿರುವ ಪೊಲೀಸರು ಕೂಡ ಪ್ರಕರಣದಲ್ಲಿ ಕೆಲವು ಅನುಮಾನಗಳನ್ನು ವ್ಯಕ್ತಪಡಿಸಿದ್ದಾರೆ. ಪ್ರತ್ಯೂಷಳನ್ನು ನೇಣಿನ ಕುಣಿಕೆಯಿಂದ ಕೆಳಗಿಳಿಸಿದಾಗ ಕುತ್ತಿಗೆ ಮೇಲೆ ಸಾಮಾನ್ಯವಾಗಿಯೇ ಕಲೆಗಳಿದ್ದವು. ಆದರೆ, ಆಕೆಯ ಎಡ ಕೆನ್ನೆಯ ಮೇಲೆ ಮೂಗೇಟು ಬಿದ್ದಿರುವುದು ಕಂಡು ಬಂದಿತ್ತು. ಅಲ್ಲದೆ, ಆಕೆಯ ಬಾಯಲ್ಲಿ ರಕ್ತ ಬಂದಿತ್ತು. ಸಾಮಾನ್ಯವಾಗಿ ನೇಣು ಬಿಗಿದುಕೊಂಡಾಗ ಕಣ್ಣು ತೆರೆದಿರುವುದು, ನಾಲಿಗೆ ಹೊರಬಂದಿರುತ್ತದೆ. ಆದರೆ, ಪ್ರತ್ಯೂಷ ಪ್ರಕರಣದಲ್ಲಿ ಇಂತಹುದಾವುದೂ ಆಗಿರಿಲ್ಲ. ಪ್ರಕರಣದಲ್ಲಿ ಹಲವು ಅನುಮಾನಗಳಿದ್ದು ತನಿಖೆ ನಡೆಸಲಾಗುತ್ತದೆ ಎಂದು ಹೇಳಿಕೊಂಡಿದ್ದಾರೆ.

ಪ್ರತ್ಯೂಷ ಸಾವಿಗೆ ಕಿರುತೆರೆ ಕಲಾವಿದರು ಕಂಬನಿ ಮಿಡಿದಿದ್ದು, ಸಾವಿಗೆ ಸಂತಾಪ ಸೂಚಿಸಿದ್ದಾರೆ. ನಟಿ ಡಾಲಿ ಬಿಂದ್ರಾ ಮಾತನಾಡಿ, ಪ್ರತ್ಯೂಷ ಆತ್ಮಹತ್ಯೆ ಮಾಡಿಕೊಳ್ಳುವಷ್ಟು ದುರ್ಬಲ ಮನಸ್ಥಿತಿಯ ಹುಡುಗಿಯಾಗಿರಲಿಲ್ಲ ಎಂದು ಹೇಳಿದ್ದಾರೆ.

ಇದರಂತೆ ನಟ ಅಜಜ್ ಖಾನ್ ಅವರು ಮಾತನಾಡಿ, ಪ್ರತ್ಯೂಷ ಸಾವು ಆತ್ಮಹತ್ಯೆಯೆಂದು ನಾನು ನಂಬುವುದಿಲ್ಲ. ಇದೊಂದು ಯೋಜನೆ ರೂಪಿಸಿ ಕೊಲೆ ಮಾಡಲಾಗಿದೆ ಎಂದು ಹೇಳಿದ್ದಾರೆ.

ಬಾಲಿಕಾ ವಧು ಧಾರಾವಾಹಿ ‘ದಾದಿಸಾ’ ಖ್ಯಾತಿ ಹಿರಿಯ ನಟಿ ಸುರೇಖ ಸಿಕ್ರಿ ಮಾತನಾಡಿ, ಪ್ರತ್ಯೂಷ 24 ವರ್ಷದ ಹುಡುಗಿ. ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆಂದರೆ ನಂಬಲು ಸಾಧ್ಯವಾಗುತ್ತಿಲ್ಲ. ಆಕೆಯ ಸಾವಿನ ಸುದ್ಧಿ ಕೇಳಿ ಆಘಾತವಾಗಿದೆ. ಪ್ರತ್ಯೂಷ ತುಂಬಾ ಒಳ್ಳೆಯ ಹುಡುಗಿ. ಮನಸ್ಸಿಗೆ ತುಂಬಾ ನೋವಾದ ಕಾರಣದಿಂದ ನೊಂದು ಈ ರೀತಿಯಾಗಿ ಮಾಡಿಕೊಂಡಿರಬಹುದು ಎಂದು ಹೇಳಿದ್ದಾರೆ.

ಕೆಲವು ವರ್ಷಗಳಿಂದಲೂ ನಟಿ ಪ್ರತ್ಯೂಷ ಮತ್ತು ನಟ ರಾಹುಲ್ ರಾಜ್ ಸಿಂಗ್ ಎಂಬುವವರನ್ನು ಪ್ರೀತಿಸುತ್ತಿದ್ದರು. ಇದರಂತೆ ಖಾಸಗಿ ವಾಹನಿಯ ಪವರ್ ಕಪಲ್ ಎಂಬ ರಿಯಾಲಿಟಿ ಶೋನಲ್ಲೂ ಇಬ್ಬರೂ ಭಾಗವಹಿಸಿದ್ದರು. ರಿಯಾಲಿಟಿ ಶೋನಿಂದ ಹೊರ ಬಂದ ಮೇಲೆ ಇಬ್ಬರೂ ಇನ್ನು ಕೆಲವೇ ದಿನಗಳಲ್ಲಿ ಮದುವೆಯಾಗಲಿದ್ದಾರೆಂಬ ವರದಿಗಳು ಕೂಡ ಕೇಳಿಬಂದಿತ್ತು. ಆದರೆ, ಕೆಲ ವೈಯುಕ್ತಿಕ ಕಾರಣಗಳಿಂದಾಗಿ ಕೆಲವು ದಿನಗಳಿಂದ ಇಬ್ಬರ ಸಂಬಂಧದಲ್ಲಿ ಬಿರುಕು ಬಿಟ್ಟಿತ್ತು. ಇದಾದ ಬಳಿಕ ಸಾಕಷ್ಟು ನೊಂದಿದ್ದ ಪ್ರತ್ಯೂಷ ಆತ್ಮಹತ್ಯೆಗೆ ಶರಣಾಗಿದ್ದಾರೆಂದು ಹೇಳಲಾಗುತ್ತಿದೆ.

ಖಾಸಗಿ ವಾಹಿನಿಯೊಂದರಲ್ಲಿ ಪ್ರಸಾರವಾಗುತ್ತಿದ್ದ ಬಾಲಿಕಾ ವಧು ಧಾರಾವಾಹಿಯಲ್ಲಿ ಆನಂದಿ ಎಂಬ ಪಾತ್ರದಲ್ಲಿ ಜನಪ್ರಿಯತೆಯನ್ನು ಗಳಿಸಿದ್ದ ಪ್ರತ್ಯೂಷ, ನಂತರ ಬಿಗ್ ಬಾಸ್ ಸೀಸನ್ 7 ರಲ್ಲೂ ಸ್ಪರ್ಧಿಯಾಗಿ ಭಾಗವಹಿಸಿದ್ದರು. ಬಿಗ್ ಬಾಸ್ ನಿಂದ ಹೊರಬಂದ ನಂತರ ಸಸುರಾಲ್ ಸಿಮರ್ ಕಾ ಎಂಬ ಧಾರಾವಾಹಿಯಲ್ಲಿ ನಟಿಸಿದ್ದರು.

Write A Comment