ರಾಷ್ಟ್ರೀಯ

3 ತಿಂಗಳಲ್ಲಿ 17 ಯೋಧರು ಹುತಾತ್ಮ: ಸಿಯಾಚಿನ್’ಗೆ ಸೇನಾ ಮುಖ್ಯಸ್ಥ ಭೇಟಿ

Pinterest LinkedIn Tumblr

soldiers

ಶ್ರೀನಗರ: ಸಿಯಾಚಿನ್ ನಲ್ಲಿ ಕಳೆದ 3 ತಿಂಗಳಿಂದ ಸಂಭವಿಸಿದ ಭಾರೀ ಹಿಮಪಾತದಲ್ಲಿ ಈ ವರೆಗೂ ಸೇನಾಪಡೆ 17 ಯೋಧರನ್ನು ಕಳೆದುಕೊಂಡಿದ್ದು, ಇದೀಗ ಸೇನಾ ಮುಖ್ಯಸ್ಥ ದಲ್ಬೀರ್ ಸಿಂಗ್ ಅವರು ಜಗತ್ತಿನ ಅತಿ ಎತ್ತರದ ಯುದ್ಧಭೂಮಿಯಾಗಿರುವ ಸಿಯಾಚಿನ್ ಗೆ ಗುರುವಾರ ಭೇಟಿ ನೀಡಿದ್ದಾರೆಂದು ತಿಳಿದುಬಂದಿದೆ.

ಈ ಕುರಿತಂತೆ ಮಾಹಿತಿ ನೀಡಿರುವ ಸೇನಾಪಡೆಯ ವಕ್ತಾರ ಕರ್ನಲ್ ಎಸ್.ಡಿ.ಗೋಸ್ವಾಮಿ ಅವರು, ಕೆಲವು ತಿಂಗಳಿನಿಂದ ಯುದ್ಧಭೂಮಿಯಾಗಿರುವ ಸಿಯಾಚಿನ್ ನಲ್ಲಿ ಸಂಭವಿಸುತ್ತಿರುವ ಘಟನೆಗಳಿಗೆ ಸಂಬಂಧಿಸಿದಂತೆ ಯೋಧರ ಸ್ಥೈರ್ಯವನ್ನು ಹೆಚ್ಚಿಸುವ ಸಲುವಾಗಿ ಸಿಯಾಚಿನ್ ಗೆ ಸೇನಾ ಮುಖ್ಯಸ್ಥ ದಲ್ಬೀರ್ ಸಿಂಗ್ ಅವರು ಭೇಟಿ ನೀಡಿದ್ದಾರೆಂದು ಹೇಳಿದ್ದಾರೆ.

ಭೇಟಿ ವೇಳೆ ಯೋಧರೊಂದಿಗೆ ಮಾತುಕತೆ ನಡೆಸಿದ ಸಿಂಗ್ ಅವರು, ಪರಿಸ್ಥಿತಿ ಕುರಿತಂತೆ ಅವಲೋಕನ ನಡೆಸಿದ್ದಾರೆ. ಅಲ್ಲದೆ, ಭೀಕರ ಹಾಗೂ ಕಷ್ಟಕರ ಸನ್ನಿವೇಶದಲ್ಲೂ ಯೋಧರು ನಿರ್ವಹಿಸುತ್ತಿರುವ ಕಾರ್ಯವನ್ನು ಶ್ಲಾಘಿಸಿದ್ದಾರೆ. ಇದರಂತೆ ಸೇನಾ ಮುಖ್ಯಸ್ಥರು ದಣಿವಿಲ್ಲದಂತೆ ಸಿಯಾಚಿನ್ ನಲ್ಲಿ ದುಡಿಯುವ ಕೂಲಿ ಕಾರ್ಮಿಕರನ್ನು ಭೇಟಿ ಮಾಡಿದ್ದು, ಅವರೊಂದಿಗೆ ಮಾತುಕತೆ ನಡೆಸಿದ್ದಾರೆಂದು ಹೇಳಿದ್ದಾರೆ.

ಇದೇ ವೇಳೆ ಮತ್ತೊಬ್ಬರು ಸೇನಾಧಿಕಾರಿ ಮಾತನಾಡಿದ್ದು, ಸೇನಾ ಮುಖ್ಯಸ್ಥರು ಯೋಧರೊಂದಿಗೆ ಮಾತುಕತೆ ನಡೆಸುವ ವೇಳೆ ಯೋಧರಿಗೆ ಉತ್ತಮ ಶಸ್ತ್ರಾಸ್ತ್ರಗಳು, ಪ್ರತಿಕೂಲ ಹವಾಮಾನ ಪರಿಸ್ಥಿತಿ ಎದುರಿಸಲು ಉತ್ತಮ ಬಟ್ಟೆಗಳನ್ನು, ಕೈವಸ್ತ್ರಗಳು, ಜಾಕೆಟ್ ಗಳು ಹಾಗೂ ಇನ್ನಿತರೆ ಅಗತ್ಯ ವಸ್ತುಗಳನ್ನು ಒದಗಿಸುವುದಾಗಿ ಹೇಳಿದ್ದಾರೆ, ಅಲ್ಲದೆ, ಯೋಧರು ಗಸ್ತು ತಿರುಗುವಾಗ ಬಹಳ ಎಚ್ಚರಿಕೆಯಿಂದಿರುವಂತೆ ಸಲಹೆ ನೀಡಿದ್ದಾರೆಂದು ಹೇಳಿದ್ದಾರೆ.

ಈ ವರ್ಷದ ಆರಂಭಿಕ 3 ತಿಂಗಳಿಂದಲೂ ಸಿಯಾಚಿನ್ ನಲ್ಲಿ ಸಂಭವಿಸುತ್ತಿರುವ ಭಾರೀ ಹಿಮಪಾತದಲ್ಲಿ ಈ ವರೆಗೂ 17 ಯೋಧರು ಹುತಾತ್ಮರಾಗಿದ್ದಾರೆ. ಮಾರ್ಚ್ 25 ರಂದು ಸಂಭವಿಸಿದ ಹಿಮಪಾತದಲ್ಲಿ ಇಬ್ಬರು ಯೋಧರು ಹುತಾತ್ಮರಾಗಿದ್ದರು. ಇದರಂತೆ ಇದೇ ತಿಂಗಳಿನಲ್ಲೇ ಓರ್ವ ಯೋಧ ಸಾವನ್ನಪ್ಪಿ, ಮತ್ತೋರ್ವ ಯೋಧನನ್ನು ರಕ್ಷಣೆ ಮಾಡಲಾಗಿತ್ತು.

ಇನ್ನು ಫೆಬ್ರವರಿ ತಿಂಗಳಿನಲ್ಲಿ ಸಂಭವಿಸಿದ ಹಿಮಪಾತದಲ್ಲಿ 10 ಯೋಧರು ನಾಪತ್ತೆಯಾಗಿದ್ದರು, ನಂತರ ನಾಪತ್ತೆಯಾಗಿದ್ದ ಎಲ್ಲಾ ಯೋಧರೂ ಹುತಾತ್ಮರಾಗಿದ್ದಾರೆಂದು ಅಧಿಕಾರಿಗಳು ಮಾಹಿತಿ ನೀಡಿದ್ದರು.

ಜನವರಿ ತಿಂಗಳಿನಲ್ಲಿ ಸಂಭವಿಸಿದ ಹಿಮಪಾತದಲ್ಲಿ ನಾಲ್ವರು ಯೋಧರು ಹುತಾತ್ಮರಾಗಿದ್ದರು. ಇದು ಈ ವರ್ಷದಲ್ಲಿ ಸಂಭವಿಸಿದ ಘಟನೆಗಳ ವಿವರವಾದರೆ, ಕಳೆದ ವರ್ಷದಲ್ಲೂ 9 ಯೋಧರು ಹುತಾತ್ಮರಾಗಿದ್ದರು. 2014ರಲ್ಲಿ 8 ಮತ್ತು 2013ರಲ್ಲಿ 10 ಯೋಧರು ಹುತಾತ್ಮರಾಗಿದ್ದರು.

Write A Comment