ರಾಷ್ಟ್ರೀಯ

ದೇಶದ 27 ಸೂಕ್ಷ್ಮ ವಿಮಾನ ನಿಲ್ದಾಣಗಳಲ್ಲಿ ಸಿಐಎಸ್ ಎಫ್ ಭದ್ರತೆಯಿಲ್ಲ: ವರದಿ

Pinterest LinkedIn Tumblr

airport-securityನವದೆಹಲಿ: ಬ್ರುಸೆಲ್ ನ ಜವೆಂತಮ್ ವಿಮಾನ ನಿಲ್ದಾಣದ ಮೇಲೆ ಉಗ್ರರ ದಾಳಿ ನಡೆದ ನಂತರ ಭಾರತದ ವಿಮಾನ ನಿಲ್ದಾಣಗಳ ಭದ್ರತೆ ಬಗ್ಗೆ ಆತಂಕ ಹೆಚ್ಚಾಗಿದ್ದು, ಈ ಮಧ್ಯೆ ಸುಮಾರು 27 ಸೂಕ್ಷ್ಮ ವಿಮಾನ ನಿಲ್ದಾಣಗಳಿಗೆ ಕಳೆದ ಐದು ವರ್ಷಗಳಿಂದ ವಿಶೇಷ ಸಿಐಎಸ್ಎಫ್( ಕೇಂದ್ರ ಕೈಗಾರಿಕಾ ಭದ್ರತಾ ಪಡೆ)ಭದ್ರತೆ ಒದಗಿಸಲಾಗಲಿಲ್ಲ. ಇದಕ್ಕೆ ಕಾರಣ ಹಣದ ಕೊರತೆ ಎಂಬುದು ತಿಳಿದುಬಂದಿದೆ.
ಭಾರತದಲ್ಲಿರುವ ಸುಮಾರು 27 ವಿಮಾನ ನಿಲ್ದಾಣಗಳ ಭದ್ರತೆಯನ್ನು ಸಿಆರ್ ಪಿಎಫ್, ಭಾರತ ರಿಸರ್ವ್ ದಳಗಳು (ಸಮಿತಿ) ಅಥವಾ ರಾಜ್ಯ ಪೊಲೀಸ್ ಘಟಕಗಳು ನೋಡಿಕೊಳ್ಳುತ್ತಿದ್ದು, ಅಗತ್ಯವಿರುವ ನಿಯೋಜಿತ ವಿಮಾನಯಾನ ಭದ್ರತಾ ಪಡೆ ಸಿಐಎಸ್ಎಫ್ ನ್ನು ಇಲ್ಲಿಗೆ ನಿಯೋಜಿಸಿಲ್ಲ.
ಸಾರಿಗೆ, ಪ್ರವಾಸೋದ್ಯಮ ಮತ್ತು ಸಂಸ್ಕೃತಿಗೆ ಸಂಬಂಧಿಸಿದ ಸಂಸದೀಯ ಸ್ಥಾಯಿ ಸಮಿತಿಗೆ ಸಂಬಂಧಪಟ್ಟ ಇಲಾಖೆಯೊಂದು ಈ ಬಗ್ಗೆ ವರದಿ ನೀಡಿದ್ದು, ಅದರಲ್ಲಿ ಕಳವಳ ವ್ಯಕ್ತಪಡಿಸಿದೆ. ಅತಿ ಸೂಕ್ಷ್ಮ 8 ವಿಮಾನ ನಿಲ್ದಾಣಗಳು ಮತ್ತು 19 ಸೂಕ್ಷ್ಮ ವಿಮಾನ ನಿಲ್ದಾಣಗಳು ಸಿಐಎಸ್ ಎಫ್ ನ ವ್ಯಾಪ್ತಿಗೆ ಒಳಪಡುತ್ತಿಲ್ಲ ಎಂದು ವರದಿಯಲ್ಲಿ ತಿಳಿದುಬಂದಿದೆ.
ವರದಿಯಲ್ಲಿ ವಿಮಾನ ನಿಲ್ದಾಣಗಳ ಭದ್ರತೆಯನ್ನು ಹೆಚ್ಚಿಸಬೇಕಾದ ಅಗತ್ಯದ ಬಗ್ಗೆ ಒತ್ತಿ ಹೇಳಲಾಗಿದೆ. ದೇಶದ ಭದ್ರತೆ ದೃಷ್ಟಿಯಿಂದ ನಾಗರಿಕ ವಿಮಾನಯಾನ ಭದ್ರತೆ ಅತ್ಯಂತ ಪ್ರಮುಖ ಭಾಗವಾಗಿದೆ. ವಿಮಾನ ನಿಲ್ದಾಣಗಳ ಮೇಲೆ ಅತ್ಯಂತ ದೊಡ್ಡ ಮಟ್ಟಿನ ಹಾನಿ ಅಥವಾ ಭಯೋತ್ಪಾದಕ ದಾಳಿಯಂತಹ ಘಟನೆಗಳು ಜನರ ಮತ್ತು ದೇಶದ ಆರ್ಥಿಕ ಪರಿಸ್ಥಿತಿ ಮೇಲೆ ಭಾರೀ ಹಾನಿಯನ್ನುಂಟುಮಾಡುತ್ತದೆ. ಹಣದ ಕೊರತೆಯಿಂದಾಗಿ ಸಿಐಎಸ್ ಎಫ್ ನ್ನು ಸುಮಾರು 27 ವಿಮಾನ ನಿಲ್ದಾಣಗಳಲ್ಲಿ ನಿಯೋಜಿಸಿಲ್ಲ ಎಂದು ಸಮಿತಿಯ ವರದಿ ತಿಳಿಸಿದೆ.

Write A Comment