
ಬೆಂಗಳೂರು: ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಬಾಂಗ್ಲಾ ವಿರುದ್ಧ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಭಾರತ ತಂಡ 1 ರನ್ ಗಳಿಂದ ರೋಚಕ ಜಯ ಸಾಧಿಸಿದೆಯಾದರೂ ಸೆಮಿಫೈನಲ್ ಹಾದಿಗೆ ಸ್ಪಷ್ಟ ಹೆಜ್ಜೆ ಇಡಲು ಇನ್ನೂ ಒಂದು ಹೆಜ್ಜೆ ಬಾಕಿ ಇದೆ.
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಿನ್ನೆ ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ 1 ರನ್ ಗಳ ರೋಚಕ ಜಯ ಸಾಧಿಸಿದೆಯಾದರೂ, ಭಾರತ ಸೆಮಿಫೈನಲ್ ಗೆ ಇನ್ನೂ ಸಂಪೂರ್ಣವಾಗಿ ಕಾಲಿಟ್ಟಿಲ್ಲ. ಹೀಗಾಗಿ ಭಾರತದ ಮುಂದಿನ ಪಂದ್ಯಗಳ ಜೊತೆ ಜೊತೆಗೆ ತನ್ನ ಗ್ರೂಪ್ ನ ಇತರೆ ತಂಡಗಳು ಅಂದರೆ ಪಾಕಿಸ್ತಾನ ಮತ್ತು ಆಸ್ಟ್ರೇಲಿಯಾ ತಂಡಗಳ ಫಲಿತಾಂಶ ಕೂಡ ಭಾರತ ಮುಂದಿನ ಹಾದಿಯ ಮೇಲೆ ಪರಿಣಾಮ ಬೀರಬಲ್ಲದು.
ಹೀಗಾಗಿ ಇದೇ ಮಾರ್ಚ್ 27ರಂದು ನಡೆಯಲಿರುವ ಆಸ್ಟ್ರೇಲಿಯಾ ವಿರುದ್ಧ ಪಂದ್ಯ ಭಾರತಕ್ಕೆ ಮತ್ತೆ ಮಾಡು ಇಲ್ಲವೇ ಮಡಿ ಸ್ಥಿತಿಯಂತಾಗಿದೆ. ಭಾರತದ ಈ ಸ್ಥಿತಿಗೆ ಭಾರತದ ಬ್ಯಾಟಿಂಗ್ ವೈಫಲ್ಯವೇ ಕಾರಣ ಎಂದು ಹೇಳಬಹುದು. ಟೂರ್ನಿ ಆರಂಭಕ್ಕೂ ಮುನ್ನ ತನ್ನ ಬಲಿಷ್ಟ ಬ್ಯಾಟಿಂಗ್ ಲೈನ್ ಅಪ್ ನಿಂದಲೇ ಭಾರತ ತಂಡ ಟಿ20 ವಿಶ್ವಕಪ್ ಗೆಲ್ಲುವ ಫೇವರಿಟ್ ತಂಡ ಎನಿಸಿತ್ತು. ಆದರೆ ಟೂರ್ನಿ ಆರಂಭದ ಬಳಿಕ ಭಾರತದ ಬಲಿಷ್ಠ ಬ್ಯಾಟಿಂಗ್ ನ ವೈಫಲ್ಯ ತಂಡಕ್ಕೆ ಮಾರಕವಾಗಿ ಪರಿಣಮಿಸಿದೆ. ಭಾರತ ಗೆದ್ದಿರುವ ಎರಡೂ ಪಂದ್ಯಗಳಲ್ಲೂ ಬೌಲರ್ ಗಳು ನಿರ್ಣಾಯಕ ಪಾತ್ರವಹಿಸಿ ಭಾರತದ ಜಯಕ್ಕೆ ಕಾರಣರಾಗಿದ್ದರು. ಹೀಗಾಗಿ ಮುಂಬರುವ ಆಸ್ಟ್ರೇಲಿಯಾದಂತಹ ದೈತ್ಯ ಪಡೆಯ ವಿರುದ್ಧದ ಪಂದ್ಯದಲ್ಲಿ ಗೆಲ್ಲಬೇಕೆಂದರೆ ಈಗಿನ ಬೌಲಿಂಗ್ ಸಹಾಯದೊಂದಿಗೆ ಬ್ಯಾಟ್ಸಮನ್ ಗಳೂ ಕೂಡ ಸಿಡಿದೇಳಬೇಕಿದೆ.
ನಿರ್ಣಾಯಕವಾಗಲಿರುವ ಆಸಿಸ್ ವಿರುದ್ಧದ ಪಂದ್ಯ
ಇನ್ನು ಮುಂಬರುವ 27ರಂದು ನಡೆಯಲಿರುವ ಪಂದ್ಯ ಭಾರತಕ್ಕೆ ನಿರ್ಣಾಯಕವಾಗಲಿದ್ದು, ಈ ಪಂದ್ಯ ಗೆದ್ದರೆ ಭಾರತದ ಸೆಮಿಫನಲ್ ಹಾದಿ ಸುಗಮವಾಗಲಿದೆ. ಒಂದು ವೇಳೆ ಸೋತರೆ ಆಗ ನೆಟ್ ರನ್ ರೇಟ್ ಲೆಕ್ಕಾಚಾರ ಆರಂಭವಾಗುತ್ತದೆ. ಈಗಾಗಲೇ ಕಿವೀಸ್ ವಿರುದ್ಧದ ಒಂದು ಪಂದ್ಯ ಸೋತಿರುವ ಭಾರತ ಆಸ್ಟ್ರೇಲಿಯಾ ವಿರುದ್ಧವೂ ಸೋತರೆ, ಸರಣಿಯಲ್ಲಿ ಪಾಕಿಸ್ತಾನ ಜೀವಂತವಾಗಿರುತ್ತದೆ. ಅಲ್ಲದೆ ಆಸ್ಟ್ರೇಲಿಯಾ ಕೂಡ ಸೆಮಿಫೈನಲ್ ರೇಸ್ ಗೆ ಬರಲಿದೆ. ಭಾರತದ ನೆಟ್ ರನ್ ರೇಟ್ ಈ ಎರಡೂ ತಂಡಗಳಿಗಿಂತ ಕಡಿಮೆ ಇರುವುದರಿಂದ ಭಾರತ ಶತಾಯಗತಾಯ ಆಸ್ಟ್ರೇಲಿಯಾ ವಿರುದ್ಧ ಗೆಲ್ಲಲೇಬೇಕಿದೆ.
ಆಸಿಸ್ ವಿರುದ್ಧದ ಪಂದ್ಯ ಸೋತರೆ ಮುಂದೇನು?
ಒಂದು ವೇಳೆ ಆಸ್ಟ್ರೇಲಿಯಾ ವಿರುದ್ಧದ ಪಂದ್ಯವನ್ನು ಭಾರತ ಕೈಚೆಲ್ಲಿದರೆ, ಆಗ ರನ್ ರೇಟ್ ಲೆಕ್ಕಾಚಾರ ಶುರುವಾಗುತ್ತದೆ. ಉಪಾಂತ್ಯದ ರೇಸ್ ನಲ್ಲಿ ಆಗ 3 ತಂಡಗಳು ಸೆಣಸಬೇಕಾಗುತ್ತದೆ. ಕಿವೀಸ್ ಪಡೆ ಈಗಾಗಲೇ 3 ಪಂದ್ಯಗಳನ್ನು ಗೆದ್ದು ಉಪಾಂತ್ಯದಲ್ಲಿ ಸ್ಥಾನ ಭದ್ರಪಡಿಸಿಕೊಂಡಿರುವುದರಿಂದ ಭಾರತ, ಪಾಕಿಸ್ತಾನ ಹಾಗೂ ಆಸ್ಟ್ರೇಲಿಯಾ ನಡುವೆ ಪೈಪೋಟಿ ಆರಂಭವಾಗುತ್ತದೆ. ಇನ್ನು ನಾಳೆ ಪಾಕಿಸ್ತಾನ ಮತ್ತು ಆಸ್ಟ್ರೇಲಿಯಾ ನಡುವೆ ಪಂದ್ಯ ಇದ್ದು, ಈ ಪಂದ್ಯದ ಫಲಿತಾಂಶ ಕೂಡ ಭಾರತಕ್ಕೆ ಪ್ರಮುಖವಾಗಿದೆ. ಆಸ್ಟ್ರೇಲಿಯಾ ತಂಡ ತಾನಾಡಿರುವ 2 ಪಂದ್ಯಗಳಲ್ಲಿ ಒಂದರಲ್ಲಿ ಸೋತು ಮತ್ತೊಂದರಲ್ಲಿ ಜಯಗಳಿಸಿದ್ದು, ಪಾಕಿಸ್ತಾನ ತಾನಾಡಿರುವ ಮೂರು ಪಂದ್ಯಗಳಲ್ಲಿ 2 ಸೋತು ಒಂದು ಪಂದ್ಯದಲ್ಲಿ ಜಯಗಳಿಸಿದೆ.
ಆಸಿಸ್ ವಿರುದ್ಧ ಭಾರತ ಗೆಲ್ಲಬೇಕು
ಉಪಾಂತ್ಯಕ್ಕೆ ಭಾರತ ತನ್ನ ರಾಜಮಾರ್ಗ ಸೃಷ್ಟಿಸಿಕೊಳ್ಳಬೇಕು ಎಂದರೆ 27ರಂದು ನಡೆಯಲಿರುವ ಆಸ್ಟ್ರೇಲಿಯಾ ವಿರುದ್ಧ ಪಂದ್ಯದಲ್ಲಿ ಜಯಗಳಿಸಲೇ ಬೇಕಾದ ಅವಶ್ಯಕತೆ ಇದೆ.