
ಮುಂಬೈ: ಐಪಿಎಲ್ ನ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪ್ರಾಂಚೈಸಿಯ ನಿರ್ದೇಶಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಉದ್ಯಮಿ ವಿಜಯ್ ಮಲ್ಯ, ಈಗ ಔಷಧ ಸಂಸ್ಥೆ ಸನೋಫಿ ಇಂಡಿಯಾ ಲಿಮಿಟೆಡ್ (ಎಸ್ಐಎಲ್) ಅಧ್ಯಕ್ಷ ಸ್ಥಾನದಿಂದಲೂ ಹೊರನಡೆದಿದ್ದಾರೆ.
ಈ ವಿಷಯವನ್ನು ಸ್ವತಃ ಸನೋಫಿ ಸಂಸ್ಥೆಯೇ ಸ್ಪಷ್ಟಪಡಿಸಿದ್ದು, 23 ವರ್ಷಗಳ ಕಾಲ ಸನೋಫಿ ಸಂಸ್ಥೆಯೊಂದಿಗೆ ಸಕ್ರಿಯರಾಗಿದ್ದ ಉದ್ಯಮಿ ವಿಜಯ್ ಮಲ್ಯ ಅವರು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದಿದ್ದಾರೆ ಎಂದು ತಿಳಿಸಿದೆ. ಮುಂಬರುವ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ನಿರ್ದೇಶಕರಾಗಿ ಪುನರಾಯ್ಕೆ ಮಾಡಬಾರದೆಂದು ಸಂಸ್ಥೆಗೆ ವಿಜಯ್ ಮಲ್ಯ ಹೇಳಿರುವುದರ ಬಗ್ಗೆ ಎಸ್ಐಎಲ್ ಸಂಸ್ಥೆ ಮಾಹಿತಿ ನೀಡಿದೆ. ಮಲ್ಯ ಅವರು 1973ರಲ್ಲಿ ಮೊತ್ತ ಮೊದಲ ಬಾರಿಗೆ ಹೊಚೆಸ್ಟ್ ಫಾರ್ಮಾಸ್ಯೂಟಿಕಲ್ಸ್ ಗೆ ನಿರ್ದೇಶಕರಾಗಿ ಆಯ್ಕೆ ಗೊಂಡಿದ್ದರು. ನಂತರ ಸಂಸ್ಥೆಯ ಹೆಸರನ್ನು ಸನೋಫಿ ಇಂಡಿಯಾ ಲಿಮಿಟೆಡ್ ಎಂದು ಬದಲಾವಣೆ ಮಾಡಲಾಗಿತ್ತು.
ಸಂಸ್ಥೆಯ ಅಭಿವೃದ್ಧಿಯಲ್ಲಿ ಹೆಚ್ಚು ಕಾಲ ಪಾಲ್ಗೊಂಡಿದ್ದು, ಹೊಚೆಸ್ಟ್ ಫಾರ್ಮಾಸ್ಯೂಟಿಕಲ್ಸ್ ಗೆ ನಿರ್ದೇಶಕನಾಗಿ ಅತಿ ಹೆಚ್ಚು ಕಾಲ ಕಾರ್ಯನಿರ್ವಹಿಸುವ ಸೌಭಾಗ್ಯ ಸಿಕ್ಕಿತ್ತು ಎಂದು ವಿಜಯ್ ಮಲ್ಯ ಪತ್ರದಲ್ಲಿ ತಿಳಿಸಿದ್ದಾರೆ.