ಮನೋರಂಜನೆ

ಗೆದ್ದಿದ್ದು ಟೀಂ ಇಂಡಿಯಾ ಅಲ್ಲ, ಧೋನಿ ನಾಯಕತ್ವ; ನಿರ್ಣಾಯಕ ಘಟ್ಟದಲ್ಲಿ ಚಾಣಾಕ್ಷತನ ಮೆರೆದ ನಾಯಕ ಮಹೇಂದ್ರ ಸಿಂಗ್ ಧೋನಿ

Pinterest LinkedIn Tumblr

Ind-bangla_March 23-2016-009

ಬೆಂಗಳೂರು: ಬುಧವಾರ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಬಾಂಗ್ಲಾದೇಶದ ವಿರುದ್ಧದ ಪಂದ್ಯದಲ್ಲಿ ಭಾರತ ತಂಡ 1 ರನ್ ಅಂತರದಲ್ಲಿ ರೋಚಕ ಜಯ ಸಾಧಿಸಿರಬಹುದು ಆದರೆ ಪಂದ್ಯದ ಗೆಲುವಿಗೆ ನಿಜವಾದ ಕಾರಣ ನಾಯಕ ಮಹೇಂದ್ರ ಸಿಂಗ್ ಧೋನಿ ಎಂಬ ವಿಶ್ಲೇಷಣೆಗಳು ಕೂಡ ಕೇಳಿಬರುತ್ತಿವೆ.

ಚಿನ್ನಸ್ವಾಮಿ ಕ್ರೀಡಾಂಗಣದಂತಹ ಪಿಚ್ ನಲ್ಲಿ 146 ರನ್ ಗಳನ್ನು ಬೆನ್ನಟ್ಟುವುದು ಸಾವಾಲಿನ ಕೆಲಸವೇನಲ್ಲ ಎಂಬುದು ತಜ್ಞರ ಅಭಿಪ್ರಾಯ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮೊದಲು ಬ್ಯಾಟಿಂಗ್ ಮಾಡುವ ತಂಡದ ಸರಾಸರಿ ಮೊತ್ತವೇ 157 ರನ್ ಗಳಾಗಿದೆ. ಹೀಗಿದ್ದು ಭಾರತ ಮಾತ್ರ ಈ ಪಂದ್ಯದಲ್ಲಿ ಹೆಚ್ಚು ರನ್ ಗಳಿಸಲು ತಿಣುಕಾಡಿದ್ದು ಮಾತ್ರ ಬಾಂಗ್ಲಾದೇಶದಗ ಸಂಘಟಿತ ಬೌಲಿಂಗ್ ಮತ್ತು ಅದ್ಭುತ ಕ್ಷೇತ್ರರಕ್ಷಣೆಯಿಂದಾಗಿ. ಭಾರತ ನೀಡಿದ 146 ರನ್ ಗಳನ್ನು ಬಾಂಗ್ಲಾದೇಶ ಸುಲಭವಾಗಿ ಮುಟ್ಟ ಬಹುದಿತ್ತು. ಆದರೆ ಭಾರತದ ಬಲಿಷ್ಠ ಬೌಲಿಂಗ್ ಪಡೆ ಹಾಗೂ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿಯ ಚಾಣಾಕ್ಷ ನಾಯಕತ್ವದಿಂದಾಗಿ ಬಾಂಗ್ಲಾ ಆ ಗುರಿಯನ್ನು ಬೆನ್ನಟ್ಟುವಲ್ಲಿ ವಿಫಲವಾಯಿತು. ಸಾಧಾರಣ ಮೊತ್ತ ಕಲೆಹಾಕಿದ ಭಾರತ ತಂಡಕ್ಕೆ ಬಾಂಗ್ಲಾದೇಶವನ್ನು ಕಟ್ಟಿ ಹಾಕುವುದು ನಿಜಕ್ಕೂ ಸವಾಲಿನ ಕೆಲಸವಾಗಿತ್ತು.

ಬಾಂಗ್ಲಾ ಬ್ಯಾಟ್ಸಮನ್ ಗಳು ಭಾರತೀಯ ಬೌಲರ್ ಗಳನ್ನು ದಂಡಿಸುವ ಸೂಚನೆ ದೊರೆಯುತ್ತಿದ್ದಂತೆಯೇ ಧೋನಿ ಬೌಲರ್ ಗಳನ್ನು ಬದಲಿಸುತ್ತಿದ್ದರು. ಇದು ಭಾರತಕ್ಕೆ ಸಕಾರತ್ಮಕವಾಗಿ ಪರಿಣಮಿಸಿತು. ಭಾರತದ ಪಾಳಯದ ಬೌಲಿಂಗ್ ಅಸ್ತ್ರವಾಗಿದ್ದ ಆರ್ ಅಶ್ವಿನ್ ಅವರ 4 ಓವರ್ ಗಳನ್ನು ಅಗತ್ಯಕ್ಕಿಂತ ಮೊದಲೇ ಧೋನಿ ಬಳಸಿಕೊಂಡಿದ್ದರು. ಆಶ್ವಿನ್ ಸ್ಪಿನ್ ಜಾದೂ ನಡುವೆಯೂ ಬಾಂಗ್ಲಾದೇಶ ಭಾರತಕ್ಕೆ ಉತ್ತಮ ಹೋರಾಟ ನೀಡುತ್ತಾ ಬಂದಿತ್ತು. ಇದು ಕ್ರಿಕೆಟ್ ತಜ್ಞರ ಹುಬ್ಬೇರುವಂತೆ ಮಾಡಿತ್ತು. ಆದರೆ ಬಾಂಗ್ಲಾದೇಶದ ರನ್ ವೇಗಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಇದು ಧೋನಿಗೆ ಅನಿವಾರ್ಯವಾಗಿತ್ತು.

ಈ ಹಂತದಲ್ಲಿ ಧೋನಿ ನೆರವಿಗೆ ನಿಂತದ್ದು, ಸರ್ ಜಡೇಜಾ. ಅಶ್ವಿನ್ ಸ್ಪೆಲ್ ಮುಗಿಯುದ್ದಂತೆಯೇ ಭಾರತದ ಪಾಳಯದಲ್ಲಿ ಮುಂದೇನು ಎಂಬ ಪ್ರಶ್ನೆ ಮೂಡಿತು. ಈ ಹಂತದಲ್ಲಿ ಬಾಂಗ್ಲಾ ಬ್ಯಾಟ್ಸಮನ್ ಗಳನ್ನು ನಿಯಂತ್ರಿಸಿದ್ದು ರವೀಂದ್ರ ಜಡೇಜಾ ಅವರ ಮಾರಕ ಸ್ಪಿನ್. ಒಟ್ಟು 4 ಓವರ್ ಎಸೆದ ಜಡೇಜಾ ಕೇವಲ 22 ರನ್ ನೀಡಿ 2 ಪ್ರಮುಖ ವಿಕೆಟ್ ಕಬಳಿಸಿದರು. ಪಾರ್ಟ್ ಟೈಮ್ ಸ್ಪಿನ್ನರ್ ಸುರೇಶ್ ರೈನಾ ಕೂಡ ಒಂದು ವಿಕೆಟ್ ಪಡೆವ ಮೂಲಕ ಧೋನಿ ನಿರ್ಧಾರವನ್ನು ಸಮರ್ಥಿಸಿಕೊಂಡರು. ಈ ನಡುವೆ ಭಾರತ ತಂಡ ನೀಡಿದ ಮೂರು ಜೀವದಾನಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಂಡ ಬಾಂಗ್ಲಾ ಪಡೆ ಮತ್ತಷ್ಟು ಗೆಲುವಿನ ಸನಿಹಕ್ಕೆ ಬಂದಿತ್ತು.

ಕೊನೆ ಓವರ್ ನಲ್ಲಿ ನಡೀತು ಮ್ಯಾಜಿಕ್
ಆದರೆ ಕೊನೆಯ ಓವರ್ ನ ಮ್ಯಾಜಿಕ್ ಬಾಂಗ್ಲಾದೇಶದ ಗೆಲುವಿನ ಆಸೆಯನ್ನೇ ಕಸಿದುಕೊಂಡಿತ್ತು. ಕೊನೆ ಓವರ್ ಎಸೆಯಲು ನಾಯಕ ಧೋನಿ ಆರಿಸಿದ ಬೌಲರ್ ಆಯ್ಕೆ ಕೂಡ ನಿಜಕ್ಕೂ ಅಚ್ಚರಿಗೆ ಕಾರಣವಾಗಿತ್ತು. ಅದಾಗಲೇ 2 ಓವರ್ ಎಸೆದಿದ್ದ ಹಾರ್ದಿಕ್ ಪಾಂಡ್ಯ ನಿಜಕ್ಕೂ ಬಾಂಗ್ಲಾ ಬ್ಯಾಟ್ಸಮನ್ ಗಳಿಂದ ದಂಡನೆಗೆ ಒಳಗಾಗಿದ್ದರು. 2 ಓವರ್ ಗೆ 20 ರನ್ ನೀಡುವ ಮೂಲಕ ಹಾರ್ದಿಕ್ ಪಾಂಡ್ಯ ಕ್ರಿಕೆಟ್ ಪ್ರೇಮಿಗಳ ಆಕ್ರೋಶಕ್ಕೆ ಕಾರಣವಾಗಿದ್ದರು. ಆದರೂ ಪಾಂಡ್ಯಾ ಮೇಲೆ ಭರವಸೆ ಇಟ್ಟ ಧೋನಿ ಪಾಂಡ್ಯಾಗೆ ಕೊನೆಯ ಓವರ್ ನ ಹೊಣೆ ವಹಿಸಿದರು.

ಅಂತಿಮ ಓವರ್ ನಲ್ಲಿ ಬಾಂಗ್ಲಾಗೆ ಗೆಲ್ಲಲು 11 ರನ್ ಗಳ ಅವಶ್ಯಕತೆ ಇತ್ತು. ಮೊದಲ ಎಸೆತದಲ್ಲಿ ಪಾಂಡ್ಯಾ 1 ರನ್ ನೀಡಿದರು. 2 ಮತ್ತು 3ನೇ ಎಸೆತದಲ್ಲಿ ಸತತ 2 ಬೌಂಡರಿಗಳನ್ನು ನೀಡಿ ಧೋನಿ ನಿರ್ಧಾರವನ್ನು ಪ್ರಶ್ನಿಸುವಂತೆ ಮಾಡಿದ್ದರು. ಆಗ ನಿಜಕ್ಕೂ ಪಾಂಡ್ಯಾ ಭಾರತದ ಪಾಲಿಗೆ ವಿಲನ್ ಆಗಿ ಕಂಡುಬಂದರು. ಈ ಹಂತದಲ್ಲಿ ಪಂದ್ಯ ಭಾರತದ ಕೈ ಜಾರಿತ್ತು ಎಂದೇ ಎಲ್ಲರೂ ಭಾವಿಸಿದ್ದರು. ಆಗ ಪಾಂಡ್ಯಾರನ್ನು ಕರೆಸಿಕೊಂಡ ಧೋನಿ ಒಂದಷ್ಟು ಟಿಪ್ಸ್ ನೀಡಿದರು. ಯಾವುದೇ ಕಾರಣಕ್ಕೂ ಯಾರ್ಕರ್ ಎಸೆಯದಂತೆ ಮತ್ತು ಲೈನ್ ಅಂಡ್ ಲೆನ್ತ್ ಕಾಯ್ದುಕೊಂಡು ಬೌಲ್ ಮಾಡುವಂತೆ ಆದೇಶಿಸಿದರು. ನಾಯಕ ಧೋನಿ ಹಾಗೂ ಹಿರಿಯ ಆಟಗಾರ ನೆಹ್ರಾ ಸಲಹೆಯಂತೆ ಪಾಂಡ್ಯಾ 4ನೇ ಎಸೆತದಲ್ಲಿ ಮುಶ್ಫಿಕರ್ ರಹೀಮ್ ಅವರನ್ನು ಔಟ್ ಮಾಡುವ ಮೂಲಕ ಮತ್ತೆ ಭಾರತದ ಪಾಳಯದಲ್ಲಿ ಗೆಲುವಿನ ಆಸೆ ಮೂಡಿಸಿದರು. ಐದನೇ ಎಸೆತದಲ್ಲಿ ಕೂಡ ಮಹಮದುಲ್ಲಾ ವಿಕೆಟ್ ಪಡೆಯುವ ಮೂಲಕ ಪಾಂಡ್ಯಾ ಪಂದ್ಯಕ್ಕೆ ರೋಚಕ ತಿರುವು ನೀಡಿದರು.

ಆಗ ನಿಜಕ್ಕೂ ಧೋನಿ ಚಾಣಾಕ್ಷ ಗೇಮ್ ಪ್ಲಾನ್ ವರ್ಕ್ ಔಟ್ ಆಗಿತ್ತು. ಈ ಹಂತದಲ್ಲಿ ಬಾಂಗ್ಲಾ ಪಡೆಯ ಗ್ಲಾಮರ್ ಶಾಟ್ ಹುಚ್ಚು ಆ ತಂಡಕ್ಕೆ ಸೋಲಿನ ಶಾಕ್ ನೀಡಿತು. ಗ್ಲಾಮರ್ ಶಾಟ್ ಮೂಲಕ ಬೌಂಡರಿ ಸಿಡಿಸಿ ಪಂದ್ಯ ಗೆಲ್ಲಬೇಕು ಎಂಬ ಬಾಂಗ್ಲಾ ಹುಲಿಗಳ ಕನಸನ್ನು ಪಾಂಡ್ಯಾ ನುಚ್ಚುನೂರು ಮಾಡಿದ್ದರು. 6ನೇ ಎಸೆತದಲ್ಲಿ ಬಾಂಗ್ಲಾಗೆ ಗೆಲ್ಲಲು 2 ರನ್ ಗಳ ಅವಶ್ಯಕತೆ ಇತ್ತು. ಆಗ ನಿಜಕ್ಕೂ ಒತ್ತಡದಲ್ಲಿದ್ದದ್ದು ಮಾತ್ರ ಪಾಂಡ್ಯಾ. ಏಕೆಂದರೆ ಅದಾಗಲೇ 2 ವಿಕೆಟ್ ಪಡೆಯುವ ಮೂಲಕ ಪಾಂಡ್ಯಾಗೆ ಹ್ಯಾಟ್ರಿಕ್ ಸಾಧನೆಯ ಒತ್ತಡ ಒಂದೆಡೆಯಾದರೆ, ಬಾಂಗ್ಲಾಗೆ ಗೆಲುವಿನ ರನ್ ಬಿಡಬಾರದು ಎಂಬ ಒತ್ತಡ ಮತ್ತೊಂದೆಡೆ. ಹೀಗಾಗಿ ಕೊನೆಯ ಎಸೆತದಲ್ಲಿ ಪಾಂಡ್ಯಾ ಲೈನ್ ಅಂಡ್ ಲೆನ್ತ್ ಕಾಯ್ದುಕೊಂಡು ಬಾಲ್ ಎಸೆದರು. ಆದರೆ ಎಸೆತವನ್ನು ಮಿಸ್ ಮಾಡಿಕೊಂಡ ಶುವಗಾತ ಒಂದು ರನ್ ಗಳಿಸುವ ಯತ್ನ ಮಾಡಿದರು. ಆದರೆ ವಿಕೆಟ್ ಹಿಂದಿದ್ದ ಧೋನಿ ಓಡಿಬಂದು ಮುಸ್ತಫಿಜುರ್ ಅವರನ್ನು ರನ್ ಔಟ್ ಮಾಡುವ ಮೂಲಕ ಭಾರತಕ್ಕೆ 1 ರನ್ ನ ರೋಚಕ ಜಯ ತಂದಿತ್ತರು.

Write A Comment