ಕನ್ನಡ ವಾರ್ತೆಗಳು

ಹದಿಹರೆಯದ ಮಕ್ಕಳಿಂದ ಅಂತರ್ಜಾಲದ ಮೂಲಕ ಅಶ್ಲೀಲ ವೀಡಿಯೊ ವಿಕ್ಷಣೆ : ಹೆಚ್ಚುತ್ತಿರುವ ಅತ್ಯಾಚಾರ, ಹೆಣ್ಣು ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ

Pinterest LinkedIn Tumblr

child_kidnap_presmeet

ಮಂಗಳೂರು, ಮಾ. 24: ಹದಿಹರೆಯದ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಅಂತರ್ಜಾಲದ ಮೂಲಕ ಅಶ್ಲೀಲ ವೀಡಿಯೊಗಳನ್ನು ವೀಕ್ಷಿಸುತ್ತಿರುವುದರಿಂದ ಅಂತಹ ವೀಡಿಯೊಗಳನ್ನು ತಡೆಗಟ್ಟಲು ಒತ್ತಾಯಿಸಿ ರೆಸ್ಕೂ ಸಂಸ್ಥೆಯು ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ಸಲ್ಲಿಸಲು ನಿರ್ಧರಿಸಿದೆ ಎಂದು ಸರಕಾರೇತರ ಸಂಸ್ಥೆಯಾಗಿರುವ (ಎನ್‌ಜಿಒ) ರೆಸ್ಕೂನ ಸಂಸ್ಥಾಪಕ ಹಾಗೂ ಲಂಡನ್‌ನ ನೀತಿಸಾಸ್ತ್ರ ಮತ್ತು ಸಂಖ್ಯಾಶಾಸ್ತ್ರ ಬೋಧಕರಾದ ಅಭಿಷೇಕ್ ಕ್ಲಿಫರ್ಡ್ ಅವರು ತಿಳಿಸಿದ್ದಾರೆ.

ಬುಧವಾರ ನಗರದ ಪತ್ರಿಕಾಭವನದಲ್ಲಿ ಪತ್ರಿಕಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ರೀತಿ ಹದಿಹರೆಯದ ಮಕ್ಕಳು ಅಶ್ಲೀಲ ವೀಡಿಯೊಗಳನ್ನು ವೀಕ್ಷಿಸುತ್ತಿರುವುದರಿಂದ ಸಾಮೂಹಿಕ ಅತ್ಯಾಚಾರ, ಹೆಣ್ಣು ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯಕ್ಕೆ ಪ್ರಮುಖ ಕಾರಣವಾಗುತ್ತಿದೆ. ಮಾತ್ರವಲ್ಲದೇ ಅಶ್ಲೀಲ ವೀಡಿಯೊಗಳ ವೀಕ್ಷಣೆಯು ಹೆಣ್ಣುಮಕ್ಕಳ ಅಕ್ರಮ ಸಾಗಾಟಕ್ಕೆ ಕಾರಣವಾಗುತ್ತಿರುವುದಲ್ಲದೆ ಶಾಲಾ ಕಾಲೇಜು ವಿದ್ಯಾರ್ಥಿನಿಯರ ಸಾಮೂಹಿಕ ಅತ್ಯಾಚಾರಕ್ಕೂ ಪ್ರಮುಖ ಕಾರಣವಾಗುತ್ತಿದೆ ಎಂಬುದು ತಮ್ಮ ಸಮೀಕ್ಷೆಯಿಂದ ದೃಢಪಟ್ಟಿದೆ ಎಂದು ತಿಳಿಸಿದರು.

ಸಂಸ್ಥೆಯು ಈಗಾಗಲೇ ದೇಶದ ಹಲವು ರಾಜ್ಯಗಳಲ್ಲಿ ಹಾಗೂ ಜಿಲ್ಲೆಗಳಲ್ಲಿ ಅಶ್ಲೀಲ ವೀಡಿಯೊ ವೀಕ್ಷಣೆಯ ದುಷ್ಪರಿಣಾಮಗಳ ಕುರಿತಂತೆ ಸಮೀಕ್ಷೆ ನಡೆಸಿರುವುದಲ್ಲದೆ, ಪ್ರತಿ ವರ್ಷ 200 ಕಾಲೇಜುಗಳಲ್ಲಿ 50,000 ವಿದ್ಯಾರ್ಥಿಕ ನೈತಿಕ ವೌಲ್ಯದ ಬಗ್ಗೆ ಬೋಧನೆ ಮಾಡುತ್ತಿದೆ. ಕರ್ನಾಟಕದಲ್ಲಿ ಈಗಾಗಲೇ ಮೈಸೂರು, ಚಾಮರಾಜನಗರ, ಧಾರವಾಡ, ಬೆಂಗಳೂರು, ಮಂಡ್ಯ, ಗದಗ, ಬೀದರ್‌ಗಳಲ್ಲಿ ಸಮೀಕ್ಷೆ ನಡೆಸಿರುವ ಸಂಸ್ಥೆ, ಮಂಗಳೂರಿನಲ್ಲಿಯೂ ಈ ಬಗ್ಗೆ ಸಮೀಕ್ಷೆ ಕೈಗೊಂಡಿದೆ.

ಮಂಗಳೂರಿನ 25 ಕಾಲೇಜುಗಳಲ್ಲಿ 470 ವಿದ್ಯಾರ್ಥಿಗಳ ಸಮೀಕ್ಷೆಯಲ್ಲಿ ಶೇ. 68ರಷ್ಟು ಪದವಿ ಹುಡುರು ಅಶ್ಲೀಲ ವೀಡಿಯೊ ವೀಕ್ಷಿಸುತ್ತಾರೆ. ಹುಡುಗರು ಸರಾಸರಿ 10ನೆ ತರಗತಿಯಲ್ಲಿ ಅಶ್ಲೀಲ ವೀಡಿಯೊ ವೀಕ್ಷಣೆ ಆರಂಭಿಸುತ್ತಾರೆ. ಶೇ. 38ರಷ್ಟು ಪದವಿ ಹುಡುಗಿಯರು ವಾರಕ್ಕೆ ಸರಾಸರಿ 3 ಗಂಟೆಗಳ ಕಾಲ ಇಂತಹ ವೀಡಿಯೊ ವೀಕ್ಷಿಸುತ್ತಾರೆ. ಶೇ. 38ರಷ್ಟು ಪದವಿ ಹುಡುಗರು ಕ್ರೂರವಾದ ಅಶ್ಲೀಲ ವೀಡಿಯೊ ವೀಕ್ಷಣೆ ಮಾಡುತ್ತಾರೆ. ಇಂತಹ ವೀಡಿಯೊಗಳು ಯುವ ಮನಸ್ಸಿನ ಮೇಲೆ ಅತ್ಯಂತ ಕೆಟ್ಟ ಪರಿಣಾಮ ಬೀರುತ್ತಿದ್ದು, ವೀಡಿಯೊ ವೀಕ್ಷಿಸುವ ಶೇ. 78ರಷ್ಟು ವಿದ್ಯಾರ್ಥಿಗಳಲ್ಲಿ ಇದು ದುಶ್ಚಟಗಳಿಗೆ ಹಾಗೂ ಚಟವಾಗಿ ಮಾರ್ಪಡುತ್ತದೆ. ಈ ಎಲ್ಲಾ ಹಿನ್ನೆಲೆಯಲ್ಲಿ ಅಂತಹ ವೀಡಿಯೊಗಳನ್ನು ತಡೆಗಟ್ಟಲು ಒತ್ತಾಯಿಸಿ ರೆಸ್ಕೂ ಸಂಸ್ಥೆಯು ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ಸಲ್ಲಿಸಲು ನಿರ್ಧರಿಸಿದೆ ಎಂದು ಹೇಳಿದರು.

ಮಾನವ ಸಾಗಾಟದಿಂದ ಹದಿಹರೆಯದ ಲೈಂಗಿಕ ದುರುಪಯೋಗದ ಬಗ್ಗೆ ನಾಲ್ಕು ರಾಷ್ಟ್ರೀಯ ಸಮೀಕ್ಷೆಯಿಂದ ನಡೆಸಲಾದ ಲೆಕ್ಕಾಚಾರದ ಪ್ರಕಾರ ಮಂಗಳೂರಿನಲ್ಲಿ ಪ್ರತಿ ರಾತ್ರಿ 250 ಬಾಲಕಿಯರು ಸಾಮೂಹಿಕ ಅತ್ಯಾಚಾರಕ್ಕೆ ಒಳಗಾಗುತ್ತಿದ್ದಾರೆ. ನ್ಯಾಷನಲ್ ಕ್ರೈಮ್ ರೆಕಾರ್ಡ್ಸ್ ಬ್ಯೂರೋ, ಎನ್‌ಎಚ್‌ಆರ್‌ಸಿ, ಬಚಪನ್ ಬಚಾವೊ ಆಂದೋಲನ, ಹಾಗೂ ಸಿಬಿಐ ಸಂಸ್ಥೆಗಳ ಸಮೀಕ್ಷೆಯ ಮಾಹಿತಿಯಡಿ ಈ ಲೆಕ್ಕಾಚಾರ ಮಾಡಲಾಗಿದ್ದು, ಪಿಯುಸಿ ಮತುತ ಕಾಲೇಜು ವಿದ್ಯಾರ್ಥಿಗಳಲ್ಲಿ ಅಶ್ಲೀಲ ಚಿತ್ರ ವೀಕ್ಷಣೆಯು ಅಪಾಯಕಾರಿ ಎಂಬುದನ್ನು ತಿಳಿಸಲು ಪಠ್ಯದಲ್ಲಿ ಸೈಬರ್ ನೈತಿಕ ವೌಲ್ಯಗಳನ್ನು ಅಳವಡಿಸಬೇಕು ಎಂದು ಅಭಿಷೇಕ್ ಕ್ಲಿಫರ್ಡ್ ಒತ್ತಾಯಿಸಿದರು.

ಅಶ್ಲೀಲ ವೀಡಿಯೊ ತಡೆಗಟ್ಟಲು ಕೆ9 ಸಾಫ್ಟ್‌ವೇರ್ ಸಹಕಾರಿಯಾಗಿದೆ. ಇದು ಎಲ್ಲ ಅಶ್ಲೀಲ ವೆಬ್‌ಸೈಟ್‌ಗಳನ್ನು ತಡೆಗಟ್ಟುತ್ತದೆ. ಶಾಲಾ ಕಾಲೇಜುಗಳ ಮೂಲಕ ಪೋಷಕರಿಗೆ ಈ ಬಗ್ಗೆ ಮಾಹಿತಿ ನೀಡಿ, ಮಕ್ಕಳು ಮೊಬೈಲ್ ಮತ್ತು ಕಂಪ್ಯೂಟರ್‌ಗಳಲ್ಲಿ ಕೆ9 ಸಾಫ್ಟ್‌ವೇರ್ ಹಾಕಲು ಪ್ರೋತ್ಸಾಹಿಸಬೇಕು. ಈ ಬಗ್ಗೆ ಪೊಲೀಸ್, ಶಿಕ್ಷಣ ಸಂಸ್ಥೆಗಳು ಮತ್ತು ಅಧಿಕಾರಿಗಳು ಜಾಗೃತರಾಗುವ ಮೂಲಕ ಸಮಾಜದಲ್ಲಿ ಬದಲಾವಣೆಗೆ ಪ್ರಯತ್ನಿಸಬೇಕು ಎಂದು ಅಭಿಷೇಕ್ ಕ್ಲಿಫರ್ಡ್ ಸಲಹೆ ನೀಡಿದರು.

Write A Comment