ಕನ್ನಡ ವಾರ್ತೆಗಳು

ಖಡಕ್ ಅಧಿಕಾರಿ ಸಿಸಿಬಿ ಎಸಿಪಿ ವೆಂಕಟೇಶ್ ಪ್ರಸನ್ನರನ್ನು ಬಂಧಿಸಿದ ತಮಿಳ್ನಾಡು ಪೊಲೀಸ್

Pinterest LinkedIn Tumblr

Venkatesh_Prasanna_ccb

ಮಂಗಳೂರು, ಮಾರ್ಚ್ 24: ಬೆಂಗಳೂರಿನ ಮಲ್ಲೇಶ್ವರಂನಲ್ಲಿ ನಡೆದಿದ್ದ ಬಾಂಬ್ ಬ್ಲಾಸ್ಟ್ ಪ್ರಕರಣಕ್ಕೆ ಸಂಬಂಧಿಸಿ ಶಂಕಿತ ಉಗ್ರರನ್ನು ಬಂಧಿಸಲು ತಮಿಳ್ನಾಡಿನ ತಿರುನಲ್ವೇಲಿಗೆ ತೆರಳಿದ್ದ ಸಿಸಿಬಿ ಅಧಿಕಾರಿ ವೆಂಕಟೇಶ್ ಪ್ರಸನ್ನರನ್ನು ಅಲ್ಲಿನ ಪೊಲೀಸರು ತಪ್ಪುಗ್ರಹಿಕೆಯಿಂದ ವಶಕ್ಕೆ ಪಡೆದ ಘಟನೆ ನಡೆದಿದ್ದು, ಕೊನೆಗೆ ಎರಡೂ ರಾಜ್ಯಗಳ ಹಿರಿಯ ಪೊಲೀಸ್ ಅಧಿಕಾರಿಗಳ ಮಧ್ಯಪ್ರವೇಶದಿಂದಾಗಿ ಪ್ರಕರಣ ಸುಖಾಂತ್ಯ ಕಂಡಿದೆ.

ಮಲ್ಲೇಶ್ವರಂ ಸ್ಫೋಟಕ್ಕೆ ಕಲ್ಲಿನ ಕೋರೆಗಳಲ್ಲಿ ಬಳಕೆ ಮಾಡುವ ಸ್ಫೋಟಕವನ್ನು ಬಳಕೆ ಮಾಡಲಾಗಿದ್ದು, ಅದನ್ನು ತಮಿಳ್ನಾಡಿನ ತಿರುನಲ್ವೇಲಿಯಿಂದ ತರಲಾಗಿತ್ತು ಎಂಬ ಮಾಹಿತಿಯ ಹಿನ್ನೆಲೆಯಲ್ಲಿ ಸಿಸಿಬಿ ತಂಡ ಶಂಕಿತ ಉಗ್ರರಿಗಾಗಿ ಶೋಧ ಕಾರ್ಯ ನಡೆಸುತ್ತಿತ್ತು. ವೆಂಕಟೇಶ್ ಪ್ರಸನ್ನ ಸಹಿತ ಪೊಲೀಸ್ ಅಧಿಕಾರಿಗಳ ತಂಡ ಮಫ್ತಿಯಲ್ಲಿದ್ದು, ಜಾನ್ ಆಸಿರ್ ಹಾಗೂ ಸೈಯದ್ ಆಲಿಯನ್ನು ಬಂಧಿಸಲು ಮನೆಯ ಮೇಲೆ ದಾಳಿ ನಡೆಸಿದ ಸಂದರ್ಭ ಸ್ಥಳೀಯರು ಇವರನ್ನು ಅಪಹರಣಾಕಾರರು ಎಂಬುದಾಗಿ ತಪ್ಪಾಗಿ ಗ್ರಹಿಸಿ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದರು.

ಸ್ಥಳಕ್ಕಾಗಮಿಸಿದ ಪೊಲೀಸರು ವೆಂಕಟೇಶ್ ಪ್ರಸನ್ನ ಮತ್ತವರ ತಂಡವನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಸತ್ಯಸಂಗತಿ ಬಯಲಾಗಿದೆ. ವೆಂಕಟೇಶ್ ಪ್ರಸನ್ನ ಅವರು ಸಹಾಯಕ ಸಿಟಿ ಪೊಲೀಸ್ ಕಮಿಷನರ್ ಶರತ್‌ಚಂದ್ರ ಅವರನ್ನು ಸಂಪರ್ಕಿಸಿ ಘಟನೆಯನ್ನು ವಿವರಿಸಿದ ಬಳಿಕ ಹಿರಿಯ ಪೊಲೀಸ್ ಅಧಿಕಾರಿಗಳು ಪ್ರಸನ್ನರನ್ನು ಬಿಡುಗಡೆ ಮಾಡಿದರು.

ಬಂಧಿಸಲ್ಪಟ್ಟ ಆಸಿರ್ ಹಾಗೂ ಸೈಯದ್ ಆಲಿ ಅನೇಕ ಪ್ರಕರಣಗಳಲ್ಲಿ ಭಾಗಿಯಾಗಿದ್ದು, ಕಲ್ಲಿನ ಕೋರೆಗಳಲ್ಲಿ ಬಳಕೆ ಮಾಡುವ ಸ್ಫೋಟಕಗಳನ್ನು ಉಗ್ರರಿಗೆ ಪೂರೈಕೆ ಮಾಡುತ್ತಿದ್ದ ಆರೋಪ ಹೊತ್ತಿದ್ದಾರೆ.

Write A Comment