
ಚೆನ್ನೈ: ಚೆನ್ನೈ ಮಹಾನಗರ ಸಾರಿಗೆ ಸಂಸ್ಥೆಯ (ಎಂಟಿಸಿ) ನಿರ್ವಾಹಕನೊಬ್ಬ ಪ್ರಯಾಣಿಕರಿಗೆ ಟಿಕೆಟ್ ಕೊಳ್ಳಲು ಹೇಳಿದ್ದಕ್ಕೆ ನಿರ್ವಾಹಕನಿಗೆ ಚಾಕು ಹಾಕಿರುವ ಘಟನೆಯೊಂದು ಸೋಮವಾರ ಕೊರುಕ್ಕುಪೇಟ್ ನಲ್ಲಿ ನಡೆದಿದೆ.
ಎಸ್. ಪೊನ್ನುಸ್ವಾಮಿ (25) ಹಲ್ಲೆಗೊಳಗಾದ ನಿರ್ವಾಹಕನಾಗಿದ್ದಾರೆ. ಸೋಮವಾರ ರಾತ್ರಿ 44ಸಿ ನಂಬರಿನ ಎಂಟಿಸಿ ಬಸ್ ಹೈಕೋರ್ಟ್ ನಿಂದ ಕೊರುಕ್ಕುಪೇಟ್ ಗೆ ಹೋಗುತ್ತಿತ್ತು. ಈ ವೇಳೆ ಬಸ್ ಹತ್ತಿದ್ದ ಮೂವರು ಪ್ರಯಾಣಿಕರು ಬಸ್ ನ ಬಾಗಿಲಿನ ಬಳಿ ನಿಂತುಕೊಂಡಿದ್ದಾರೆ.
ಈ ವೇಳೆ ಪೊನ್ನುಸ್ವಾಮಿ ಪ್ರಯಾಣಿಕರಿಗೆ ಫುಟ್ ಬೋರ್ಡ್ ನಲ್ಲಿ ನಿಂತು ಪ್ರಯಾಣಿಸಬಾರದು, ಟಿಕೆಟ್ ಪಡೆದುಕೊಂಡು ಒಳಹೋಗಿ ಎಂದು ಹೇಳಿದ್ದಾರೆ. ಈ ವೇಳೆ ಒಬ್ಬ ವ್ಯಕ್ತಿ ತನ್ನ ಜೇಬಿನಲ್ಲಿದ್ದ ಚಾಕುವೊಂದನ್ನು ತೆಗೆದುಕೊಂಡು ನಿರ್ವಾಹಕನ ಮುಖಕ್ಕೆ ಹಾಕಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.
ನಂತರ ಬಸ್ ನಲ್ಲಿ ಪ್ರಯಾಣಿಕರು ನಿರ್ವಾಹಕನ ಮೇಲೆ ಹಲ್ಲೆ ನಡೆಸುತ್ತಿರುವುದನ್ನು ಗಮನಿಸಿದ ಚಾಲಕ ವಾಹನವನ್ನು ನಿಲ್ಲಿಸಿದ್ದಾನೆ. ಈ ವೇಳೆ ಹಲ್ಲೆ ನಡೆಸಿದ್ದ ಮೂವರು ಸ್ಥಳದಿಂದ ಪರಾರಿಯಾಗಿದ್ದಾರೆ. ಪ್ರಸ್ತುತ ಹಲ್ಲೆಗೊಳಗಾದ ನಿರ್ವಾಹಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳಿಗಾಗಿ ಹುಡುಕಾಟ ಆರಂಭಿಸಿದ್ದಾರೆ.
ಈ ಹಿಂದೆಯೂ ಇಂತಹದ್ದೇ ಪ್ರಕರಣವೊಂದು ಮಾರ್ಚ್ 16 ರಂದು ನಡೆದಿತ್ತು. ನಿರ್ವಾಹಕ ಡಿ. ತಿರುವೆನ್ಕದಮ್ (50) ಎಂಬುವವರು ವೆಂಕಟೇಶ್ ಎಂಬ ಪ್ರಯಾಣಿಕನಿಗೆ ಫುಟ್ ಬೋರ್ಡ್ ನಲ್ಲಿ ನಿಂತು ಪ್ರಯಾಣ ಮಾಡದೆ ಬಸ್ ಒಳ ಹೋಗುವಂತೆ ತಿಳಿಸಿದ್ದಾರೆ. ಈ ವೇಳೆ ನಿರ್ವಾಹಕನ ಮೇಲೆ ಪ್ರಯಾಣಿಕ ಹಲ್ಲೆ ನಡೆಸಿದ್ದ.
ಪ್ರಕರಣಗಳ ಸಂಬಂಧ ಹೇಳಿಕೆ ನೀಡಿರುವ ಎಂಟಿಸಿ ಅಧಿಕಾರಿಗಳು, ನಿರ್ವಾಹಕರಿಗೆ ರಕ್ಷಣೆಯಿಲ್ಲ ಎಂಬುದು ಈ ರೀತಿಯ ಘಟನೆಗಳಿಂದ ಸಾಬೀತಾಗುತ್ತಿದೆ. ಸಿಬ್ಬಂದಿಗಳೊಂದಿಗೆ ಯಾವ ರೀತಿಯಲ್ಲಿ ನಡೆದುಕೊಳ್ಳಬೇಕೆಂಬುದನ್ನು ಪ್ರಯಾಣಿಕರು ತಿಳಿದುಕೊಳ್ಳಬೇಕಿದೆ. ಈ ಹಿಂದೆ ಎಂಟಿಸಿ ಸಿಬ್ಬಂದಿಗಳ ನಡುವಳಿಕೆ ಬಗ್ಗೆ ಸಾರ್ವಜನಿಕರಿಂದ ಹಲವು ದೂರುಗಳು ಬರುತ್ತಿದ್ದವು. ಇದೀಗ ಪ್ರಯಾಣಿಕರೇ ಸಿಬ್ಬಂದಿಗಳ ಮೇಲೆ ಹಲ್ಲೆ ನಡೆಸುತ್ತಿದ್ದಾರೆಂದು ಹೇಳಿದ್ದಾರೆ.