ಅಂತರಾಷ್ಟ್ರೀಯ

ವಿಶ್ವ ಟ್ವೆಂಟಿ –20: ಪಾಕಿಸ್ತಾನದ ವಿರುದ್ಧ ಭರ್ಜರಿ ಜಯ ದಾಖಲಿಸುವ ಮೂಲಕ ದಾಖಲೆ ಬರೆದ ಭಾರತ; ‘ವಿರಾಟ್’ ಪ್ರದರ್ಶನ

Pinterest LinkedIn Tumblr

India to victory_March 19-2016-020

ಕೋಲ್ಕತಾ: ಪ್ರಭಾವಿ ಬೌಲಿಂಗ್ ಮತ್ತು ಬ್ಯಾಟಿಂಗ್ ನ ಸಹಾಯದಿಂದಾಗಿ ಸಂಘಟಿತ ಹೋರಾಟ ನಡೆಸಿದ ಭಾರತ ತಂಡ ಪಾಕಿಸ್ತಾನದ ಎದುರಿನ ಹೈವೋಲ್ಟೇಜ್ ಪಂದ್ಯದಲ್ಲಿ 6 ವಿಕೆಟ್ ಗಳ ಭರ್ಜರಿ ಜಯ ದಾಖಲಿಸುವ ಮೂಲಕ ಈಡನ್ ಗಾರ್ಡನ್ ಮೈದಾನದಲ್ಲಿ ದಾಖಲೆ ಬರೆದಿದೆ.

ಕೋಲ್ಕತಾದ ಈಡನ್ ಗಾರ್ಡನ್ ಕ್ರೀಡಾಂಗಣದಲ್ಲಿ ಇಂದು ನಡೆದ ಪಂದ್ಯದಲ್ಲಿ ಪಾಕಿಸ್ತಾನ ನೀಡಿದ 119 ರನ್ ಗಳ ಗುರಿಯನ್ನು ಕೇವಲ 15.5 ಓವರ್ ಗಳಲ್ಲಿ 4 ವಿಕೆಟ್ ಕಳೆದುಕೊಂಡು ಯಶಸ್ವಿಯಾಗಿ ಗುರಿಮುಟ್ಟಿತು. ಭರ್ಜರಿ ಫಾರ್ಮ್ ನಲ್ಲಿರುವ ವಿರಾಟ್ ಕೊಹ್ಲಿ ಭರ್ಜರಿ ಅರ್ಧಶತಕ ಸಿಡಿಸುವ ಮೂಲಕ ಭಾರತ ತಂಡವನ್ನು ಗೆಲುವಿನ ದಡ ಸೇರಿಸಿದರು.

India to victory_March 19-2016-010

India to victory_March 19-2016-011

India to victory_March 19-2016-012

India to victory_March 19-2016-013

ಈ ಮೂಲಕ ಆತಿಥೇಯ ತಂಡ ವಿಶ್ವ ಟೂರ್ನಿಯಲ್ಲಿ ಪಾಕಿಸ್ತಾನ ಎದುರಿನ ಅಜೇಯ ಗೆಲುವಿನ ಓಟವನ್ನು ಮುಂದುವರಿಸಿತು. ವಿಶ್ವಕಪ್‌ನಲ್ಲಿ ಭಾರತ ತಂಡ ಪಾಕ್‌ ಎದುರು ಒಮ್ಮೆಯೂ ಸೋತಿಲ್ಲ.

ವಿಶ್ವ ಟ್ವೆಂಟಿ–20 ಕ್ರಿಕೆಟ್‌ ಟೂರ್ನಿ ಆರಂಭದ ದಿನದಿಂದಲೂ ಅಭಿಮಾನಿಗಳಲ್ಲಿ ಭಾರಿ ಕುತೂಹಲ ಮೂಡಿಸಿದ್ದ ಪಾಕಿಸ್ತಾನ ಎದುರಿನ ಪಂದ್ಯದಲ್ಲಿ ಭಾರತಕ್ಕೆ ಗೆಲುವಿನ ಸವಿ ಸಿಕ್ಕಿದೆ.

India to victory_March 19-2016-014

India to victory_March 19-2016-015

India to victory_March 19-2016-016

India to victory_March 19-2016-018

India to victory_March 19-2016-021

ಪಂದ್ಯ ಆರಂಭಕ್ಕೂ ಮೊದಲೇ ಮಳೆ ಅಡ್ಡಿಯಾದ್ದರಿಂದ ಕ್ರಿಕೆಟ್‌ ಪ್ರೇಮಿಗಳಲ್ಲಿ ಆತಂಕ ಮನೆ ಮಾಡಿತ್ತು. ಆದರೆ ಶನಿವಾರ ರಾತ್ರಿ 8.30ರ ವೇಳೆಗೆ ಮಳೆಯ ಆಟ ನಿಂತು ಪಂದ್ಯ ಆರಂಭವಾದಾಗ ‘ಯಾರಿಗೆ ಗೆಲುವು’ ಎನ್ನುವ ಲೆಕ್ಕಾಚಾರ ಮತ್ತೆ ಶುರುವಾಗಿತ್ತು. ಕೊನೆಗೆ ಭಾರತದ ಅಭಿಮಾನಿಗಳಿಗೆ ಗೆಲುವಿನ ತೋರಣ ಕಟ್ಟಲು ಸಾಧ್ಯವಾಯಿತು. ಇದಕ್ಕೆ ಕಾರಣವಾಗಿದ್ದು ವಿರಾಟ್‌ ಕೊಹ್ಲಿ ಅಪೂರ್ವ ಆಟ.

ಮಳೆ ಸುರಿದ ಕಾರಣ ಈಡನ್‌ ಗಾರ್ಡನ್ಸ್‌ ಮೈದಾನವೆಲ್ಲಾ ಒದ್ದೆ ಯಾಗಿತ್ತು. ಆದ್ದರಿಂದ ನಾಯಕ ಮಹೇಂದ್ರ ಸಿಂಗ್ ದೋನಿ ಟಾಸ್ ಗೆದ್ದರೂ ಸಾಂಪ್ರದಾಯಿಕ ಎದುರಾಳಿ ಪಾಕ್ ತಂಡಕ್ಕೆ ಬ್ಯಾಟ್ ಮಾಡಲು ಅವಕಾಶ ಕೊಟ್ಟರು.

ಹಿಂದಿನ ಪಂದ್ಯದಲ್ಲಿ ಅಬ್ಬರಿಸಿದ್ದ ನಾಯಕ ಶಾಹಿದ್‌ ಅಫ್ರಿದಿ ವೈಫಲ್ಯದ ನಡುವೆಯೂ ಪಾಕ್ ತಂಡ 18 ಓವರ್‌ಗಳಲ್ಲಿ ಐದು ವಿಕೆಟ್‌ ಕಳೆದುಕೊಂಡು 118 ರನ್ ಕಲೆ ಹಾಕಿತು. ತಡವಾಗಿ ಆರಂಭವಾದ ಕಾರಣ ಪಂದ್ಯವನ್ನು 18 ಓವರ್‌ಗಳಿಗೆ ಸೀಮಿತಗೊಳಿಸಲಾಗಿತ್ತು.
ಈ ಗುರಿಯನ್ನು ಆತಿಥೇಯ ತಂಡ 15.5 ಓವರ್‌ಗಳಲ್ಲಿ ನಾಲ್ಕು ವಿಕೆಟ್‌ ಕಳೆದುಕೊಂಡು ಮುಟ್ಟಿತು.

ಐಸಿಸಿ ಏಕದಿನ ಮತ್ತು ವಿಶ್ವ ಟ್ವೆಂಟಿ–20 ಕ್ರಿಕೆಟ್‌ ಟೂರ್ನಿಗಳಲ್ಲಿ ಪಾಕಿಸ್ತಾನ ತಂಡ ಭಾರತದ ಎದುರು ಒಂದೂ ಪಂದ್ಯ ಗೆದ್ದಿಲ್ಲ. ಈಡನ್ ಅಂಗಳದಲ್ಲಿ ಪಾಕ್ ತಂಡ ಒಮ್ಮೆಯೂ ಸೋತಿರಲಿಲ್ಲ. ಪಾಕ್ ತಂಡದ ಈ ದಾಖಲೆಯನ್ನು ಭಾರತ ಶನಿವಾರ ಅಳಿಸಿ ಹಾಕಿತು.

ಉಭಯ ತಂಡಗಳ ನಡುವೆ ಹೋದ ವರ್ಷದ ಡಿಸೆಂಬರ್‌ನಲ್ಲಿ ಸರಣಿ ಆಯೋಜನೆಯಾಗಿತ್ತು. ಆ ಸರಣಿಗೆ ಭಾರತ ಸರ್ಕಾರ ಅನುಮತಿ ನೀಡದ ಕಾರಣ ಸರಣಿ ರದ್ದಾಗಿತ್ತು. ನಿಗದಿತ ವೇಳಾಪಟ್ಟಿಯಂತೆ ಪಂದ್ಯ ಧರ್ಮಶಾಲಾದಲ್ಲಿ ನಡೆಯಬೇಕಿತ್ತು. ಆದರೆ ಪಾಕಿಸ್ತಾನ ಸರ್ಕಾರ ಭದ್ರತೆಯ ಬಗ್ಗೆ ಆತಂಕ ವ್ಯಕ್ತಪಡಿಸಿದ್ದರಿಂದ ಪಂದ್ಯವನ್ನು ಇಲ್ಲಿಗೆ ಸ್ಥಳಾಂತರಿಸ ಲಾಗಿತ್ತು. ಆದ್ದರಿಂದ ಬಂಗಾಳದ ಕ್ರಿಕೆಟ್‌ ಪ್ರೇಮಿಗಳಿಗೆ ಅನಿರೀಕ್ಷಿತ ಅವಕಾಶ ಭಾರಿ ಖುಷಿಕೊಟ್ಟಿತು.

2007ರ ಟೂರ್ನಿಯ ಚಾಂಪಿಯನ್ ಭಾರತ ತಂಡ ಈ ಬಾರಿಯ ತನ್ನ ಮೊದಲ ಪಂದ್ಯದಲ್ಲಿ ನ್ಯೂಜಿಲೆಂಡ್ ಎದುರು ಸೋತಿತ್ತು. ಆ ಪಂದ್ಯದಲ್ಲಿ ಚುರುಕಿನ ಬೌಲಿಂಗ್‌ ಮಾಡಿತ್ತು. ಅದೇ ರೀತಿಯ ದಾಳಿಯನ್ನು ಪಾಕ್ ಎದುರಿನ ಪಂದ್ಯದಲ್ಲಿಯೂ ಮುಂದುವರಿಸಿತು.

ಶಾರ್ಜೀಲ್‌ ಖಾನ್‌ (17) ಹಾಗೂ ಅಹ್ಮದ್‌ ಶೆಹ್ಜಾದ್‌ (25) ಆರಂಭದಲ್ಲಿ ವೇಗವಾಗಿ ರನ್ ಗಳಿಸಲು ಯತ್ನಿಸಿದರು. ಆದರೆ ಅನುಭವಿ ವೇಗಿ ಆಶಿಶ್‌ ನೆಹ್ರಾ, ಹಾಗೂ ಸ್ಪಿನ್ನರ್‌ ಆರ್‌. ಅಶ್ವಿನ್ ಇದಕ್ಕೆ ಅವಕಾಶ ನೀಡಲಿಲ್ಲ.

ಪಿಚ್‌ ಕೂಡ ಕೊಂಚ ತೇವವಾಗಿದ್ದರಿಂದ ಸ್ಪಿನ್ನರ್‌ಗಳಿಗೆ ನೆರವಾಗುತ್ತಿತ್ತು. ಆದ್ದರಿಂದ ನಾಯಕ ದೋನಿ ಎರಡನೇ ಬೌಲರ್‌ ಆಗಿ ಅಶ್ವಿನ್‌ ಅವರನ್ನು ಕಣಕ್ಕಿಳಿಸಿದರು. ಸಾಂದರ್ಭಿಕ ಸ್ಪಿನ್ನರ್‌ ರೈನಾ ಮತ್ತು ರವೀಂದ್ರ ಜಡೇಜ ಪಾಕ್‌ ಬ್ಯಾಟ್ಸ್‌ಮನ್‌ಗಳು ಹೆಚ್ಚು ರನ್ ಗಳಿಸದಂತೆ ಎಚ್ಚರಿಕೆ ವಹಿಸಿದರು. ಅಶ್ವಿನ್‌ ಒಂದೂ ವಿಕೆಟ್‌ ಪಡೆ ಯಲಿಲ್ಲವಾದರೂ ಹೆಚ್ಚು ರನ್ ನೀಡದಂತೆ ಎಚ್ಚರಿಕೆ ವಹಿಸಿದರು.

ಮೂರು ಓವರ್ ಬೌಲ್‌ ಮಾಡಿದ ಅಶ್ವಿನ್‌ 12 ರನ್ ಮಾತ್ರ ನೀಡಿದರು. ರೈನಾ ಒಂದು ಓವರ್‌ನಲ್ಲಿ ಕೊಟ್ಟಿದ್ದು ನಾಲ್ಕು ರನ್‌ಗಳಷ್ಟೇ. ಪಾಕ್ ತಂಡ ಮೊದಲ ಹತ್ತು ಓವರ್‌ಗಳು ಮುಗಿದಾಗ ಎರಡು ವಿಕೆಟ್‌ ನಷ್ಟಕ್ಕೆ 51 ರನ್ ಕಲೆ ಹಾಕಿತ್ತು. ಈ ವೇಳೆ ಅಫ್ರಿದಿ ಹಾಗೂ ಉಮರ್ ಅಕ್ಮಲ್‌ ಕ್ರೀಸ್‌ನಲ್ಲಿದ್ದರು. 12ನೇ ಓವರ್‌ನಲ್ಲಿ ಅಫ್ರಿದಿ ಲಾಂಗ್ ಆನ್‌ ಬಳಿ ಹೊಡೆತಕ್ಕೆ ಮುಂದಾಗಿ ವಿಕೆಟ್‌ ಒಪ್ಪಿಸಿದರು.

ಆದರೆ ಮಧ್ಯಮ ಕ್ರಮಾಂಕದಲ್ಲಿ ಅಕ್ಮಲ್‌ ಜವಾಬ್ದಾರಿಯಿಂದ ಆಡಿದರು. 16 ಎಸೆತಗಳಲ್ಲಿ ಒಂದು ಬೌಂಡರಿ ಹಾಗೂ ಒಂದು ಸಿಕ್ಸರ್‌ ಒಳಗೊಂಡಂತೆ 22 ರನ್ ಬಾರಿಸಿದರು.

ವಿರಾಟ್ ಅಬ್ಬರ: ಪಾಕಿಸ್ತಾನ ಎದುರಿನ ಪಂದ್ಯಗಳಲ್ಲಿ ಮೊದಲಿನಿಂದಲೂ ಉತ್ತಮ ಪ್ರದರ್ಶನ ತೋರುತ್ತಲೇ ಬಂದಿರುವ ವಿರಾಟ್ ಕೊಹ್ಲಿ 37 ಎಸೆತಗಳನ್ನು ಎದುರಿಸಿ ಏಳು ಬೌಂಡರಿ ಮತ್ತು ಒಂದು ಸಿಕ್ಸರ್‌ ಸೇರಿದಂತೆ ಔಟಾಗದೆ 55 ರನ್‌ ಗಳಿಸಿದರು. ಏಷ್ಯಾಕಪ್‌ನಲ್ಲಿ ಭಾರತ ಗೆಲುವು ಪಡೆಯಲು ಕೊಹ್ಲಿಯೇ ಕಾರಣರಾಗಿ ದ್ದರು. ಅವರ ಸೊಗಸಾದ ಆಟ ಇಲ್ಲಿಯೂ ಮುಂದುವರಿಯಿತು.

ಎಡಗೈ ಬ್ಯಾಟ್ಸ್‌ಮನ್‌ ಯುವರಾಜ್‌ 24 ರನ್ ಕಲೆ ಹಾಕಿ ಗೆಲುವಿಗೆ ಕಾರಣ ರಾದರು. ಇದಕ್ಕೂ ಮೊದಲು ರೋಹಿತ್‌ ಶರ್ಮಾ (10), ಶಿಖರ್ ಧವನ್‌ (6) ಮತ್ತು ಚುಟುಕು ಕ್ರಿಕೆಟ್‌ನ ಪರಿಣತ ಬ್ಯಾಟ್ಸ್‌ಮನ್ ರೈನಾ (0) ಬೇಗನೆ ಔಟಾದರು. ಯುವರಾಜ್‌ ಮತ್ತು ಕೊಹ್ಲಿ ಜವಾಬ್ದಾರಿಯುತವಾಗಿ ಆಡಿದ್ದರಿಂದ ಭಾರತಕ್ಕೆ ಗೆಲುವು ಲಭಿಸಿತು.

‘ಸ್ಕೋರ್‌ಕಾರ್ಡ್‌’:
ಪಾಕಿಸ್ತಾನ 5ಕ್ಕೆ 118 (18 ಓವರ್‌ಗಳಲ್ಲಿ)
ಶಾರ್ಜೀಲ್‌ ಖಾನ್‌ ಸಿ. ಹಾರ್ದಿಕ್‌ ಪಾಂಡ್ಯ ಬಿ. ಸುರೇಶ್ ರೈನಾ 17
ಅಹ್ಮದ್‌ ಶೆಹ್ಜಾದ್ ಸಿ. ರವೀಂದ್ರ ಜಡೇಜ ಬಿ. ಜಸ್‌ಪ್ರೀತ್‌ ಬೂಮ್ರಾ 25
ಶಾಹಿದ್‌ ಅಫ್ರಿದಿ ಸಿ. ವಿರಾಟ್‌ ಕೊಹ್ಲಿ ಬಿ. ಹಾರ್ದಿಕ್‌ ಪಾಂಡ್ಯ 08
ಉಮರ್‌ ಅಕ್ಮಲ್‌ ಸಿ. ಮಹೇಂದ್ರ ಸಿಂಗ್ ದೋನಿ ಬಿ. ರವೀಂದ್ರ ಜಡೇಜ 22
ಶೋಯಬ್‌ ಮಲಿಕ್‌ ಸಿ. ರವಿಚಂದ್ರನ್‌ ಅಶ್ವಿನ್‌ ಬಿ. ಆಶಿಶ್‌ ನೆಹ್ರಾ 26
ಸರ್ಫರಾಜ್‌ ಅಹ್ಮದ್ ಔಟಾಗದೆ 08
ಮೊಹಮ್ಮದ್‌ ಹಫೀಜ್‌ ಔಟಾಗದೆ 05

ಇತರೆ: (ಲೆಗ್ ಬೈ–3, ವೈಡ್‌–7, ನೋ ಬಾಲ್‌–1) 11

ವಿಕೆಟ್‌ ಪತನ: 1–38 (ಶಾರ್ಜೀಲ್‌; 7.4), 2–46 (ಶೆಹ್ಜಾದ್; 9.2), 3–60 (ಅಫ್ರಿದಿ; 11.5), 4–101 (ಉಮರ್‌; 15.5), 5–105 (ಶೋಯಬ್; 16.2).

ಬೌಲಿಂಗ್‌: ಆಶಿಶ್‌ ನೆಹ್ರಾ 4–0–20–1, ರವಿಚಂದ್ರನ್‌ ಅಶ್ವಿನ್‌ 3–0–12–0, ಜಸ್‌ಪ್ರೀತ್‌ ಬೂಮ್ರಾ 4–0–32–1, ರವೀಂದ್ರ ಜಡೇಜ 4–0–20–1, ಸುರೇಶ್ ರೈನಾ 1–0–4–1, ಹಾರ್ದಿಕ್‌ ಪಾಂಡ್ಯ 2–0–25–1.

ಭಾರತ 4ಕ್ಕೆ 119 (15.5 ಓವರ್‌ಗಳಲ್ಲಿ)
ರೋಹಿತ್ ಶರ್ಮಾ ಸಿ. ಶೋಯಬ್‌ ಮಲಿಕ್‌ ಬಿ. ಮೊಹಮ್ಮದ್ ಅಮೀರ್‌ 10
ಶಿಖರ್‌ ಧವನ್‌ ಬಿ. ಮೊಹಮ್ಮದ್ ಶಮಿ 06
ವಿರಾಟ್‌ ಕೊಹ್ಲಿ ಔಟಾಗದೆ 55
ಸುರೇಶ್ ರೈನಾ ಬಿ. ಮೊಹಮ್ಮದ್ ಶಮಿ 00
ಯುವರಾಜ್‌ ಸಿಂಗ್ ಸಿ. ಮೊಹಮ್ಮದ್ ಶಮಿ ಬಿ. ವಹಾಬ್‌ ರಿಯಾಜ್ 24
ಮಹೇಂದ್ರ ಸಿಂಗ್ ದೋನಿ ಔಟಾಗದೆ 13

ಇತರೆ: (ಬೈ–2, ಲೆಗ್ ಬೈ–3, ವೈಡ್‌–1, ನೋ ಬಾಲ್‌–1) 07

ವಿಕೆಟ್‌ ಪತನ: 1–14 (ರೋಹಿತ್; 2.1), 2–23 (ಧವನ್‌; 4.3), 3–23 (ರೈನಾ; 4.4), 4–84 (ಯುವರಾಜ್‌; 11.6).

ಬೌಲಿಂಗ್‌: ಮೊಹಮ್ಮದ್‌ ಅಮೀರ್ 3–1–11–1, ಮೊಹಮ್ಮದ್‌ ಇರ್ಫಾನ್‌ 2.5–0–25–0, ಮೊಹಮ್ಮದ್ ಶಮಿ 2–0–17–2, ಶಾಹಿದ್ ಅಫ್ರಿದಿ 4–0–25–0, ಶೋಯಬ್‌ ಮಲಿಕ್ 2–0–22–0, ವಹಾಬ್‌ ರಿಯಾಜ್‌ 2–0–16–1.

ಫಲಿತಾಂಶ: ಭಾರತಕ್ಕೆ 6 ವಿಕೆಟ್ ಗೆಲುವು.

ಪಂದ್ಯಶ್ರೇಷ್ಠ: ವಿರಾಟ್ ಕೊಹ್ಲಿ

* * *
ಯುವರಾಜ್‌ ನನಗೆ ನೀಡಿದ ಉತ್ತಮ ಬೆಂಬಲದಿಂದಲೇ ವೇಗವಾಗಿ ರನ್ ಕಲೆ ಹಾಕಲು ಸಾಧ್ಯವಾಯಿತು. ಗ್ಯಾಲರಿಯಲ್ಲಿದ್ದು ತಂಡಕ್ಕೆ ಪ್ರೋತ್ಸಾಹ ನೀಡಿದ ಸಚಿನ್‌ ತೆಂಡೂಲ್ಕರ್‌ಗೆ ನನ್ನ ಅರ್ಧಶತಕ ಅರ್ಪಿಸುತ್ತೇನೆ.
-ವಿರಾಟ್‌ ಕೊಹ್ಲಿ, ಭಾರತ ತಂಡದ ಉಪನಾಯಕ

Write A Comment