ಮನೋರಂಜನೆ

ನಟ ಕಲಾಭವನ್ ಮಣಿ ನಿಗೂಢ ಸಾವಿಗೆ ಕಳ್ಳ ಭಟ್ಟಿ ಕಾರಣ?

Pinterest LinkedIn Tumblr

Mani

ತಿರುವನಂತಪುರಂ: ಮಲಯಾಳಂ ನಟ ಕಲಾಭವನ್ ಮಣಿ ನಿಗೂಢ ಸಾವಿಗೆ ಕಾರಣ ಏನು ಎಂಬುದರ ಬಗ್ಗೆ ಒಂದೊಂದೇ ಮಾಹಿತಿಗಳು ಬಹಿರಂಗವಾಗುತ್ತಿವೆ. ಮಣಿಯ ಮೃತದೇಹದ ಮರಣೋತ್ತರ ಪರೀಕ್ಷೆ ಮಾಡಿದ ಕಾಕ್ಕನಾಡ್ ರೀಜಿನಲ್ ಕೆಮಿಕಲ್ ಎಕ್ಸಾಮಿನರ್ಸ್ ಲ್ಯಾಬೋರೇಟರಿ ವೈದ್ಯರು ಆತನ ದೇಹದಲ್ಲಿ ಕೀಟನಾಶಕ ಪತ್ತೆಯಾಗಿತ್ತು ಎಂದು ಶುಕ್ರವಾರ ಹೇಳಿದ್ದರು.

ಆದರೆ ಮಾರ್ಚ್ 4 ರಂದು ಮಣಿ ತಮ್ಮ ಫಾರ್ಮ್ ಹೌಸ್‌ನಲ್ಲಿ ಗೆಳೆಯರೊಂದಿಗೆ ಸೇರಿ ಕಳ್ಳಭಟ್ಟಿ ಸೇವಿಸಿದ್ದರು ಎಂದು ಪೊಲೀಸರು ಶನಿವಾರ ಹೇಳಿದ್ದಾರೆ.

ಸ್ನೇಹಿತರೊಂದಿಗೆ ಕಳ್ಳಭಟ್ಟಿ ಸೇವಿಸಿ ಪಾರ್ಟಿ ಮಾಡಿದ ನಂತರ ಅಸ್ವಸ್ಥನಾದ ಮಣಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಮಣಿ ರಕ್ತ ವಾಂತಿ ಮಾಡಿದ್ದು, ಮಾರ್ಚ್ 6 ರಂದು ಸಾವಿಗೀಡಾಗಿದ್ದರು.

ಕೇರಳದಲ್ಲಿ ಕಳ್ಳಭಟ್ಟಿಗೆ ನಿಷೇಧವಿದ್ದರೂ, ತ್ರಿಶ್ಶೂರ್ ಜಿಲ್ಲೆಯ ವರಾಂತರಪಳ್ಳಿಯಿಂದ ಕಳ್ಳಭಟ್ಟಿಯನ್ನು ತರಲಾಗಿತ್ತು.
ಇದಕ್ಕೆ ಸಂಬಂಧಿಸಿದಂತೆ ಜೋಯ್ (45) ಎಂಬಾತನನ್ನು ಪೊಲೀಸ್ ವಶಕ್ಕೆ ತೆಗೆದುಕೊಂಡಿದ್ದು, ಆತ ಮಣಿಯ ಮನೆಗೆ ಕಳ್ಳಭಟ್ಟಿ ತೆಗೆದುಕೊಂಡು ಹೋಗಿದ್ದೆ ಎಂಬುದನ್ನು ಒಪ್ಪಿದ್ದಾನೆ.

ಮಣಿಯ ಮನೆಯಲ್ಲಿ ಸ್ನೇಹಿತರೆಲ್ಲಾ ಸೇರಿದರೆ ಕಳ್ಳಭಟ್ಟಿ ಸೇವನೆ ನಡೆಯುತ್ತಿದ್ದದ್ದು ನಿಜ, ಆದರೆ ಮಣಿ ಸೇವಿಸುತ್ತಿರಲಿಲ್ಲ. ಆದಾಗ್ಯೂ, ಸಾವಿಗಿಂತ ಮುನ್ನ ಮಣಿ ಕಳ್ಳಭಟ್ಟಿ ಸೇವಿಸಿದ್ದರೆ? ಎಂಬುದರ ಬಗ್ಗೆ ಸ್ಪಷ್ಟವಾದ ಮಾಹಿತಿ ಸಿಕ್ಕಿಲ್ಲ.

ಮಾರ್ಚ್ 4 ರಂದು ಫಾರ್ಮ್‌ಹೌಸ್ ನಲ್ಲಿ ಪಾರ್ಟಿ ಮಾಡಿದ ನಂತರ ಸ್ನೇಹಿತರು ಆ ಮನೆಯನ್ನು ಸ್ವಚ್ಛಗೊಳಿಸಿದ್ದರು. ಮನೆಯಿಂದ ಸ್ನೇಹಿತರು ಎರಡು ದೊಡ್ಡ ಗೋಣಿಚೀಲಗಳಲ್ಲಿ ಅದೇನೋ ಎತ್ತಿಕೊಂಡು ಹೋಗುತ್ತಿದ್ದುದನ್ನು ಅಲ್ಲಿನ ಸ್ಥಳೀಯರು ನೋಡಿದ್ದಾರೆ. ಆ ಗೋಣಿ ಚೀಲದಲ್ಲಿ ಏನಿತ್ತು? ಮತ್ತು ಅದನ್ನು ಎಲ್ಲಿಗೆ ಸಾಗಿಸಲಾಗಿದೆ ಎಂಬುದರ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಮಣಿ ಸಾವಿಗೆ ಸಂಬಂಧಿಸಿದಂತೆ 6 ಮಂದಿಯನ್ನು ಪೊಲೀಸರು ಬಂಧಿಸಿದ್ದು, ಅವರ ವಿರುದ್ಧ ಅಬಕಾರಿ ಕಾಯ್ದೆಯಡಿಯಲ್ಲಿ ಕೇಸು ದಾಖಲಿಸುವ ಸಾಧ್ಯತೆಯಿದೆ.

Write A Comment