ರಾಷ್ಟ್ರೀಯ

ಜೆಎನ್‌ಯು ವಿವಾದ: ಉಮರ್, ಅನಿರ್ಬಾನ್‌ಗೆ ಜಾಮೀನು

Pinterest LinkedIn Tumblr

Anirban-and-Umarನವದೆಹಲಿ (ಪಿಟಿಐ): ದೇಶದ್ರೋಹ ಆರೋಪ ಎದುರಿಸುತ್ತಿರುವ ಜೆಎನ್‌ಯು ವಿದ್ಯಾರ್ಥಿಗಳಾದ ಉಮರ್ ಖಾಲೀದ್ ಹಾಗೂ ಅನಿರ್ಬಾನ್ ಭಟ್ಟಾಚಾರ್ಯ್ ಅವರಿಗೆ ದೆಹಲಿ ನ್ಯಾಯಾಲಯ ಶುಕ್ರವಾರ ಷರತ್ತು ಬದ್ಧ ಜಾಮೀನು ನೀಡಿದೆ.
ಕನ್ಹಯ್ಯಾ ಕುಮಾರ್ ಅವರಿಗೆ ದೊರೆತಿರುವಂತೆಯೇ ಉಮರ್ ಹಾಗೂ ಅನಿರ್ಬಾನ್ ಅವರಿಗೂ ಆರು ತಿಂಗಳ ಅವಧಿಗೆ ಜಾಮೀನು ಸಿಕ್ಕಿದೆ.
ಜಾಮೀನು ಅರ್ಜಿ ವಿಚಾರಣೆ ನಡೆಸಿದ ಹೆಚ್ಚುವರಿ ಸೆಷೆನ್ಸ್ ನ್ಯಾಯಾಧೀಶ ರಿತೇಶ್ ಸಿಂಗ್, ‘ಇವರ ಮೇಲಿನ ಆರೋಪಗಳ ಸ್ವರೂಪ ಗಂಭೀರವಾಗಿದೆ. ಆದರೂ, ಪೊಲೀಸರೇ ತಿಳಿಸಿರುವಂತೆ ಘಟನೆಯ ವಿಡಿಯೊ ತುಣುಕನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಅದು ವಿಶ್ಲೇಷಣೆ ಮಾಡಿ ವರದಿ ಕೊಡಲು ಖಂಡಿತವಾಗಿ ಸಮಯ ಹಿಡಿಯುತ್ತದೆ.
‘ಈ ಸನ್ನಿವೇಶಗಳ ಹೊರತು ಪಡಿಸಿ ಇವರಿಗೆ ಅಪರಾಧ ಚಟುವಟಿಕೆಯ ಹಿನ್ನೆಲೆಗಳಿಲ್ಲ. ಜತೆಗೆ ಇದೇ ಆರೋಪಗಳನ್ನು ಎದುರಿಸುತ್ತಿರುವ ಕನ್ಹಯ್ಯಾ ಕುಮಾರ್ ಅವರು ಜಾಮೀನಿನ ಮೇಲೆ ಹೊರಗೆ ಇದ್ದಾರೆ. ಆದ್ದರಿಂದ ಇವರಿಗೂ ಆರು ತಿಂಗಳ ಅವಧಿಗೆ ಮಧ್ಯಂತರ ಜಾಮೀನು ನೀಡುವುದು ಸೂಕ್ತ ಎಂಬುದು ನನ್ನ ಎಣಿಕೆ’ ಎಂದು ಜಾಮೀನು ನೀಡುವ ವೇಳೆ ಸಿಂಗ್ ನುಡಿದರು.
ತಲಾ 25 ಸಾವಿರ ಮೊತ್ತದ ಒಂದೊಂದು ವೈಯಕ್ತಿಕ ಬಾಂಡ್‌ ಹಾಗೂ ಅಷ್ಟೇ ಮೊತ್ತದ ಒಬ್ಬರ ಶ್ಯೂರಿಟಿ ಒದಗಿಸುವಂತೆ ಉಮರ್ ಹಾಗೂ ಅನಿರ್ಬಾನ್ ಅವರಿಗೆ ಕೋರ್ಟ್ ಸೂಚಿಸಿದೆ.
ಜೆಎನ್‌ಯುವಿನ ಐತಿಹಾಸಿಕ ಅಧ್ಯಯನ ಕೇಂದ್ರದಲ್ಲಿ ಪ್ರಾಧ್ಯಾಪಕರಾಗಿರುವ ಸಂಗೀತಾ ದಾಸ್‌ ಗುಪ್ತಾ ಹಾಗೂ ರಜತ್ ಗುಪ್ತಾ ಅವರು ಇಬ್ಬರಿಗೂ ಜಾಮೀನು ನೀಡಿದರು.
ತನ್ನ ಅನುಮತಿ ಇಲ್ಲದೇ ದೆಹಲಿ ಬಿಡದಂತೆ ಹಾಗೂ ವಿಚಾರಣೆಗೆ ಸಹಕರಿಸುವಂತೆ 12 ಪುಟಗಳ ಆದೇಶದಲ್ಲಿ ನ್ಯಾಯಾಲಯ ಷರತ್ತು ವಿಧಿಸಿದೆ.

Write A Comment