ರಾಷ್ಟ್ರೀಯ

ಬಿಹಾರದ 243 ಶಾಸಕರಿಗೆ ಮೈಕ್ರೋವೇವ್‌: ಖರ್ಚು ಕೇವಲ 30 ಲಕ್ಷ ಎಂದ ಸಚಿವ

Pinterest LinkedIn Tumblr

Bihar Giftsಪಟ್ನಾ : ನಿತೀಶ್‌ ಕುಮಾರ್‌ ಮುಖ್ಯಮಂತ್ರಿಯಾಗಿರುವ ಬಿಹಾರ ವಿಧಾನಸಭೆಯಲ್ಲಿ ಇಂದು 243 ಶಾಸಕರಿಗೆ ಶಿಕ್ಷಣ ಇಲಾಖೆಯು ಮೈಕ್ರೋವೇವ್‌ ಓವನ್‌ಗಳನ್ನು ಉಡುಗೊರೆಯಾಗಿ ನೀಡಿದೆ. ಇದು ಕೇವಲ 30 ಲಕ್ಷ ರೂ. ವೆಚ್ಚದ ಉಡುಗೊರೆ ಎಂದು ಶಿಕ್ಷಣ ಸಚಿವರು ಹೇಳಿದ್ದಾರೆ.

ಅಂದ ಹಾಗೆ ಬಿಹಾರ ಶಾಸಕರಿಗೆ ಈಗ ಬಜೆಟ್‌ ಅಧಿವೇಶನದ ಸಂದರ್ಭದಲ್ಲಿ ಸಿಗುತ್ತಿರುವುದು ಇದೊಂದೇ ಉಡುಗೊರೆ ಅಲ್ಲ; ಈ ಅಧಿವೇಶನದ ಬೇರೆ ದಿನಗಳಲ್ಲಿ ಅವರಿಗೆ ಸೂಟ್‌ಕೇಸುಗಳನ್ನು ಮತ್ತು ಮೊಬೈಲ್‌ ಫೋನ್‌ಗಳನ್ನು ಉಡುಗೊರೆಯಾಗಿ ಪಡೆದಿದ್ದಾರೆ !

ಇಲ್ಲಿ ಇನ್ನೂ ಒಂದು ವಿಶೇಷವಿದೆ. ಕಳೆದ ಸುಮಾರು ಎರಡು ದಶಕಗಳ ಅವಧಿಯಲ್ಲಿ ಬಿಹಾರದಲ್ಲಿ ಅಧಿಕಾರಕ್ಕೆ ಬಂದ ಪ್ರತಿಯೊಂದು ಸರಕಾರ ಕೂಡ ಶಾಸಕರಿಗೆ ಬಜೆಟ್‌ ಅಧಿವೇಶನದಲ್ಲಿ ಹೀಗೆ ಉಡುಗೊರೆ ಕೊಡುತ್ತಾ ಬಂದಿರುವ ಸಂಪ್ರದಾಯವೇ ಇದೆ. ಶಾಸಕರು ಸಾರ್ವಜನಿಕ ಹಿತಾಸಕ್ತಿಯಲ್ಲಿ ಸದನದಲ್ಲಿ ಪ್ರಶ್ನೆಯನ್ನು ಕೇಳುವ ಮೂಲಕ ತಮ್ಮ ಕೆಲಸವನ್ನು ಅಚ್ಚುಕಟ್ಟಾಗಿ ನಿಭಾಯಿಸಿರುವುದಕ್ಕೆ ಧನ್ಯವಾದ ಹೇಳಲೆಂದೇ ಈ ಉಡುಗೊರೆಯನ್ನು ಅವರಿಗೆ ನೀಡಲಾಗುತ್ತಿದೆ !

ಶಾಸಕರಿಗೆ ಈ ರೀತಿ ಬಜೆಟ್‌ ಅಧಿವೇಶನದ ಸಂದರ್ಭದಲ್ಲಿ ಉಡುಗೊರೆ ನೀಡುವ ಸಂಪ್ರದಾಯ ಯಾಕಾಗಿ ಹುಟ್ಟಿಕೊಂಡು ಬಂದಿದೆ ಎನ್ನುವುದರ ಹಿಂದೆ ಒಂದು ತರ್ಕವಿದೆ. ಅದೆಂದರೆ ಶಾಸಕರು ವರ್ಷಪೂರ್ತಿ ಜನಹಿತ ಸಾಧನೆಗೆ ನೀಡುವ ಕಾಣಿಕೆಗಳೇ ಆಯಾ ಇಲಾಖೆಗಳಿಗೆ ಬಜೆಟ್‌ನಲ್ಲಿ ಯಾವ ಯಾವ ವಿಷಯಗಳಿಗೆ ಪ್ರಾಧಾನ್ಯ ನೀಡಬೇಕು ಎಂಬ ಮಾರ್ಗದರ್ಶನ ನೀಡುತ್ತದೆ ಎಂಬುದು ಮುಖ್ಯ ಕಾರಣವಾಗಿದೆ.

ಸದನದಲ್ಲಿ ಬಜೆಟ್‌ ಮಂಡನೆಯಾದ ಬಳಿಕ ಧನ್ಯವಾದ ಸಮರ್ಪಣೆ ಆರಂಭವಾಗುತ್ತದೆ. ಈ ಸಂದರ್ಭದಲ್ಲಿ ದಿನವಹಿ ಎಂಬಂತೆ ಪ್ರತಿಯೊಂದು ಇಲಾಖೆ ಬೇರೆ ಬೇರೆ ದಿನಗಳಲ್ಲಿ ಶಾಸಕರಿಗೆ ತಮ್ಮ ವತಿಯಿಂದ ವಿವಿಧ ಬಗೆಯ ಉಡುಗೊರೆಗಳನ್ನು ನೀಡುತ್ತವೆ.

ಇಂದು ಶುಕ್ರವಾರ ಬಿಹಾರದ ಶಿಕ್ಷಣ ಇಲಾಖೆಯು 11,125 ರೂ.ಗಳ ತಲಾ ವೆಚ್ಚದಲ್ಲಿ 243 ಶಾಸಕರಿಗೆ ಮೈಕ್ರೋವೇವ್‌ ಓವನ್‌ ಉಡುಗೊರೆ ನೀಡಿದೆ. “ಇದಕ್ಕೆ ತಗುಲಿರುವ ಖರ್ಚು ಸುಮಾರು 30 ಲಕ್ಷ ರೂ. ದಯವಿಟ್ಟು ಇದನ್ನೇ ದೊಡ್ಡ ವಿಷಯ ಮಾಡಬೇಡಿ. ಶಾಸಕರು ತಮ್ಮ ಪ್ರದೇಶದಲ್ಲಿನ ಶಾಲೆಗಳಿಗೆ ಭೇಟಿ ನೀಡುವ ಸಂದರ್ಭದಲ್ಲಿ ತಮ್ಮ ಆಹಾರವನ್ನು ತಾವೇ ಬಿಸಿ ಮಾಡಿಕೊಂಡು ತಿನ್ನಲಿ ಎಂಬ ಕಾರಣಕ್ಕೆ ನಾವು ಈ ಉಡುಗೊರೆ ನೀಡಿದ್ದೇವೆ’ ಎಂದು ಶಿಕ್ಷಣ ಸಚಿವ ಅಶೋಕ್‌ ಚೌಧರಿ ಹೇಳಿದ್ದಾರೆ.

ಶಾಸಕರಿಗೆ ಹೀಗೆ ಉಡುಗೊರೆ ನೀಡುವ ಬಗ್ಗೆ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಅವರು ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ. ಆದರೆ ಇವರ ಉಪ ಮುಖ್ಯಮಂತ್ರಿಯಾಗಿರುವ 25ರ ಹರೆಯದ ತೇಜಸ್ವಿ ಯಾದವ್‌ (ಲಾಲು ಪುತ್ರ) ಅವರು “ಬಿಹಾರ ಒಂದು ಬಡ ರಾಜ್ಯ. ಇಲ್ಲಿ ಜನರಿಂದ ಚುನಾಯಿತರಾಗುವವವರು ಕರೋಡ್‌ಪತಿಗಳಲ್ಲ. ಹಾಗಿರುವಾಗ ಅವರಿಗೆ ಸರಕಾರದಿಂದ ಏನಾದರೂ ಉಡುಗೊರೆ ಸಂದರೆ ಅದರಲ್ಲಿ ತಪ್ಪೇನಿದೆ ? ಇಷ್ಟು ಸಣ್ಣ ವಿಷಯವನ್ನೇ ದೊಡ್ಡ ವಿಷಯ ಮಾಡಿ ವಿವಾದ ಹುಟ್ಟಿಸಬೇಡಿ’ ಎಂದು ಹೇಳಿದ್ದಾರೆ.

ಆದರೆ ರಾಜ್ಯದ ಮಾಜಿ ಉಪ ಮುಖ್ಯಮಂತ್ರಿಯಾಗಿರುವ ಹಿರಿಯ ಬಿಜೆಪಿ ನಾಯಕ ಸುಶೀಲ್‌ ಮೋದಿ ಅವರು ಕೆಲವು ವರ್ಷಗಳ ಹಿಂದೆ ಈ ಉಡುಗೊರೆ ಸಂಪ್ರದಾಯಕ್ಕೆ ಒಂದು ತಿದ್ದುಪಡಿಯ ಸಲಹೆ ನೀಡಿದ್ದರು. ಎಲ್ಲ ಇಲಾಖೆಗಳು ಒಟ್ಟು ಸೇರಿ ಒಂದೇ ಉಡುಗೊರೆಯನ್ನು ನೀಡಿದರೆ ಸಾಕಾಗುತ್ತದೆ ಎಂದಿದ್ದರು. ಆದರೆ ಈ ತಿದ್ದುಪಡಿ ಈ ವರೆಗೂ ಜಾರಿಗೆ ಬಂದದ್ದಿಲ್ಲ . ಬಿಹಾರದ ರಾಜಕಾರಣಿಗಳೆಲ್ಲ ಪಕ್ಷ ಭೇದವಿಲ್ಲದೆ ಈ ಸಲಹೆಯನ್ನು ಹೊಡೆದು ಹಾಕಿದ್ದರು ಎನ್ನುವುದು ಉಲ್ಲೇಖನೀಯ !
-ಉದಯವಾಣಿ

Write A Comment