ಕನ್ನಡ ವಾರ್ತೆಗಳು

ತಾರಕ್ಕಕ್ಕೇರಿದ ಪುತ್ತೂರು ಜಾತ್ರಾ ಉತ್ಸವದ ಆಮಂತ್ರಣ ಪತ್ರಿಕೆ ವಿವಾದ : ಜಿಲ್ಲಾ ಬಂದ್ ಕರೆ – ಎಚ್ಚರಿಕೆ

Pinterest LinkedIn Tumblr

Putturu_Invitation_Prob_1

ಪುತ್ತೂರು: ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ವಾರ್ಷಿಕ ಜಾತ್ರಾ ಉತ್ಸವದ ಆಮಂತ್ರಣ ಪತ್ರಿಕೆಯಲ್ಲಿ ಜಿಲ್ಲಾಧಿಕಾರಿ ಇಬ್ರಾಹಿಂ ಹೆಸರು ಮುದ್ರಿಸಿರುವ ಬಗ್ಗೆ ಉಂಟಾದ ವಿವಾದ ತಾರಕ್ಕಕ್ಕೇರಿದ್ದು, ಇದೇ ಸಮಯವನ್ನು ಉಪಯೋಗಿಸಿಕೊಂಡಿರುವ ರಾಜಕೀಯ ಪಕ್ಷಗಳೂ ತಮ್ಮ ಲಾಭ ಪಡೆಯಲು ಯತ್ನಿಸಿವೆ.

ಇದಕ್ಕೆ ಉದಾಹರಣೆಯೆಂಬಂತೆ ಒಂದು ಹಂತದಲ್ಲಿ ಆಮಂತ್ರಣ ಪತ್ರಿಕೆ ಮರುಮುದ್ರಣಕ್ಕೆ ಸಿದ್ಧವಾಗಿದ್ದರೂ ಕೊನೆ ಕ್ಷಣದಲ್ಲಿ ರಾಜಕೀಯ ಆಟದಲ್ಲಿ ಇದೆಲ್ಲಾ ರದ್ದಾಗಿದೆ. ಈಗ ಈ ವಿವಾದ ಪ್ರತಿಷ್ಠೆಯ ಪ್ರಶ್ನೆಯಾಗಿದ್ದು, ರಾಜಕೀಯ ಪಕ್ಷಗಳು ತಮ್ಮ ಲಾಭದ ದೃಷ್ಟಿಯಿಂದ ಯೋಚನೆ ಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಆಮಂತ್ರಣ ಪತ್ರಿಕೆ ವಿವಾದದಿಂದ ಉಂಟಾದ ಗೊಂದಲ ಸದ್ಯಕ್ಕೆ ಬಗೆಹರಿಯುವ ಲಕ್ಷಣಗಳು ಕಾಣುತ್ತಿಲ್ಲ.

ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ವಾರ್ಷಿಕ ಜಾತ್ರಾ ಉತ್ಸವದ ಆಮಂತ್ರಣ ಪತ್ರಿಕೆಯಲ್ಲಿ ಜಿಲ್ಲಾಧಿಕಾರಿ ಇಬ್ರಾಹಿಂ ಹೆಸರು ಮುದ್ರಿಸಿರುವುದು ವಿವಾದಕ್ಕೆ ಕಾರಣವಾಗಿತ್ತು. ಹಿಂದೂಯೇತರ ಅಧಿಕಾರಿಯ ಹೆಸರನ್ನು ಆಮಂತ್ರಣ ಪತ್ರಿಕೆಯಲ್ಲಿ ಮುದ್ರಿಸಬಾರದು, ಇದು ಧಾರ್ಮಿಕ ದತ್ತಿ ಇಲಾಖಾ ಕಾಯ್ದೆಗೆ ವಿರೋಧ ಮಾತ್ರವಲ್ಲ, ಮುಸ್ಲಿಂ ಅಧಿಕಾರಿಗಳು ದೇವರ ಪ್ರಸಾದ ಸ್ವೀಕರಿಸುತ್ತಿಲ್ಲ. ಹೀಗಾಗಿ ಆಮಂತ್ರಿಸುವುದಾದರೂ ಹೇಗೆ ಎಂದು ಭಕ್ತಾದಿಗಳು ಪ್ರಶ್ನೆ ಮಾಡಿದ್ದರು. ಆದರೆ ಇದಕ್ಕೆ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಹಾಗೂ ಆಡಳಿತಾಧಿಕಾರಿಗಳು ಸರಿಯಾದ ಉತ್ತರ ನೀಡದೆ ಉದ್ಧಟತನ ಪ್ರದರ್ಶಿಸಿದರು. ಹೀಗಾಗಿ ಭಕ್ತಾದಿಗಳಲ್ಲಿ ಆಕ್ರೋಶ ಹೆಚ್ಚಾಯಿತು.

ಹಿಂದುಯೇತರರ ಹೆಸರು ದೇವಸ್ಥಾನದಲ್ಲಿ ಬಳಕೆ ಆಗಬಾರದೆಂದು ಕಾನೂನು ಸ್ಪಷ್ಟವಾಗಿ ಹೇಳುತ್ತದೆ. ಒಂದು ವೇಳೆ ದೇವಳದ ವಿಚಾರದಲ್ಲಿ ಜಿಲ್ಲಾಧಿಕಾರಿ ಹೆಸರು ಹಾಕುವ ಪ್ರಮೇಯ ಎದುರಾದ ಸಂದರ್ಭ ಜಿಲ್ಲಾಧಿಕಾರಿ ಹಿಂದುಯೇತರ ಆದರೆ ಅಪರ ಜಿಲ್ಲಾಧಿಕಾರಿ ಅಥವಾ ಸಹಾಯಕ ಆಯುಕ್ತರ ಹೆಸರು ಹಾಕಬೇಕು. ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ಸುದ್ದಿಗೋಷ್ಠಿ ಕರೆದು ಎಲ್ಲಾ ಧರ್ಮದ ಆಚರಣೆಯನ್ನು ಪಾಲಿಸುತ್ತೇನೆ ಎಂದು ಹೇಳಿಕೆ ನೀಡಲಿ. ಹೀಗೆ ಮಾಡಿದರೆ ಮುಸ್ಲಿಂ ಸಂಪ್ರದಾಯದಂತೆ ಕಾಫೀರರು ಆಗುತ್ತಾರೆ. ಮುಂದೆ ಬರುವ ಹಿಂದು ಜಿಲ್ಲಾಧಿಕಾರಿ ಹೆಸರನ್ನು ಉಳ್ಳಾಲ ಉರೂಸ್‍ನಲ್ಲಿ, ಕ್ರಿಶ್ಚಿಯನ್ ಕಾರ್ಯಕ್ರಮಗಳ ಆಮಂತ್ರಣದಲ್ಲಿ ಬಳಸಿಕೊಳ್ಳಲಿ ಎಂದು ಸವಾಲೆಸೆದರು.

ಈ ನಡುವೆ ಮಾತನಾಡಿದ ಜಿಲ್ಲಾಧಿಕಾರಿ ಇಬ್ರಾಹಿಂ ಮೈಸೂರು ಚಾಮುಂಡೇಶ್ವರಿ ಉತ್ಸವ, ಕುಕ್ಕೆ ಸುಬ್ರಹ್ಮಣ್ಯ ದೇವಾಲಯದ ಜಾತ್ರೆಯ ಆಮಂತ್ರಣ ಪತ್ರಿಕೆಯಲ್ಲಿ ತನ್ನ ಹೆಸರು ಮುದ್ರಿಸಲಾಗಿತ್ತು. ಅಲ್ಲಿನ ಧಾರ್ಮಿಕ ವಿಧಿ-ವಿಧಾನ ಸೇರಿದಂತೆ ಯಾವುದೇ ರೀತಿಯ ಲೋಪವಾಗಿಲ್ಲ. ಜಿಲ್ಲೆಯ ಅಧೀನ ಸಂಸ್ಥೆಗಳಲ್ಲಿ ಜಿಲ್ಲಾಧಿಕಾರಿಗೆ ಜವಾಬ್ದಾರಿಯಿದೆ. ಪ್ರತಿನಿತ್ಯ ನಡೆಯುತ್ತಿರುವ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಹೆಸರನ್ನು ಕೇಳಿ ಹಾಕುವುದಿಲ್ಲ. ಹೆಸರು ಹಾಕಿದರೆ ಈ ಬಗ್ಗೆ ನಾವು ಕೇಳುವುದೂ ಇಲ್ಲ. ಆಮಂತ್ರಣ ಪತ್ರಿಕೆಯಲ್ಲಿ ಹೆಸರು ಹಾಕಿರುವುದರಿಂದ ತಪ್ಪಾಗಿಲ್ಲ. ಇಲ್ಲಿ ಜಾತಿ, ಬಣ್ಣ ಲೆಕ್ಕಕ್ಕೆ ಬರುವುದಿಲ್ಲ. ಕ್ಷುಲ್ಲಕ ವಿಚಾರಕ್ಕೆ ಜಿಲ್ಲಾಧಿಕಾರಿ ಹುದ್ದೆಯನ್ನು ಎಳೆದು ತರುವುದು ಸರಿಯಲ್ಲ. ಇದೊಂದು ಧಾರ್ಮಿಕ ಅಸಹಿಷ್ಣುತೆ ಎಂದು ಹೇಳಿದ್ದಾರೆ.

ಬಹುಸಂಖ್ಯಾತರಿಗೆ- ಅಲ್ಪಸಂಖ್ಯಾತರಿಗೆ ಪ್ರತ್ಯೇಕ ಕಾನೂನು ಅನುಸರಿಸಲಾಗುತ್ತಿದೆ. ಜಾತ್ರಾ ಆಮಂತ್ರಣ ಪತ್ರಿಕೆಯಿಂದ ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ಹೆಸರು ತೆಗೆಯುವವರೆಗೂ ಹೋರಾಟ ಮುಂದುವರಿಯಲಿದೆ. ಪುತ್ತೂರು ಮಾತ್ರವಲ್ಲ ಜಿಲ್ಲಾ ಬಂದ್‍ಗೂ ಕರೆ ನೀಡಲಾಗುವುದು. ಇದರಿಂದಾಗುವ ಸಮಸ್ಯೆಗೆ ಜಿಲ್ಲಾಡಳಿತವೇ ಹೊಣೆ ಎಂದು ಹಿಂದು ಜಾಗರಣಾ ವೇದಿಕೆ ಪ್ರಾಂತ ಸಂಚಾಲಕ ಸತ್ಯಜಿತ್ ಸುರತ್ಕಲ್ ಹೇಳಿದ್ದಾರೆ. ಮತ್ತೊಂದು ಕಡೆ ಬಿಜೆಪಿ ಪ್ರತಿಭಟನೆ ಹಾಗೂ ಬಂದ್ ಮಾಡುವುದಾಗಿ ಎಚ್ಚರಿಕೆ ನೀಡಿದೆ.

Write A Comment